Site icon Vistara News

Hike in Seed Price: ನೆರೆಯ ರಾಜ್ಯಗಳಿಗೆ ಹೋಲಿಸಿದ್ರೆ ಬಿತ್ತನೆ ಬೀಜ ದರ ಕರ್ನಾಟಕದಲ್ಲೇ ಕಡಿಮೆ: ಸಿಎಂ

Hike in Seed Price

ಬೆಂಗಳೂರು: ಬಿತ್ತನೆ ಬೀಜದ ದರ ಶೇ.60ರಷ್ಟು ಹೆಚ್ಚಳವಾದ ಕಾರಣ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಮತ್ತು ಜೆಡಿಎಸ್‌ ಆಕ್ರೋಶ ಹೊರಹಾಕಿದ ಹಿನ್ನೆಲೆಯಲ್ಲಿ ಬಿತ್ತನೆ ಬೀಜಗಳ ದರದ (Hike in Seed Price) ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಬಿತ್ತನೆ ಬೀಜಗಳ ದರ ಕರ್ನಾಟಕದಲ್ಲೇ ಕಡಿಮೆ ಇದೆ. ಬರಗಾಲದಿಂದ ಬೀಜೋತ್ಪಾದನೆ ಕುಂಠಿತವಾದ ಕಾರಣ ದರ ಹೆಚ್ಚಳವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, 2023-24ನೇ ಸಾಲಿನ ಭೀಕರ ಬರಗಾಲದಿಂದಾಗಿ ರಾಜ್ಯದಲ್ಲಿ ಬೀಜೋತ್ಪಾದನೆ ಗಣನೀಯವಾಗಿ ಕುಂಠಿತವಾಗಿದ್ದು, ಬೀಜೋತ್ಪಾದಕರಿಂದ ಖರೀದಿಸುವ ಬಿತ್ತನೆ ಬೀಜದ ದರಗಳು ಸಹ ಗಣನೀಯವಾಗಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿತ್ತನೆ ಬೀಜದ ಮಾರಾಟದ ದರ ಏರಿಕೆಯಾಗಿದೆ. ಈ ದರ ಏರಿಕೆ ಮುಂಗಾರು ಬೆಳೆ ಬೆಳೆಯುವ ಎಲ್ಲ ರಾಜ್ಯಗಳಲ್ಲಿಯೂ ಆಗಿದ್ದು ಉಳಿದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಬೀಜಗಳ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.

ಬಿತ್ತನೆ ಬೀಜಗಳ ಮಾರಾಟ ದರಗಳನ್ನು ನಿಗದಿಪಡಿಸುವ ಸಂದರ್ಭಗಳಲ್ಲಿ ಬಿತ್ತನೆ ಬೀಜ ಖರೀದಿ ದರಗಳು ಹಾಗೂ ಗರಿಷ್ಠ APMC ಮಾರಾಟ ದರಗಳನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. 2022-23ನೇ ಸಾಲಿಗೆ ಹೋಲಿಸಿದಾಗ 2023-24ನೇ ಸಾಲಿನಲ್ಲಿ ವಿವಿಧ ಬೆಳೆಗಳ ಖರೀದಿ ದರಗಳಲ್ಲಿ (Procurement Rates) ಗರಿಷ್ಠ ಶೇ.59.58ರಷ್ಟು ವ್ಯತ್ಯಾಸವಾಗಿರುತ್ತದೆ. ರೈತರು ತಮ್ಮ ಜಮೀನಿನಲ್ಲಿಯೇ ಬೀಜಗಳನ್ನು ಉತ್ಪಾದನೆ ಮಾಡುತ್ತಾರೆ. ಇದನ್ನು ಕರ್ನಾಟಕ ರಾಜ್ಯ ಬೀಜ ನಿಗಮ ನಿ., ರಾಷ್ಟ್ರೀಯ ರಾಜ್ಯ ಬೀಜ ನಿ., ಕರ್ನಾಟಕ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳಿ ಹಾಗೂ ಖಾಸಗಿ ಸಂಸ್ಥೆಗಳು ಕೈಗೊಂಡು ಸರಬರಾಜು ಮಾಡುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

ಈ ಬಾರಿ ಹೆಸರು ಬಿತ್ತನೆ ಬೀಜಗಳ ಎಲ್‌-1 ದರವು ಶೇ.48.5, ಉದ್ದು ದರವು ಶೇ.37.72, ತೊಗರಿ ಸೇರಿ ವಿವಿಧ ತಳಿಗಳ ಬಿತ್ತನೆ ಬೀಜಗಳ ದರದಲ್ಲಿ ಶೇ.28.29 ರಿಂದ 37.69ರಷ್ಟು ಮತ್ತು ಜೋಳದ ಎಲ್‌-1 ದರವು ಶೇ.7.66 ರಿಂದ ಶೇ.33.33ರಷ್ಟು ಹೆಚ್ಚಾಗಿರುತ್ತದೆ. ಬೀಜಗಳ ಖರೀದಿ ದರದಲ್ಲಿನ ಹೆಚ್ಚಳದ ಮೊತ್ತವು ಬೀಜೋತ್ಪಾದನೆಯಲ್ಲಿ ತೊಡಗಿರುವ ರೈತರಿಗೆ ವರ್ಗಾವಣೆಯಾಗಿರುತ್ತದೆ ಎನ್ನುವುದು ಗಮನಾರ್ಹ ಅಂಶವಾಗಿದೆ.

ಇದಲ್ಲದೆ ಕೆಲ ಬಿತ್ತನೆ ಬೀಜದ ದರದಲ್ಲಿ ಇಳಿಕೆ ಹಾಗೂ ಯಥಾಸ್ಥಿತಿ ಕೂಡ ಕಂಡುಬಂದಿದೆ. 2024ರ ಮುಂಗಾರು ಹಂಗಾಮಿನ ಸೋಯಾ ಅವರೆ ಬಿತ್ತನೆ ಬೀಜದ ದರವು 2023ರ ಮುಂಗಾರು ಹಂಗಾಮಿನ ಎಲ್‌-1 ದರಗಳ ಹೋಲಿಕೆಯಲ್ಲಿ ಶೇ.8ರಷ್ಟು ಕಡಿತಗೊಂಡಿರುತ್ತದೆ. ಸೂರ್ಯಕಾಂತಿ ಬಿತ್ತನೆ ಬೀಜದ ದರ ಕಳೆದ ಸಾಲಿನಷ್ಟೇ ಇದ್ದು ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಬಿ.ಟಿ. ಹತ್ತಿ ಬಿತ್ತನೆ ಬೀಜಗಳನ್ನು ರಾಜ್ಯ ಸರ್ಕಾರದ ಇಲಾಖಾ ವತಿಯಿಂದ ರಿಯಾಯತಿ ದರದಲ್ಲಿ ವಿತರಣೆ ಮಾಡುತ್ತಿಲ್ಲ. ಬಿ.ಟಿ. ಹತ್ತಿ ಬಿತ್ತನೆ ಬೀಜಗಳ ಗರಿಷ್ಠ ದರಗಳನ್ನು ಕೇಂದ್ರ ಸರ್ಕಾರವೇ ನಿಗದಿಪಡಿಸುತ್ತದೆ. ರಾಜ್ಯದಲ್ಲಿನ ವಿವಿಧ ಬೆಳೆಗಳ ಬಿತ್ತನೆ ಬೀಜಗಳಲ್ಲಿನ ದರ ವ್ಯತ್ಯಾಸವು 2023ರ ಹೋಲಿಕೆಯಲ್ಲಿ ಈ ಬಾರಿ ಗರಿಷ್ಠ ಶೇ.48.50ರಷ್ಟಿದೆ. ಆದಾಗ್ಯೂ, ನೆರೆಯ ರಾಜ್ಯಗಳಲ್ಲಿನ ಪ್ರಸಕ್ತ ಸಾಲಿನ ಬಿತ್ತನೆ ಬೀಜಗಳ ದರಗಳ ಏರಿಕೆಯ ಹೋಲಿಕೆಯಲ್ಲಿ ರಾಜ್ಯದಲ್ಲಿನ ಬಿತ್ತನೆ ಬೀಜಗಳ ದರದ ಏರಿಕೆಯು ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಸೋಯಾ ಅವರೆ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಎಲ್‌-1 ದರವು 8500 ರೂ. ನಿಗದಿಯಾಗಿದ್ದು ಕರ್ನಾಟಕದಲ್ಲಿ ಇದು 7270 ರೂ. ನಿಗದಿಯಾಗಿದೆ. ಅದೇ ರೀತಿ, ತೊಗರಿ ಬೆಳೆಗೆ ಮಹಾರಾಷ್ಟ್ರದಲ್ಲಿ ಪ್ರತಿ ಕ್ವಿಂಟಾಲ್‌ಗೆ 25,000 ರೂ. ಇದ್ದು, ಕರ್ನಾಟಕದಲ್ಲಿ ಪ್ರತಿ ಕ್ವಿಂಟಾಲ್‌ಗೆ 17,900 ರೂ. ನಿಗದಿಪಡಿಸಲಾಗಿದೆ. ಹೆಸರು ಮತ್ತು ಜೋಳದ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಮಹಾರಾಷ್ಟ್ರದಲ್ಲಿ ಕ್ರಮವಾಗಿ 23,500, 14,000 ರೂ. ಇದ್ದು ಕರ್ನಾಟಕದಲ್ಲಿ ಕ್ರಮವಾಗಿ 18,600 ರೂ., 12,500 ರೂ. ನಿಗದಿಪಡಿಸಲಾಗಿದೆ. ಈ ಹೋಲಿಕೆಯಲ್ಲಿ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ದರಗಳು ಗಣನೀಯವಾಗಿ ಕಡಿಮೆ ಇರುವುದು ಕಂಡುಬರುತ್ತದೆ.

ಇದನ್ನೂ ಓದಿ | Bengaluru Traffic: ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಹೊಸ ತಂತ್ರಜ್ಞಾನ; ಸಂಚಾರ ಇಲಾಖೆಯ ಪ್ಲಾನ್

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯು ಉತ್ತಮವಾಗಿ ಆಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಇದೇ ವೇಳೆ, ಬಿತ್ತನೆ ಬೀಜಗಳ ದರಗಳು ಏರಿಕೆಯಾಗಿರುವ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಈ ಕುರಿತು ಕೃಷಿ ಇಲಾಖೆಯು ಸ್ಪಷ್ಟೀಕರಣ ನೀಡಿದ್ದು ವಾಸ್ತವ ಸ್ಥಿತಿಯನ್ನು ವಿವರಿಸಿದೆ ಎಂದು ಸಿಎಂ ತಿಳಿಸಿದ್ದಾರೆ.

Exit mobile version