ಶಿಮ್ಲಾ: ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಅಡ್ಡ ಮತದಾನ (cross vote) ಮಾಡಿದ ಹಿಮಾಚಲ ಪ್ರದೇಶದ (Himachal Politics) 6 ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲಾಗಿದೆ (Disqualification).
ಆರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಇಂದು ಘೋಷಿಸಿದ್ದಾರೆ. ಬಿಜೆಪಿ ಆಡಳಿತವಿರುವ ಹರಿಯಾಣದಲ್ಲಿ ಹಿಂದಿನ ರಾತ್ರಿ ತಂಗಿದ್ದ ಆರು ಶಾಸಕರು ನಿನ್ನೆ ವಿಧಾನಸಭೆಗೆ ಬಂದಾಗ ಅವರ ʼಶೌರ್ಯʼಕ್ಕೆ ಬಿಜೆಪಿ ಚಪ್ಪಾಳೆ ತಟ್ಟಿ ಅಭಿನಂದಿಸಿತ್ತು. ಇದೀಗ ಸ್ಪೀಕರ್ ಅವರ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ. ನಿನ್ನೆ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಗಲಾಟೆ ಎಬ್ಬಿಸಿದ ಕಾರಣ ನೀಡಿ 15 ಬಿಜೆಪಿ ಸದಸ್ಯರನ್ನು ಸ್ಪೀಕರ್ ಉಚ್ಚಾಟಿಸಿದ್ದರು.
ಹಿಮಾಚಲ ಪ್ರದೇಶದಲ್ಲಿ ಬಹುಮತದೊಂದಿಗೆ ಅಧಿಕಾರದಲ್ಲಿರುವ ಕಾಂಗ್ರೆಸ್ ರಾಜ್ಯದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಸೋಲು ಕಂಡಿತ್ತು. ಆರು ಶಾಸಕರು ಅಡ್ಡಮತದಾನ ಮಾಡಿದ್ದರಿಂದ ಬಿಜೆಪಿ ಗೆಲುವು ಸಾಧಿಸಿದೆ. ಇದರಿಂದ ಧೈರ್ಯ ಪಡೆದ ಬಿಜೆಪಿ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ. ಅದಕ್ಕೆ ತುಪ್ಪ ಹೊಯ್ಯುವಂತೆ ಇನ್ನೂ ಕೆಲವರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಹೀಗಾಗಿ ಸರ್ಕಾರ ಅಪಾಯಕ್ಕೆ ಸಿಲುಕಿದೆ. ಇಂಥ ಬಿಕ್ಕಟ್ಟಿನಿಂದ ಪಾರು ಮಾಡಲು ಕರ್ನಾಟಕದಿಂದ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿಕೊಳ್ಳಲಾಗಿದೆ.
ಹಿಮಾಚಲದಲ್ಲಿ ಏನು ನಡೆಯುತ್ತಿದೆ?
ಹಿಮಾಚಲ ಪ್ರದೇಶದಲ್ಲಿ ಒಂದು ಕಾಲು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರ ಸರ್ಕಾರ ಪತನದ ಭೀತಿ ಎದುರಿಸುತ್ತಿದೆ. ಮಂಗಳವಾರ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರನ್ನು ಗೆಲ್ಲಿಸಲಾಗದೆ ಮುಖಭಂಗಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ, ಅಡ್ಡ ಮತದಾನದ ಏಟಿನಿಂದ ಚೇತರಿಸಿಕೊಂಡಿಲ್ಲ. ಅದರ ನಡುವೆ ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಮಗ ವಿಕ್ರಮಾದಿತ್ಯ ಸಿಂಗ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನಷ್ಟು ಮಂದಿ ಪಕ್ಷ ಬಿಡಬಹುದು ಎಂಬ ಭೀತಿ ಇದೆ. ಇದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
68 ಸದಸ್ಯರ ವಿಧಾನಸಭೆಯಲ್ಲಿ 40 ಸ್ಥಾನಗಳೊಂದಿಗೆ ಕಾಂಗ್ರೆಸ್ ಬಹುಮತವನ್ನೇ ಹೊಂದಿತ್ತು. ಅದರ ನಡುವೆ ಬಂದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದೊಳಗಿನ ಭಿನ್ನಮತವನ್ನು ಬಯಲಿಗೆ ತಂದಿದೆ. ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 40, ಬಿಜೆಪಿ 25 ಹಾಗೂ ಮೂವರು ಪಕ್ಷೇತರ ಶಾಸಕರಿದ್ದಾರೆ. ಕಾಂಗ್ರೆಸ್ ತನ್ನ ಹಿರಿಯ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಸಿತ್ತು. ಬಿಜೆಪಿ ಹಿರಿಯ ರಾಜಕಾರಣಿ ಹರ್ಷ ಮಹಾಜನ್ ಅವರನ್ನು ಕಣಕ್ಕಿಳಿಸಿತ್ತು. ಬಿಜೆಪಿ ಬಳಿ ಇದ್ದದ್ದು 25 ಶಾಕರು ಮಾತ್ರ. ಆದರೆ, ಅಂತಿಮವಾಗಿ ಕಾಂಗ್ರೆಸ್‌ನ ಆರು ಶಾಸಕರು ಅಡ್ಡ ಮತದಾನ ಮಾಡಿದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 34 ಮತಗಳನ್ನು ಪಡೆಯಿತು. ಬಳಿಕ ನಿಯಮದಂತೆ ಟಾಸ್ ಹಾಕಿದಾಗ ಅದೃಷ್ಟ ಬಿಜೆಪಿ ಪಾಲಾಯಿತು.
ಈ ವಿದ್ಯಮಾನದಿಂದ ಖುಷಿಯಿಂದ ಕುಣಿದಾಡಿದ ಬಿಜೆಪಿ ಇದೀಗ ಅವಿಶ್ವಾಸಸೂಚಕ ಗೊತ್ತುವಳಿ ಮಂಡನೆಗೆ ಮುಂದಾಗಿದೆ. ಅಡ್ಡ ಮತದಾನ ಮಾಡಿದ ಆರು ಶಾಸಕರು ಅವಿಶ್ವಾಸ ಮಂಡನೆ ವೇಳೆಯೂ ಕೈಕೊಟ್ಟರೆ ಕಾಂಗ್ರೆಸ್ ಸರ್ಕಾರ ಪತನ ನಿಶ್ಚಿತ. ಯಾಕೆಂದರೆ ಒಬ್ಬ ಸ್ಪೀಕರನ್ನು ಬಿಟ್ಟರೆ ಕಾಂಗ್ರೆಸ್ ಬಲ 33ಕ್ಕೆ ಇಳಿದು ಸೋಲು ಕಾಣುತ್ತದೆ. ಹೀಗಾಗಿ ಅವರನ್ನು ಕಾಂಗ್ರೆಸ್ ಅನರ್ಹಗೊಳಿಸಿದೆ.
ಇದನ್ನೂ ಓದಿ: DK Shivakumar : ಹಿಮಾಚಲ ಕಾಂಗ್ರೆಸ್ ಸರ್ಕಾರದ ರಕ್ಷಣೆಗೆ ಟ್ರಬಲ್ ಶೂಟರ್ ಡಿಕೆಶಿ ಎಂಟ್ರಿ