ಹೊಸದಿಲ್ಲಿ: ಘೋಷಣೆಗಳನ್ನು ಕೂಗಿದ ಮತ್ತು ದುರ್ವರ್ತನೆ ಆರೋಪದ ಮೇಲೆ ಹಿಮಾಚಲ ಪ್ರದೇಶ (Himachal Pradesh) ವಿಧಾನಸಭೆಯ (Vidhan sabha) ಸ್ಪೀಕರ್ 15 ಬಿಜೆಪಿ ಶಾಸಕರನ್ನು ಸದನದಿಂದ ಉಚ್ಚಾಟಿಸಿದ್ದಾರೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ (no trust vote) ಮಂಡಿಸಲು ಮುಂದಾಗಿರುವ ಹಂತದಲ್ಲಿಯೇ ಕಾಂಗ್ರೆಸ್ (congress) ಪಕ್ಷ ಬಿಜೆಪಿಗೆ (bjp) ಈ ಟಕ್ಕರ್ (himachal politics) ನೀಡಿದೆ.
ನಿನ್ನೆ ರಾಜ್ಯ ಏಕೈಕ ರಾಜ್ಯಸಭಾ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆರು ಕಾಂಗ್ರೆಸ್ ಶಾಸಕರು ಬಿಜೆಪಿ ಪರವಾಗಿ ಅಡ್ಡ ಮತದಾನ ಮಾಡಿದ ಪರಿಣಾಮ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. ಇದರಿಂದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಇಂದು ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆಯೇ 15 ಬಿಜೆಪಿ ಶಾಸಕರನ್ನು ಉಚ್ಚಾಟಿಸುವ ನಿರ್ಧಾರವನ್ನು ಸ್ಪೀಕರ್ ತೆಗೆದುಕೊಂಡಿದ್ದಾರೆ. ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರ ಮುಂದೆ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗಿದ್ದರು.
ಉಚ್ಛಾಟಿತ ಬಿಜೆಪಿ ಶಾಸಕರೆಂದರೆ ಜೈರಾಮ್ ಠಾಕೂರ್, ವಿಪಿನ್ ಸಿಂಗ್ ಪರ್ಮಾರ್, ರಣಧೀರ್ ಶರ್ಮಾ, ಲೋಕೇಂದರ್ ಕುಮಾರ್, ವಿನೋದ್ ಕುಮಾರ್, ಹನ್ಸ್ ರಾಜ್, ಜನಕ್ ರಾಜ್, ಬಲ್ಬೀರ್ ವರ್ಮಾ, ತ್ರಿಲೋಕ್ ಜಮ್ವಾಲ್, ಸುರೇಂದರ್ ಶೋರಿ, ದೀಪ್ ರಾಜ್, ಪುರಣ್ ಠಾಕೂರ್, ಇಂದರ್ ಸಿಂಗ್ ಗಾಂಧಿ, ದಿಲೀಪ್ ಠಾಕೂರ್, ಮತ್ತು ಇಂದರ್ ಸಿಂಗ್ ಗಾಂಧಿ. ಇವರಲ್ಲಿ ಜೈರಾಮ್ ಠಾಕೂರ್ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದಾರೆ.
ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಸರ್ಕಾರದ ಬಲಾಬಲ ಪರೀಕ್ಷೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ನಾಯಕ ಹಾಗೂ ಶಾಸಕರು ಇಂದು ಬೆಳಿಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದರು. 26 ಕಾಂಗ್ರೆಸ್ ಶಾಸಕರು ಸಿಎಂ ನಾಯಕತ್ವದಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಹೇಳಿದೆ.
ಕಾಂಗ್ರೆಸ್ ಶಾಸಕರ ಅಡ್ಡ ಮತದಾನ ಮತ್ತು ಲಾಟರಿ ಡ್ರಾ ಫಲಿತಾಂಶ ಬಿಜೆಪಿಗೆ ಗೆಲುವು ತಂದಿದೆ. “ನಮ್ಮ ಅವಕಾಶಗಳು ತೀರಾ ಕಡಿಮೆ ಎಂದು ತೋರಿದಾಗಲೂ ನಾವು ಗೆಲುವು ಸಾಧಿಸಿದ್ದೇವೆ. ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಅವರು ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಪ್ರಸ್ತುತ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಉಳಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ,” ಎಂದು ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರನ್ನು ಭೇಟಿಯಾದ ಬಳಿಕ ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಹೇಳಿದ್ದರು.
ಒಟ್ಟು 26 ಶಾಸಕರು ಸಿಎಂ ಸುಖು ವಿರುದ್ಧ ಅಸಮಾಧಾನಗೊಂಡಿದ್ದಾರೆ ಮತ್ತು ಸಿಎಂ ಬದಲಾವಣೆಯನ್ನೂ ಬಯಸಿದ್ದಾರೆ. ಅಡ್ಡ ಮತದಾನ ಮಾಡಿದ ಶಾಸಕರೇ ಇದನ್ನು ಬಹಿರಂಗವಾಗಿ ಹೇಳಿದ್ದು, ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದ ಬುಡ ಅಲುಗಾಡುತ್ತಿದೆ. ಸುಖು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಮತ್ತೊಬ್ಬ ಬಲಿಷ್ಠ ನಾಯಕನ್ನು ಸಿಎಂ ಸ್ಥಾನಕ್ಕೆ ಕೂರಿಸುವ ಸಾಧ್ಯತೆಯೂ ಇದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್, ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಹರಿಯಾಣ ಸಿಎಂ ಭೂಪಿಂದ್ರ ಹೂಡಾರನ್ನು ಕಳುಹಿಸಿ, ಅಸಮಾಧಾನಿತರ ಜತೆ ಮಾತುಕತೆ ನಡೆಸಲು ಸೂಚಿಸಿದೆ. ಸುಖುವನ್ನು ಬದಲಾಯಿಸದ ಹೊರತು ನಮ್ಮ ಅಸಮಾಧಾನ ತಗ್ಗುವುದಿಲ್ಲ ಎಂದು ಭಿನ್ನಮತೀಯರು ಹೇಳಿದ್ದಾರೆ ಎಂದು ವರದಿಯಾಗಿದೆ.
ಇಂದು ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಿದೆ ಎಂಬ ಚರ್ಚೆ ಜೋರಾಗಿತ್ತು. ಆದರೆ 15 ಶಾಸಕರನ್ನು ಆಚೆ ಹಾಕಿರುವ ಸ್ಪೀಕರ್, ಅವಿಶ್ವಾಸ ನಿರ್ಣಯ ಸುಲಭಸಾಧ್ಯವಾಗದಂತೆ ನೋಡಿಕೊಂಡಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಶಾಸಕರನ್ನು ಹೊಂದಿದ್ದು, ಅದರ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರು ಆರಾಮವಾಗಿ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಮಂಗಳವಾರ ಚುನಾವಣೆ ನಡೆದ ಸಂದರ್ಭ, ಆರು ಕಾಂಗ್ರೆಸ್ ಶಾಸಕರು ಮತ್ತು ಸರ್ಕಾರವನ್ನು ಬೆಂಬಲಿಸುವ ಮೂವರು ಸ್ವತಂತ್ರ ಶಾಸಕರು ಹರ್ಷ್ ಮಹಾಜನ್ ಪರವಾಗಿ ಮತ ಚಲಾಯಿಸಿದ್ದರು. 68 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 25 ಸದಸ್ಯರನ್ನು ಹೊಂದಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಸದನದಲ್ಲಿ ಬಹುಮತವಿಲ್ಲ ಎಂದು ಮಹಾಜನ್ ಹೇಳಿದ್ದಾರೆ. “ಸುಖು ಸರ್ಕಾರದಿಂದ ಜನ ಅಸಮಾಧಾನಗೊಂಡಿದ್ದಾರೆ. ಒಳ್ಳೆಯ ನಾಯಕರೆಲ್ಲ ಬಿಜೆಪಿ ಸೇರುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಕಳೆದುಕೊಂಡಿದೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ” ಎಂದಿದ್ದಾರೆ.