Site icon Vistara News

Hindu-Lingayat Row: ಹಿಂದೂ ಧರ್ಮ ಎಲ್ಲ ಅನಿಷ್ಟ, ಅನಾಚಾರಗಳಿಂದ ಕೂಡಿದ್ದು: ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ

sanehalli panditaradhya sree hindu lingayat row

ಚಿತ್ರದುರ್ಗ: ಹಿಂದೂ ಧರ್ಮ (Hindu Religion) ಎಂಬುದು ಎಲ್ಲ ಅನಿಷ್ಟ, ಅನಾಚಾರಗಳಿಂದ ಕೂಡಿದ್ದು. ಲಿಂಗಾಯತರು (Lingayat) ಆ ಧರ್ಮದ ಭಾಗವಲ್ಲ. ಲಿಂಗಾಯತವೇ ಬೇರೆ ಧರ್ಮ ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ (Sanehalli Panditharadhya swamiji) ಹೇಳಿದ್ದಾರೆ. ಆ ಮೂಲಕ ಹಿಂದೂ- ಲಿಂಗಾಯತ ಧರ್ಮ ಚರ್ಚೆಗೆ (Hindu-Lingayat Row) ಇನ್ನಷ್ಟು ಬಿಸಿ ಏರಿಸಿದ್ದಾರೆ.

ಹೊಳಲ್ಕೆರೆಯಲ್ಲಿ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯವರ 30ನೇ ಸ್ಮರಣಾರ್ಥ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ವೇದಿಕೆಯಿಂದ ಈ ಹೇಳಿಕೆ ನೀಡಿದರು. ಲಿಂಗಾಯತ ಧರ್ಮವನ್ನು ಹೊಗಳುವ ಭರದಲ್ಲಿ ಹಿಂದೂ ಧರ್ಮದ ಬಗ್ಗೆ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಲಿಂಗಾಯತ ಧರ್ಮ, ಹಿಂದೂ ಧರ್ಮದ ಒಂದು ಭಾಗ ಅಲ್ಲ. ಹಿಂದೂ ಧರ್ಮ ಅಂದ್ರೆ ಎಲ್ಲ ರೀತಿಯ ಅನಿಷ್ಟ ಅನಾಚಾರ ಒಳಗೊಂಡಿರುವಂಥದ್ದು. ಹಿಂದೂ ಒಂದರ್ಥದಲ್ಲಿ ಧರ್ಮವೇ ಅಲ್ಲ. ಸಿಂಧೂ ನದಿ ದಡದಿಂದ‌ ಈಚೆಗಿನವರು ಧೂ ದೇಶದವರು ಎಂಬ ಅರ್ಥದಲ್ಲಿ ಹಿಂದೂ ಅನ್ನೋದಾದ್ರೆ, ಹಿಂದೂ ಒಂದು ಧರ್ಮ ಎಂದಾದ್ರೆ ನಾವು ಹಿಂದೂ ಧರ್ಮದವರಲ್ಲ. ನಾವು ಸ್ವತಂತ್ರ ಲಿಂಗಾಯತ ಧರ್ಮದವರು ಎಂದು ಅವರು ನುಡಿದರು.

ಆದರೆ ವೈದಿಕ ಪರಂಪರೆಯ ಬೇರುಗಳು ನಮ್ಮ ತಲೆಯಲ್ಲಿ ಬಲವಾಗಿ ತುಂಬಿಕೊಂಡಿವೆ. ಲಿಂಗಾಯತ ಒಂದು ಸ್ವತಂತ್ರ ಧರ್ಮ, ಹಿಂದೂ ಧರ್ಮದ ಭಾಗ ಅಲ್ಲ ಎಂಬುದನ್ನು ಎಲ್ಲರೂ ಮಾನ್ಯ ಮಾಡಬೇಕು ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಪ್ರತ್ಯುತ್ತರ ನೀಡಿದ ವಚನಾನಂದ ಶ್ರೀಗಳು

ಈ ಮಾತುಗಳಿಗೆ ಸಭೆಯ ವೇದಿಕೆ ಮೇಲಿನಿಂದಲೇ ಪ್ರತಿಕ್ರಿಯಿಸಿದ ಪಂಚಮಸಾಲಿ ಪೀಠದ ಶ್ವಾಸಗುರು ವಚನಾನಂದ ಶ್ರೀಗಳು (Vachanananda Swamiji), ನಾವೆಲ್ಲ ಒಗ್ಗಟ್ಟಾಗಿ ಹೋದಾಗ ಮಾತ್ರ ಸಮಾಜಕ್ಕೆ ಭವಿಷ್ಯವಿದೆ ಎಂದು ನುಡಿದರು. ಭಕ್ತರಲ್ಲಿ ಹಲವರು ವಿರೋಧ ವ್ಯಕ್ತಪಡಿಸಿದರೂ ವಚನಾನಂದ ಶ್ರೀ ಪ್ರತಿಕ್ರಿಯೆ ಮುಂದುವರಿಸಿ ಭಾಷಣ ಮಾಡಿದರು.

ಹಿಂದೂ ಎಂಬುದು ಅತ್ಯಂತ ಸತ್ಯ ಸನಾತನವಾದುದು, ಯಾರು ಏನು ಬೇಕಾದ್ರೂ ಹೇಳಬಹುದು. ಹಿಂದೂ ಎನ್ನುವುದು ಒಂದು ವಿಶಾಲ ಮಹಾ ಸಾಗರ. ಅದರಲ್ಲಿ ಕೇವಲ ವೈದಿಕರಿರಲಿಲ್ಲ. ಅದು ಕೇವಲ ದ್ವೈತ, ಅದ್ವೈತ ಅಲ್ಲ. ಅದು ಶಕ್ತಿ, ವಿಶಿಷ್ಟಾಧ್ವೈತ ಎಲ್ಲವನ್ನು ಒಳಗೊಂಡಂಥದ್ದು. ಎಲ್ಲಾ ಮೂಲ ಪುರುಷರು ಇದ್ದದ್ದು ಹಿಂದೂ ಧರ್ಮದಲ್ಲಿ ಎಂದರು.

ವೀರಶೈವ, ಲಿಂಗಾಯತ ತತ್ವಗಳು ಬೇರೆ ಬೇರೆ ಇರಬಹುದು. ಆದರೆ ನಾವೆಲ್ಲ ಒಗ್ಗಟ್ಟಾಗಿ ಹೋದಾಗ ಮಾತ್ರ ಸಮಾಜಕ್ಕೆ ಭವಿಷ್ಯವಿದೆ. ನಿಮ್ಮ ಮಠ, ಪೀಠ ತತ್ವಗಳು ಏನೇ ಇರಬಹುದು. ಸಾಮಾಜಿಕ, ರಾಜಕೀಯ, ಬೌದ್ಧಿಕವಾಗಿ ನಾವೆಲ್ಲ ಒಂದಾಗಿರಬೇಕು. ಮಲ್ಲಿಕಾರ್ಜುನ ಸ್ವಾಮೀಜಿಯವರಲ್ಲಿ ಈ ರೀತಿಯ ಬೇಧ ಭಾವ ಇರಲಿಲ್ಲ ಎಂದು ಅವರು ನುಡಿದರು.

ಇದನ್ನೂ ಓದಿ: Reservation: ಮೊದಲ ಹಂತದ ಹೋರಾಟ ಯಶಸ್ವಿ, 2ನೇ ಹಂತದ ಹೋರಾಟಕ್ಕೆ ಅಣಿ: ಶ್ರೀ ವಚನಾನಂದ ಸ್ವಾಮೀಜಿ

Exit mobile version