ಭೋಪಾಲ್: ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಿನ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ (Muslim Personal Law) ಅಮಾನ್ಯ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಂತರ್ ಧರ್ಮೀಯ ದಂಪತಿಗೆ ರಕ್ಷಣೆ ನೀಡಲು ನಿರಾಕರಿಸಿತು. ಅರ್ಜಿದಾರರು ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ನೋಂದಣಾಧಿಕಾರಿಯನ್ನು ಸಂಪರ್ಕಿಸಿದ್ದರು. ಆದರೆ ಕುಟುಂಬದ ಆಕ್ಷೇಪಣೆಗಳಿಂದಾಗಿ, ಅವರು ವಿವಾಹ ಅಧಿಕಾರಿಯ ಮುಂದೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಪರಿಣಾಮವಾಗಿ ಅವರ ಮದುವೆಯನ್ನು ನೋಂದಾಯಿಸಲಾಗಿಲ್ಲ.
ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ಮದುವೆಯ ನೋಂದಣಿಗೆ ನಿಗದಿಪಡಿಸಿದ ದಿನಾಂಕದಂದು ವಿವಾಹ ಅಧಿಕಾರಿಯ ಮುಂದೆ ಹಾಜರಾಗಲು ಅವರು ಇತರ ಪರಿಹಾರಗಳನ್ನು ನೀಡುವಂತೆ ಜೋಡಿ ರಕ್ಷಣೆ ಕೋರಿತ್ತು. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಹಿಂದೂ ಮಹಿಳೆ ಮತ್ತು ಮುಸ್ಲಿಂ ಪುರುಷನ ನಡುವಿನ ವಿವಾಹವು ವೈಯಕ್ತಿಕ ಕಾನೂನಿನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿ ನ್ಯಾಯಾಲಯವು ರಕ್ಷಣೆ ನಿರಾಕರಿಸಿತ್ತು.
“ಮಹಮ್ಮದೀಯ ಕಾನೂನಿನ ಪ್ರಕಾರ, ಮುಸ್ಲಿಂ ಹುಡುಗನು ವಿಗ್ರಹಾರಾಧಕ ಅಥವಾ ಅಗ್ನಿ ಆರಾಧಕಳಾಗಿರುವ ಹುಡುಗಿಯನ್ನು ಮದುವೆಯಾಗುವುದು ಮಾನ್ಯ ವಿವಾಹವಲ್ಲ. ಮದುವೆಯನ್ನು ವಿಶೇಷ ವಿವಾಹ ಕಾಯ್ದೆಯಡಿ ನೋಂದಾಯಿಸಿದರೂ ಮಾನ್ಯ ವಿವಾಹವಾಗುವುದಿಲ್ಲ. ಅದು ಫಾಸಿದ್ ವಿವಾಹವಾಗಿರುತ್ತದೆ.
ಇದನ್ನೂ ಓದಿ: Radhika Merchant : ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹದ ಸ್ಥಳ ಬಹಿರಂಗ; ಇಲ್ಲಿದೆ ವಿವರ
ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಮದುವೆಯಾಗುವುದು ಮಾನ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯನ್ನು ನ್ಯಾಯಾಲಯ ಪರಿಗಣಿಸಿದೆ. “ವೈಯಕ್ತಿಕ ಕಾನೂನಿನ ಪ್ರಕಾರ, ಮದುವೆಯ ಆಚರಣೆಗೆ ಕೆಲವು ಆಚರಣೆಗಳನ್ನು ನಿರ್ವಹಿಸುವುದು ಅವಶ್ಯಕ. ವಿಶೇಷ ವಿವಾಹ ಕಾಯ್ದೆಯಡಿ ಮದುವೆಯನ್ನು ನಡೆಸಿದರೆ, ಅಂತಹ ಕಡ್ಡಾಯ ಆಚರಣೆಗಳನ್ನು ನಿರ್ವಹಿಸದ ಕಾರಣ ಅಂತಹ ಮದುವೆಯನ್ನು ಪ್ರಶ್ನಿಸಲಾಗುವುದಿಲ್ಲ. ವಿಶೇಷ ವಿವಾಹ ಕಾಯ್ದೆಯಡಿ ವಿವಾಹವು ವೈಯಕ್ತಿಕ ಕಾನೂನಿನಡಿಯಲ್ಲಿ ನಿಷೇಧಿಸಲಾದ ಮದುವೆಯನ್ನು ಕಾನೂನುಬದ್ಧಗೊಳಿಸುವುದಿಲ್ಲ.