ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮತ್ತು ಕೇಂದ್ರೀಕೃತ ದಾಖಲಾತಿ ಘಟಕ (CAC) ಮುಖಾಂತರ ಮಾಡುವ ನಾನಾ ಇಲಾಖೆಗಳ ನೇಮಕಾತಿಯಲ್ಲಿ (GPSTR, ASSISTANT PROFESSOR, RDWS, KPTCL. & etc) ನಾನ್ ಹೈದರಾಬಾದ್ ಕರ್ನಾಟಕ ಭಾಗದ 24 ಜಿಲ್ಲೆಯ ಅಭ್ಯರ್ಥಿಗಳಿಗೆ (ಉಳಿಕೆ ಮೂಲವೃಂದ) ನೇಮಕಾತಿ ಪ್ರಕ್ರಿಯೆಗಳಲ್ಲಿ (HK Reservation) ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಪತ್ರ ಬರೆದಿದ್ದಾರೆ.
ಸರ್ಕಾರಿ ಹುದ್ದೆಗಳಿಗೆ ನಡೆಯುತ್ತಿರುವ ಎಲ್ಲಾ ನೇಮಕಾತಿಗಳಲ್ಲಿ 371(ಜೆ) ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಮೀಸಲಾತಿ ನಿಯಮಗಳಿಗೆ ಸಂಬಂಧಿಸಿದಂತೆ ದಿನಾಂಕ: 01/02/2023 ರಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಅಂತಿಮ ಹಂತದಲ್ಲಿದ್ದ ವಿವಿಧ ನೇಮಕಾತಿಗಳಿಗೆ ಪೂರ್ವಾನ್ವಯ ಮಾಡಿರುವ ಈ ಸುತ್ತೋಲೆಯು ರಾಜ್ಯಪಾಲರು ಹೊರಡಿಸಿರುವ ಮೂಲ ಗೆಜೆಟ್ ಕಾಯ್ದೆ ಮತ್ತು ನಿಯಮಗಳಿಗೆ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಜಾರಿಗೊಳಿಸುತ್ತಿರುವುದು ಗಮನಕ್ಕೆ ಬಂದಿದೆ.
ಆದ್ದರಿಂದ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ನೀಡಿರುವ ಆದೇಶವನ್ನು ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸದೆ, ಇಲಾಖಾ ಹಂತದಲ್ಲಿಯೇ ಕೆ.ಎ.ಟಿ ಆದೇಶ ಮತ್ತು ಸಾರ್ವಜನಿಕರಿಂದ ಬಂದಿರುವ ಆರೋಪ / ದೂರುಗಳ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿ ಕಾನೂನು ಕ್ರಮಜರುಗಿಸಿ, 24 ಜಿಲ್ಲೆಯ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಹಾಗೂ ರಾಜ್ಯಪಾಲರ ಆದೇಶ ಮತ್ತು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನೀಡಿರುವ ತೀರ್ಪುಗಳ ಬಗ್ಗೆ ಸಮಿತಿ ರಚನೆ ಮಾಡಿ ವರದಿ ತಯಾರಿಸಿದ ನಂತರ ಮೂಲ ಗೆಜೆಟ್ ನಿಯಮಗಳಲ್ಲಿರುವ ನಿರ್ದೇಶನಗಳಂತೆ ನೇಮಕಾತಿ ಪ್ರಕ್ರಿಯೆಗಳಲ್ಲಿ 371(ಜೆ) ಮೀಸಲಾತಿ ನಿಯಮಗಳನ್ನು ಅನುಷ್ಠಾನ ಗೊಳಿಸುವಂತೆ ಹಾಗೂ ಸಮಿತಿ ವರದಿ ನೀಡುವವರೆಗೆ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸದಂತೆ ನೇಮಕಾತಿ ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕು.
ಈ ಮನವಿಯನ್ನು ಪರಿಗಣಿಸಿ ನಾನ್ ಹೈದ್ರಾಬಾದ್ ಕರ್ನಾಟಕದ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಅವರನ್ನು ಸಚಿವರು ಕೋರಿದ್ದಾರೆ.
ಸದ್ಯ ಎಚ್.ಕೆ ಪಾಟೀಲ್ ಬರೆದಿರುವ ಪತ್ರ ಎಲ್ಲೆಡೆ ವೈರಲ್ ವೈರಲ್ ಆಗಿದ್ದು, ರಾಯಚೂರಿನಲ್ಲಿ 371(ಜೆ) ಹೋರಾಟಗಾರರ ಕೆಂಗಣ್ಣಿಗೆ ಪತ್ರ ಗುರಿಯಾಗಿದೆ. ಇದು ಮೀಸಲಾತಿ ಕಸಿದುಕೊಳ್ಳುವ ಹುನ್ನಾರ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.