Site icon Vistara News

ವಿಸ್ತಾರ ಸಂಪಾದಕೀಯ: ಪ್ರಾಮಾಣಿಕ ಕಾರ್ಯಾಂಗವೇ ಅಭಿವೃದ್ಧಿಗೆ ದಾರಿ

govt

ಪ್ರತಿ ದಿನ ಒಂದು ತಾಸು ಹೆಚ್ಚು ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರರಿಗೆ ಕರೆ ನೀಡಿದ್ದಾರೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚನೆ ಮಾಡಿದ ಹಿನ್ನೆಲೆಯಲ್ಲಿ ತಮ್ಮನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ಹಾಗೂ ಜಿಲ್ಲಾ, ತಾಲೂಕು ಸರ್ಕಾರಿ ನೌಕರರ ಸಂಘಗಳ ಅಧ್ಯಕ್ಷರ ನಿಯೋಗದ ಮುಂದೆ ಅವರು ಈ ಮಾತನ್ನಾಡಿದ್ದಾರೆ. ಸುಭಿಕ್ಷ ನಾಡನ್ನು ಕಟ್ಟಲು ಎಲ್ಲರೂ ಒಂದಾಗಿ ಪ್ರಾಮಾಣಿಕತೆ, ನಿಷ್ಠೆ ಹಾಗು ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಬೇಕು. ಜನಪರವಾದ ಕೆಲಸ ಮಾಡಿದರೆ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ದೇಶದ 5 ಟ್ರಿಲಿಯನ್ ಡಾಲರ್ (4 ಕೋಟಿ ಕೋಟಿ ರೂ.) ಆರ್ಥಿಕತೆಗೆ ಕನಸಿಗೆ ಕರ್ನಾಟಕ ಒಂದು ಟ್ರಿಲಿಯನ್ ಡಾಲರ್ (80 ಲಕ್ಷ ಕೋಟಿ ರೂ.) ಕೊಡುಗೆ ಸೇರಿಸಬೇಕು ಎಂದು ಸಿಎಂ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಆಶಯ ಉತ್ತಮವಾಗಿದೆ. ಈಗತಾನೇ 7ನೇ ವೇತನ ಆಯೋಗ ರಚನೆಯನ್ನು ಸರ್ಕಾರ ಮಾಡಿತ್ತು. ಇದು ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. 6ನೇ ವೇತನ ಆಯೋಗದ ಅಧಿಕಾರಾವಧಿ ಮುಗಿದು ಹಲವು ತಿಂಗಳುಗಳಾಗಿದ್ದರೂ 7ನೇ ವೇತನ ಆಯೋಗ ರಚನೆಯಾಗಿರಲಿಲ್ಲ. ನೂತನ ಆಯೋಗ ನೀಡಲಿರುವ ವೇತನ ಪರಿಷ್ಕರಣೆಯ ಸಕಾರಾತ್ಮಕ ಪರಿಣಾಮ 5.40 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ, ಮಂಡಳಿ, ಪ್ರಾಧಿಕಾರ, ವಿವಿ ಸಿಬ್ಬಂದಿ, 4 ಲಕ್ಷ ನಿವೃತ್ತ ನೌಕರರ ಮೇಲೆ ಆಗಲಿದೆ. ಬೆಲೆ ಏರಿಕೆಯ ಬಿಸಿ ಎಲ್ಲರಂತೆ ಸರ್ಕಾರಿ ನೌಕರರನ್ನೂ ತಟ್ಟಿರುವುದರಿಂದ, ಅವರಿಗೂ ವೇತನ ಹೆಚ್ಚಳ ಆಗಬೇಕಾಗಿರುವುದು ನ್ಯಾಯಯುತ.

ಅದೇ ಕಾಲಕ್ಕೆ, ಕಾರ್ಪೊರೇಟ್‌ ನೌಕರರನ್ನು ಹೊರತುಪಡಿಸಿ ಸರ್ಕಾರಿ ನೌಕರರು ಹೆಚ್ಚಿನ ಸೌಲಭ್ಯ- ಸವಲತ್ತುಗಳನ್ನು ಹೊಂದಿದ ವರ್ಗ ಎಂಬುದನ್ನೂ ನಾವು ಒಪ್ಪಬೇಕು. ಇವರು ಸಂಬಳ ಪಡೆಯುವುದು ಕೂಡ ಸರ್ಕಾರದ, ಅಂದರೆ ಪ್ರಜೆಗಳ ತೆರಿಗೆ ಹಣದಿಂದ. ಹೀಗಾಗಿ ಸರ್ಕಾರಿ ನೌಕರರಿಂದ ಪ್ರಜೆಗಳು ಸಮರ್ಪಕವಾದ ಸೇವೆಯನ್ನು ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ ಅಲ್ಲವೆ? ಸಿಎಂ ಹೇಳಿದ ಮಾತುಗಳಲ್ಲಿ ಈ ಅಂಶ ಉಲ್ಲೇಖವಾಗದಿದ್ದರೂ ಅಡಕವಾಗಿದೆ. ಸರ್ಕಾರಿ ನೌಕರರಲ್ಲಿ ನಿಗದಿತ ಸಮಯಕ್ಕಿಂತ ಅಧಿಕ ಕಾಲ ಕೆಲಸ ಮಾಡುವವರು, ಕರ್ತವ್ಯವನ್ನು ಅತ್ಯಂತ ಸಮರ್ಪಕವಾಗಿ ಮಾಡುವವರು, ಡ್ಯೂಟಿರಹಿತ ಅವಧಿಯಲ್ಲಿಯೂ ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಂಡವರೆಲ್ಲ ಖಂಡಿತವಾಗಿಯೂ ಇದ್ದಾರೆ. ಅಂಥವರೇ ನಿಜವಾಗಿಯೂ ಒಂದು ಸಂಸ್ಥೆಯನ್ನು ಮುನ್ನಡೆಸುವವರು. ಆದರೆ ಉದಾಸೀನತೆ ಮಾಡುವವರು, ಪಡೆಯುವ ವೇತನಕ್ಕೆ ನ್ಯಾಯ ಸಲ್ಲಿಸದವರೂ ತುಂಬಾ ಸಂಖ್ಯೆಯಲ್ಲಿ ಇದ್ದಾರೆಂಬುದನ್ನೂ ನಾವು ಒಪ್ಪಬೇಕು. ಇಂಥವರಿಂದಾಗಿ ಸರ್ಕಾರಿ ಸೇವೆಗೆ ಕಳಂಕ ಹತ್ತಿಕೊಂಡಿದೆ.

ಈ ಭ್ರಷ್ಟತೆ, ಉದಾಸೀನತೆ, ಉಡಾಫೆಗಳನ್ನು ತೊಲಗಿಸಿದರೆ ಅತ್ಯುತ್ತಮ ಸರ್ಕಾರಿ ಸೇವಾ ವ್ಯವಸ್ಥೆಯೊಂದನ್ನು ನಾವು ಕಟ್ಟಲು ಸಾಧ್ಯ. ಸರ್ಕಾರಿ ಸೇವೆಯ ಔದಾಸೀನ್ಯ ಹಾಗೂ ವಿಳಂಬಗಳಿಂದಾಗಿಯೇ ಉದ್ಯಮ ಬೆಳೆಯುತ್ತಿಲ್ಲ ಹಾಗೂ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬುದನ್ನು ನಾವು ಒಪ್ಪಬೇಕು. ಈ ಸಲದ ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಭಾಷಣದಲ್ಲಿ ಪ್ರಧಾನಮಂತ್ರಿ ʼʼಉದ್ಯಮಗಳಿಗೆ ನಾವು ಕೆಂಪು ಪಟ್ಟಿ ತೊಲಗಿಸಿ, ಕೆಂಪು ಹಾಸು ಹಾಸಿದ್ದೇವೆʼʼ ಎಂದಿದ್ದಾರೆ. ಇದು ಅಕ್ಷರಾರ್ಥದಲ್ಲಿ ನಿಜವಾಗಬೇಕಿದ್ದರೆ, ಸರ್ಕಾರಿ ವ್ಯವಸ್ಥೆ ಇನ್ನಷ್ಟು ಚುರುಕಾಗುವುದು ಅಗತ್ಯವಿದೆ. 5.40 ಲಕ್ಷ ನೌಕರರು ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡುವುದು ಎಂದರೆ ಅಷ್ಟೇ ಪ್ರಮಾಣದ ಮಾನವ ಗಂಟೆಗಳ ಕೆಲಸ ಆಗುವುದೆಂದರ್ಥ. ಕಾರ್ಯಾಂಗ ಜನಸ್ಪಂದನೆಯ ಕೆಲಸ ಮಾಡಿದಾಗ ಸರ್ಕಾರಕ್ಕೆ, ವ್ಯವಸ್ಥೆಗೆ ಒಳ್ಳೆಯ ಹೆಸರು ಬರುತ್ತದೆ. ಸರ್ಕಾರಿ ಕಚೇರಿಗಳು ಜನಸ್ನೇಹಿಯಾಗಿದ್ದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ಕಾರ್ಯಾಂಗದ ಅತ್ಯುನ್ನತ ಹುದ್ದೆಗಳನ್ನು ʼನಾಗರಿಕ ಸೇವೆʼ ಎಂದು ಕರೆಯಲಾಗಿದೆ. ಅಂದರೆ ಇದು ನಿಜಕ್ಕೂ ವೇತನಕ್ಕೆ ತಕ್ಕ ಉದ್ಯೋಗ ಎನಿಸದೆ, ಜನಕ್ಕೆ ಸಲ್ಲಿಸುವ ಸೇವೆಯಾಗಬೇಕು. ಆರೋಗ್ಯ, ಶಿಕ್ಷಣ, ಕಂದಾಯ, ಸ್ಥಳೀಯಾಡಳಿತ- ಎಲ್ಲದಕ್ಕೂ ಅದರದೇ ಆದ ಮೌಲ್ಯ ಹಾಗೂ ಹೊಣೆಗಾರಿಕೆಗಳಿವೆ. ಎಲ್ಲರೂ ಇದನ್ನು ಅರಿತು ತಮ್ಮ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದಾಗ ದೇಶಕ್ಕೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕ ಬಲ ತುಂಬುವ ಕಾರ್ಯ ಸಾಧ್ಯವಾಗಬಹುದು.

ವಿಸ್ತಾರ ಟಿವಿಯಲ್ಲಿ ಬೆಳಗ್ಗೆ 8.27ಕ್ಕೆ ಪ್ರಸಾರವಾಗುವ ನ್ಯೂಸ್ ಮಾರ್ನಿಂಗ್ ವಿತ್ HPKಯಲ್ಲಿ ‘ವಿಸ್ತಾರ ಸಂಪಾದಕೀಯ’ ವಿಶ್ಲೇಷಣೆ ನೋಡಿ…

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಸರ್ಕಾರಿ ನೌಕರರ ಹಿತ ಕಾಪಾಡುವ ಜವಾಬ್ದಾರಿಯನ್ನು ಸರ್ಕಾರ ನಿಭಾಯಿಸಲಿ

Exit mobile version