Site icon Vistara News

ವಿಸ್ತಾರ ಸಂಪಾದಕೀಯ: ಭೀಕರ ಹಿಂಸಾಚಾರ; ಮಣಿಪುರದಲ್ಲಿ ಶಾಂತಿ ನೆಲೆಸಲಿ

Manipur Violence

#image_title

ಮಣಿಪುರ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಮೇರೆ ಮೀರಿದೆ. ಇದು ಹಲವು ದಶಕಗಳಲ್ಲಿ ನಮ್ಮ ದೇಶ ಕಂಡು ಕೇಳರಿಯದ ಭೀಕರ ಬುಡಕಟ್ಟು ಕಲಹವಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಹಿಂಸೆಯನ್ನು ನಿಯಂತ್ರಣಕ್ಕೆ ತರಲು ಸಂಪೂರ್ಣ ವಿಫಲವಾಗಿದ್ದು, ಬಿಜೆಪಿಯ ಪ್ರಮುಖ ನಾಯಕರ ಮನೆಗಳನ್ನೇ ಬಂಡುಕೋರರು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಅನೇಕ ಅಧಿಕಾರಿಗಳು ಹಾಗೂ ಪುಢಾರಿಗಳ ಮನೆಗಳನ್ನು ಸುಟ್ಟುಹಾಕಲಾಗಿದೆ. ಪೊಲೀಸ್‌ ಠಾಣೆಗಳು, ಸರ್ಕಾರಿ ಕಚೇರಿಗಳ ಮೇಲೆ ಹಿಂಸಾನಿರತರು ಮುಗಿಬಿದ್ದು ಧ್ವಂಸ ಮಾಡುತ್ತಿದ್ದಾರೆ. ಗುರುವಾರ ರಾತ್ರಿ ಕೇಂದ್ರ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ರಂಜನ್‌ ಸಿಂಗ್‌ ಅವರ ಮನೆಗೆ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ದಾಳಿ ಮಾಡಿ, ಬೆಂಕಿ ಹಚ್ಚಿದ್ದಾರೆ. ಈಗಲೇ ನಿಯಂತ್ರಿಸದೇ ಹೋದರೆ ಪರಿಸ್ಥಿತಿ ಕೈಮೀರಲಿದೆ.

ಸುಮಾರು ಒಂದೂವರೆ ತಿಂಗಳ ಹಿಂದೆ ಮೈತೇಯಿ ಮತ್ತು ಬುಡಕಟ್ಟು ಸಮುದಾಯಗಳ ನಡುವೆ ಈ ಸಂಘರ್ಷ ಪ್ರಕಟವಾಗಿ ಕಾಣಿಸಿಕೊಂಡಿದ್ದರೂ, ಇದರ ಕಾರಣಗಳು ದಶಕಗಳಿಂದಲೂ ಹೊಗೆಯಾಡುತ್ತಿದ್ದವು. ಮೈತೇಯಿ ಜನಾಂಗದವರು ಹಾಗೂ ಬುಡಕಟ್ಟು ಸಮುದಾಯದವರಾದ ಕುಕೀಗಳು, ನಾಗಾಗಳು ಪರಸ್ಪರ ಹೊಡೆದಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಮೈತೇಯಿಗಳ ಪರ ನಿಂತಿದೆ. ಮೈತೇಯಿಗಳು ರಾಜ್ಯದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟು ಹಾಗೂ ಬುಡಕಟ್ಟು ಸಮುದಾಯದವರು ಶೇ.40ರಷ್ಟು ಇದ್ದಾರೆ. ಆದರೆ ಬುಡಕಟ್ಟು ಸಮುದಾಯದವರು 90 ಪ್ರತಿಶತದಷ್ಟು ಭೂಪ್ರದೇಶದಲ್ಲಿ ಹರಡಿದ್ದಾರೆ. ರಾಜ್ಯದ ಕೇವಲ 10 ಪ್ರತಿಶತದಷ್ಟು ಜಾಗದಲ್ಲಿ ಮಾತ್ರ ಮೈತೇಯಿಗಳಿದ್ದರೂ ರಾಜಕೀಯವಾಗಿ ಬಲಿಷ್ಠರಾಗಿದ್ದಾರೆ. ಶಾಸನಸಭೆಗಳಲ್ಲಿ ಇವರ ಪ್ರಾತಿನಿಧ್ಯ ಹೆಚ್ಚಿದೆ. ಈಗ ಎರಡೂ ಸಮುದಾಯಗಳ ನಡುವೆ ವಿದ್ವೇಷ ಭುಗಿಲೇಳಲು ಹಲವು ಕಾರಣಗಳಿವೆ.

ಕೆಲವು ವರ್ಷಗಳ ಹಿಂದಿನಿಂದಲೇ, ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಗುಡ್ಡಗಾಡು ಪ್ರದೇಶಗಳಲ್ಲಿ ಇವರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಸಾರಿದ ಸರ್ಕಾರ, ಅವರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದೆ. ಹಲವು ಕಡೆ ಅರಣ್ಯ ಭೂಮಿಗಳಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿರುವ ತಮ್ಮನ್ನು ತೆರವು ಮಾಡಲಾಗುತ್ತಿದೆ ಎಂಬುದು ಕುಕಿಗಳ ಹಾಗೂ ನಾಗಾಗಳ ಸಿಟ್ಟು. ರಾಜ್ಯ ಸರ್ಕಾರ ಮೈತೇಯಿಗಳನ್ನು ಓಲೈಸುತ್ತಿದೆ; ತಮ್ಮನ್ನು ಹಣಿಯುತ್ತಿದೆ ಎಂಬುದು ಇವರ ಆಕ್ರೋಶ. ಇದಕ್ಕೆ ಪೂರಕ ಎಂಬಂತೆ, ಎಸ್‌ಟಿ ಸ್ಥಾನಮಾನಕ್ಕಾಗಿ ಮೈತೇಯಿ ಬುಡಕಟ್ಟು ಬೇಡಿಕೆ ಸಲ್ಲಿಸಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರ, ಕೇಂದ್ರಕ್ಕೆ ಶಿಫಾರಸು ಕಳುಹಿಸಿದೆ. ಮೈತೇಯಿಗಳಿಗೆ ಎಸ್‌ಟಿ ಸ್ಥಾನಮಾನ ನೀಡಿದರೆ ತಮ್ಮ ಅಸ್ತಿತ್ವಕ್ಕೆ, ಬದುಕುವ ಅವಕಾಶಗಳಿಗೆ ಧಕ್ಕೆ ಎಂಬುದು ಬುಡಕಟ್ಟು ಸಮುದಾಯಗಳ ಆತಂಕವಾಗಿದೆ. ಕುಕೀಗಳು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ವಲಸೆ ಬಂದಿದ್ದಾರೆ ಎಂಬುದು ಮೈತೇಯಿಗಳ ಆರೋಪ. ಹೀಗೆ ಎರಡೂ ಜನಾಂಗಗಳು ಚಕಮಕಿಗೆ ಒಡ್ಡಿಕೊಂಡಿವೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಹೆಚ್ಚಿದ ಪ್ರಯಾಣಿಕರ ಸಂಖ್ಯೆ; ಸರ್ಕಾರಿ ಬಸ್ಸುಗಳ ಸಂಖ್ಯೆ ಹೆಚ್ಚಿಸಿ

ಎರಡೂ ಸಮುದಾಯಗಳ ಆತಂಕಗಳಿಗೆ ಸಕಾರಣಗಳು ಇವೆ. ಎರಡೂ ಕಡೆಯವರನ್ನು ಒಂದುಗೂಡಿಸಿ ಮಾತುಕತೆಯ ವೇದಿಕೆಗೆ ತಂದು, ಸಮಾಧಾನಿಸುವ ಕೆಲಸವನ್ನು ಸರ್ಕಾರ ನಡೆಸುವವರು ಮಾಡಬೇಕು. ಆದರೆ ಮಣಿಪುರದ ಬೀರೇನ್‌ ಸಿಂಗ್‌ ಸರ್ಕಾರ, ಮೈತೇಯಿಗಳ ಪರ ವಕಾಲತ್ತು ಮಾಡುತ್ತಿದೆ ಎಂದು ಬುಡಕಟ್ಟು ಸಮುದಾಯದವರು ಆಕ್ರೋಶಗೊಳ್ಳುವಂತೆ ವರ್ತಿಸುತ್ತಿದೆ. ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರು ಭೇಟಿ ನೀಡಿದರೂ ಪ್ರಯೋಜನವಾಗಿಲ್ಲ. ಪ್ರಧಾನಿ ಸರ್ವಪಕ್ಷಗಳ ಸಭೆ ಕರೆದರೆ ಪ್ರಯೋಜನವಾಗಬಹುದು ಎಂದು ವಿಪಕ್ಷಗಳು ಆಗ್ರಹಿಸಿವೆ. 2001ರಲ್ಲಿ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಡೆಸಿದ ಸರ್ವಪಕ್ಷ ಸಭೆ ಈ ವಿಷಯದಲ್ಲಿ ಶಮನ ತಂದಿತ್ತು. ಗಲಭೆ ಹಾಗೂ ಜೀವಹಾನಿಯನ್ನು ತಡೆಗಟ್ಟಿ, ಸಾರ್ವಜನಿಕ ಆಸ್ತಪಾಸ್ತಿ ರಕ್ಷಿಸುವ ನಿಟ್ಟಿನಲ್ಲಿ ಇನ್ನಷ್ಟು ಗಟ್ಟಿ ಕ್ರಮಗಳ ಅಗತ್ಯವಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ನಿಟ್ಟಿನಲ್ಲಿ ತಾರತಮ್ಯರಹಿತ ಉಪಕ್ರಮಗಳನ್ನು ಕೈಗೊಂಡು ಶಾಂತಿ ಕಾಪಾಡಲು ಸರ್ವ ಪ್ರಯತ್ನ ಮಾಡಬೇಕಿದೆ.

Exit mobile version