ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ (Delhi Excise Policy) ಪ್ರಕರಣದಲ್ಲಿ ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ದೆಹಲಿಯ ತಿಹಾರ್ ಜೈಲಿನಲ್ಲಿರುವ (Tihar Jail) ತಮ್ಮ 14X8 ಅಡಿ ಸೆಲ್‌ನಲ್ಲಿ ಮೊದಲ ರಾತ್ರಿಯನ್ನು ನಿನ್ನೆ ಕಳೆದರು.
ಎಎಪಿ ಮುಖ್ಯಸ್ಥ ಕೇಜ್ರಿವಾಲ್, ಸೋಮವಾರ ಸಂಜೆ 4 ಗಂಟೆಗೆ ತಿಹಾರ್ ಜೈಲಿಗೆ ಬಂದರು. ತಮ್ಮ ಸೆಲ್‌ನಲ್ಲಿ ರಾತ್ರಿ ಸ್ವಲ್ಪ ಸಮಯ ವಾಕ್ ಮಾಡಿ, ನಂತರ ನಿದ್ರಿಸಿದರು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಸೆಲ್‌ಗೆ ಕಳುಹಿಸುವ ಮೊದಲು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಸೆಲ್‌ನಲ್ಲಿ ಅವರು ಒಬ್ಬರೇ ಇದ್ದಾರೆ.
ಬಂದಾಗ ಅರವಿಂದ ಕೇಜ್ರಿವಾಲ್ ಅವರ ಶುಗರ್ ಲೆವೆಲ್ 50ಕ್ಕಿಂತ ಕಡಿಮೆ ಇತ್ತು. ವೈದ್ಯರ ಸಲಹೆ ಮೇರೆಗೆ ಔಷಧಗಳನ್ನು ನೀಡಲಾಗುತ್ತಿದೆ. ಕೇಜ್ರಿವಾಲ್ ಅವರನ್ನು ಜೈಲು ಸಂಖ್ಯೆ 2ರಲ್ಲಿ ಇರಿಸಲಾಗಿದೆ. ಇಂದು ಅವರ ಕುಟುಂಬವನ್ನು ಭೇಟಿ ಮಾಡಲು ಅವರಿಗೆ ಅವಕಾಶ ನೀಡಲಾಗುತ್ತದೆ.
ಮಧ್ಯಾಹ್ನ ಕೇಜ್ರಿವಾಲ್‌ಗೆ ಚಹಾ ನೀಡಲಾಯಿತು. ಭೋಜನದ ಸಮಯದಲ್ಲಿ ಅವರು ಮನೆಯಲ್ಲಿ ಬೇಯಿಸಿದ ಆಹಾರವನ್ನು ಸ್ವೀಕರಿಸಿದರು. ಜೈಲು ಅಧಿಕಾರಿಗಳು ಅವರಿಗೆ ಹಾಸಿಗೆ, ಹೊದಿಕೆ ಮತ್ತು ಎರಡು ದಿಂಬುಗಳನ್ನು ಒದಗಿಸಿದ್ದಾರೆ. ರಾತ್ರಿ ಸಿಮೆಂಟ್ ಪ್ಲಾಟ್‌ಫಾರಂ ಮೇಲೆ ಮಲಗಿದ್ದ ಅವರು ನಂತರ ಸೆಲ್‌ನಲ್ಲಿ ವಾಕಿಂಗ್ ಮಾಡಿದರು. ಬೆಳಗ್ಗೆ ಅವರ ಸಕ್ಕರೆ ಮಟ್ಟ ಕಡಿಮೆ ಇತ್ತು.
ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಲು ಅವರಿಗೆ ಅವಕಾಶವಿದೆ. ಅವರ ಸಕ್ಕರೆ ಮಟ್ಟವು ಸಾಮಾನ್ಯ ಸ್ಥಿತಿಗೆ ಬರುವವರೆಗೆ ಅದನ್ನು ಪ್ರತಿದಿನ ನೀಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಕೇಜ್ರಿವಾಲ್ ಅವರು ಬೆಳಿಗ್ಗೆ ತಮ್ಮ ಸೆಲ್‌ನಲ್ಲಿ ಧ್ಯಾನ ಮಾಡಿದರು; ಚಹಾ ಮತ್ತು ಎರಡು ಬಿಸ್ಕತ್ತುಗಳನ್ನು ಸೇವಿಸಿದರು.
ತಿಹಾರ್ ಜೈಲಿನ ಭದ್ರತೆಯ ಇಬ್ಬರು ಸಿಬ್ಬಂದಿ ಮತ್ತು ಜೈಲು ವಾರ್ಡರ್ ಅವರನ್ನು ಕೇಜ್ರಿವಾಲ್ ಸೆಲ್ ಹೊರಗೆ ನಿಯೋಜಿಸಲಾಗಿದೆ. ಜೈಲಿನ ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಅವರ ಮೇಲೆ ನಿಗಾ ಇಟ್ಟಿದ್ದಾರೆ. ಆದರೆ ಅವರ ಸೆಲ್ ಬಳಿ ಕ್ವಿಕ್ ರಿಯಾಕ್ಷನ್ ತಂಡವನ್ನು ಸಹ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವರು ಬೇಡಿಕೆಯಿಟ್ಟಿದ್ದ ರಾಮಾಯಣ, ಮಹಾಭಾರತ ಮತ್ತು ʼhow prime ministers decide’ ಎಂಬ ಮೂರು ಪುಸ್ತಕಗಳನ್ನು ಅಧಿಕಾರಿಗಳು ಅವರಿಗೆ ನೀಡಿದ್ದಾರೆ. ಅವರು ಧರಿಸುವ ಧಾರ್ಮಿಕ ಲಾಕೆಟ್ ಕೂಡ ನೀಡಲಾಗಿದೆ.
ನಿಯಮಗಳ ಪ್ರಕಾರ, ಕೇಜ್ರಿವಾಲ್ ಅವರು ಭೇಟಿಯಾಗಲು ಬಯಸುವ ಆರು ಜನರ ಪಟ್ಟಿಯನ್ನು ನೀಡಿದ್ದಾರೆ. ಪಟ್ಟಿಯಲ್ಲಿ ಅವರ ಪತ್ನಿ ಸುನೀತಾ ಕೇಜ್ರಿವಾಲ್, ಅವರ ಮಗ ಮತ್ತು ಮಗಳು, ಅವರ ಖಾಸಗಿ ಕಾರ್ಯದರ್ಶಿ ಬಿಭವ್ ಕುಮಾರ್ ಮತ್ತು ಎಎಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂದೀಪ್ ಪಾಠಕ್ ಇದ್ದಾರೆ.
ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ಗೆ 14×8 ಅಳತೆಯ ಕೋಣೆ; ಪತ್ನಿ ಭೇಟಿಗೆ ಅವಕಾಶ; ವಿಐಪಿ ಟ್ರೀಟ್‌ಮೆಂಟ್ ಇದೆಯಾ?