Site icon Vistara News

ಚಾಯ್‌ವಾಲಾ ಮೋದಿ ಐಐಟಿ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂದ ಕಾಂಗ್ರೆಸ್ ನಾಯಕ; ಭುಗಿಲೆದ್ದ ವಿವಾದ

Narendra Modi

How can tea-seller's son talk about IITs, IIMs?: Congress candidate on PM Narendra Modi

ಜೈಪುರ: ಲೋಕಸಭೆ ಚುನಾವಣೆ (Lok Sabha Election 2024) ಕಾವು ದಿನೇದಿನೆ ಜಾಸ್ತಯಾಗುತ್ತಿದೆ. ರಾಜಕೀಯ ನಾಯಕರ ಹೇಳಿಕೆಗಳು ಕೂಡ ತೀವ್ರ ಮೊನಚಾಗುತ್ತಿವೆ. ಇನ್ನೂ ಕೆಲ ನಾಯಕರು ಪ್ರತಿಸ್ಪರ್ಧಿಗಳು, ಎದುರಾಳಿ ಪಕ್ಷದ ನಾಯಕರ ವಿರುದ್ಧ ವೈಯಕ್ತಿಕ ನಿಂದನೆ, ಆರೋಪ, ಏಕವಚನ ಪ್ರಯೋಗ ಸೇರಿ ಹಲವು ರೀತಿಯಲ್ಲಿ ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ಜೋಧ್‌ಪುರ ಕಾಂಗ್ರೆಸ್‌ ಅಭ್ಯರ್ಥಿ ಕರಣ್‌ ಸಿಂಗ್‌ ಉಚಿಯಾರ್ದ ಅವರು ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಚಹಾ ಮಾಡುತ್ತಿದ್ದ ಮೋದಿ ಐಐಟಿ, ಐಐಎಂ ಸಂಸ್ಥೆಗಳ ಬಗ್ಗೆ ಮಾತನಾಡಲು ಹೇಗೆ ಸಾಧ್ಯ” ಎಂದಿದ್ದಾರೆ.

ಮಾಧ್ಯಮವೊಂದರ ಜತೆ ಮಾತನಾಡಿದ ಕರಣ್‌ ಸಿಂಗ್‌ ಉಚಿಯಾರ್ದ, “ನಮ್ಮ ದೇಶದಲ್ಲಿ ಐಐಟಿ, ಐಐಎಂ ಸಂಸ್ಥೆಗಳನ್ನು ಸ್ಥಾಪಿಸಿದ್ದು ಯಾರು? ನರೇಂದ್ರ ಮೋದಿ ಅವರು ಇವುಗಳನ್ನು ದೇಶದಲ್ಲಿ ಸ್ಥಾಪಿಸಿದ್ದಾ? ನೀವು ನಿಮ್ಮ ಮನೆಯಲ್ಲಿ ಚಹಾ ಮಾರುತ್ತಿದ್ದಿರಿ. ಅಷ್ಟಕ್ಕೂ, ಚಹಾ ಮಾರುವವನ ಮಗನೊಬ್ಬ ಐಐಟಿ, ಐಐಎಂ ಸಂಸ್ಥೆಗಳ ಬಗ್ಗೆ, ಅವುಗಳ ವಿಚಾರಗಳ ಬಗ್ಗೆ ಹೇಗೆ ಮಾತನಾಡಲು ಸಾಧ್ಯ? ಹುರುಳಿಲ್ಲದೆ ಹೇಗೆ ಇವುಗಳ ಬಗ್ಗೆ ಮಾತನಾಡಲು ಸಾಧ್ಯವಾಗುತ್ತದೆ” ಎಂದು ಹೇಳಿರುವುದು ವಿವಾದಕ್ಕೆ ಗುರಿಯಾಗಿದೆ.

ಕರಣ್‌ ಸಿಂಗ್‌ ಉಚಿಯಾರ್ದ ನೀಡಿದ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. “ದೇಶದಲ್ಲಿ ಸಾಮಾನ್ಯ ಜನರು, ಅದರಲ್ಲೂ ಚಹಾ ಮಾರುವವರ ವಿರುದ್ಧ ಕಾಂಗ್ರೆಸ್‌ ದ್ವೇಷ ಕಾರುತ್ತಿದೆ. ಯಾರು ಬಾಯಿಯಲ್ಲಿ ಚಿನ್ನದ ಚಮಚವನ್ನು ಇಟ್ಟುಕೊಂಡು ಹುಟ್ಟಿರುತ್ತಾರೋ, ಕುಟುಂಬ ರಾಜಕಾರಣವನ್ನು ಮುಂದುವರಿಸುತ್ತಾರೋ, ಅವರ ಬೂಟು ನೆಕ್ಕವುದು ಮಾತ್ರ ಇವರಿಗೆ ಗೊತ್ತಿದೆ. ಇದಕ್ಕೆ ಕರಣ್‌ ಸಿಂಗ್‌ ಉಚಿಯಾರ್ದ ಅವರೇ ದೊಡ್ಡ ಉದಾಹರಣೆಯಾಗಿದ್ದಾರೆ” ಎಂದು ಕಾಂಗ್ರೆಸ್‌ ನಾಯಕಿ ಪ್ರೀತಿ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಣ್‌ ಸಿಂಗ್‌ ಉಚಿಯಾರ್ದ ಅವರು ಜೋಧ್‌ಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು, ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಎದುರಿಸುತ್ತಿದ್ದಾರೆ. ಇವರು ಸಚಿನ್‌ ಪೈಲಟ್‌ ಅವರ ಆಪ್ತರಾಗಿದ್ದಾರೆ. ಕಾಂಗ್ರೆಸ್‌ ನಾಯಕರು ಮೊದಲು ನರೇಂದ್ರ ಮೋದಿ ಅವರನ್ನು ಚಾಯ್‌ವಾಲಾ ಎಂಬುದಾಗಿ ಟೀಕಿಸಿದ್ದರು. ಇದನ್ನೇ ಮೋದಿ ಅವರು ಪ್ರಚಾರದ ಭಾಗವನ್ನಾಗಿಸಿಕೊಂಡರು. ನಾನು ಚಾಯ್‌ವಾಲಾ ಆಗಿದ್ದೆ, ಚಾಯ್‌ವಾಲಾನೊಬ್ಬ ಪ್ರಧಾನಿಯಾಗಿರುವುದು ಕಾಂಗ್ರೆಸ್‌ ನಾಯಕರಿಗೆ ಇಷ್ಟವಿಲ್ಲ ಎಂದು ಮೋದಿ ಟೀಕಿಸಿದ್ದರು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ ನಾಯಕ ಸುರ್ಜೇವಾಲಾ ಅವರ ವಿವಾದಾತ್ಮಕ ಹೇಳಿಕೆ ಬಳಿಕ ಟಿಎಂಸಿಗೂ ಸಂಕಷ್ಟ

Exit mobile version