Site icon Vistara News

ವಿಸ್ತಾರ Explainer | ಚೀನಾದಲ್ಲಷ್ಟೇ ಇಲ್ಲ ಕೊರೊನಾ, ವಿಶ್ವದ ಎಲ್ಲೆಲ್ಲಿ ಆತಂಕ? ಭಾರತದ ಪರಿಸ್ಥಿತಿ ಏನು?

Coronavirus In China

ಕಾಲನ ಜತೆಗಿನ ಓಟದಲ್ಲಿ ನಾವು ಕಾಲವೇ ತಂದೊಡ್ಡಿದ್ದ ಕೊರೊನಾ ಎಂಬ ಭೀಕರ ಮಹಾಮಾರಿಯನ್ನೇ ಮರೆತಿದ್ದೇವೆ. ಕೊರೊನಾ ಎಂಬ ಪಿಡುಗು ನಮ್ಮನ್ನು ಬಾಧಿಸಿತ್ತು ಎಂಬುದರ ಕುರುಹೇ ಇಲ್ಲದೆ ಜೀವಿಸುತ್ತಿದ್ದೇವೆ. ಆದರೆ, ಕೆಡಕು ಮರೆತು, ಒಳಿತಿನ ಜತೆಗೆ ಹೊರಟ ನಮಗೆ ಮತ್ತೆ ಕೊರೊನಾದ ಭೀತಿ ಎದುರಾಗಿದೆ. ಅದರಲ್ಲೂ, ಜಗತ್ತಿಗೇ ಸೋಂಕು ಹರಡಿಸಿದ ಚೀನಾದಲ್ಲಿಯೇ ಈಗ ಮತ್ತೆ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಆಸ್ಪತ್ರೆಗಳಲ್ಲಿ ಬೆಡ್‌ಗಳು ಸಿಗುತ್ತಿಲ್ಲ, ಲಾಕ್‌ಡೌನ್‌ನಿಂದ ಜನ ಪರದಾಡುವಂತಾಗಿದೆ, ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ, ಮುಂದಿನ ದಿನಗಳಲ್ಲಿ ಲಕ್ಷಾಂತರ ಜನ ಸೋಂಕಿಗೆ ಬಲಿಯಾಗುತ್ತಾರೆ ಎಂಬ ವರದಿಗಳು (ವಿಸ್ತಾರ Explainer) ಆತಂಕವನ್ನು ಸೃಷ್ಟಿಸಿವೆ.

ಹಾಗಾಗಿ, ಇದು ಚೀನಾಗೆ ಮಾತ್ರವಲ್ಲ ಜಗತ್ತಿಗೇ ಆತಂಕ ತಂದೊಡ್ಡಿದೆ. ನಾವು ಕೂಡ ಆರಂಭದಲ್ಲಿಯೇ ಮುನ್ನೆಚ್ಚರಿಕೆ ವಹಿಸೋಣ. ಸೋಂಕು ನಿರ್ನಾಮ ಆಗಿರದ ಕಾರಣ ಮೊದಲಿನಂತೆ ಜಾಗೃತರಾಗಿರೋಣ. ಇದರ ಜತೆಗೆ, ಚೀನಾದಲ್ಲಿ ಕೊರೊನಾ ಪರಿಸ್ಥಿತಿ ಹೇಗಿದೆ? ಬೇರೆ ಯಾವ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದು ಭಾರತದ ಮೇಲೆ ಹೇಗೆ ಪರಿಣಾಮ ಬೀರಲಿದೆ? ನಾವು ಯಾವೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಚೀನಾದ ಸ್ಥಿತಿಗತಿ ಹೇಗಿದೆ?
ಕಮ್ಯುನಿಸ್ಟ್‌ ರಾಷ್ಟ್ರ ಚೀನಾದಲ್ಲಿ ಇದುವರೆಗೆ 3.86 ಲಕ್ಷ ಜನರಿಗೆ ಕೊರೊನಾ ತಗುಲಿದ್ದು, 3.43 ಲಕ್ಷ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಹಾಗೆಯೇ, 5,241 ಜನ ಮೃತಪಟ್ಟಿದ್ದಾರೆ. ಸದ್ಯ 37,180 ಸಕ್ರಿಯ ಪ್ರಕರಣಗಳಿದ್ದು, 36,851 ಜನರಿಗೆ ಸೌಮ್ಯ ಲಕ್ಷಣಗಳಿಗೆ. ಇನ್ನು 329 ಜನರ ಪರಿಸ್ಥಿತಿ ಗಂಭೀರವಾಗಿದೆ. ಅಕ್ಟೋಬರ್‌ನಿಂದಲೇ ದೇಶದಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಕಳೆದ ಒಂದು ವಾರದಿಂದ ಏಕಾಏಕಿ ಏರಿಕೆ ಪ್ರಮಾಣ ಹೆಚ್ಚಾಗಿದೆ. ನಿತ್ಯ 1 ಸಾವಿರದಿಂದ 5 ಸಾವಿರದವರೆಗೆ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಇದು ಜಾಗತಿಕವಾಗಿ ಲಭ್ಯವಾದ ಮಾಹಿತಿಯಾದರೂ, ಚೀನಾದ ವಾಸ್ತವ ಸ್ಥಿತಿ ಯಾರಿಗೂ ಗೊತ್ತಿಲ್ಲ. ಹಾಗಾಗಿ, ಹೆಚ್ಚಿನ ರಾಷ್ಟ್ರಗಳು ಕೊರೊನಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿವೆ.

ಆತಂಕ ತಂದಿದೆ ತಜ್ಞರ ವರದಿ
ಚೀನಾದಲ್ಲಿ ಕೊರೊನಾ ಉಲ್ಬಣಗೊಳ್ಳುವ ಕುರಿತು ವೈರಾಣು ತಜ್ಞರು ನೀಡಿರುವ ವರದಿ ಚೀನಾಗೆ ಮಾತ್ರವಲ್ಲ, ಜಗತ್ತಿಗೇ ಆತಂಕ ತಂದಿದೆ. ಚೀನಾದಲ್ಲಿ ಮುಂದಿನ ಮೂರು ತಿಂಗಳಲ್ಲಿ ಶೇ.60ರಷ್ಟು ಜನರಿಗೆ ಸೋಂಕು ತಗುಲಲಿದೆ. ಹಾಗೆಯೇ, ಸುಮಾರು 9.6 ಲಕ್ಷ ಜನ ಸೋಂಕಿಗೆ ಬಲಿಯಾಗಲಿದ್ದಾರೆ. ಇಂತಹ ತೀವ್ರತರ ಪ್ರಸರಣದಿಂದಾಗಿ ಜಗತ್ತಿನ ಶೇ.10ರಷ್ಟು ಜನರನ್ನು ಸೋಂಕು ಬಾಧಿಸಲಿದೆ ಎಂದು ತಜ್ಞರ ವರದಿಯು ತಿಳಿಸಿದೆ. ಹಾಗಾಗಿ, ಮುಂದಿನ ದಿನಗಳ ಕುರಿತು ಆತಂಕ ಎದುರಾಗಿದೆ.

ಭಾರತದಲ್ಲಿ ಹೇಗಿದೆ ಪರಿಸ್ಥಿತಿ?
ದೇಶದಲ್ಲಿ ಸದ್ಯದ ಕೊರೊನಾ ಪ್ರಕರಣಗಳ ಪ್ರಕಾರ ಆತಂಕಪಡುವ ಅಗತ್ಯವಿಲ್ಲ. ಹಾಗಂತ, ಮೈಮರೆಯುವಂತೆಯೂ ಇಲ್ಲ. ದೇಶದಲ್ಲಿ ಸದ್ಯ, 3,490 ಸಕ್ರಿಯ ಪ್ರಕರಣಗಳಿವೆ. ಇವುಗಳಲ್ಲಿ ಕರ್ನಾಟಕದಲ್ಲಿ 1,275 ಹಾಗೂ ಕೇರಳದಲ್ಲಿ 1,448 ಸಕ್ರಿಯ ಕೇಸ್‌ಗಳಿವೆ. ಕಳೆದ 24 ಗಂಟೆಗಳಲ್ಲಿ 69 ಹೊಸ ಕೇಸ್‌ ದಾಖಲಾದರೆ, 178 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಷ್ಟೇ ಅವಧಿಯಲ್ಲಿ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ಆದರೆ, ಚೀನಾದಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಕಾರಣ ಭಾರತದಲ್ಲಿ ಹೆಚ್ಚಿನ ಜನ ಸೇರುವ ಪ್ರದೇಶದಲ್ಲಿ ಮಾಸ್ಕ್‌ ಧರಿಸಬೇಕು, ಬೂಸ್ಟರ್‌ ಡೋಸ್‌ ಹಾಕಿಸಿಕೊಳ್ಳಬೇಕು ಎಂದು ಮಾರ್ಗಸೂಚಿ ಪ್ರಕಟಿಸಿದೆ. ಭಾರತದಲ್ಲಿ ಇದುವರೆಗೆ 4.46 ಕೋಟಿ ಮಂದಿಗೆ ಕೊರೊನಾ ತಗುಲಿದ್ದು, 5.3 ಲಕ್ಷ ಜನ ಮೃತಪಟ್ಟಿದ್ದಾರೆ. ಒಟ್ಟು 4.41 ಕೋಟಿ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಜಗತ್ತಿನ ಹಲವು ರಾಷ್ಟ್ರಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ
ಚೀನಾ ಮಾತ್ರವಲ್ಲ, ಜಗತ್ತಿನ ಹಲವು ರಾಷ್ಟ್ರಗಳ ಪರಿಸ್ಥಿತಿಯೂ ಕಳೆದ ಒಂದು ವಾರದಲ್ಲಿ ಬಿಗಡಾಯಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮಾಹಿತಿ ಪ್ರಕಾರ, ಒಂದು ವಾರದಲ್ಲಿ ಅಮೆರಿಕದಾದ್ಯಂತ 4.45 ಹೊಸ ಪ್ರಕರಣ ದಾಖಲಾಗಿದ್ದು, 2,658 ಮಂದಿ ಮೃತಪಟ್ಟಿದ್ದಾರೆ. ಇನ್ನು, ಜಪಾನ್‌ನಲ್ಲಿ ಕೂಡ ಏಳು ದಿನದಲ್ಲಿ 8.78 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 1,456 ಜನ ಮೃತಪಟ್ಟಿದ್ದಾರೆ. ಕೊರಿಯಾದಲ್ಲೂ 4.61 ಲಕ್ಷ ಜನಕ್ಕೆ ಸೋಂಕು, 362 ಸಾವು, ಫ್ರಾನ್ಸ್‌ನಲ್ಲಿ 3.81 ಲಕ್ಷ ನಾಗರಿಕರಿಗೆ ಸೋಂಕು, 747 ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ 3.24 ಲಕ್ಷ ಕೇಸ್ ದಾಖಲಾಗಿವೆ.

ಇದನ್ನೂ ಓದಿ | Covid-19 | ಚೀನಾದ ಅರ್ಧದಷ್ಟು ವೈದ್ಯರಿಗೆ ಕೊರೊನಾ ಸೋಂಕು! ಹೆಚ್ಚಿದ ಆತಂಕ

Exit mobile version