ಶ್ರೀನಗರ: “ನಾನು ನಿಮ್ಮ ಹೃದಯಗಳನ್ನು ಗೆಲ್ಲಲು ಇಲ್ಲಿಗೆ ಬಂದಿದ್ದೇನೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ (Jammu & Kashmir) ರ್ಯಾಲಿಯಲ್ಲಿ ಭಾಗವಹಿಸಿ ಹೇಳಿದ್ದಾರೆ.
ಅವರು ಶ್ರೀನಗರದ (Srinagar) ಭಕ್ಷಿ ಕ್ರೀಡಾಂಗಣದಲ್ಲಿ ‘ವಿಕಸಿತ ಭಾರತ್, ವಿಕಸಿತ ಜಮ್ಮು ಕಾಶ್ಮೀರ (Viksit Bharat, Viksit Jammu Kashmir) ಕಾರ್ಯಕ್ರಮದಲ್ಲಿ ಭಾಗವಹಿಸಿ 6,400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಿ ಮಾತನಾಡಿದರು. 2019ರ ಆಗಸ್ಟ್‌ನಲ್ಲಿ ಆರ್ಟಿಕಲ್ 370 (Article 370) ರದ್ದತಿ ಮಾಡಿದ ನಂತರ ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ನೀಡಿದ ಮೊದಲ ಭೇಟಿ ಇದಾಗಿದೆ.
“ಕಾಶ್ಮೀರವು ಭಾರತದ ಕಿರೀಟವಾಗಿದೆ. ಇದರ ಸಮಗ್ರ ಅಭಿವೃದ್ಧಿಯು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ನಾನು ನಿಮ್ಮ ಹೃದಯಗಳನ್ನು ಗೆಲ್ಲಲು ಇಲ್ಲಿಗೆ ಬಂದಿದ್ದೇನೆ. ಆರ್ಟಿಕಲ್ 370 ರದ್ದತಿಯು ಈ ಪ್ರದೇಶದ ಯುವಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಅವರ ಕನಸುಗಳನ್ನು ನನಸಾಗಿಸಲು ಕೇಂದ್ರ ಯೋಜನೆಗಳನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. 370ನೇ ವಿಧಿಯನ್ನು ತೆಗೆದುಹಾಕಿದ ನಂತರ ಆ ನಿರ್ಬಂಧಗಳಿಂದ ಇಲ್ಲಿ ಈ ಸ್ವಾತಂತ್ರ್ಯ ಬಂದಿದೆ” ಎಂದು ಪ್ರಧಾನಿ ನುಡಿದರು.
#WATCH | Srinagar, J&K: Prime Minister Narendra Modi says "J&K has been a huge victim of 'Parivarvad' and corruption. The previous governments here had left no stone unturned to destroy our J&K Bank, by filling the bank with their relatives and nephews, these 'Parivarvadis' have… pic.twitter.com/6PJVAlcI3Y
— ANI (@ANI) March 7, 2024
“ದಶಕಗಳ ಕಾಲ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು 370ರ ಹೆಸರಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ದಾರಿತಪ್ಪಿಸಿದವು. ಕೆಲವು ಕುಟುಂಬಗಳ ಅನುಕೂಲಕ್ಕಾಗಿ ಕಾಶ್ಮೀರವನ್ನು ನಿರ್ಬಂಧಿಸಲಾಗಿತ್ತು. ಇಂದು ಜಮ್ಮು ಕಾಶ್ಮೀರದ ಯುವಕರು ಹೊಸ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಇಂದು ಇಲ್ಲಿ ಎಲ್ಲರಿಗೂ ಸಮಾನ ಹಕ್ಕು ಮತ್ತು ಸಮಾನ ಅವಕಾಶಗಳಿವೆ” ಎಂದು ಪ್ರಧಾನಿ ನುಡಿದರು.
ಜಮ್ಮು ಮತ್ತು ಕಾಶ್ಮೀರದ ಹಿಂದಿನ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರಗಳನ್ನು ಟೀಕಿಸಿದ ಮೋದಿ, ಅವರು ಪರಿವಾರವಾದದ ರಾಜಕೀಯದ ಮೇಲೆ ಕೇಂದ್ರೀಕರಿಸಿದ್ದಾರೆ ಮತ್ತು ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಿದ್ದಾರೆ ಎಂದು ಹೇಳಿದರು. ಬಹುತೇಕ ಮುಳುಗಡೆಯಾಗಿದ್ದ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಅನ್ನು ಪುನಶ್ಚೇತನಗೊಳಿಸಲು ಕೇಂದ್ರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದರು. “ಜಮ್ಮು ಮತ್ತು ಕಾಶ್ಮೀರ ಪರಿವಾರವಾದ ಮತ್ತು ಭ್ರಷ್ಟಾಚಾರದ ದೊಡ್ಡ ಬಲಿಪಶುವಾಗಿದೆ. ಇಲ್ಲಿನ ಹಿಂದಿನ ಸರ್ಕಾರಗಳು ಜೆ & ಕೆ ಬ್ಯಾಂಕ್ ಅನ್ನು ಬದುಕಿಸಲು ಪ್ರಯತ್ನಿಸಲಿಲ್ಲ. ತಮ್ಮ ಸಂಬಂಧಿಕರು ಮತ್ತು ಸೋದರಳಿಯಂದಿರನ್ನು ಬ್ಯಾಂಕಿಗೆ ತುಂಬಿಸಿ ಬ್ಯಾಂಕನ್ನು ಹಾಳು ಮಾಡಿದ್ದಾರೆ. ದುರಾಡಳಿತದಿಂದ ಬ್ಯಾಂಕ್‌ಗೆ ಅಪಾರ ನಷ್ಟ ಉಂಟಾಗಿದೆ” ಎಂದರು.
‘ಚಲೋ ಇಂಡಿಯಾ’ ಉಪಕ್ರಮದೊಂದಿಗೆ ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸರ್ಕಾರ ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನು ಅವರು ವಿವರಿಸಿದರು. “ಈಗ ನನ್ನ ಮುಂದಿನ ಮಿಷನ್ ʻವೆಡ್ ಇನ್ ಇಂಡಿಯಾ’. ಜನರು J&Kಗೆ ಬಂದು ತಮ್ಮ ಮದುವೆಗಳನ್ನು ಆಯೋಜಿಸಬೇಕು. J&Kನಲ್ಲಿ G20 ಅನ್ನು ಹೇಗೆ ಆಯೋಜಿಸಲಾಗಿದೆ ಎಂಬುದನ್ನು ಜಗತ್ತು ನೋಡಿದೆ. ಪ್ರವಾಸಕ್ಕಾಗಿ ಜೆ&ಕೆಗೆ ಯಾರು ಹೋಗುತ್ತಾರೆ ಎಂದು ಜನರು ಕೇಳುತ್ತಿದ್ದ ಕಾಲವೊಂದಿತ್ತು. ಇಂದು, J&K ಪ್ರವಾಸೋದ್ಯಮ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ. 2023ರಲ್ಲಿ 2 ಕೋಟಿಗೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬಂದಿದ್ದಾರೆ. ಪ್ರವಾಸಿಗರಿಗೆ ಭೇಟಿ ನೀಡಲು 40 ತಾಜಾ ತಾಣಗಳನ್ನು ಗುರುತಿಸಲಾಗಿದೆ” ಎಂದ ಮೋದಿ, ಜಗತ್ತಿನಾದ್ಯಂತ ಇರುವ ಭಾರತೀಯರು ಇಲ್ಲಿಗೆ ಭೇಟಿ ನೀಡುವಂತೆ ಒತ್ತಾಯಿಸಿದರು.
ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದ ಅವರು, ವ್ಯಾಪಾರ, ಕೃಷಿ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಭಾಗದ ಯುವಜನರ ಸಾಧನೆಗಳನ್ನು ಎತ್ತಿ ತೋರಿಸಿದರು.`ಮೋದಿಯವರಿಗೆ ಕುಟುಂಬವಿಲ್ಲ’ ಎಂದ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಕುಟುಂಬ ಎಂದು ಹೇಳಿದ ಅವರು, ಇಲ್ಲಿನ ಜನರ ಏಳಿಗೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲವನ್ನೂ ಮಾಡಲಿದೆ ಎಂದರು.
‘ವಿಕಸಿತ್ ಭಾರತ್, ವಿಕಸಿತ್ ಜಮ್ಮು ಕಾಶ್ಮೀರ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ 6,400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಿದರು. ಜೊತೆಗೆ ಹೊಸದಾಗಿ ನೇಮಕಗೊಂಡ ಸರ್ಕಾರಿ ನೌಕರರಿಗೆ ಆಫರ್ ಲೆಟರ್ ವಿತರಿಸಿದರು.