Site icon Vistara News

Madhu Bangarappa : ಆ ಹುಚ್ಚನ್‌ ಬಗ್ಗೆ ನಾ ಮಾತಾಡಲ್ಲ ಬಿಟ್ಬಿಡಿ; ಮಧು ಬಂಗಾರಪ್ಪ ಹೇಳಿದ್ದು ಯಾರ ಬಗ್ಗೆ?

Madhu Bangarappa Anant kumar

ಶಿವಮೊಗ್ಗ: ನಾನು ಹಿಂದಿನ ಸಾರಿಯೇ ಹೇಳಿದ್ದೇನೆ. ಆ ಹುಚ್ಚನ್‌ ಬಗ್ಗೆ ನಾನು ಮಾತಾಡಲ್ಲ (Will not talk about Mad). ಅವನ ಸಹವಾಸವೇ ನನಗೆ ಬೇಡ; ಹೀಗೆ ಖಡಾಖಡಿಯಾಗಿ ಏಕವಚನದಲ್ಲಿ ಸಚಿವ ಮಧು ಬಂಗಾರಪ್ಪ (Minister Madhu Bangarappa) ಅವರು ವಾಗ್ದಾಳಿ ನಡೆಸಿದ್ದಾರೆ. ಅವರು ಮಾತನಾಡುವುದಿಲ್ಲ ಎಂದಿದ್ದು ಬಿಜೆಪಿಗೆ 400 ಸೀಟ್‌ ಬಂದರೆ ಸಂವಿಧಾನ ಬದಲಾವಣೆಗೆ ಅನುಕೂಲವಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಕಾರವಾರ ಸಂಸದ ಅನಂತ ಕುಮಾರ್‌ (MP Anant kumar) ಅವರ ಬಗ್ಗೆ.

ಶಿವಮೊಗ್ಗದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದರು. ಅನಂತ್‌ ಕುಮಾರ್‌ ಅವರ ಹೇಳಿಕೆಯ ಬಗ್ಗೆ ಪ್ರಶ್ನಿಸಿದಾಗ ಏಕವಚನದಲ್ಲೇ ಉತ್ತರಿಸಿದ ಅವರು, ಆ ಹುಚ್ಚನ್‌ ಬಗ್ಗೆ ಮಾತನಾಡಲ್ಲ. ಪದೇಪದೆ ನನ್ನನ್ನು ಈ ಬಗ್ಗೆ ಕೇಳಬೇಡಿ ಎಂದರು. ಬಿಜೆಪಿಯವರಿಗೆ ಈಗ ಪರಿಸ್ಥಿತಿಯ ಅರಿವಾಗಿದೆ. ಸಂವಿಧಾನ ಅವರಿಗೆ ಬಾರುಕೋಲಿನಂತೆ ಹೊಡೆಯುತ್ತಿದೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ ಕುಮಾರ್‌ ಗೆಲುವು ಖಚಿತ ಎಂದ ಮಧು ಬಂಗಾರಪ್ಪ

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೀತಾ ಶಿವರಾಜ್‌ ಕುಮಾರ್‌ (Geetha Shivaraj kumar) ಅವರಿಗೆ ಟಿಕೆಟ್‌ ನೀಡಿರುವುದಕ್ಕಾಗಿ ಸಿಎಂ, ಡಿಸಿಎಂ ಹಾಗೂ ಜಿಲ್ಲಾ ಕಾಂಗ್ರೆಸ್‌ ನಾಯಕರಿಗೆ ಧನ್ಯವಾದ ಹೇಳಿದ ಮಧು ಬಂಗಾರಪ್ಪ ಅವರು, ಕ್ಷೇತ್ರದಲ್ಲಿ ಗೆಲುವಿನ ವಾತಾವರಣವಿದೆ ಎಂದು ಹೇಳಿದರು.

ಈ ಹಿಂದೆ ಗೀತಕ್ಕ ಕಷ್ಟದ ಕಾಲದಲ್ಲಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದರು. ಕಳೆದ ಬಾರಿ ನಾನು ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿದ್ದೆ. ಆಗ ಒಂದು ವೇಳೆ ನಾನು ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ರೆ ಉತ್ತರ ಬೇರೆಯೇ ಆಗುತ್ತಿತ್ತು. ಈ ಬಾರಿ ಶಿವಮೊಗ್ಗದಲ್ಲಿ ವಾತಾವರಣ ತುಂಬಾ ಚೆನ್ನಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮತದಾರರಿದ್ದಾರೆ ಎಂದು ಶಿವಮೊಗ್ಗದ ಉಸ್ತುವಾರಿ ಸಚಿವರಾಗಿರುವ ಮಧು ಬಂಗಾರಪ್ಪ ಹೇಳಿದರು.

ಮಾಜಿ ಸಿಎಂ ಮಗ ಎಂಬುದು ಬಿಟ್ಟರೆ ರಾಘವೇಂದ್ರ ಝೀರೋ

ಶಿವಮೊಗ್ಗ ಸಂಸದರಾಗಿರುವ ಬಿ.ವೈ ರಾಘವೇಂದ್ರ ಅವರು ಏನೂ ಮಾಡಿಲ್ಲ ಎಂದು ಆರೋಪಿಸಿದರು ಮಧು ಬಂಗಾರಪ್ಪ. ಬಿ.ವೈ.ರಾಘವೇಂದ್ರ ಮೊದಲ ಬಾರಿ ಗೆದ್ದಾಗ ಏನು ಕಡಿದು ಕಟ್ಟೆ ಹಾಕಿದ್ದಾರೆ? ಜಿಲ್ಲೆಗೆ ರಾಘವೇಂದ್ರ ಅವರ ಕೊಡುಗೆ ಏನು? ಮುಖ್ಯಮಂತ್ರಿ ಮಗ ಅನ್ನೋದು ಬಿಟ್ಟು ಬೇರೇನಿದೆ ಎಂದು ಪ್ರಶ್ನಿಸಿದರು.

ಶರಾವತಿ ಸಂತ್ರಸ್ತರ ಬಗ್ಗೆ ರಾಘವೇಂದ್ರ ಅವರು ಒಂದು ಸಲವಾದರೂ ಮಾತನಾಡಿದ್ದಾರಾ? ಎಂದು ಪ್ರಶ್ನಿಸಿರುವ ಅವರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹಣ ಯಾರದು? ನರೇಂದ್ರ ಮೋದಿದಾ? ಇದು ನಮ್ ಟ್ಯಾಕ್ಸ್ ಹಣ ಎಂದರು.

ನಾವು ಗ್ಯಾರಂಟಿ ಮೇಲೆ ಚುನಾವಣೆಗೆ ಹೋಗ್ತೀವಿ. ಬಿಜೆಪಿಯವರು ನರೇಂದ್ರ ಮೋದಿ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ, ಗೀತಾ ಶಿವರಾಜ್ ಕುಮಾರ್ ಈ ಭಾಗದ ಜನರ ಸಮಸ್ಯೆ ಗೆ ಸ್ಪಂದಿಸುತ್ತಾರೆ. ಜನರ ಧ್ವನಿ ದೆಹಲಿಯಲ್ಲಿ ಕೇಳಿಸಬೇಕು. ಆ ಕೆಲಸ ಗೀತಕ್ಕ ಮಾಡ್ತಾರೆ ಎಂದರು.

ಇದನ್ನೂ ಓದಿ : Anantkumar Hegde : ‘ಸಂವಿಧಾನ ತಿದ್ದುವ’ ಅನಂತ್​ಕುಮಾರ್​ ಹೇಳಿಕೆಯಿಂದ ಬಿಜೆಪಿ ದೂರ; ಚುನಾವಣೆಯಿಂದ ನಿರ್ಬಂಧಿಸಿ ಎಂದ ಸಿದ್ದು

ಹೀಯಾಳಿಸಿದ ಮೋದಿಯಿಂದಲೇ ಈಗ ಗ್ಯಾರಂಟಿ

ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ನರೇಂದ್ರ ಮೋದಿಯವರು ಹೀಯಾಳಿಸಿದರು. ಈಗ ಮೋದಿಯವರದೇ ಗ್ಯಾರಂಟಿ ಬಂದಿದೆ. ನಮ್ಮ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದರು. ಈಗ ನರೇಂದ್ರ ಮೋದಿ ಗ್ಯಾರಂಟಿಗಳಿಂದ ದೇಶ ದಿವಾಳಿ ಆಗಲ್ವಾ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು. ನಾವೇನೂ ಶ್ರೀಮಂತರ ಸಾಲ ಮನ್ನಾ ಮಾಡಿಲ್ಲ. ಬಡವರಿಗೆ ಹಣ ನೀಡಿದ್ದೇವೆ ಎಂದು ಹೇಳಿದರು.

ಸರ್ವೆ ನಂಬಲ್ಲ, ವೈರಲ್‌ಗೆ ಹೆದರಲ್ಲ ಎಂದ ಮಧು ಬಂಗಾರಪ್ಪ

ನಾನು ಯಾವುದೇ ಸರ್ವೇ, ಜ್ಯೋತಿಷ್ಯ ನಂಬಲ್ಲ. ಅವುಗಳು ಸತ್ಯ ಅಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸರ್ವೇಯಲ್ಲಿ ಕಾಂಗ್ರೆಸ್‌ ಬರುತ್ತದೆ ಎಂದು ಹೇಳಿರಲಿಲ್ಲ. ನನಗೆ ಸರ್ವೇಗಿಂತ ಜನರ ಮತ ಮುಖ್ಯ. ಈ ಸಲ ಕಾಂಗ್ರೆಸ್ ಪಕ್ಷದ ಪರ ಒಲವು ಜಾಸ್ತಿ ಇದೆ ಎಂದು ಹೇಳಿದರು.

ಗೀತಾ ಶಿವರಾಜ್‌ ಕುಮಾರ್‌ ಅವರು ಇನ್ನೂ ಚುನಾವಣೆ ಕಣಕ್ಕೆ ಇಳಿದಿಲ್ಲ ಎಂಬ ಜಾಲತಾಣಗಳ ಪ್ರಶ್ನೆ ಬಗ್ಗೆ ಉತ್ತರಿಸಿದ ಅವರು, ಸಾಮಾಜಿಕ ಜಾಲದ ಪ್ರಶ್ನೆಯನ್ನ ಕಸದ ಬುಟ್ಟಿ ಹಾಕಿ ಎಂದರು. ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಸಾಕಷ್ಟು ಪೋಸ್ಟ್ ವೈರಲ್ ಆಗುತ್ತಿದೆ. ಅದಕ್ಕೆಲ್ಲ ಹೆದರಲ್ಲ ಎಂದರು.

Exit mobile version