Site icon Vistara News

Ratha Saptami : ರಥ ಸಪ್ತಮಿ ದಿನ ಅರುಣೋದಯದಲ್ಲಿ ಸ್ನಾನ ಮಾಡಿದರೆ ಅಕ್ಷಯ ಫಲ

Ratha Saptami

ರಥ ಸಪ್ತಮಿ (ಮಾಘ ಶುಕ್ಲ ಸಪ್ತಮಿ – ಈ ವರ್ಷ 16.2.2024) ಸೂರ್ಯ ರಥವನ್ನೇರಿ ಸಂಚಾರಕ್ಕೆ ಹೊರಟ ದಿನ. ಅಂದು ಅರುಣೋದಯದಲ್ಲಿ ಸ್ನಾನ ಮಾಡಿದರೆ ಅಕ್ಷಯ ಫಲ ಪ್ರಾಪ್ತಿಯಾಗುತ್ತದೆ. ಸಪ್ತ ಜನ್ಮಗಳಲ್ಲಿ ಮಾಡಿದ ಪಾಪಗಳು ಪರಿಹಾರ ಹೊಂದುತ್ತವೆ ಎಂದಿದ್ದಾರೆ. (ಯದ್ ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು । ತನ್ನ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ।). ಸೂರ್ಯನ ರಶ್ಮಿಗಳು ದೇಹದ ಮೇಲೆ ಬೀಳುತ್ತಿರುವಂತೆ ಸಮುದ್ರದಲ್ಲಾಗಲೀ ನದಿಗಳಲ್ಲಾಗಲೀ ಸ್ನಾನ ಮಾಡಿದರೆ ತುಂಬಾ ಪ್ರಶಸ್ತ. ಅನಾನುಕೂಲವಿದ್ದವರು ಅನುಸಂಧಾನದಿಂದ ಸ್ನಾನ ಮಾಡಿದರೂ ಉತ್ತಮ.

ಸೂರ್ಯನ ಗಿಡ ಎಂದೇ ಸುದ್ದಿಯಲ್ಲಿರುವ ಎಕ್ಕದ ಎಲೆಯಲ್ಲಿ ರಥಾರೂಢನಾದ ಸೂರ್ಯನು ತನ್ನೆಲ್ಲಾ ಸತ್ವವನ್ನು ಶೇಖರಿಸಿಡುವನು. ಹಾಗಾಗಿ ಏಳು ಎಕ್ಕದ ಎಲೆಗಳನ್ನು ತಲೆ ಮತ್ತು ಭುಜಗಳ ಮೇಲಿಟ್ಟುಕೊಂಡು ಸ್ನಾನ ಮಾಡುಬೇಕು. ನಂತರ ಅರ್ಥ್ಯ ಕೊಡಬೇಕು. ಏಳು ವಾರಗಳ ಅಧಿಪತಿ, ಏಳು ಕುದುರೆಗಳ ಸವಾರ, ಏಳು ಲೋಕಗಳನ್ನು ಬೆಳಗುವವನೂ ಆದ ಸೂರ್ಯನೇ ನಿನಗೆ ಅರ್ಥ್ಯವನ್ನು ಕೊಡುವೆ ಸ್ವೀಕರಿಸು ಎಂದು ನೀರನ್ನು ಬಿಡಬೇಕು. (ಸಪ್ತ ಸಪ್ತಿವಹ ಪ್ರೀತ ಸಪ್ತಲೋಕ ಪ್ರದೀಪನ | ಸಪ್ತಮೀಸಹಿತೋದೇವ ಗೃಹಾಣರ್ಥ್ಯಂ ದಿವಾಕರ 1). ಆದಿತ್ಯ ಹೃದಯ, ಸೌರ ಮಂತ್ರ ಮುಂತಾವುಗಳ ಪಾರಾಯಣ ಮಾಡುವುದು ಶ್ರೇಷ್ಠ.

ಆರೋಗ್ಯ ಉಳಿಸುವ ದಿನ

ಸೂರ್ಯನ ಅನುಗ್ರಹವಾದಾಗ ಆರೋಗ್ಯಭಾಗ್ಯ ಸಿಗುತ್ತದೆ. ಇದಕ್ಕಿಂತ ಭಾಗ್ಯವುಂಟೇ? ಇಂದು ಎಲ್ಲರ ಆರೋಗ್ಯ ಉಳಿಸುವ ಶ್ರೇಷ್ಠವಾದ ದಿನ. ಸರ್ವಸಾಕ್ಷಿಯಾಗಿ ಆಗಸದಲ್ಲೂ, ನಮ್ಮ ಕಣ್ಣಿನಲ್ಲೂ (ಅಭಿಮಾನಿ ದೇವತೆ) ನಿಂತು ಎಲ್ಲವನ್ನೂ ಕಾಣುವ ಸೂರ್ಯನು ನಮ್ಮ ಪಾಪಗಳನ್ನು ಕ್ಷಮಿಸಲಿ ಎಂದು ಪ್ರಾರ್ಥಿಸಬೇಕು. ಇಂದು ಸ್ತ್ರೀಯರು ತುಳಸಿ ವೃಂದಾವನದ ಮುಂದೆ ಸೂರ್ಯನ ರಥವನ್ನು ರಂಗೋಲಿಯಿಂದ ಬರೆದು ಕೆಮ್ಮಣ್ಣಿನಿಂದ ಅಷ್ಟದಳಗಳನ್ನು ಮೂಡಿಸಬೇಕು. ಅದರಲ್ಲಿ ಸೂರ್ಯ ಮಂಡಲವರ್ತಿಯಾದ ನಾರಾಯಣನನ್ನು ಹೂ ಗೆಜ್ಜೆವಸ್ತ್ರಗಳಿಂದ ಪೂಜಿಸಬೇಕು.

ಇಂದು ಸುವರ್ಣ ಸೂರ್ಯವಿಗ್ರಹವನ್ನೂ, ಕರ್ಣಾಭರಣವನ್ನೂ ಸತ್ಪಾತ್ರರಿಗೆ ದಾನಮಾಡಬೇಕು. ಬೂದುಕುಂಬಳಕಾಯಿ ದಾನ ಕೊಡುವುದರಿಂದ ಸಂತತಿಯು ಹೆಚ್ಚುತ್ತದೆ. ಜತೆಗೆ ಗರ್ಭದೋಷ ನಿವಾರಣೆ ಆಗುತ್ತದೆ ಎಂದೂ ಪ್ರತೀತಿ. (ಕೂಷ್ಮಾಂಡಂ ತಿಲಗಸವ್ಯಾಡ್ಯಂ ಬ್ರಹ್ಮಣಾ ನಿರ್ಮಿತಂ ಪುರಾ । ಯಸ್ಮಾದಸ್ಯ ಪ್ರದಾನೇನ ಸಂತತಿರ್ವಧ್ರತಾಂ ಮಮ ॥)

ಕಶ್ಯಪ ಅದಿತಿಯರಿಗೆ ಸೂರ್ಯದೇವನು ರಥ ಸಪ್ತಮಿಯಂದು ಹುಟ್ಟಿದನು. ಆದ್ದರಿಂದ ಇಂದು ಸೂರ್ಯ ಜಯಂತಿ ಎಂದೂ ಆಚರಿಸುತ್ತಾರೆ. ಇಂದು ತಿರುಮಲದಲ್ಲಿ ಒಂದು ದಿವಸದ ಬ್ರಹೋತ್ಸವವನ್ನು ಆಚರಿಸುತ್ತಾರೆ.

ಸೂರ್ಯರೂಪಿ ಭಗವಂತನನ್ನು ಆರಾಧಿಸುತ್ತಾರೆ. ಇದರ ವಿವರಣೆ ಹೀಗಿದೆ. ಧೈಯಃ ಸದಾ ಸವಿತೃಮಂಡಲ ಮಧ್ಯವರ್ತಿ ನಾರಾಯಣ: ಸರಸಿಜಾಸನ ಸನ್ನಿವಿಷ್ಟಃ || ಎಂಬಂತೆ ಸೂರ್ಯನಾರಾಯಣನು ಸೂರ್ಯ ಮಂಡಲ ಮಧ್ಯದಲ್ಲಿ ಧ್ಯಾನಿಸಲ್ಪಡುತ್ತಾನೆ. ಮಹಾ ವಿಷ್ಣವು ಲೋಕಯಾತ್ರೆಯನ್ನು ನಿರ್ವಹಿಸಲು ಮಾಯೆಯಿಂದ ಈ ಪ್ರಾಕೃತ ಸೂರ್ಯ ಮಂಡಲ ನಿರ್ಮಿಸಿದನು. ಈ ಮಂಡಲವು ನಿರಂತರವಾಗಿ ಲೋಕಗಳನ್ನು ಸುತ್ತುತ್ತದೆ. ಶ್ರೀಹರಿಯೇ ಸೂರ್ಯನಲ್ಲಿ ಅಂತರ್ಯಾಮಿಯಾಗಿರುತ್ತಾನೆ. (ಹಾಗಾಗಿ ದಿನವೂ ಸಂಧ್ಯಾವಂದನೆ ಸಮಯದಲ್ಲಿ ಸವಿತೃ ಮಂತ್ರವನ್ನು ಹೇಳಿ ಸೂರ್ಯಾರ್ಥ್ಯವನ್ನು ಕೊಡುತ್ತೇವೆ).

ಇದನ್ನೂ ಓದಿ : ತತ್ತ್ವ ಶಂಕರ : ಭಾರತದ ಮಣ್ಣನ್ನು ಪಾವನಗೊಳಿಸಿದ ಶಂಕರರು

ಸೂರ್ಯರಥವು 12 ಚಕ್ರಗಳಿಂದಲೂ ಕೂಡಿದ್ದು 12 ರಾಶಿಗಳನ್ನು ಪ್ರತಿನಿಧಿಸುತ್ತದೆ. ಇದು ಒಂದು ಸಂವತ್ಸರವಾಗುತ್ತದೆ. ಸೂರ್ಯನ ಸ್ವಂತ ಮನೆ ಸಿಂಹರಾಶಿಯಿಂದ ಕೂಡಿದ್ದು ಪ್ರತಿ ತಿಂಗಳಿಗೊಮ್ಮೆ ಮುಂದಿನ ಮನೆಗೆ ಹೋಗುತ್ತಾನೆ. ಚೈತ್ರ ಮುಂತಾದ ಹನ್ನೆರಡು ಮಾಸಗಳಲ್ಲಿ ಒಂದೊಂದು ತಿಂಗಳಿಗೆ ಒಂದೊಂದು ಗಣದಂತೆ ಹನ್ನೆರಡು ಗಣಗಳೊಡನೆ ಕೂಡಿ ಸಂಚರಿಸುತ್ತಿರುತ್ತಾನೆ. (ಮೇಷ ರಾಶಿಗೆ ಸೂರ್ಯ ಪ್ರವೇಶಿಸಿದಾಗ ಯುಗಾದಿ). ಅರುಣನು (ವಿನುತ ಕಶ್ಯಪರ ಮಗ; ಗರುಡನ ಹಿರಿಯ ಸಹೋದರ) ರಥದ ಸಾರಥಿಯಾಗಿರುತ್ತಾನೆ.

ಸೂರ್ಯಶರೀರಕನಾದ ನಾರಾಯಣನು ಮಹರ್ಷಿಗಳಿಂದ ಹನ್ನೆರಡು ನಾಮಗಳಿಂದ ಕರೆಯಲ್ಪಡುತ್ತಾನೆ. ಅವರನ್ನು ಪ್ರಾತಃಕಾಲದಲ್ಲಿ ಸ್ಮರಿಸಿದರೆ ಸಮಸ್ತಪಾಪಗಳೂ ನಾಶಹೊಂದುತ್ತವೆ. ಆದಿತ್ಯನನ್ನು ಸೂರ್ಯ ಸಂಬಂಧವಾದ ಋಗ್ವದ ಯಜುರ್ವೇದ ಮತ್ತು ಸಾಮವೇದದ ಮಂತ್ರಗಳ ಮೂಲಕ ಸ್ತುತಿಸುತ್ತಾರೆ. ಗಂಧರ್ವರು ಕೀರ್ತನೆ ಮಾಡುತ್ತಾರೆ. ಅಪ್ಸರೆಯರು ನೃತ್ಯಸೇವೆ ಮಾಡುತ್ತಾರೆ. ನಾಗ ಗಣಗಳು ಆತನ ರಥಕ್ಕೆ ಬಿಗಿಯಾಗಿ ಕಟ್ಟಲ್ಪಟ್ಟಿರುತ್ತವೆ. ಯಕ್ಷಗಣಗಳು ಆ ರಥವನ್ನು ಮುಂದೆ ಎಳೆಯುತ್ತಾರೆ. ರಾಕ್ಷಸರು ಆ ರಥವನ್ನು ಹಿಂದಿನಿಂದ ತಳ್ಳಿಕೊಡುತ್ತಾರೆ. ಇವರಲ್ಲದೇ ವಾಲಖಿಲ್ಯರೆಂಬ ಅರವತ್ತು ಸಾವಿರ ಋಷಿಗಳು ಆತನಿಗೆ ಸ್ತೋತ್ರಗಳಿಂದ ಸೇವೆ ಸಲ್ಲಿಸುತ್ತಾರೆ. ಹೀಗೆ ಶ್ರೀಹರಿಯು ಪ್ರತಿಯೊಂದು ಕಲ್ಪದಲ್ಲಿಯೂ ತನ್ನ ಸ್ವರೂಪವನ್ನು ವ್ಯೂಹರೂಪವಾಗಿ ವಿಭಾಗ ಮಾಡಿಕೊಂಡು ಲೋಕಗಳ ಪಾಲನೆ ಪೋಷಣೆ ಮಾಡುತ್ತಾನೆ.

ಎಲ್ಲರಿಗೂ ರಥಸಪ್ತಮೀ ಹಬ್ಬದ ಹಾರ್ದಿಕ ಶುಭಾಷಯಗಳು. ಸೂರ್ಯಾಂತರ್ಗತ ನಾರಾಯಣನು ಎಲ್ಲರಿಗೂ ಆರೋಗ್ಯ ಐಶ್ವರ್ಯ ಅಭಿವೃದ್ಧಿ ಭಾಗ್ಯ ಕೊಡಲಿ ಎಂದು ಪ್ರಾರ್ಥಿಸೋಣ.
ಆಧಾರ : ಭಾಗವತ ಮತ್ತು ಇತರೆ ಗ್ರಂಥಗಳು

Exit mobile version