Site icon Vistara News

ವಿಸ್ತಾರ ಸಂಪಾದಕೀಯ: ನೂತನ ಸಂಸತ್ ಕಟ್ಟಡ ಉದ್ಘಾಟನೆ ಐತಿಹಾಸಿಕ, ಪ್ರತಿಪಕ್ಷಗಳ ಬಹಿಷ್ಕಾರ ಉತ್ತಮ ನಡೆ ಅಲ್ಲ

Central Vista

#image_title

ನೂತನ ಸಂಸದ್ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೀಕರ್ ಓಂ ಬಿರ್ಲಾ ಅವರು ಭಾನುವಾರ ಈ ಭವ್ಯ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. 65,000 ಚದರ ಮೀಟರ್‌ಗಳಷ್ಟು ವಿಸ್ತಾರವಾಗಿರುವ ಹೊಸ ಸಂಸತ್​ ಕಟ್ಟಡಕ್ಕೆ ನರೇಂದ್ರ ಮೋದಿ 2020ರ ಡಿಸೆಂಬರ್​​​ನಲ್ಲಿ ಶಂಕುಸ್ಥಾಪನೆ ಮಾಡಿದ್ದರು; 2021ರ ಜನವರಿಯಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಸುಮಾರು 970 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂತನ ಭವನ ನಿರ್ಮಿಸಲಾಗಿದೆ. ಹೊಸ ಭವನ ಹಲವು ವೈಶಿಷ್ಟ್ಯಗಳನ್ನೂ ಹೊಂದಿದೆ. ನಾಲ್ಕು ಅಂತಸ್ತಿನ ಈ ಕಟ್ಟಡದ ಕಲಾಪ ಭವನದಲ್ಲಿ 1,224 ಸಂಸದರು ಕುಳಿತುಕೊಳ್ಳಬಹುದು. ಕಟ್ಟಡವು ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಇವುಗಳಿಗೆ ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಹೆಸರಿಸಲಾಗಿದೆ. ಮತ್ತೊಂದು ವಿಶೇಷವೆಂದರೆ ಇಲ್ಲಿರುವ ಸಂವಿಧಾನ ಭವನ. ದೇಶದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಇದನ್ನು ನಿರ್ಮಿಸಲಾಗಿದ್ದು, ಭಾರತದ ಮೂಲ ಸಂವಿಧಾನದ ಪ್ರತಿಯನ್ನು ಸಭಾಂಗಣದಲ್ಲಿ ಇಡಲಾಗಿದೆ.

ಈ ಭವನ ಯಾಕೆ ಹೆಚ್ಚು ಅನುಕೂಲಕರವಾಗಿದೆ ಎಂದರೆ, ಇಲ್ಲಿ ದಿಲ್ಲಿಯ ನಾನಾ ಕಡೆ ಹಂಚಿಹೋಗಿರುವ ಸೆಕ್ರೆಟೇರಿಯಟ್‌ಗಳು ಕೂಡ ಒಂದೇ ಕಡೆ ಇರಲಿವೆ. ಹೀಗಾಗಿ ಇದೊಂದು ಆಡಳಿತಾತ್ಮಕ ಅನುಕೂಲತೆಯುಳ್ಳ ಭವನ. ನೂತನ, ಸುಸಜ್ಜಿತ ಭವನದ ಅಗತ್ಯ ಎಲ್ಲರಿಗೂ ತಿಳಿದಿರುವುದೇ ಆಗಿದೆ. 1927ರಲ್ಲಿ ನಿರ್ಮಿಸಲಾದ ಈಗಿನ ಭವನದ ವಯಸ್ಸು ಶತಮಾನ ಸಮೀಪಿಸಿದೆ. ಅಂದಿನಿಂದ ಇಂದಿಗೆ ಸಂಸದರ, ಇಲ್ಲಿನ ಸಿಬ್ಬಂದಿಯ, ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ. ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಮರುವಿಂಗಡಣೆಯೂ ಆದರೆ, ಸಂಸದರ ಸಂಖ್ಯೆ ಇನ್ನಷ್ಟು ಏರಲಿದ್ದು, ಈಗ ಇರುವ ಸಂಸತ್‌ ಭವನ ಕಲಾಪಕ್ಕೆ ಸಾಕಾಗುವುದಿಲ್ಲ. ಇದೆಲ್ಲವನ್ನೂ ಅರ್ಥ ಮಾಡಿಕೊಂಡು ನಾವು ಹೊಸ ಸಂಸತ್‌ ಭವನವನ್ನು ಸ್ವಾಗತಿಸಬೇಕಿದೆ. ಹೊಸ ಭವನದಲ್ಲಿ, ಭಾರತದ ಆಡಳಿತದಲ್ಲಿ ಧರ್ಮ- ನ್ಯಾಯದ ಪರಂಪರೆಯನ್ನು ಬಿಂಬಿಸುವ, ಚೋಳ ರಾಜಪರಂಪರೆಯ ಸೇಂಗೋಲ್‌ ರಾಜದಂಡವೂ ಇರುವುದು ಇನ್ನೊಂದು ವೈಶಿಷ್ಟ್ಯ.

ಆದರೆ ಬಹುತೇಕ ಪ್ರತಿಪಕ್ಷಗಳು ಈ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಇದೊಂದು ಅನಪೇಕ್ಷಿತ ನಡೆ. ಸಂಸತ್‌ ಭವನವನ್ನು ರಾಷ್ಟ್ರಪತಿಗಳಿಂದ ಉದ್ಘಾಟಿಸಬೇಕಿತ್ತು; ಅವರನ್ನು ಆಹ್ವಾನಿಸದೆ ಅಪಚಾರ ಎಸಗಲಾಗಿದೆ ಎಂಬುದು ಪ್ರತಿಪಕ್ಷಗಳು ಕೊಟ್ಟ ಕಾರಣ. ಆದರೆ ಈ ಕಾರಣದಲ್ಲಿ ಹುರುಳಿಲ್ಲ. ಸಂಸತ್‌ ಭವನ ಎಂಬುದು ಶಾಸಕಾಂಗಕ್ಕೆ ಸಂಬಂಧಿಸಿದ್ದು, ಸ್ಪೀಕರ್‌ ಅದರ ಆಗುಹೋಗುಗಳ ಸಂಪೂರ್ಣ ಅಧಿಪತಿಯಾಗಿರುತ್ತಾರೆ. ರಾಷ್ಟ್ರಪತಿಗಳಿಗೂ ರಾಷ್ಟ್ರಪತಿ ಭವನಕ್ಕೂ ಅವರದೇ ಆದ ಅಧಿಕಾರ, ಮೌಲ್ಯ ಎಲ್ಲವೂ ಇರುತ್ತದೆ. ಇಲ್ಲಿ ರಾಷ್ಟ್ರಪತಿಗಳನ್ನು ನೆವಮಾತ್ರವಾಗಿಟ್ಟುಕೊಂಡು, ಪ್ರಧಾನಿಗಳನ್ನು ಹಣಿಯುವ ಪ್ರತಿಪಕ್ಷಗಳ ಉದ್ದೇಶ ಇರುವಂತಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ವಿದೇಶಗಳಲ್ಲಿ ಪ್ರಧಾನಿ ಮೋದಿಗೆ ಆದರ, ಇದು ಭಾರತದ ಹಿರಿಮೆ

ಒಂದು ದೇಶದ ಸಂಸತ್ ಕಟ್ಟಡಕ್ಕೆ ಅದರದ್ದೇ ಆದ ಮೌಲ್ಯ ಇರುತ್ತದೆ. ಉದ್ಘಾಟನೆ ಬಳಿಕ ಈ ಭವ್ಯ ಕಟ್ಟಡ ದೇಶದ ಇತಿಹಾಸದ ಒಂದು ಭಾಗವಾಗುತ್ತದೆ. ಮೋದಿ ಮೇಲೆ ಪ್ರತಿಪಕ್ಷಗಳ ಕೋಪತಾಪ ಏನೇ ಇರಲಿ. ಇಂಥದೊಂದು ಐತಿಹಾಸಿಕ ಸಮಾರಂಭಕ್ಕೆ ಪ್ರತಿಪಕ್ಷಗಳು ಬಹಿಷ್ಕಾರ ಹಾಕುವುದು ಸರಿಯಲ್ಲ. ಆಡಳಿತ ಪಕ್ಷ ಅಥವಾ ಪ್ರಧಾನಿಯ ವಿರುದ್ಧ ಟೀಕೆ ಟಿಪ್ಪಣಿಯನ್ನು ಅದೇ ಸಂಸತ್ ಭವನದೊಳಗೆ ಮಾಡಲು ಮುಕ್ತ ಅವಕಾಶ ಇದ್ದೇ ಇರುತ್ತದೆ. ಅಲ್ಲಿ ಪ್ರತಿಪಕ್ಷ ನಾಯಕರು ಟೀಕಾ ಪ್ರಹಾರ ಮಾಡಬೇಕೇ ಹೊರತು, ಮೋದಿಯ ಮೇಲಿನ ಸಿಟ್ಟನ್ನು ಈ ಸಂಸತ್ ಕಟ್ಟಡದ ಮೇಲೆ ಪ್ರಯೋಗಿಸುವುದು ಸೂಕ್ತವಲ್ಲ. ಇಂಥದೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುವುದು ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳಿಗೇ ಮಾಡುವ ಅಪಚಾರ. ಹೇಗೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಎಲ್ಲರ ಪ್ರತಿನಿಧಿಯಾಗುತ್ತಾನೋ, ಹಾಗೇ ಈ ಕಟ್ಟಡ ಎಲ್ಲ ಭಾರತೀಯರ ಹೆಮ್ಮೆಯೆನಿಸಲಿದೆ. ಆದ್ದರಿಂದ ಇದನ್ನು ತೆರೆದ ತೋಳುಗಳಿಂದ ಎಲ್ಲರೂ ಬರಮಾಡಿಕೊಳ್ಳುವುದು ಸೂಕ್ತ.

Exit mobile version