ಬೆಂಗಳೂರು: 2023-24ರ ಹಣಕಾಸು ವರ್ಷವು ಮಾರ್ಚ್ 31 ಕ್ಕೆ ಕೊನೆಗೊಳ್ಳಲಿದೆ. ಇದೇ ವೇಳೆ ಆದಾಯ ತೆರಿಗೆ (Income Tax) ಕಟ್ಟುವವರಿಗೆ ಹಣಕಾಸು ವರ್ಷದಲ್ಲಿ ತಮ್ಮ ಟ್ಯಾಕ್ಸ್ಗಳನ್ನು (Tax Savings) ಉಳಿಸಲು ಕೊನೆಯ ಅವಕಾಶ ಇದು. ಆದರೆ ಸಾಕಷ್ಟು ಮಂದಿ ಕೊನೆಯ ಕ್ಷಣದ ಅವಸರದಲ್ಲಿ ತಪ್ಪುಗಳನ್ನು ಮಾಡುತ್ತಾರೆ. ಈ ಬಾರಿ ಆ ರೀತಿ ಮಾಡಬೇಡಿ. ಮಾರ್ಚ್ 31ರ ಗಡುವು ಹತ್ತಿರದಲ್ಲಿರುವುದರಿಂದ ಏನು ಮಾಡಬೇಕು ಎಂಬುದನ್ನು ಪರಿಣತರ ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ.
ಮಾರ್ಚ್ 31ರಿಂದ ಕೇವಲ ಒಂದೆರಡು ದಿನಗಳು ಮಾತ್ರ ಇರುವುದರಿಂದ ಹೂಡಿಕೆ ಸಲಹೆಗಾರರು, ತೆರಿಗೆ ಸಲಹೆಗಾರರು ಮತ್ತು ತೆರಿಗೆದಾರರು ಬ್ಯುಸಿಯಾಗಿರುತ್ತಾರೆ. ಹೀಗಾಗಿ ತೆರಿಗೆ ಲಾಭವನ್ನು ಪಡೆಯಲು ತೆರಿಗೆ ಉಳಿತಾಯ ಹೂಡಿಕೆಗಳಲ್ಲಿ ಹಣವನ್ನು ಹೂಡಿಕೆ ಮಾಡಲೇಬೇಕು ಎಂದು ಹೇಳುತ್ತಾರೆ.
ಆದಾಯ ತೆರಿಗೆ ಕಾಯ್ದೆ, 1961, ಪಿಪಿಎಫ್, ಎಲ್ಐಸಿ ಪ್ರೀಮಿಯಂಗಳು, ಫಿಕ್ಸೆಡ್ ಡೆಪಾಸಿಟ್ಗಳು, ಇಎಲ್ಎಸ್ಎಸ್, ಯುಲಿಪ್, ಎನ್ಎಸ್ಸಿ ಮುಂತಾದ ನಿರ್ದಿಷ್ಟ ಸೆಕ್ಯುರಿಟಿಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸಬಹುದು ಎಂದು ರೌಟೆ ಹೇಳುತ್ತಾರೆ.
ಹೂಡಿಕೆ ಮಾಡುವಾಗ ಪ್ರತಿಯೊಬ್ಬರು ಸಮಗ್ರ ಮತ್ತು ದೀರ್ಘಕಾಲೀನ ಯೋಜನೆಯನ್ನು ಅಳವಡಿಸಿಕೊಳ್ಳಬೇಕು. ಹೂಡಿಕೆ ಮೇಲಿನ ಆದಾಯ, ಲಾಕ್-ಇನ್ ಅವಧಿ ಸೇರಿದಂತೆ ಹಲವಾರು ಮಾನದಂಡಗಳನ್ನು ಹೊಂದಿರುವ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ತೆರಿಗೆ ಲಾಭ ದೊರೆಯುವುದು. ಉದಾಹರಣೆಗೆ ಪಿಪಿಎಫ್ ತೆರಿಗೆ ಮುಕ್ತ ಉತ್ತಮ ಆದಾಯ ನೀಡುತ್ತದೆ. ಆದರೆ ತೆರಿಗೆದಾರರು ವಾರ್ಷಿಕವಾಗಿ ಕನಿಷ್ಠ 500 ರೂ.ಗಳನ್ನು ಪಾವತಿ ಮಾಡಲೇಬೇಕು. ಆದರೆ ಇದಕ್ಕೆ 15 ವರ್ಷಗಳ ಲಾಕ್-ಇನ್ ಅವಧಿಯೂ ಇದೆ. ಒಂದು ಬಾರಿ ಹೂಡಿಕೆ ಮಾಡಿ ಮತ್ತೆ ನಿಲ್ಲಿಸಿದರೆ ಅಥವಾ ಮಧ್ಯದಲ್ಲಿಯೇ ವಾಪಸ್ ಪಡೆಯಲು ಪ್ರಯತ್ನಿಸಿದರೆ ನಷ್ಟವೇ ಹೆಚ್ಚು.
ತೆರಿಗೆ ಉಳಿತಾಯ ಅನುಕೂಲ ನೀಡುವ ಸ್ಥಿರ ಠೇವಣಿಗಳು ಕಡಿಮೆ ಬಡ್ಡಿದರವನ್ನು ನೀಡುತ್ತವೆ. ಆದರೆ ಇದು ಸುಮಾರು 5 ವರ್ಷಗಳವರೆಗೆ ಲಾಕ್-ಇನ್ ಹೊಂದಿರುತ್ತವೆ. ಹೀಗಾಗಿ, ಸರಿಯಾದ ಆಯ್ಕೆಯನ್ನು ಮಾಡಲು ಮತ್ತು ನಿಮ್ಮ ಪ್ರಯೋಜನಗಳನ್ನು ಉತ್ತಮಗೊಳಿಸಲು ನಿರ್ದಿಷ್ಟ ಹೂಡಿಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ತೆರಿಗೆ ಉಳಿತಾಯವನ್ನು ಹೆಚ್ಚಿಸಲು ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಮಾಡುವ ತಪ್ಪುಗಳು
ಸೆಕ್ಷನ್ 80 ಸಿ ನಿರ್ಲಕ್ಷಿಸುವುದು: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ತೆರಿಗೆ ಉಳಿತಾಯ ಹೂಡಿಕೆಗಳಿಗೆ ಇಎಲ್ಎಸ್ಎಸ್ (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್), ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್), ಎನ್ಎಸ್ಸಿ (ನ್ಯಾಷನಲ್ ಸೇವಿಂಗ್ಸ್ ಸರ್ಟಿಫೀಕೇಟ್) ಮುಂತಾದ ವಿವಿಧ ಮಾರ್ಗಗಳಿವೆ. ಅನೇಕ ತೆರಿಗೆದಾರರು ಸೆಕ್ಷನ್ 80 ಸಿ ಅಡಿಯಲ್ಲಿ ಲಭ್ಯವಿರುವ 1.5 ಲಕ್ಷ ರೂ.ಗಳ ಸಂಪೂರ್ಣ ಮಿತಿಯನ್ನು ಬಳಸಿಕೊಳ್ಳಲು ವಿಫಲರಾಗುತ್ತಾರೆ. ಎಲ್ಲಾ ಆಯ್ಕೆಗಳನ್ನು ಮೌಲ್ಯಮಾಪನ ಮಾಡಿ ಮತ್ತು ಈ ವಿಭಾಗದ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡುವಂಥ ಹೂಡಿಕೆ ಮಾಡಿ.
ಇದನ್ನೂ ಓದಿ : LIC Offices: ವೀಕೆಂಡ್‌ನಲ್ಲೂ ಕಾರ್ಯನಿರ್ವಹಿಸಲಿವೆ ಎಲ್‌ಐಸಿ ಕಚೇರಿಗಳು; ಕಾರಣ ಇಲ್ಲಿದೆ
ಅಪೂರ್ಣ ದಾಖಲೆಗಳು: ತೆರಿಗೆ ಉಳಿತಾಯ ಹೂಡಿಕೆಗಳಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಿ. ಇದರಲ್ಲಿ ಹೂಡಿಕೆ ರಸೀದಿಗಳು, ಪ್ರೀಮಿಯಂ ಪಾವತಿ ಪ್ರಮಾಣಪತ್ರಗಳು, ಸಾಲ ಪ್ರಮಾಣಪತ್ರಗಳು ಇತ್ಯಾದಿಗಳು ಸೇರಿಕೊಂಡಿವೆ. ಅಪೂರ್ಣ ದಾಖಲೆಗಳು ತೆರಿಗೆ ಕಡಿತದ ಅವಕಾಶ ಸಿಗದಂತೆ ಮಾಡಬಹುದು. ಹೀಗಾಗಿ ನಿಮ್ಮ ಹೂಡಿಕೆಗಳು ಮತ್ತು ಕಡಿತಗಳ ದಾಖಲೆಗಳನ್ನು ಇರಿಸಿಕೊಳ್ಳಿ. ಯಾಕೆಂದರೆ ನಿಮ್ಮ ತೆರಿಗೆ ಫೈಲಿಂಗ್ ಗಳನ್ನು ಪರಿಶೀಲಿಸಲು ಐಟಿ ಇಲಾಖೆ ದಾಖಲೆಗಳ ಮರುಪರಿಶೀಲನೆ ಮಾಡುವ ಸಾಧ್ಯತೆಗಳಿವೆ.
ತೆರಿಗೆ ಯೋಜನೆಗಳನ್ನು ನಿರ್ಲಕ್ಷಿಸುವುದು: ಸೆಕ್ಷನ್ 80 ಸಿ ಹೊರತುಪಡಿಸಿ, ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾದ 80 ಡಿ (ಆರೋಗ್ಯ ವಿಮಾ ಪ್ರೀಮಿಯಂ), 80 ಇ (ಶಿಕ್ಷಣ ಸಾಲದ ಬಡ್ಡಿ) ಮತ್ತು 80 ಜಿ (ನಿರ್ದಿಷ್ಟ ನಿಧಿಗಳಿಗೆ ದೇಣಿಗೆ) ನಂತಹ ಇತರ ವಿಭಾಗಗಳಿವೆ. ಈ ಲಾಭವನ್ನು ನಿರ್ಲಕ್ಷಿಸುವುದರಿಂದ ತೆರಿಗೆ ಉಳಿಸುವ ಅವಕಾಶಗಳನ್ನು ಕಳೆದುಕೊಳ್ಳಬಹುದು.
ದೀರ್ಘಾವಧಿಯ ಹಣಕಾಸು ಗುರಿಯ ನಿರ್ಲಕ್ಷ್ಯ: ತೆರಿಗೆ ಉಳಿತಾಯ ಹೂಡಿಕೆಗಳು ನಿಮ್ಮ ದೀರ್ಘಾವಧಿಯ ಹಣಕಾಸು ಉದ್ದೇಶಗಳಿಗೆ ಹೊಂದಿಕೆಯಾಗಬೇಕು. ತೆರಿಗೆ ಲಾಭ ಪಡೆಯುವ ಉದ್ದೇಶದಿಂದ ಮಾತ್ರ ಹೂಡಿಕೆ ಮಾಡಿದರೆ ಅದು ನಿಮ್ಮ ಹಣಕಾಸಿನ ಅಗತ್ಯಕ್ಕೆ ಅದು ಹೊಂದಿಕೆಯಾಗದೇ ಹೋದರೆ ಅದರಿಂದ ಹೆಚ್ಚಿನ ಲಾಭವು ಸಿಗುವುದಿಲ್ಲ.