Site icon Vistara News

Independence day 2023 :‌ ಅದು ಜಾತಿ, ಧರ್ಮದ ಹಂಗು ಮೀರಿದ ಹೋರಾಟ; ಪ್ರತಿಯೊಬ್ಬರ ಕೊಡುಗೆಯೂ ಸ್ಮರಣೀಯ

Indian indendence

ಹಾಶಿಂ ಬನ್ನೂರು (ಲೇಖಕರು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ)

ಸ್ವಾತಂತ್ರ್ಯ ದಿನಾಚರಣೆ (Independence day 2023) ಭಾರತೀಯರ ಪಾಲಿಗೆ ಸಂತೋಷ ಸಂಭ್ರಮದ ದಿನ. ಪ್ರತಿಯೊಬ್ಬರ ಮನಸ್ಸೂ ದೇಶಪ್ರೇಮದಿಂದ ಪುಳಕಿತಗೊಳ್ಳುವ ಸುದಿನ. ಇದು ಎಲ್ಲರೂ ಒಂದಾಗಿ ಆಚರಿಸುವ ಹಬ್ಬ. ಎಲ್ಲೆಡೆ ದೇಶ ಭಕ್ತಿ ಗೀತೆಗಳು, ಜಾಥಾ, ಮೆರವಣಿಗೆ, ಸಾಂಸ್ಕೃತಿಕ ವೈಭವ, ಬರಹ, ಭಾಷಣದಂಥ ಅನೇಕ ಚಟುವಟಿಕೆಗಳ ಮೂಲಕ ನಮ್ಮ ದೇಶದ ಅಪೂರ್ವ ಶಕ್ತಿಯನ್ನು ನೆನಪಿಸಿಕೊಳ್ಳುವ ಕ್ಷಣ. ಮಕ್ಕಳು, ಯುವಕರು, ವೃದ್ಧರೆನ್ನದೆ ಜಾತಿ ಮತ ಧರ್ಮ ಭಾಷೆ ಬೇಧವಿಲ್ಲದೆ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದು ಸಂತೋಷಕ್ಕೆ ಸಾಕ್ಷಿಯಾಗುವ ಸುದಿನ.

ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ನಮ್ಮದು. ಹಲವು ಧರ್ಮಗಳು, ಜಾತಿ, ಪಂಥ, ಪಂಗಡಗಳು ಎಲ್ಲವನ್ನೂ ಬದಿಗೊತ್ತಿ ನಮ್ಮೆಲ್ಲರನ್ನು ಒಂದಾಗಿಸುವ ಭಾರತೀಯರ ಹಬ್ಬ. ಈ ಮಣ್ಣಲ್ಲಿ ಹುಟ್ಟಿ ಬದುಕುವ ನಾವು ಧನ್ಯರು. ಶ್ವಾಸ ಇರುವವರೆಗೂ ನಾವು ಭಾರತೀಯರು ಎಂಬ ಹೆಮ್ಮೆಯನ್ನು ಮೂಡಿಸುವ ಹೊತ್ತು.

ಪರಸ್ಪರ ಸಂತೋಷ ವಿನಿಮಯ ಮಾಡಿಕೊಂಡು ಸ್ವಾತಂತ್ರ್ಯ ದಿನಾಚರಣೆ ಮಾಡುತ್ತೇವೆ ಆದರೆ ಇದು ಕೇವಲ ಸಂತೋಷ ಮಾತ್ರ ಹಂಚಿಕೊಳ್ಳುವ ಸಮಯವಲ್ಲ. ನಮ್ಮ ನಾಡಿನ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ, ಮನೆ ಮಠ ಬಿಟ್ಟು ಹೋರಾಡಿದ ಮಹಾತ್ಮರ ಸ್ಮರಣೆಯೂ ಆಚರಣೆಯ ಭಾಗವಾಗಿದೆ.

ಸ್ವಾತಂತ್ರ್ಯದ ಹೋರಾಟದ ನೋವಿನ ಕಡಲಿಗೆ ಸಾವಿರ ತೊರೆಗಳು

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕಾದರೆ ಹಲವಾರು ಮಹಾತ್ಮರು ಜೀವದ ಹಂಗು ತೊರೆದು, ಮನೆ ಮಠಗಳನ್ನು ಹೋರಾಟ ನಡೆಸಬೇಕಾಯಿತು. ಹಲವಾರು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದರೂ ಯಾರಿಗೂ ಬಗ್ಗದೆ ಜಗ್ಗದೇ ಕೊನೆಗೂ ಸ್ವಾತಂತ್ರ್ಯ ತಂದು ಕೊಡುವಲ್ಲಿ ಯಶಸ್ವಿಯಾದರು. ಈ ಸಂಗ್ರಾಮದಲ್ಲಿ ಜಾತಿ ಧರ್ಮವಿಲ್ಲದೇ ಎಲ್ಲರೂ ಒಗ್ಗಟ್ಟಾಗಿ ನಿಂತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಬುದ್ಧ, ಸಿಖ್ ಎಲ್ಲಾ ಧರ್ಮದ ನೇತಾರರು ಪಾಲ್ಗೊಂಡಿದ್ದರು. ಆದರೆ ಇತಿಹಾಸದ ಪುಟಗಳಲ್ಲಿ ಕೇವಲ ಕೆಲವೊಂದು ಜಾತಿಯ ಮೇಲೆ ಆಧಾರಿತವಾಗಿ ಇತಿಹಾಸವನ್ನು ತಿರುಚಲಾಗಿದೆ. ಇತಿಹಾಸದಲ್ಲಿ ನೈಜ ಘಟನೆಗಳನ್ನು ಮರೆಮಾಚಲಾಗಿದೆ. ಕೇವಲ ಒಬ್ಬರಿಂದ ಅಥವಾ ಒಂದು ಸಮಾಜ ಒಂದು ಜಾತಿ ಪಂಗಡಗಳಿಂದ ಮಾತ್ರ ಸ್ವಾತಂತ್ರ್ಯ ಲಭಿಸಿಲ್ಲ ಎಲ್ಲಾ ಜನರ ಒಗ್ಗಟ್ಟು ಶ್ರಮ ದೇಶ ಭಕ್ತಿಯೇ ಒಂದು ಶಕ್ತಿಯಾಗಿ ಯಶಸ್ಸು ತಂದುಕೊಟ್ಟಿತು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಗತ್ ಸಿಂಗ್, ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು, ಹೈದರ್ ಅಲಿ, ಹಝ್ರತ್ ಟಿಪ್ಪು ಸುಲ್ತಾನ್, ಡಾ. ರಾಜೇಂದ್ರ ಪ್ರಸಾದ್, ಲಾಲಾ ಲಜಪತ್ ರಾಯ್, ಲಾಲ್ ಬಹಾದೂರ್ ಶಾಸ್ತ್ರಿ, ಅಬುಲ್‌ ಕಲಾಂ ಅಜಾದ್, ಮೊಹಮ್ಮದ್ ಅಲಿ ಜಿನ್ನಾ, ಬಾಲಗಂಗಾಧರ ತಿಲಕ್ ಹಾಗೂ ಹಲವಾರು ಮಹಾತ್ಮರು ಈ ಸುಂದರ ದೇಶವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದೆಹಲಿಯ ಇಂಡಿಯಾ ಗೇಟ್‌ನಲ್ಲಿ 95300 ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಂದಿಗೂ ಕಾಣಬಹುದಾಗಿದೆ.

“ನನ್ನ ಜೀವನವೇ ನನ್ನ ಸಂದೇಶ” ಎಂದು ಸಾರಿದ ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರೀಯ ನಾಯಕರಲ್ಲಿ ಒಬ್ಬರು. ವಾಸ್ತವವಾಗಿ, ಅವರು ಬ್ರಿಟಿಷ್ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಯಶಸ್ವಿ ಅಭಿಯಾನವನ್ನು ಮುನ್ನಡೆಸಿದರು. ಗಾಂಧಿ ಕಾನೂನು ವಿದ್ಯಾರ್ಥಿಯಾಗಿದ್ದರು, ಆದರೆ ಅವರು ತಮ್ಮ ವೃತ್ತಿಯನ್ನು ತ್ಯಜಿಸಿ ತಮ್ಮ ರಾಷ್ಟ್ರಕ್ಕಾಗಿ ಹೋರಾಡಲು ನಿರ್ಧರಿಸಿದರು. ಬ್ರಿಟಿಷರ ವಿರುದ್ಧ ಹೋರಾಡಿದ ಮೈಸೂರಿನ ದೊರೆ ಹೈದರ್ ಅಲಿ ಮತ್ತು ಅವರ ಮಗ ಟಿಪ್ಪು ಸುಲ್ತಾನ್. ಅವರು ತಮ್ಮ ಮಕ್ಕಳನ್ನೇ ದೇಶಕ್ಕಾಗಿ ಬ್ರಿಟಿಷರ ಮುಂದೆ ಒತ್ತೆ ಇಟ್ಟರು, ಮುಂದೆ ಬ್ರಿಟಿಷರ ಗುಂಡಿಗೆ ಬಲಿಯಾದರು.

ಬೇಗಂ ಹಜರತ್‌ ಮಹಲ್‌ ಒಬ್ಬ ಅಘೋಷಿತ ನಾಯಕಿ

ಬೇಗಂ ಹಜರತ್ ಮಹಲ್ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಅಘೋಷಿತ ನಾಯಕಿಯಾಗಿದ್ದರು. ಅವರು ಬ್ರಿಟಿಷ್ ದೊರೆ ಸರ್ ಹೆನ್ರಿ ಲಾರೆನ್ಸ್ ಅವರನ್ನು ಹೊಡೆದುರುಳಿಸಿದರು ಮತ್ತು ಬ್ರಿಟಿಷ್ ಸೈನ್ಯವನ್ನು ಸೋಲಿಸಿದರು. ಬ್ರಿಟಿಷ್ ರಾಜ್ ವಿರುದ್ಧ ಪಿತೂರಿ ಮಾಡಿದ್ದಕ್ಕಾಗಿ 27ನೇ ವಯಸ್ಸಿನಲ್ಲಿ ಅಶ್ಫಾಕುಲ್ಲಾ ಖಾನ್ ಗಲ್ಲಿಗೇರಿಸಲ್ಪಟ್ಟ ಮೊದಲ ವ್ಯಕ್ತಿ.

ಬೇಗಂ ಹಜರತ್ ಮಹಲ್ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಅಘೋಷಿತ ನಾಯಕಿ

ಅಬುಲ್‌ ಕಲಾಂ ಆಜಾದ್, ಮೊಹಮ್ಮದ್ ಅಲಿ ಜಿನ್ನಾ, ಬಿಹಾರದ ನವಾಬ್ ಈ ಮೂವರು ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಯೋಜನೆಗಳನ್ನು ರೂಪಿಸಿದರು. ಸುರೈಯಾ ತೈಯಾಬ್ಬಿ ಎಂಬ ಮಹಿಳೆ ಪ್ರಸ್ತುತ ಭಾರತದ ರಾಷ್ಟ್ರೀಯ ಧ್ವಜವನ್ನು ವಿನ್ಯಾಸಗೊಳಿಸಿದವರು. ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಗೌರವಾರ್ಥವಾಗಿ ಗಾಂಧೀಜಿ ಹೇಳುತ್ತಾರೆ: “ನಾನು 1920 ರಿಂದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರೊಂದಿಗೆ ರಾಷ್ಟ್ರೀಯ ಕೆಲಸದಲ್ಲಿ ಸಹಭಾಗಿತ್ವವನ್ನು ಹೊಂದಿದ್ದೇನೆ. ಅವರ ರಾಷ್ಟ್ರೀಯತೆಯು ಇಸ್ಲಾಂನಲ್ಲಿ ಅವರ ನಂಬಿಕೆಯಿಂದಾಗಿ ದೃಢವಾಗಿದೆʼʼ

ಭಗತ್ ಸಿಂಗ್ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಧ್ವನಿ ಎತ್ತಲು ಭಾರತ್ ಮಾತಾ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು ಅಲ್ಲದೇ 23 ನೇ ವಯಸ್ಸಿನಲ್ಲಿ ತನ್ನ ಪ್ರಾಣವನ್ನೇ ಬಲಿ ನೀಡಿದರು. “ಶಹೀದ್ ಭಗತ್ ಸಿಂಗ್” ಎಂದು ಕರೆಯಲ್ಪಡುವ ಮೂಲಕ ಹೆಸರು ವಾಸಿಯಾದರು.

ಬ್ರಿಟಿಷರ ಎದೆ ನಡುಗಿಸಿದ ನಾಯಕ ಸುಭಾಷ್‌

“ಆಜಾದ್ ಹಿಂದ್ ಫೌಜ್” ಸಂಸ್ಥೆಯನ್ನು ಸ್ಥಾಪಿಸಿ “ತುಮ್ ಮುಝೇ ಖೂನ್ ದೋ, ಮೈನ್ ತುಮ್ಹೇ ಆಜಾದಿ ದೂಂಗಾ”. ಎಂಬ ಘೋಷಣೆಯ ಮೂಲಕ ಬ್ರಿಟಿಷರ ಎದೆ ನಡುಗಿಸಿದವರು ಸುಭಾಷ್ ಚಂದ್ರ ಬೋಸ್. ಅವರು ಅಸಾಧಾರಣ ನಾಯಕತ್ವದ ಗುಣಗಳನ್ನು ಹೊಂದಿದ ಮಹಾನಾಯಕ.

ʻಭಾರತದ ಕೋಗಿಲೆ ಎಂದು ಖ್ಯಾತಿ ಪಡೆದ ಸರೋಜಿನಿ ನಾಯ್ಡು, ಭಾರತೀಯ ಸ್ವಾತಂತ್ರ್ಯ ಹೋರಾಟದ ಅಪ್ರತಿಮ ದಿಗ್ಗಜರಾದ ಗೋಪಾಲಕೃಷ್ಣ ಗೋಖಲೆ ಮತ್ತು ಗಾಂಧಿಯವರಿಂದ ಹೋರಾಟದ ದೀಕ್ಷೆ ಪಡೆದಿದ್ದರು. ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಮಹಾತ್ಮ ಗಾಂಧಿಯವರ ಮಾರ್ಗದರ್ಶನದಲ್ಲಿ ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು.

ಭಾರತದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್, ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ನಾಡಿನ ಸ್ವಾತಂತ್ರ್ಯಕ್ಕಾಗಿ ನೀಡಿದ ಕೊಡುಗೆಗಳು ಅನನ್ಯ.

ಇದನ್ನೂ ಓದಿ: Independence Day 2023 : ಭಾರತ ಸ್ವಾತಂತ್ರ್ಯ ಹೋರಾಟದ ಹಾದಿಯನ್ನೊಮ್ಮೆ ತಿರುಗಿ ನೋಡೋಣ…

ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂದ ಬಾಲ ಗಂಗಾಧರ ತಿಲಕ್

ಬಾಲಗಂಗಾಧರ ತಿಲಕ್ ಅವರು ಬ್ರಿಟಿಷ್ ಉತ್ಪನ್ನಗಳನ್ನು ಬಹಿಷ್ಕರಿಸಿ ಅವರನ್ನು ಓಡಿಸಲು ಸಶಸ್ತ್ರ ದಂಗೆಯನ್ನು ಆರಂಭಿಸಿದವರು. ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ತೀರುತ್ತೇನೆ ಎಂದು ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದರು. ಸತ್ಯಾಗ್ರಹ ಚಳುವಳಿಯಲ್ಲಿ ಸ್ವಯಂಸೇವಕರಾಗಿ ಮುಂಚೂಣಿಯಲ್ಲಿದ್ದ ವಲ್ಲಭಭಾಯ್ ಪಟೇಲ್ ಉಕ್ಕಿನ ಮನುಷ್ಯ.

ಮಂಗಳೂರಿನ ಕಾರ್ನಾಡ್ ಸದಾಶಿವ ರಾವ್ ಅವರು ವಿಧವೆಯರು ಮತ್ತು ಬಡ ಮಹಿಳೆಯರಿಗೆ ಸಹಾಯ ಮಾಡಲು ಮಹಿಳಾ ಸಭಾವನ್ನು ಸ್ಥಾಪಿಸಿದರು. ಅವರು ಮಹಾತ್ಮ ಗಾಂಧಿಯವರ ಸತ್ಯಾಗ್ರಹ ಚಳವಳಿಗೆ ಸ್ವಯಂಸೇವಕರಾಗಿ ಹೋದ ಕರ್ನಾಟಕದ ಮೊದಲಿಗರು. ಮಂಗಳೂರಿನ ಮಹಾನ್ ಮಹಿಳಾ ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Independence Day 2023: ಭಾರತದ ಧ್ವಜ ಹಾರಿಸಿದ ಮೊದಲ ಮಹಿಳೆ ಭಿಕಾಜಿ ಕಾಮಾ

ಬ್ರಿಟಿಷರ ವಿರುದ್ಧ ಬಂಡೆದ್ದ ಮೊದಲ ಮಹಿಳೆ

ಬ್ರಿಟಿಷರ ವಿರುದ್ಧ ಬಂಡಾಯವೆದ್ದ ಮೊದಲ ವೀರ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಕಿತ್ತೂರು ರಾಣಿ ಚೆನ್ನಮ್ಮ. ಈಸ್ಟ್ ಇಂಡಿಯಾ ಕಂಪನಿಯನ್ನು ಸೋಲಿಸಲು ಮತ್ತು ಕಿತ್ತೂರು ಬ್ರಿಟಿಷರ ಆಳ್ವಿಕೆಯನ್ನು ಹಿಮ್ಮೆಟ್ಟಿಸಲು ಬಹಳ ಹೋರಾಟವನ್ನು ನಡೆಸಬೇಕಾಯಿತು. ಚೆನ್ನಮ್ಮನ ಸೈನ್ಯದ ಮುಖ್ಯಸ್ಥನಾಗಿ ಕಣಕಣದಲ್ಲೂ ದೇಶಭಕ್ತಿಯನ್ನು ಹೊಂದಿದ್ದ ಸಂಗೊಳ್ಳಿ ರಾಯಣ್ಣನನ್ನು ಅವನ 33ನೇ ವರ್ಷದಲ್ಲಿ ಬ್ರಿಟಿಷರು ಗಲ್ಲಿಗೇರಿಸಿದರು. ಪೋರ್ಚುಗೀಸರ ವಿರುದ್ಧ ಹೋರಾಟಿದ ರಾಣಿ ಅಬ್ಬಕ್ಕ, ಒನಕೆ ಓಬವ್ವ ಪ್ರತಿಯೊಬ್ಬರೂ ಈ ಕ್ಷಣ ನೆನಪಾಗುತ್ತಾರೆ.

ಹೀಗೆ ಜಾತಿ ಧರ್ಮಗಳ ಹಂಗಿಲ್ಲದೆ ಲಕ್ಷಾಂತರ ಜನರು ನಡೆಸಿದ ಹೋರಾಟದ ಫಲವಾಗಿ ಈ ದೇಶ ಇವತ್ತು ಸ್ವತಂತ್ರವಾಗಿದೆ ಎನ್ನುವ ಸತ್ಯಾಂಶವನ್ನು ನಮ್ಮ ಮಕ್ಕಳ ಮುಂದಿಡಬೇಕಾಗಿದೆ. ಇದು ಭವ್ಯ ಭಾರತದ ನಿರ್ಮಾಣದ ಕಡೆಗಿನ ನಿಜವಾದ ಮೊದಲ ಹೆಜ್ಜೆ.

Exit mobile version