ಬೆಂಗಳೂರು: ಆಗಸ್ಟ್ 15ರಂದು ನಡೆಯಲಿರುವ ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನ ಆಚರಣೆಗೆ (Independence Day 2024) ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಅಂದು ಬೆಳಗ್ಗೆ 8.58ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದ ಧ್ವಜಾರೋಹಣ (Flag Hoisting) ನಡೆಯಲಿದೆ. ಆಗಮಿಸುವ ಗಣ್ಯರಿಗೆ, ಅತಿಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ (Parking) ಇತ್ಯಾದಿ ವಿವರಗಳು ಇಲ್ಲಿವೆ.
ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆ ಕುರಿತು ಮಾಣೆಕ್‌ಷಾ ಮೈದಾನದಲ್ಲಿ (Manekshaw Parade Ground) ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ (Tushar Girinath) ಹಾಗೂ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ಬಳಿಕ ತೆರೆದ ಜೀಪ್‌ನಲ್ಲಿ ಪರೇಡ್ ಪರಿವೀಕ್ಷಣೆ ಮಾಡಲಿದ್ದು, ಒಟ್ಟು 1150 ಜನ ಪರೇಡ್‌ನಲ್ಲಿ ಭಾಗಿಯಾಗಲಿದ್ದಾರೆ. ಕೆಎಸ್ಆರ್‌ಪಿ, ಸಿಆರ್‌ಎಫ್, ಬಿಎಸ್‌ಎಫ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್, ಡಾಗ್ ಸ್ಕ್ವಾಡ್, ಹೋಂ ಗಾರ್ಡ್ ಸೇರಿದಂತೆ 35 ತುಕಡಿಗಳಿಂದ ಪರೇಡ್ ನಡೆಯಲಿದೆ. ಏಳು ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ.
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ತಿಳಿಸುವ ವಿಶೇಷ ಕಾರ್ಯಕ್ರಮ ಪ್ರದರ್ಶನವಿರಲಿದೆ. ಮಲ್ಲಕಂಬ, ಪ್ಯಾರಾ ಮೋಟರ್ ಹಾಗೂ ಮೋಟಾರು ಸೈಕಲ್ ಪ್ರದರ್ಶನ ನಡೆಯಲಿದೆ. ಅಂಗಾಂಗ ದಾನ ಮಾಡಿದ 64 ಕುಟುಂಬಗಳಿಗೆ ಮುಖ್ಯಮಂತ್ರಿಗಳಿಂದ ಪ್ರಶಂಸಾ ಪತ್ರ ಸಲ್ಲಲಿದೆ.
ಮಾಣಿಕ್ ಷಾ ಮೈದಾನಕ್ಕೆ ಬಂದೋಬಸ್ತ್ ಒದಗಿಸಲಾಗುತ್ತಿದ್ದು, 100ಕ್ಕು ಹೆಚ್ಚು ಸಿಸಿಟಿವಿ ಕಣ್ಗಾವಲು ಹಾಗೂ 2 ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ ಮಾಡಲಾಗುತ್ತಿದೆ. ಆಂಬ್ಯುಲೆನ್ಸ್‌ಗಳ ವ್ಯವಸ್ಥೆ, ವೈದ್ಯಕೀಯ ಸಿಬ್ಬಂದಿಗಳ ಹಾಗೂ ಅಗ್ನಿಶಾಮಕ ವಾಹನಗಳ ನಿಯೋಜನೆ ಮಾಡಲಾಗುತ್ತದೆ.
ಒಂದು ವಾರದ ಹಿಂದಿನಿಂದಲೇ ಮೈದಾನ ಮಾತ್ರವಲ್ಲದೆ ಭದ್ರತೆ ಏರ್ಪಾಡು ಮಾಡಲಾಗಿದೆ. 10 ಡಿಸಿಪಿ, 17 ಎಸಿಪಿ, 42 ಇನ್ಸ್ಪೆಕ್ಟರ್, 112 ಪಿಎಸೈ, 62 ಎಎಎಐ, 511 ಹೆಚ್‌ಸಿಪಿಸಿ, 72 ಮಹಿಳಾ ಸಿಬ್ಬಂದಿಗಳು, ಟ್ರಾಫಿಕ್ ಸಿಬ್ಬಂಧಿಗಳು ಸೇರಿ 1583 ಪೊಲೀಸರ ನಿಯೋಜನೆ ಮಾಡಲಾಗಿದೆ. 10 ಕೆಎಸ್ಆರ್‌ಪಿ, 1 ಡಿ-ಸ್ವಾಟ್, ಕ್ಯೂಆರ್‌ಟಿ ನೇಮಕ ಮಾಡಲಾಗಿದೆ. ಬಾಂಬ್ ಸ್ಕ್ವಾಡ್‌ಗಳು ಕೂಡ ಕಾರ್ಯ ನಿರ್ವಹಿಸಲಿವೆ.
ವಾಹನ ನಿಲುಗಡೆ ಎಲ್ಲಿ?
1) ಕಾರ್ ಪಾಸ್‌ಗಳನ್ನು ಹೊಂದಿರುವ ಎಲ್ಲಾ ಆಹ್ವಾನಿತರು ಅವರುಗಳ ಪಾಸ್‌ಗಳಲ್ಲಿ ನಿಗದಿಪಡಿಸಿದ ಗೇಟ್‌ಗಳಲ್ಲಿ ಇಳಿದು ಕೊಳ್ಳುವುದು ಹಾಗೂ ಪಾಸ್‌ನಲ್ಲಿ ನಿಗದಿಪಡಿಸಿರುವ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವಂತೆ ಕೋರಲಾಗಿದೆ.
2) ತುರ್ತು ಸೇವಾ ವಾಹನಗಳಾದ ಅಂಬುಲೆನ್ಸ್, ಅಗ್ನಿಶಾಮಕ ದಳದ ವಾಹನಗಳು, ನೀರಿನ ಟ್ಯಾಂಕರ್, ಕೆ.ಎಸ್.ಆರ್.ಪಿ., ಕ್ಯೂ.ಆರ್.ಟಿ, ಬಿ.ಬಿ.ಎಂ.ಪಿ. ಹಾಗೂ ಪಿ.ಡಬ್ಲ್ಯೂಡಿ ವಾಹನಗಳು ಪ್ರವೇಶ ದ್ವಾರ-2 ರ ಮುಖಾಂತರ ಪರೇಡ್ ಮೈದಾನದ ಒಳಗೆ ಪ್ರವೇಶಿಸಿ ನಂತರ ಪೋರ್ಟ್ ವಾಲ್ ಹಿಂಭಾಗದಲ್ಲಿ (ದಕ್ಷಿಣದ ಕಡೆಗೆ) ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
3) ಕಾರ್ಯಕ್ರಮಕ್ಕೆ ಬರುವ ಎಲ್ಲಾ ಮಾಧ್ಯಮದವರ ವಾಹನಗಳು ಪ್ರವೇಶ ದ್ವಾರ-4 ರ ಮೂಲಕ ಒಳ ಪ್ರವೇಶಿಸಿ ಮೈದಾನದ ಪೂರ್ವ ಭಾಗದಲ್ಲಿ ನಿಗಧಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ.
ವಾಹನ ನಿಲುಗಡೆ ನಿಷಿದ್ಧ ರಸ್ತೆಗಳು:
1) ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ.
2) ಕಬ್ಬನ್ ರಸ್ತೆ, ಸಿ.ಟಿ.ಓ. ವೃತ್ತದಿಂದ ಕೆ.ಆರ್.ರಸ್ತೆ & ಕಬ್ಬನ್‌ರಸ್ತೆ ಜಂಕ್ಷನ್ ವರೆಗೆ.
3) ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತ ದಿಂದ ಕ್ಲೀನ್ಸ್ ವೃತ್ತದವರೆಗೆ ವಾಹನ ನಿಲುಗಡೆ ನಿಷಿದ್ಧ
ಕಾರ್ಯಕ್ರಮಕ್ಕೆ ಬರುವವರು ಇವುಗಳನ್ನು ತರುವಂತಿಲ್ಲ:
ಸಿಗರೇಟ್, ಬೆಂಕಿ ಪೆಟ್ಟಿಗೆ, ಹರಿತವಾದ ವಸ್ತು ಹಾಗೂ ಚಾಕು-ಚೂರಿಗಳು, ಕರಪತ್ರಗಳು, ಕಪ್ಪು ಕರವಸ್ತ್ರಗಳು, ಬಣ್ಣದ ದ್ರಾವಣಗಳು, ತಿಂಡಿ, ತಿನಿಸುಗಳು, ವಿಡಿಯೋ ಮತ್ತು ಸ್ಟಿಲ್ ಕ್ಯಾಮರಾಗಳು, ಮದ್ಯದ ಬಾಟಲ್‌ಗಳು/ಮಾದಕ ವಸ್ತುಗಳು, ನೀರಿನ ಬಾಟಲ್‌ಗಳು ಹಾಗೂ ಕ್ಯಾನ್‌ಗಳು, ಕೊಡೆ, ಶಸ್ತ್ರಾಸ್ತ್ರಗಳು, ಪಟಾಕಿ ಮತ್ತು ಸ್ಫೋಟಕ ವಸ್ತುಗಳು.
ಹೊಟೇಲ್‌ಗಳಲ್ಲಿ ಭದ್ರತೆ ಹೆಚ್ಚಳ
ರಾಮೇಶ್ವರ ಕೆಫೆಯಲ್ಲಿ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ಹೊಟೇಲ್ ಮಾಲೀಕರ ಜೊತೆ ಸಭೆ ನಡೆಸಲಾಗಿದ್ದು, ಶಂಕಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಬೇಕು. ಏನೇ ವಿಚಾರವಿದ್ದರೂ ಪೊಲೀಸರಿಗೆ ಮಾಹಿತಿ ನೀಡಬೇಕು. ಹಾಗು ಪರಿಶಿಲನೆಗೆ ಸಹಕಾರ ನೀಡಬೇಕು ಎಂದು ದಯಾನಂದ್ ತಿಳಿಸಿದ್ದಾರೆ.