ಭಾರತದ ಶೇ.90ರಷ್ಟು ಪ್ರದೇಶಗಳು ಅಧಿಕ ತಾಪಮಾನದ ಅಪಾಯದಲ್ಲಿದೆ ಎಂದು ಸಂಶೋಧನಾ ವರದಿಯೊಂದು ಎಚ್ಚರಿಸಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಂತೂ ಅಪಾಯದ ಮಿತಿ ಮೀರುವ ಹಂತದಲ್ಲಿದೆ ಎಂದು ವರದಿ ಹೇಳಿದೆ. ಇದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ನೀಡಿದ ಅಧ್ಯಯನದ ವರದಿ. ಅಧ್ಯಯನದ ಪ್ರಕಾರ ತಾಪಮಾನ ಸೂಚ್ಯಂಕ(HI)ದಲ್ಲಿ ಭಾರತದ ಶೇ.90ಕ್ಕೂ ಅಧಿಕ ಪ್ರದೇಶದಲ್ಲಿ ʼಅತ್ಯಂತ ಎಚ್ಚರಿಕೆಯʼ ಅಥವಾ ʼಅಪಾಯʼದ ಶ್ರೇಣಿಯ ತಾಪಮಾನ ವರದಿಯಾಗಿದೆ. ಭೂ ವಿಜ್ಞಾನ ಇಲಾಖೆಯ ವರದಿಯ ಪ್ರಕಾರ ಕಳೆದ 50 ವರ್ಷಗಳಲ್ಲಿ ಬಿಸಿ ಗಾಳಿಯಿಂದಾಗಿ ದೇಶದಲ್ಲಿ 17,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. 2021ರಲ್ಲಿ ಪ್ರಕಟವಾದ ಪತ್ರಿಕಾ ವರದಿಯೊಂದರಲ್ಲಿ 1971-2019ರವರೆಗೆ ದೇಶದಲ್ಲಿ 706 ಬಿಸಿಗಾಳಿ ದುರಂತಗಳು ಸಂಭವಿಸಿವೆ ಎಂದು ಹೇಳಲಾಗಿತ್ತು. ಇತ್ತೀಚೆಗೆ ನವಿ ಮುಂಬೈನಲ್ಲಿ ನಡೆದ ಮಹಾರಾಷ್ಟ್ರ ಸರ್ಕಾರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹದಿಮೂರು ಜನರು ತಾಪಮಾನ ತಡೆಯಲಾರದೆ ಸಾವನ್ನಪ್ಪಿದ್ದಾರೆ. ಇವೆಲ್ಲವೂ ನಾವು ಜಾಗತಿಕ ತಾಪಮಾನದ ಇದುವರೆಗಿನ ಗರಿಷ್ಠ ಬಿಂದುವನ್ನು ತಲುಪಿದ್ದೇವೆ ಎಂಬುದನ್ನು ಸಾಕ್ಷೀಕರಿಸುತ್ತಿವೆ. ಪರಿಸ್ಥಿತಿ ಇನ್ನೂ ಕೆಡುವ ಸಾಧ್ಯತೆಗಳಂತೂ ನಿಚ್ಚಳವಾಗಿ ಕಾಣುತ್ತಿವೆ.
ಈ ಬಾರಿಯ ಬೇಸಿಗೆ ಹಿಂದೆಂದಿಗಿಂತ ಹೆಚ್ಚು ಸುಡುತ್ತಿದೆ. ಈ ಅಧ್ಯಯನ ವರದಿ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚುತ್ತಿರುವ ತಾಪಮಾನದ ಬಿಸಿಯನ್ನು ಪುಷ್ಟೀಕರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಬಿಸಿಲ ತಾಪದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕರ್ನಾಟಕದಲ್ಲೂ ಕಳೆದ ಕೆಲವು ದಿನಗಳಿಂದ ಬಿಸಿಲ ಝಳ ವಿಪರೀತವಾಗಿ ಏರುತ್ತಿದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಮಾತ್ರವಲ್ಲ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲ ಬೇಗೆ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದೊಮ್ಮೆ ತಂಪಿನ ಮಡಿಲಾಗಿದ್ದ ಮಲೆನಾಡು, ಉದ್ಯಾನಗಳ ನಗರಿಯಾಗಿದ್ದ ಬೆಂಗಳೂರು ಕೂಡ ಬೇಸಿಗೆಯಲ್ಲಿ ಕೆಂಡದಂತೆ ಸುಡುತ್ತಿದೆ. ಬರ ಪರಿಸ್ಥಿತಿ ಎದುರಾಗಲಿದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ಈ ವರ್ಷ ನಮ್ಮ ದೇಶದ ಅರಣ್ಯಗಳಲ್ಲಿ ಕಂಡುಬಂದ ಕಾಡ್ಗಿಚ್ಚಿನ ಪ್ರಮಾಣ ಹಿಂದೆ ಎಂದೂ ಕಂಡುಬಂದಿರಲಿಲ್ಲ. ಫಾರೆಸ್ಟ್ ಸರ್ವೆ ಆಫ್ ಇಂಡಿಯಾ (ಎಫ್‌ಎಸ್‌ಐ) ಉಪಗ್ರಹ ಆಧಾರಿತ ಕಾಡ್ಗಿಚ್ಚು ಮೇಲ್ವಿಚಾರಣೆಯ ಪ್ರಕಾರ ಮಾರ್ಚ್ 1ರಿಂದ 12ರ ನಡುವೆ ಸುಮಾರು 42,799 ಕಡೆ ಕಾಡ್ಗಿಚ್ಚುಗಳು ಪತ್ತೆಯಾಗಿದ್ದು, ಪ್ರಮಾಣದಲ್ಲಿ 115%ದಷ್ಟು ಹೆಚ್ಚಾಗಿವೆ. ನಿರಂತರವಾಗಿ ನಡೆದಿರುವ ಅರಣ್ಯನಾಶಕ್ಕೆ ಇದು ತುಪ್ಪ ಸುರಿದಿದೆ. ಸಾಕಷ್ಟು ಕುಡಿಯುವ ಹಾಗೂ ದಿನಬಳಕೆಯ ನೀರು ಲಭ್ಯವಿಲ್ಲ. ಆದರೆ ಕಳೆದ ಮಳೆಗಾಲ ಮಾತ್ರ ದೊಡ್ಡ ಹಾವಳಿಯನ್ನೇ ಎಬ್ಬಿಸಿತು. ಅನೇಕ ಕಡೆ ಅತಿವೃಷ್ಟಿಯಿಂದಾಗಿ ಜನ ಬವಣೆ ಅನುಭವಿಸಿದರು; ಬೆಂಗಳೂರು ಕೂಡ ಇದಕ್ಕೆ ಸಾಕ್ಷಿಯಾಯಿತು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಜನಸಂಖ್ಯೆಯಲ್ಲೀಗ ಭಾರತವೇ ನಂ.1; ಮಾನವ ಸಂಪನ್ಮೂಲದ ಸದ್ಬಳಕೆ ಆಗಬೇಕಿದೆ
ಮಳೆಗಾಲದಲ್ಲಿ ಅತಿವೃಷ್ಟಿ, ಬೇಸಿಗೆಯಲ್ಲಿ ಅತಿ ಸೆಖೆ, ಎಷ್ಟು ಮಳೆಯಾದರೂ ಕುಡಿಯುವ ನೀರಿನ ಸಂಗ್ರಹ ಇಲ್ಲದಿರುವುದು, ಇವೆಲ್ಲವೂ ತಾಪಮಾನ ಹೆಚ್ಚಳದ ಪರಿಣಾಮಗಳೇ ಆಗಿವೆ. ಇದೆಲ್ಲವೂ ಮತ್ತೆ ಮನುಷ್ಯಕೃತ ಅಪರಾಧದ ಪರಿಣಾಮವೇ ಎಂದು ಬೇರೆ ಹೇಳಬೇಕಿಲ್ಲ. ಕಾರ್ಬನ್ ಅನಿಲಗಳನ್ನು ಮಿತಿಯಿಲ್ಲದೆ ಪರಿಸರಕ್ಕೆ ಸೇರಿಸುವುದು, ಜಲಮೂಲಗಳ ನಾಶ, ಪೆಟ್ರೋಲಿಯಂ ಇಂಧನದ ಮಿತಿಮೀರಿದ ಬಳಕೆ, ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯನಾಶ- ಇವೆಲ್ಲವೂ ಇದಕ್ಕೆ ಕಾರಣಗಳು. ಸುಸ್ಥಿರವಾದ ಅಭಿವೃದ್ಧಿಯ ಮಾದರಿ ನಮ್ಮ ಮುಂದೆ ಇಲ್ಲದೇ ಹೋದರೆ, ಇದೇ ರೀತಿ ತಾಪಮಾನವನ್ನು ಹೆಚ್ಚಿಸುತ್ತ ಹೋದರೆ ಮನುಷ್ಯಕುಲಕ್ಕೆ ಸದ್ಯದಲ್ಲೇ ಅಪಾಯ ಕಾದಿದೆ. ಪರಿಸರ ಶೃಂಗಸಭೆಗಳಲ್ಲಿ ಕೈಗೊಳ್ಳುತ್ತಿರುವ ನಿರ್ಣಯಗಳನ್ನು ಒಮ್ಮತದಿಂದ ಜಾರಿಗೆ ತರುವುದು ನಮ್ಮ ಧ್ಯೇಯವಾಗಬೇಕು. ಪರಿಸರ ಸಂರಕ್ಷಣೆ ಆದ್ಯ ಮಂತ್ರವಾಗಬೇಕು. ಪರ್ಯಾಯ ಇಂಧನಗಳ ಬಳಕೆ ಆಗಬೇಕು. ಆಗ ಮಾತ್ರ ಹಸಿರು ಗ್ರಹ ಭೂಮಿ, ಮನುಷ್ಯಕುಲ ಉಳಿದೀತು. ಇದೆಲ್ಲ ದೀರ್ಘಾವಧಿಯ ಕ್ರಮಗಳು. ಸದ್ಯ ಹೆಚ್ಚುತ್ತಿರುವ ತಾಪಮಾನದ ದುಷ್ಪರಿಣಾಮಗಳನ್ನು ತಡೆಗಟ್ಟಲು ತಕ್ಷಣದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲೂ ಸರ್ಕಾರಗಳು ಮುಂದಾಗಬೇಕಿದೆ.