Site icon Vistara News

India Bloc: ಮುರಿದುಬಿದ್ದ ಎಸ್‌ಪಿ- ಕಾಂಗ್ರೆಸ್‌ ಮೈತ್ರಿ ಮಾತುಕತೆ, ರಾಹುಲ್‌ ಯಾತ್ರೆಗೂ ಅಖಿಲೇಶ್‌ ಇಲ್ಲ

SP offers 17 seats in INDIA Bloc partner Congress, at Uttar Pradesh

ಲಖನೌ: ಪಶ್ಚಿಮ ಬಂಗಾಲ (West bengal) ಹಾಗೂ ಪಂಜಾಬ್‌ನಲ್ಲಿ (Punjab) ಸೀಟು ಹಂಚಿಕೆ ವಿಚಾರದಲ್ಲಿ ಇಂಡಿಯಾ ಬ್ಲಾಕ್‌ನ (India Bloc) ಮಿತ್ರ ಪಕ್ಷಗಳಿಂದ ಏಟು ತಿಂದಿರುವ ಕಾಂಗ್ರೆಸ್‌ (Congress), ಉತ್ತರ ಪ್ರದೇಶದಲ್ಲೂ ಸಮಾಜವಾದಿ ಪಾರ್ಟಿಯಿಂದ (Samajwadi Party) ಮತ್ತದೇ ಕಹಿ ಎದುರಿಸುವಂತೆ ಕಾಣಿಸುತ್ತಿದೆ. ಲೋಕಸಭೆ ಚುನಾವಣೆಗೆ (lok sabha election 2024) ಎಸ್‌ಪಿ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆ ತಡರಾತ್ರಿಯ ವರೆಗೂ ನಡೆದಿದ್ದು, ʼಡೆಡ್ ಎಂಡ್ʼ ತಲುಪಿದೆ ಎಂದು ವರದಿಯಾಗಿದೆ.

ಸೋಮವಾರ, ಎಸ್‌ಪಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ 17 ಲೋಕಸಭಾ ಸ್ಥಾನಗಳನ್ನು ಹಂಚಿಕೊಳ್ಳುವ ಪ್ರಸ್ತಾಪ ನೀಡಿತು. ಈ ಪ್ರಸ್ತಾಪವನ್ನು ಅಂಗೀಕರಿಸಿದರೆ ಮಾತ್ರ ಎಸ್‌ಪಿಯ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ರಾಯ್‌ಬರೇಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯೊಂದಿಗೆ ಸೇರುತ್ತಾರೆ ಎಂದು ಪ್ರತಿಪಾದಿಸಿದರು. ಈ ಬಗ್ಗೆ ಕಾಂಗ್ರೆಸ್‌ ಅಸಮಾಧಾನ ಹೊಂದಿದ್ದು, ಇನ್ನೂ ಯಾವುದೇ ಸಮ್ಮತಿ ನೀಡಿಲ್ಲ.

ಉತ್ತರ ಪ್ರದೇಶವು ಒಟ್ಟು 80 ಲೋಕಸಭಾ ಸ್ಥಾನಗಳನ್ನು ಹೊಂದಿದೆ. “ನಾವು ಕಾಂಗ್ರೆಸ್‌ಗೆ 17 ಲೋಕಸಭಾ ಸ್ಥಾನಗಳ ಅಂತಿಮ ಪ್ರಸ್ತಾಪವನ್ನು ನೀಡಿದ್ದೇವೆ. ಮಂಗಳವಾರ ರಾಯ್‌ಬರೇಲಿಯಲ್ಲಿ ಅಖಿಲೇಶ್ ಯಾದವ್ ಅವರು ನ್ಯಾಯ ಯಾತ್ರೆಯಲ್ಲಿ ಭಾಗವಹಿಸುವುದು ಅವರ ಸ್ವೀಕಾರವನ್ನು ಅವಲಂಬಿಸಿರುತ್ತದೆ” ಎಂದು ಎಸ್‌ಪಿ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ ತಿಳಿಸಿದ್ದಾರೆ.

ಇದಾದ ಬಳಿಕ ಕಾಂಗ್ರೆಸ್ ಮತ್ತು ಎಸ್‌ಪಿ ನಡುವಿನ ಮೈತ್ರಿ ಮಾತುಕತೆ ಅಂತ್ಯವನ್ನು ತಲುಪಿದೆ ಎಂದು ಕೆಲವು ವರದಿಗಳು ಹೇಳಿವೆ. ಬಲ್ಲಿಯಾ, ಮೊರಾದಾಬಾದ್ ಮತ್ತು ಬಿಜ್ನೋರ್‌ ಕ್ಷೇತ್ರಗಳನ್ನು ಬಿಟ್ಟುಕೊಡಲು ಎಸ್‌ಪಿ ನಿರಾಕರಿಸಿದೆ. ಕಾಂಗ್ರೆಸ್‌ ಈ ಕ್ಷೇತ್ರಗಳಿಗಾಗಿ ಹಠ ಹಿಡಿದಿದೆ. ಇದು ಒಪ್ಪಂದದ ಬ್ರೇಕರ್ ಆಗಿದೆಯಂತೆ.

2024ರ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಕುರಿತು ಸೋಮವಾರ ಎರಡು ಪಕ್ಷಗಳ ನಾಯಕರ ನಡುವೆ ತಡರಾತ್ರಿವರೆಗೂ ಮಾತುಕತೆ ನಡೆದರೂ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಟಿವಿ ವಾಹಿನಿಯೊಂದು ವರದಿ ಮಾಡಿದೆ. ಆದರೆ, ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಮಾತ್ರ “ಸೀಟು ಹಂಚಿಕೆಯನ್ನು ಯಾವುದೇ ಸಮಯದಲ್ಲಿ ಅಂತಿಮಗೊಳಿಸಲಾಗುವುದು” ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ 11 ಲೋಕಸಭಾ ಸ್ಥಾನಗಳ ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಹಿಂದೆ ಹೇಳಿದ್ದರು. ಏತನ್ಮಧ್ಯೆ, ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕದ ಮುಖ್ಯಸ್ಥ ಅಜಯ್ ರೈ, 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ಗೆದ್ದಿದ್ದ ಸುಮಾರು ಎರಡು ಡಜನ್ ಸ್ಥಾನಗಳನ್ನು (80 ಸ್ಥಾನಗಳಲ್ಲಿ) ಪಡೆಯಬೇಕು ಎಂದು ಹೇಳಿದ್ದಾರೆ.

ಅಖಿಲೇಶ್ ಅವರು ಸೀಟು ಹಂಚಿಕೆ ಅಂತಿಮಗೊಳ್ಳುವವರೆಗೆ ರಾಹುಲ್ ಗಾಂಧಿ ಅವರ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಎಸ್‌ಪಿ ವಕ್ತಾರರು ಹೇಳಿದ್ದಾರೆ. “ಯಾತ್ರೆಗೆ ಸೇರಿಲ್ಲ ಎಂದರೆ ಮೈತ್ರಿ ಮುರಿದು ಬಿದ್ದಿದೆ ಎಂದಲ್ಲ. ಭವಿಷ್ಯದಲ್ಲಿ ನಮ್ಮ ಮೈತ್ರಿ ಇರುತ್ತದೆ” ಎಂದು ವಕ್ತಾರರು ಹೇಳಿದ್ದಾರೆ. “ಇಂಡಿಯಾ ಬ್ಲಾಕ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಬಿಜೆಪಿಯವರಿಗೆ ಭಯವಾಗಿದೆ, ಅದಕ್ಕಾಗಿಯೇ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ” ಎಂದಿದ್ದಾರೆ.

ಎಸ್‌ಪಿ ಈಗಾಗಲೇ 2024ರ ಲೋಕಸಭಾ ಚುನಾವಣೆಗೆ 27 ಅಭ್ಯರ್ಥಿಗಳನ್ನು ಘೋಷಿಸಿದೆ. ಜನವರಿ 30ರಂದು 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಪಟ್ಟಿಯಲ್ಲಿ ಡಿಂಪಲ್ ಯಾದವ್, ಶಫೀಕರ್ ರೆಹಮಾನ್ ಬಾರ್ಕ್, ರವಿದಾಸ್ ಮೆಹ್ರೋತ್ರಾ, ಅಕ್ಷಯ್ ಯಾದವ್ ಮತ್ತು ಕಾಜಲ್ ನಿಶಾದ್ ಅವರ ಹೆಸರು ಸೇರಿದೆ. ಸೋಮವಾರ ಪಕ್ಷ 11 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಎರಡನೇ ಪಟ್ಟಿಯಲ್ಲಿ ದರೋಡೆಕೋರ ಕಂ ರಾಜಕಾರಣಿ ಮುಖ್ತಾರ್ ಅನ್ಸಾರಿಯ ಸಹೋದರ ಅಫ್ಜಲ್ ಅನ್ಸಾರಿ ಹೆಸರು ಸೇರಿದೆ.

ಎಸ್‌ಪಿ ನಾಯಕ ರಾಜೀನಾಮೆ

ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ವಾರದ ನಂತರ, ಸ್ವಾಮಿ ಪ್ರಸಾದ್ ಮೌರ್ಯ ಅವರು ಮಂಗಳವಾರ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ರಾಜೀನಾಮೆ ನೀಡಿದ್ದಾರೆ. “ನಾನು ಯಾವಾಗಲೂ ಸಮಾಜವಾದಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಆದರೆ ಕೆಲವು ಸಮಾಜ ವಿರೋಧಿಗಳು ನನಗೆ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸಿದರು” ಎಂದು ಅವರು ಹೇಳಿದರು.

ಇದನ್ನೂ ಓದಿ: Lok Sabha Election 2024: ಲೋಕಸಭಾ ಫೈಟ್;‌ ಕಾಂಗ್ರೆಸ್‌, ಬಿಜೆಪಿಯಲ್ಲೀಗ ಟಿಕೆಟ್‌ಗೆ ಲಾಬಿ ಪಾಲಿಟಿಕ್ಸ್!

Exit mobile version