Site icon Vistara News

ವಿಸ್ತಾರ ಸಂಪಾದಕೀಯ: ಬೆಳೆದಿದೆ ಭಾರತ, ಬೆಳೆಯುವುದಿದೆ ಇನ್ನೂ ಸತತ

Nation

ನಾವೀಗ 77ನೇ ಸ್ವಾತಂತ್ರ್ಯೋತ್ಸವವನ್ನು (independence day 2023) ಆಚರಿಸಿಕೊಳ್ಳುತ್ತಿದ್ದೇವೆ. ಸಂಭ್ರಮಿಸಲು ನೂರಾರು ಕಾರಣಗಳಿವೆ. ಮುಖ್ಯವಾಗಿ ಬ್ರಿಟಿಷರಿಂದ ಬಂಧಮುಕ್ತಿಗೊಂಡ ಬಳಿಕ ಭಾರತ ನಡೆದು ಬಂದ ಹಾದಿಯನ್ನು ಅವಲೋಕಿಸಿದಾಗ ಹೆಮ್ಮೆಯಾಗುತ್ತದೆ. 5 ಸಾವಿರ ವರ್ಷಗಳ ಬಲಿಷ್ಠ ಜೀವಂತ ನಾಗರಿಕತೆಯನ್ನು ಹೊಂದಿದ್ದ ಭಾರತವನ್ನು ಬ್ರಿಟಿಷರು ಕೊಳ್ಳೆ ಹೊಡೆದು ಬರಗಾಲವನ್ನು ಕೊಟ್ಟು ಹೋಗಿದ್ದರು. ಇಂಗ್ಲಿಷ್‌ ಶಿಕ್ಷಣ ಪದ್ಧತಿಯನ್ನೇನೋ ಕೊಟ್ಟಿದ್ದರು; ಆದರೆ ಗುಲಾಮರನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಅವರು ತಂದಿದ್ದ ಶಿಕ್ಷಣ ಪದ್ಧತಿಯೇ ನಮ್ಮವರಲ್ಲಿ ವಸಾಹತುಶಾಹಿಯ ಅರಿವನ್ನೂ ಮೂಡಿಸಿತು. ಬಹುತೇಕ ಅದೇ ಶಿಕ್ಷಣ ಪದ್ಧತಿಯನ್ನಿಟ್ಟುಕೊಂಡೇ ಬಹುದೂರ ಸಾಗಿ ಬಂದಿದ್ದೇವೆ. ಅಂದು ನಮ್ಮನ್ನಾಳಿದ ಬ್ರಿಟಿಷ್‌ ನಾಡನ್ನು ಇಂದು ಆಳುತ್ತಿರುವ ಪ್ರಧಾನಿಯೇ ನಮ್ಮ ಭಾರತ ಮೂಲದವರು ಎಂಬ ಅರಿವು ನಮ್ಮ ಸ್ವಾತಂತ್ರ್ಯ ದಿನದ ಪುಳಕವನ್ನು ತುಸು ಮಟ್ಟಿಗೆ ಹೆಚ್ಚಿಸುವಂಥದು.

1947ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದಾಗ ಇಲ್ಲಿನ ಜನಸಂಖ್ಯೆ ಇದ್ದದ್ದು 34.5 ಕೋಟಿ. ಇಂದು ಅದು 140 ಕೋಟಿಯನ್ನು ತಲುಪಿ, ಜಗತ್ತಿನ ಅತಿ ದೊಡ್ಡ ಜನಸಂಖ್ಯೆಯೆನಿಸಿಕೊಂಡಿದ್ದೇವೆ. ಈ ಜನಸಂಖ್ಯೆಯೇ ಈ ದೇಶಕ್ಕೆ ಭಾರವಾಗಲಿದೆ ಎಂದವರ ಮಾತನ್ನು ಸುಳ್ಳು ಮಾಡಿ, ಜನಸಂಖ್ಯೆ ವರವೂ ಆಗಬಲ್ಲದು ಎಂದು ತೋರಿಸಿಕೊಟ್ಟಿದ್ದೇವೆ. ಮಾನವ ಸಂಪನ್ಮೂಲ ನಮಗೆ ವರವಾಗಿದೆ. ಬ್ರಿಟನ್‌, ಅಮೆರಿಕ, ಕೆನಡಾ, ಅರಬ್‌ ದೇಶಗಳು, ಮುಂತಾದ ಕಡೆ ಭಾರತೀಯರು ತಮ್ಮ ಪ್ರತಿಭೆ ಹಾಗೂ ಸೇವೆಗಳಿಂದ ಗಣ್ಯರಾಗಿದ್ದಾರೆ. ಭಾರತೀಯ ಐಟಿ ಪ್ರತಿಭೆಗಳು, ವೈದ್ಯರು, ವಿಜ್ಞಾನಿಗಳು ಜಗತ್ತಿಗೆ ಮರೆಯಲಾಗದಂಥ ಕೊಡುಗೆ ನೀಡಿದ್ದಾರೆ. ಭಾರತ ಇಲ್ಲದ ಆಧುನಿಕ ಜಗತ್ತನ್ನು ಇಂದು ಕಲ್ಪಿಸಿಕೊಳ್ಳುವುದು ಕಡುಕಷ್ಟ. ಹಲವಾರು ಬೃಹತ್‌ ಬಹುರಾಷ್ಟ್ರೀಯ ಐಟಿ ಕಂಪನಿಗಳ ಮೇಲಿನ ಸ್ಥಾನಗಳು ಭಾರತೀಯರಿಗೆ ಮೀಸಲಾಗಿವೆ. 1975ರಲ್ಲಿ ಮೊದಲ ಉಪಗ್ರಹ ಆರ್ಯಭಟವನ್ನು ಉಡಾಯಿಸಿದ ನಾವು ಇಂದು ಚಂದ್ರನಲ್ಲಿಗೆ ಕಾಲಿಡುವ, ಮಂಗಳನನ್ನು ಮುಟ್ಟುವ ಮಟ್ಟಕ್ಕೆ ತಲುಪಿದ್ದೇವೆ. ಭಾರತ ಇಡೀ ಜಗತ್ತಿಗೆ ಲಸಿಕೆಗಳನ್ನು ಉತ್ಪಾದಿಸುತ್ತಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ನಾವೇ ಗ್ರೇಟ್.

1947ರಲ್ಲಿ ಭಾರತ ಸ್ವತಂತ್ರವಾದಾಗ ನಮ್ಮ ಜಿಡಿಪಿ ಕೇವಲ 2.7 ಲಕ್ಷ ಕೋಟಿಯಷ್ಟಿತ್ತು. ಇದು ಪ್ರಪಂಚದ GDPಯ ಕೇವಲ 3% ಮಾತ್ರ. ಹಸಿರು ಕ್ರಾಂತಿಯ ಮೂಲಕ ದಾಖಲೆ ಧಾನ್ಯ ಉತ್ಪಾದನೆ ಮಾಡಿ ವಿಶ್ವದ ಅಗ್ರ ಕೃಷಿ ಉತ್ಪಾದಕರಲ್ಲಿ ಒಂದೆಂದು ಗುರುತಿಸಲ್ಪಟ್ಟಿತು ನಮ್ಮ ದೇಶ. ಕಾರ್ಖಾನೆಗಳು, ಜಲವಿದ್ಯುತ್ ಸ್ಥಾವರಗಳು, ಮೂಲಸೌಕರ್ಯಗಳೊಂದಿಗೆ ಎಲ್ಲರಿಗೂ ಉದ್ಯೋಗ ಸೃಷ್ಟಿಸಿದೆವು. ಇಂದು ಭಾರತ 147 ಲಕ್ಷ ಕೋಟಿ ಜಿಡಿಪಿಯೊಂದಿಗೆ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ಜಾಗತಿಕ ಜಿಡಿಪಿಯ 8%ರಷ್ಟಿದೆ. ದೇಶದಲ್ಲಿ ಸ್ಟಾರ್ಟ್ ಅಪ್ ಸಂಖ್ಯೆ 15,400%ನಷ್ಟು ಏರಿಕೆ ಕಂಡಿದೆ. ನಮ್ಮ UPIಯ ಯಶಸ್ಸು ಜಗತ್ತಿಗೆ ಒಂದು ಯಶಸ್ವೀ ಕೇಸ್ ಸ್ಟಡಿ. 2022ರ ಮೊದಲ ತ್ರೈಮಾಸಿಕದಲ್ಲಿ ರೂ. 10.2 ಲಕ್ಷ ಕೋಟಿ ರೂ. ಮೌಲ್ಯದ 936 ಕೋಟಿ ವಹಿವಾಟುಗಳು! ಭಾರತೀಯ ರಸ್ತೆ ಜಾಲದ ಒಟ್ಟಾರೆ ಉದ್ದ 1951ರಲ್ಲಿ 4 ಲಕ್ಷ ಕಿಮೀಗಳಿದ್ದುದು, 2015ರ ಹೊತ್ತಿಗೆ 47 ಲಕ್ಷ ಕಿಮೀಗೆ ಬೆಳೆದಿದೆ. ಇದು ವಿಶ್ವದ ಮೂರನೇ ಅತಿದೊಡ್ಡ ರಸ್ತೆ ಮಾರ್ಗ ಜಾಲ. 2018ರ ವೇಳೆಗೆ ದೇಶದ ಎಲ್ಲಾ 18,452 ಹಳ್ಳಿಗಳನ್ನು ವಿದ್ಯುತ್‌ನಿಂದ ಬೆಳಗಿಸುವಲ್ಲಿ ಯಶಸ್ವಿಯಾಗಿದ್ದೇವೆ. 1947ರಲ್ಲಿ ಭಾರತ ಕೇವಲ 12% ಸಾಕ್ಷರತೆ ದರವನ್ನು ಹೊಂದಿತ್ತು. ಇಂದು 74.04% ಸಾಕ್ಷರತೆಯನ್ನು ಹೊಂದಿದೆ. 2022ರಲ್ಲಿ ಇಲ್ಲಿನ ಪ್ರಜೆಗಳ ಸರಾಸರಿ ಜೀವಿತಾವಧಿ ಅಂದಿನ 32 ವರ್ಷಗಳಿಂದ 70 ವರ್ಷಗಳಿಗೆ ಏರಿದೆ. ಇದಲ್ಲವೇ ಒಂದು ದೇಶ ನಿಜವಾಗಿ ಸಾಧಿಸಬೇಕಾದ ಅಭಿವೃದ್ಧಿ?’

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಪುನರುತ್ಥಾನದ ಹಾದಿಯಲ್ಲಿ ಹಾಕಿ, ಮತ್ತೆ ಒಲಿಂಪಿಕ್ ಪದಕ ಗುರಿಯಾಗಲಿ

ಇಷ್ಟೆಲ್ಲ ಮಾಡಿದ್ದೇವೆ ನಿಜ. ಆದರೆ ನಾವು ಸಾಧಿಸಬೇಕಾದ ವಲಯಗಳು ಇನ್ನೂ ಇವೆ. ಬಡತನ ಅಳಿದಿಲ್ಲ. ನಿರುದ್ಯೋಗ ಉಳಿದಿದೆ. ಸರ್ವರಿಗೂ ಶಿಕ್ಷಣ ಹಾಗೂ ಎಲ್ಲರಿಗೂ ಆರೋಗ್ಯ ಎಂಬ ಉನ್ನತ ಆಶಯ ಪೂರ್ತಿಯಾಗಿ ಈಡೇರಿಲ್ಲ. ಎಲ್ಲರಿಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣಕ್ಕೆ ಕಾನೂನೇನೋ ಇದೆ. ಆದರೆ ಬಾಲಕಾರ್ಮಿಕ ವ್ಯವಸ್ಥೆಯೂ ಅಲ್ಲಲ್ಲಿ ಕಂಡುಬರುತ್ತಿದೆ. ಜಗತ್ತಿನ ಟಾಪ್ 100 ವಿಶ್ವ ವಿಶ್ವವಿದ್ಯಾಲಯಗಳಲ್ಲಿ ಒಂದೇ ಒಂದು ಭಾರತೀಯ ವಿಶ್ವವಿದ್ಯಾಲಯ ಅಥವಾ ಸಂಸ್ಥೆ ಇಲ್ಲ. ಆರೋಗ್ಯ ಕ್ಷೇತ್ರದಲ್ಲೂ, WHO ಸರಾಸರಿ ಪ್ರಕಾರ 1000 ಜನರಿಗೆ 2.5 ವೈದ್ಯರಿರಬೇಕು; ಇಲ್ಲಿ ಆ ಅನುಪಾತ 1000 ಜನರಿಗೆ ಕೇವಲ 0.7 ವೈದ್ಯರಿದ್ದಾರೆ. ಕೋವಿಡ್‌ ಕಾಲದಲ್ಲಿ ನಮ್ಮ ವೈದ್ಯಕೀಯ ವ್ಯವಸ್ಥೆಯ ದೌರ್ಬಲ್ಯ ಜಗಜ್ಜಾಹೀರಾಯಿತು. ಸರ್ಕಾರಿ ಆರೋಗ್ಯ ವಿಮೆ ಎಲ್ಲರಿಗೆ ಸಿಗಬೇಕು; ಆದರೆ ವಂಚಿತರೇ ಹೆಚ್ಚು. ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆ ಹೊಂದಿರುವ ಭಾರತ ತನ್ನ ಯುವಕರಿಗೆ ಸರಿಯಾದ ಕೌಶಲ್ಯ ಮತ್ತು ಶಿಕ್ಷಣ ದೊರೆತರೆ ಅದ್ಭುತಗಳನ್ನು ಸಾಧಿಸಬಹುದು. ಸಮಾನತೆ ನಮ್ಮ ಸಂವಿಧಾನದ ಉನ್ನತ ಆಶಯಗಳಲ್ಲೊಂದು. ಆದರೆ ಸಾಮಾಜಿಕವಾಗಿ ಧರ್ಮ- ಜಾತಿಗಳ ಸಮಾನತೆ, ಕಚೇರಿಗಳಲ್ಲಿ ಲಿಂಗ ಸಮಾನತೆ ಸಾಧ್ಯವಾಗಿಲ್ಲ. ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ. ಭಾರತ ʼಸೂಪರ್ ಪವರ್’ ಆಗಬೇಕಿದ್ದರೆ ಇನ್ನೂ ಬಹಳಷ್ಟು ಮುನ್ನಡೆಯುವುದಿದೆ. ಆ ದಾರಿ ಕಾಣಿಸುತ್ತಿದೆ. ಮುನ್ನಡೆಯುವ ಸ್ಫೂರ್ತಿ, ಪ್ರೇರಣೆಗಳು ನಮ್ಮದಾಗಲಿ.

Exit mobile version