Site icon Vistara News

ವಿಸ್ತಾರ Explainer | ಭಾರತಕ್ಕೆ ಮೊದಲ ಬಾರಿಗೆ ಜಿ20 ಶೃಂಗದ ಸಾರಥ್ಯ

G20 Presidency @ India

ಭಾರತವು ಜಿ-20 ಒಕ್ಕೂಟದ ಅಧ್ಯಕ್ಷತೆಯನ್ನು ಇದೇ ಡಿಸೆಂಬರ್‌ 1ರಿಂದ ಅನ್ವಯವಾಗುವಂತೆ, ಒಂದು ವರ್ಷಗಳ ಅವಧಿಗೆ ವಹಿಸಲು ಸಜ್ಜಾಗುತ್ತಿದೆ. ಹಾಲಿ ಅಧ್ಯಕ್ಷತೆ ವಹಿಸಿರುವ ಇಂಡೊನೇಷ್ಯಾದ ಅವಧಿ ಮುಕ್ತಾಯವಾಗುತ್ತಿದ್ದು, ಬಾಲಿಯಲ್ಲಿ ಅಧಿಕಾರ ಹಸ್ತಾಂತರವಾಗಲಿದೆ. ಇಂಡೊನೇಷ್ಯಾದ ಅಧ್ಯಕ್ಷರಾದ ಜೊಕೊ ವಿಡೊಡೊ ಅವರು ಜಿ20 ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ವಹಿಸಲಿದ್ದಾರೆ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಒಳಿತಿಗಾಗಿ ತನ್ನ ಕೊಡುಗೆ ನೀಡುವ ಅವಕಾಶ ಭಾರತಕ್ಕೆ ಲಭಿಸಿದೆ. (ವಿಸ್ತಾರ Explainer) ಕೋವಿಡ್‌ ಬಿಕ್ಕಟ್ಟಿನ ಪರಿಣಾಮಗಳು, ಆರ್ಥಿಕ ಹಿಂಜರಿತದ ಅನಿಶ್ಚಿತತೆಯನ್ನು ಜಗತ್ತು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತವು ಜಿ20 ಚುಕ್ಕಾಣಿಯನ್ನು ಹಿಡಿಯುತ್ತಿದ್ದು, ಕುತೂಹಲ ಮೂಡಿಸಿದೆ.

2023ರ ಜಿ20 ಶೃಂಗ ಸಭೆಗೆ ಭಾರತ ಸಜ್ಜು

2023ರ ಜಿ20 ಶೃಂಗಸಭೆಯು ಭಾರತದಲ್ಲಿ ನಡೆಯಲಿದೆ. ನವ ದೆಹಲಿಯಲ್ಲಿ ಮುಂದಿನ ವರ್ಷ ಸೆಪ್ಟೆಂಬರ್‌ 9 ಮತ್ತು 10ರಂದು ಜಿ20 ಶೃಂಗ ನಡೆಯಲಿದೆ. ಮೊಟ್ಟ ಮೊದಲ ಬಾರಿಗೆ ಭಾರತ ಈ ಶೃಂಗವನ್ನು ಆಯೋಜಿಸುತ್ತಿದ್ದು, ಐತಿಹಾಸಿಕ ಮಹತ್ವ ಗಳಿಸಿದೆ.

ಈ ಹಿನ್ನೆಲೆಯಲ್ಲಿ 2022ರ ಡಿಸೆಂಬರ್‌ 1ರಿಂದ 2023ರ ನವೆಂಬರ್‌ 30 ತನಕ ಭಾರತದ ನಾನಾ ಸ್ಥಳಗಳಲ್ಲಿ 32 ವಲಯಗಳಿಗೆ ಸಂಬಂಧಿಸಿ 200 ಸಭೆಗಳು ನಡೆಯಲಿವೆ.

ಪ್ರಧಾನಿ ಮೋದಿ ಅವರು ಕಳೆದ ವಾರ 2023ರ ಜಿ20 ಶೃಂಗಸಭೆಯ ಲಾಂಛನವನ್ನು ಬಿಡುಗಡೆಗೊಳಿಸಿದ್ದರು. ಜಿ20 ಲೋಗೋ ಕೇವಲ ಲಾಂಛನವಲ್ಲ, ಇದು ಒಂದು ಭಾವನೆ. ಭಾರತದ ವಸುದೈವ ಕುಟುಂಬಕಂ ನೀತಿಯನ್ನು ಬಿಂಬಿಸಿದೆ. ಲಾಂಛನದಲ್ಲಿರುವ ತಾವರೆಯ ಚಿತ್ರವು ಭವಿಷ್ಯದ ಬಗ್ಗೆ ವಿಶ್ವಾಸದ ಪ್ರತೀಕ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಲೋಗೊದಲ್ಲಿ ತಾವರೆಯ ಮೇಲೆ ಭೂಮಿಯ ಚಿತ್ರವಿದ್ದು, ಕೇಸರಿ, ಬಿಳಿ, ಹಸಿರು, ನೀಲಿ ಬಣ್ಣವನ್ನು ಒಳಗೊಂಡಿದೆ. ಆಧ್ಯಾತ್ಮ, ಸಂಪತ್ತು ಮತ್ತು ಜ್ಞಾನವನ್ನು ಬಿಂಬಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂಡೊನೇಷ್ಯಾದ ಬಾಲಿಗೆ 2022ರ ನವೆಂಬರ್‌ 14ರಂದು ತೆರಳುತ್ತಿದ್ದಾರೆ. ನವೆಂಬರ್‌ 15-16ರಂದು ನಡೆಯಲಿರುವ ಎರಡು ದಿನಗಳ ಜಿ-20 ಶೃಂಗದಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟು 45 ಗಂಟೆಗಳ ಭೇಟಿಯಲ್ಲಿ ಸತತ 20 ಕಲಾಪಗಳು, ಹಲವಾರು ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ. ಇದು ಹದಿನೇಳನೇ ಆವೃತ್ತಿಯ ಶೃಂಗಸಭೆಯಾಗಿದೆ.

ಜಿ-20 ಶೃಂಗದ ಕಾರ್ಯಸೂಚಿ ಏನು?

ಆಹಾರ ಭದ್ರತೆ, ಡಿಜಿಟಲ್‌ ಪರಿವರ್ತನೆ ಮತ್ತು ಆರೋಗ್ಯ ಕ್ಷೇತ್ರದ ಸುಧಾರಣೆ ಈ ಸಲದ ಶೃಂಗದ ಮೂರು ಪ್ರಮುಖ ಕಾರ್ಯಸೂಚಿಯಾಗಿದೆ. ಈ ಬಗ್ಗೆ ಜಿ20 ಶೃಂಗದಲ್ಲಿ ಮಹತ್ವದ ಚರ್ಚೆ ನಡೆಯಲಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ.

ಮೋದಿ-ಬೈಡೆನ್‌ ಮಾತುಕತೆ? ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ನಡುವೆ ಶೃಂಗದಲ್ಲಿ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಬ್ರಿಟಿಷ್‌ ಪ್ರಧಾನಿ ರಿಷಿ ಸುನಕ್‌, ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯಲ್‌ ಮ್ಯಾಕ್ರೋನ್‌ ಮತ್ತು ಇತರ ನಾಯಕರೂ, ಭಾಗವಹಿಸುತ್ತಿದ್ದಾರೆ. ಜಾಗತಿಕ ಆರ್ಥಿಕತೆ, ಇಂಧನ, ಪರಿಸರ, ಕೃಷಿ ಬಗ್ಗೆಯೂ ಚರ್ಚೆಯಾಗಲಿದೆ. ಆರೋಗ್ಯ, ಕೋವಿಡೋತ್ತರ ಅವಧಿಯಲ್ಲಿ ಆರ್ಥಿಕ ಚೇತರಿಕೆ ಕುರಿತು ಪ್ರಧಾನಿ ಮೋದಿ ಮಾತನಾಡುವ ನಿರೀಕ್ಷೆ ಇದೆ.

ಏನಿದು ಜಿ20 ?

ಜಿ20 ಅಥವಾ ಗ್ರೂಪ್‌ ಆಫ್‌ ಟ್ವೆಂಟಿ ಎನ್ನುವುದು ವಿಶ್ವದ ಪ್ರಮುಖ ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಅಂತಾರಾಷ್ಟ್ರೀಯ ಒಕ್ಕೂಟ. ಇದರಲ್ಲಿ ಭಾರತ, ಆಸ್ಟ್ರೇಲಿಯಾ, ಅರ್ಜೆಂಟೀನಾ, ಬ್ರೆಜಿಲ್‌, ಕೆನಡಾ, ಚೀನಾ, ಫ್ರಾನ್ಸ್‌, ಜರ್ಮನಿ, ಇಂಡೊನೇಷ್ಯಾ, ಇಟಲಿ, ಜಪಾನ್‌, ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್‌, ಅಮೆರಿಕ ಮತ್ತು ಐರೋಪ್ಯ ಒಕ್ಕೂಟವಿದೆ. ಅಂದರೆ 19 ದೇಶಗಳು ಮತ್ತು ಐರೋಪ್ಯ ಒಕ್ಕೂಟವಿದೆ. ಭಾರತ ಇದರಲ್ಲಿ 1999ರಿಂದಲೇ ಸದಸ್ಯತ್ವ ಪಡೆದಿದೆ.

ಜಿ20 ಒಕ್ಕೂಟವು ಜಾಗತಿಕ ಜಿಡಿಪಿಯ 85% ಪಾಲನ್ನು ಪ್ರತಿನಿಧಿಸುತ್ತದೆ. ಅಂತಾರಾಷ್ಟ್ರೀಯ ಆರ್ಥಿಕ ಸಹಕಾರವನ್ನು ಇದು ಒಳಗೊಂಡಿದೆ. ಜಗತ್ತಿನ ಮೂರನೇ ಎರಡರಷ್ಟು ಜನಸಂಖ್ಯೆಯ ಪ್ರಾತಿನಿಧ್ಯವನ್ನು ಒಳಗೊಂಡಿದೆ. ಭೂಮಿಯ 60% ಪಾಲನ್ನು ಈ ರಾಷ್ಟ್ರಗಳು ಹೊಂದಿವೆ. ಉದ್ಯಮದಲ್ಲಿ ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಹೊಂದಿದೆ.

23 ವರ್ಷಗಳ ಹಿಂದೆ ಸ್ಥಾಪನೆ:

ಈ ಜಿ20 ವೇದಿಕೆಯನ್ನು 1999ರಲ್ಲಿ ಸ್ಥಾಪಿಸಲಾಗಿತ್ತು. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪರಿಹಾರೋಪಾಯಗಳ ಬಗ್ಗೆ ಜಾಗತಿಕ ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಬಗ್ಗೆ ಚರ್ಚಿಸಲು ವೇದಿಕೆಯ ಅನಿವಾರ್ಯತೆ ಉಂಟಾಗಿತ್ತು. ಒಕ್ಕೂಟದಲ್ಲಿನ ದೇಶಗಳ ಪ್ರಧಾನಿ, ವಿದೇಶಾಂಗ ಸಚಿವ, ಹಣಕಾಸು ಸಚಿವ ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಶೃಂಗದಲ್ಲಿ ಭಾಗವಹಿಸುತ್ತಾರೆ. ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ, ಶೃಂಗ ಸಮಾವೇಶ ನೆರವೇರುತ್ತದೆ. 2009ರ ಸಮಾವೇಶದಲ್ಲಿ ಆರ್ಥಿಕ ಮತ್ತು ಹಣಕಾಸು ಸಹಕಾರಕ್ಕೆ ಆದ್ಯತೆ ನೀಡಲಾಗಿತ್ತು. ಅಮೆರಿಕ, ಜಪಾನ್‌, ಫ್ರಾನ್ಸ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್‌ ಮೊದಲಾದ ದೇಶಗಳು ಅಧ್ಯಕ್ಷತೆ ವಹಿಸಿವೆ.

ಎರಡನೇ ಜಾಗತಿಕ ಯುದ್ಧದ ಬಳಿಕ, ಆರ್ಥಿಕ ಮತ್ತು ಇತರ ವಿಚಾರಗಳಲ್ಲಿ ಅಂತಾರಾಷ್ಟ್ರೀಯ ಸಹಕಾರಕ್ಕೆ ರಾಷ್ಟ್ರಗಳು ಒಕ್ಕೂಟಗಳನ್ನು ರಚಿಸಿದವು. ಈ ಸರಣಿಯಲ್ಲಿ ಜಿ20 ಕೂಡ ಒಂದಾಗಿದೆ. 90ರ ದಶಕದಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದ ಬಳಿಕ ಈ ಒಕ್ಕೂಟ ರಚನೆಯಾಯಿತು. ಮುಖ್ಯವಾಗಿ ಏಷ್ಯಾದ ರಾಷ್ಟ್ರಗಳು ಇದಕ್ಕಾಗಿ ಸೇರಿದವು.

ಭಾರತವು ಬಾಂಗ್ಲಾದೇಶ, ಈಜಿಪ್ತ್‌, ಮಾರಿಷಸ್‌, ನೆದರ್ಲೆಂಡ್ಸ್‌, ಒಮಾನ್‌, ಸಿಂಗಾಪುರ, ಯುಎಇಯನ್ನು 2023ರ ಜಿ20ರ ಶೃಂಗಕ್ಕೆ ಅತಿಥಿ ರಾಷ್ಟ್ರಗಳಾಗಿ ಆಹ್ವಾನಿಸಿದೆ. ಜಾಗತಿಕ ಮಟ್ಟದಲ್ಲಿ ಜಿ20 ತನ್ನ ಪ್ರಭಾವಳಿಯನ್ನು ವಿಸ್ತರಿಸಿದ್ದರೂ, ಇದರ ಕಾರ್ಯಸೂಚಿಗಳ ಅನುಷ್ಠಾನದಲ್ಲಿ ಕುಂದು ಕೊರತೆಗಳಿವೆ ಎನ್ನುತ್ತಾರೆ ತಜ್ಞರು.

ಭಾರತದ ಎದುರಿನ ಸವಾಲುಗಳೇನು?

ಜಿ20 ಒಕ್ಕೂಟದ ಆದ್ಯತೆಗಳು ಹಲವು. ಸಮಗ್ರತೆ, ಸಮಾನತೆ, ಸುಸ್ಥಿರ ಬೆಳವಣಿಗೆ, ಮಹಿಳಾ ಸಬಲೀಕರಣ, ಡಿಜಿಟಲ್‌ ಸಾರ್ವಜನಿಕ ಮೂಲಸೌಕರ್ಯ, ತಂತ್ರಜ್ಞಾನ ಆಧರಿತ ಅಭಿವೃದ್ಧಿ, ಹವಾಮಾನ ಬದಲಾವಣೆ, ಜಾಗತಿಕ ಆಹಾರ ಭದ್ರತೆ, ಇಂಧನ ಭದ್ರತೆ ಮತ್ತಿತರ ವಿಷಯಗಳು ಇದರಲ್ಲಿವೆ.

ರಷ್ಯಾ-ಉಕ್ರೇನ್‌ ಸಂಘರ್ಷ: ರಷ್ಯಾ-ಉಕ್ರೇನ್‌ ಸಂಘರ್ಷ ಕಳೆದ ಫೆಬ್ರವರಿಯಲ್ಲಿ ಆರಂಭವಾದ ಬಳಿಕ ಅದರ ದುಷ್ಪರಿಣಾಮ ಇಡೀ ಜಗತ್ತನ್ನು ಆವರಿಸಿದೆ. ಹೀಗಾಗಿ ಈ ಬಿಕ್ಕಟ್ಟನ್ನು ಉಪಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಜಿ20 ಶೃಂಗದ ನಾಯಕನಾಗಿ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ. ಭಾರತದ ನಿಲುವನ್ನು ಜಗತ್ತು ಎದುರು ನೋಡುತ್ತಿದೆ.

ವಿಶ್ವಾಸಾರ್ಹತೆ ವೃದ್ಧಿಸಬೇಕಿದೆ: ಕಳೆದ ಕೆಲ ತಿಂಗಳುಗಳಿಂದ ಜಿ20 ಒಕ್ಕೂಟದ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ. ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಭಿನ್ನಮತವನ್ನು ಉಪಶಮನಗೊಳಿಸಬೇಕಾದ ಜವಾಬ್ದಾರಿ ಭಾರತದ ಹೆಗಲ ಮೇಲೇರಲಿದೆ. ಈ ನಿಟ್ಟಿನಲ್ಲಿ ನವೀನ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ.

ಆಂತರಿಕ ಆಡಳಿತ ಸುಧಾರಣೆ: ಒಕ್ಕೂಟದ ಎಲ್ಲ ಸದಸ್ಯರೊಡನೆ ಐಕ್ಯತೆ, ಆಂತರಿಕ ಆಡಳಿತ ಸುಧಾರಣೆ, ಸಮಗ್ರತೆಗೆ ಭಾರತ ರಚನಾತ್ಮಕವಾಗಿ ಕಾರ್ಯಪ್ರವೃತ್ತವಾಗಬೇಕಾಗಿದೆ.

ಹವಾಮಾನ ಸಂರಕ್ಷಣೆಗೆ ಹಣಕಾಸು: ಅಭಿವೃದ್ಧಿ ಹೊಂದಿದ ದೇಶಗಳು ಸ್ವಚ್ಛ ಇಂಧನ ಮತ್ತು ನವೀಕರಿಸಬಹುದಾದ ಇಂಧನಗಳ ಕುರಿತ ತಂತ್ರಜ್ಞಾನವನ್ನು ಅಭಿವೃದ್ಧಿಶೀಲ ಮತ್ತು ಬಡ ದೇಶಗಳಿಗೆ ವರ್ಗಾಯಿಸಬೇಕು. ಭಾರತ ಸೌರಶಕ್ತಿಯ ಬಳಕೆಯಲ್ಲಿ ತನ್ನ ಸಾಧನೆಯನ್ನು ಪ್ರಸ್ತುತಪಡಿಸಬೇಕಾಗಿದೆ.

ಜಾಗತಿಕ ಆರ್ಥಿಕ ಬಿಕ್ಕಟ್ಟು: ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಅಸ್ಥಿರತೆ ಜಗತ್ತನ್ನು ಕಾಡುತ್ತಿದೆ. ಈ ಸನ್ನಿವೇಶವನ್ನು ಎದುರಿಸುವ ನಿಟ್ಟಿನಲ್ಲಿ ಭಾರತವು ಜಿ20 ಒಕ್ಕೂಟದ ನಾಯಕನಾಗಿ, ಐಎಂಎಫ್‌, ಡಬ್ಲ್ಯುಟಿಒ ಮತ್ತು ಒಇಸಿಡಿ ಜತೆಗೆ ಕಾರ್ಯನಿರ್ವಹಿಸಬೇಕಾಗುತ್ತದೆ.

ಆಹಾರ ಭದ್ರತೆಯ ಸವಾಲು: ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಆಹಾರ ಭದ್ರತೆಯ ಸವಾಲು ಎದುರಾಗಿದೆ. ರಷ್ಯಾ ಮತ್ತು ಉಕ್ರೇನ್‌ನಿಂದ ರಫ್ತಾಗುತ್ತಿದ್ದ ಆಹಾರ ಧಾನ್ಯಗಳಿಗೆ ಅಭಾವ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬೇಕದ ಕಾರ್ಯತಂತ್ರಗಳನ್ನು ಭಾರತ ಅಂತಿಮಪಡಿಸಬೇಕಾಗಿದೆ.

Exit mobile version