ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಕಪ್ ಗೆಲ್ಲುವ ಭಾರತ ತಂಡದ ಆಸೆ ಎರಡನೇ ಬಾರಿ ಕಮರಿದೆ. ಲಂಡನ್‌ನ ದಿ ಓವಲ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್ಗಳ ಸೋಲು ಅನುಭವಿಸಿದ ಭಾರತ ತಂಡ ನಿರಾಸೆ ಮೂಡಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ ತಂಡ ಚೊಚ್ಚಲ ಫೈನಲ್ ಪ್ರವೇಶದಲ್ಲಿಯೇ ಚಾಂಪಿಯನ್ ಪಟ್ಟ ಅಲಂಕರಿಸಿತು. ಮೂರು ವರ್ಷಗಳ ಅವಧಿಯಲ್ಲಿ ಆಸೀಸ್ ತಂಡಕ್ಕೆ ಇದು ಎರಡನೇ ಪ್ರಶಸ್ತಿ. 2021ರ ಟಿ20 ವಿಶ್ವ ಕಪ್ ಈ ತಂಡದ ಪಾಲಾಗಿತ್ತು. ವಿರಾಟ್ ಕೊಹ್ಲಿ ನೇತೃತ್ವದ ತಂಡ ಕಳೆದ ಬಾರಿಯೂ ಫೈನಲ್ಗೇರಿ ನ್ಯೂಜಿಲ್ಯಾಂಡ್ ವಿರುದ್ಧ ಸೋತಿದ್ದರೆ, ಹಾಲಿ ಆವೃತ್ತಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡ ಆಸ್ಟ್ರೇಲಿಯಾ ತಂಡಕ್ಕೆ ಮಣಿಯಿತು. ಎಲ್ಲಕ್ಕಿಂತ ಹೆಚ್ಚಾಗಿ, ಭಾರತದ ಐಸಿಸಿ ಟ್ರೋಫಿಗಳ ಬರ ಇನ್ನೂ ನೀಗಲಿಲ್ಲ ಎಂಬುದು ಭಾರತೀಯ ಅಭಿಮಾನಿಗಳಿಗೆ ಬೇಸರ ತಂದಿದೆ.
ಇಡೀ ಜಗತ್ತಿನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಅತ್ಯಂತ ಶ್ರೀಮಂತ ಕ್ರೀಡಾ ಮಂಡಳಿ ಎನಿಸಿಕೊಂಡಿದೆ. ಅದಕ್ಕೆ ತಕ್ಕಂತೆ ಭಾರತೀಯ ಕ್ರಿಕೆಟ್ ತಂಡ ಕೂಡ ಅಂತಾರಾಷ್ಟ್ರೀಯ ಮಟ್ಟವಾಗಿ ಅದೇ ಚಾರ್ಮ್ ಉಳಿಸಿಕೊಂಡಿದೆ. ಆದರೆ, ಐಸಿಸಿ ಟ್ರೋಫಿಗಳನ್ನು ಮಾತ್ರ ಗೆಲ್ಲುವಲ್ಲಿ ಹಿಂದೆ ಬೀಳುತ್ತಲೇ ಇದೆ. 1983ರಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ವರ್ಲ್ಡ್ ಕಪ್ ಗೆದ್ದ ಭಾರತವು, ಮತ್ತೆ ಅಂಥದ್ದೇ ಸಾಧನೆಯನ್ನು ಮಾಡಲು 2011ರವರೆಗೂ ಕಾಯಬೇಕಾಯಿತು! ಇದರ ನಡುವೆ ಚೊಚ್ಚಲ ಟಿ20 ಕ್ರಿಕೆಟ್ ವರ್ಲ್ಡ್ ಕಪ್ ಅನ್ನು ಭಾರತೀಯ ತಂಡವು 2007ರಲ್ಲಿ ತನ್ನ ಮುಡಿಗೇರಿಸಿಕೊಂಡಿತು. ಆ ಬಳಿಕ, ಮತ್ತೆ ಟಿ20 ಕಪ್ ಗೆಲ್ಲಲು ಈವರೆಗೂ ಸಾಧ್ಯವಾಗಿಲ್ಲ! ತೀರಾ ಇತ್ತೀಚಿಗೆ ಅಂದರೆ 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ತಂಡವು ಟ್ರೋಫಿ ಗೆದ್ದಿತ್ತು. ಆ ಬಳಿಕದಿಂದ ನಡೆದ ಹಲವಾರು ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲಲು ವಿಫಲಗೊಂಡಿತು. ಹೀಗಾಗಿ 10 ವರ್ಷವಾದರೂ ಭಾರತ ತಂಡದ ಐಸಿಸಿ ಟ್ರೋಫಿಯ ಬರ ನೀಗುತ್ತಲೇ ಇಲ್ಲ.
ಇದನ್ನೂ ಓದಿ: WTC Final 2023 : ಐಪಿಎಲ್ ಮುಗಿಸಿ ಓಡಿ ಬಂದು ಟೆಸ್ಟ್ ಚಾಂಪಿಯನ್ ಆಡಿದರೆ ಗೆಲ್ಲುವುದು ಹೇಗೆ? ಕೋಚ್ ಕಿಡಿ!
ದ್ವಿಪಕ್ಷೀಯ ಸರಣಿಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಭಾರತ ಕ್ರಿಕೆಟ್ ತಂಡವು, ಮಹತ್ವದ ಕ್ರೀಡಾಕೂಟಗಳಲ್ಲಿ ಅಂತಿಮ ಹಂತದವರೆಗೂ ಹೋಗಿ ವಿಫಲವಾಗುವುದನ್ನೇ ತನ್ನ ಚಾಳಿ ಮಾಡಿಕೊಂಡಿದೆ. ಭಾರತ ತಂಡದ ಈ ನಿರಂತರ ಸೋಲಿನ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆಟಗಾರರು ಐಪಿಎಲ್ ಮತ್ತು ದುಡ್ಡಿನಾಸೆಗೆ ಆಡುವ ಪ್ರವೃತ್ತಿ ಹೆಚ್ಚಾಗಿರುವ ಕಾರಣ ಐಸಿಸಿ ಟ್ರೋಫಿಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಎಲ್ಲಡೆ ಕೇಳಿಬರುತ್ತಿರುವ ಅಭಿಪ್ರಾಯವಾಗಿದೆ. ಆಸ್ಟ್ರೇಲಿಯಾದ ಆಟಗಾರರು ಟೆಸ್ಟ್ ಹಾಗೂ ಐಸಿಸಿ ಟೂರ್ನಿಗಳಿಗಾಗಿ ಐಪಿಎಲ್ ಆಡದಿರುವ ನಿರ್ಧಾರ ಕೈಗೊಂಡು ರಾಷ್ಟ್ರೀಯ ತಂಡದ ಬಗ್ಗೆ ಬದ್ಧತೆ ಪ್ರದರ್ಶಿಸುತ್ತಾರೆ. ಆದರೆ ಭಾರತ ತಂಡದ ಆಟಗಾರರು ಎರಡು ತಿಂಗಳ ಕಾಲ ಐಪಿಎಲ್‌ನಲ್ಲಿ ನಿರತವಾಗಿ, ಬೇಜವಾಬ್ದಾರಿ ತೋರುತ್ತಾರೆ ಎನ್ನುವುದು ಹಿರಿಯ ಕ್ರಿಕೆಟಿಗರ ಕಾಳಜಿಪೂರ್ವಕ ಆರೋಪವಾಗಿದೆ. ಇದನ್ನು ಅಲ್ಲಗಳೆಯಲಾಗದು.
ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳೆ ಇಂಥದ್ದೇ ಪರಿಸ್ಥಿತಿಯನ್ನು ಭಾರತೀಯ ತಂಡ ಎದುರಿಸಿದೆ. ಐಪಿಎಲ್‌ನಲ್ಲಿ ನಿರತವಾಗಿದ್ದ ಆಟಗಾರರು, ಮಹತ್ವದ ಪಂದ್ಯಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಲಿಲ್ಲ. ಅದರ ಪ್ರತಿಫಲವನ್ನು ನಾವು ಫಲಿತಾಂಶದಲ್ಲಿ ಕಂಡಿದ್ದೇವೆ. ಯಾವುದೇ ಒಂದು ಮಹತ್ವದ ಟೂರ್ನಿಗೆ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅಷ್ಟರ ಮಟ್ಟಿಗಿನ ಬದ್ಧತೆಯನ್ನು ರಾಷ್ಟ್ರೀಯ ತಂಡವೊಂದು ತೋರಿಸದೇ ಹೋದರೆ, ದೀರ್ಘಕಾಲದ ಬಳಿಕ ಅದರ ದುಷ್ಪರಿಣಾಮವನ್ನು ನಾವು ಕಾಣಬೇಕಾಗುತ್ತದೆ.
ಇದನ್ನೂ ಓದಿ: WTC Final 2023 : ಸೋಲಿನ ಕಾರಣಗಳನ್ನು ಬಿಡಿಸಿ ಹೇಳಿದ ನಾಯಕ ರೋಹಿತ್ ಶರ್ಮಾ
ಈಗಲೂ ಕಾಲ ಮಿಂಚಿಲ್ಲ. ಅಕ್ಟೋಬರ್‌ನಲ್ಲಿ 2023ರ ಏಕದಿನ ವಿಶ್ವ ಕಪ್ ಭಾರತದಲ್ಲೇ ನಡೆಯಲಿದೆ. ಅಂದರೆ, ಇನ್ನು ಕೇವಲ 5 ತಿಂಗಳು ಮಾತ್ರ ಬಾಕಿದೆ ಇದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಾದ ಸೋಲನ್ನು ಮರೆತು, ಒನ್ ಡೇ ಕ್ರಿಕೆಟ್ ವಿಶ್ವ ಕಪ್‌ಗೆ ಈಗಿನಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಗೆಲ್ಲುವ ತಂಡವನ್ನು ಸಿದ್ಧ ಮಾಡಬೇಕು. ಈ ವಿಷಯದಲ್ಲಿ ಬಿಸಿಸಿಐ, ಟೀಮ್ ಮ್ಯಾನೇಜ್ಮೆಂಟ್ ಹೆಚ್ಚು ಸ್ವಾತಂತ್ರ್ಯ ನೀಡುವುದು ಅತ್ಯಗತ್ಯವಾಗಿದೆ. ಪ್ರಸಕ್ತ ತಂಡದಲ್ಲಿ ಕೆಲವು ಹಿರಿ ಮತ್ತು ಕಿರಿ ಆಟಗಾರರು ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಅಂಥವರ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಮುಂಬರುವ ಒನ್ ಡೇ ಏಕದಿನ ವರ್ಲ್ಡ್ ಕಪ್‌ಗೆ ‘ಗೆಲ್ಲುವ ತಂಡ’ವನ್ನೇ ಆಯ್ಕೆ ಮಾಡಬೇಕು. ಇಲ್ಲದೇ ಹೋದರೆ, ಭಾರತೀಯ ಅಭಿಮಾನಿಗಳು ಮತ್ತೊಂದು ದೊಡ್ಡ ನಿರಾಸೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗದಿರಲಿ ಎಂಬುದು ಭಾರತೀಯರ ಆಶಯ.