ನವದೆಹಲಿ: ಅರಬ್ಬೀ ಸಮುದ್ರದಲ್ಲಿ ಸೊಮಾಲಿಯಾ ಕಡಲ್ಗಳ್ಳರ (Somalia Pirates) ಹಾವಳಿ ಜಾಸ್ತಿಯಾಗಿದ್ದು, ಇವರಿಗೆ ಭಾರತೀಯ ನೌಕಾಪಡೆಯು ತಿರುಗೇಟು ನೀಡುತ್ತಿದೆ. ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನದ 19 ನಾಗರಿಕರಿದ್ದ ಹಡಗನ್ನು ಅಪಹರಿಸಿದ್ದ ಸೊಮಾಲಿಯಾ ಕಡಲ್ಗಳ್ಳರಿಗೆ ಭಾರತದ ನೌಕಾಪಡೆಯು ತಕ್ಕ ಶಾಸ್ತಿ ಮಾಡಿದೆ. ಭಾರತೀಯ ನೌಕಾಪಡೆಯ (Indian Navy) ಐಎನ್‌ಎಸ್ ಸುಮಿತ್ರ (INS Sumitra) ಸಮರನೌಕೆಯು ಪಾಕಿಸ್ತಾನದ ಹಡಗು, 19 ನಾಗರಿಕರನ್ನು ರಕ್ಷಿಸಿದೆ. ನೌಕಾಪಡೆಯ ಸಿಬ್ಬಂದಿಯು 11 ಕಡಲ್ಗಳ್ಳರನ್ನು ಬಂಧಿಸಿದ್ದಾರೆ.
“ಐಎನ್‌ಎಸ್ ಸುಮಿತ್ರ ಸಮರನೌಕೆಯು ಎರಡನೇ ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಂಡಿದೆ. ಸೋಮಾಲಿ ಕಡಲ್ಗಳ್ಳರಿಂದ ನೌಕೆ ಹಾಗೂ 19 ಜನರನ್ನು ರಕ್ಷಿಸಲಾಗಿದೆ. ಪಾಕಿಸ್ತಾನದ ಮೀನುಗಾರಿಕಾ ನೌಕೆಯಾದ ಅಲ್ ನಯೀಮಿಯನ್ನು ಸೊಮಾಲಿಯಾದ ಉತ್ತರ ಕರಾವಳಿಯಲ್ಲಿ ಕಡಲ್ಗಳ್ಳರು ಅಪಹರಿಸಿದ್ದರು. ಐಎನ್‌ಎಸ್ ಸುಮಿತ್ರ ಯುದ್ಧನೌಕೆಯ ಮೂಲಕ ಕಡಲ್ಗಳ್ಳರಿಂದ 19 ಜನರನ್ನು ರಕ್ಷಿಸಲಾಗಿದೆ. ಹಾಗೆಯೇ, ಕಡಲ್ಗಳ್ಳರನ್ನು ವಶಕ್ಕೆ ಪಡೆಯಲಾಗಿದೆ” ಎಂದು ಭಾರತದ ನೌಕಾಪಡೆಯು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
#INSSumitra Carries out 2nd Successful #AntiPiracy Ops – Rescuing 19 Crew members & Vessel from Somali Pirates.
— SpokespersonNavy (@indiannavy) January 30, 2024
Having thwarted the Piracy attempt on FV Iman, the warship has carried out another successful anti-piracy ops off the East Coast of Somalia, rescuing Fishing Vessel Al… https://t.co/QZz9bCihaU pic.twitter.com/6AonHw51KX
ವಾರದಲ್ಲಿ 2ನೇ ಕಾರ್ಯಾಚರಣೆ
ಭಾರತದ ನೌಕಾಪಡೆಯು ಅರಬ್ಬೀ ಸಮುದ್ರದಲ್ಲಿ ನಾಗರಿಕರು ಹಾಗೂ ಹಡಗು ರಕ್ಷಣೆಗೆ ಕೈಗೊಳ್ಳುತ್ತಿರುವ ಎರಡನೇ ಯಶಸ್ವಿ ರಕ್ಷಣಾ ಕಾರ್ಯಾಚರಣೆ ಇದಾಗಿದೆ. ಕಳೆದ ಭಾನುವಾರ (ಜನವರಿ 28) ಇರಾನ್ ಮೂಲದ ಹಡಗು ಹಾಗೂ ಹಡಗಿನಲ್ಲಿದ್ದ 17 ಜನರನ್ನು ರಕ್ಷಿಸಲಾಗಿತ್ತು. ಐಎನ್‌ಎಸ್ ಸುಮಿತ್ರ ಯುದ್ಧ ನೌಕೆ ಮೂಲಕವೇ ಕಾರ್ಯಾಚರಣೆ ಕೈಗೊಂಡು ಕಡಲ್ಗಳ್ಳರಿಂದ ರಕ್ಷಣೆ ಮಾಡಲಾಗಿತ್ತು. ಈಗ ಮತ್ತೊಂದು ಹಡಗು ರಕ್ಷಣೆ ಮಾಡಿರುವ ಕುರಿತು ಮಂಗಳವಾರ (ಜನವರಿ 30) ನೌಕಾಪಡೆಯು ಮಾಹಿತಿ ನೀಡಿದೆ. ಫೋಟೊಗಳನ್ನು ಕೂಡ ಹಂಚಿಕೊಂಡಿದೆ.
ಇದನ್ನೂ ಓದಿ: Houthi Attack: 22 ಭಾರತೀಯರಿದ್ದ ತೈಲ ಟ್ಯಾಂಕರ್ ಮೇಲೆ ಹೌತಿ ಉಗ್ರರ ದಾಳಿ; ರಕ್ಷಣೆಗೆ ಹರಸಾಹಸ
ಸಾಗರ ಪ್ರದೇಶದಲ್ಲಿ ಇತ್ತೀಚೆಗೆ ಸೊಮಾಲಿಯಾ ಕಡಲ್ಗಳ್ಳರು, ಇರಾನ್ ಬೆಂಬಲಿತ ಹೌತಿ ಉಗ್ರರ ಉಪಟಳ ಜಾಸ್ತಿಯಾಗಿದೆ. ಅದರಲ್ಲೂ, ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರು ದಾಳಿ ನಡೆಸಿದ ಬಳಿಕ ಗಾಜಾ ನಗರದ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಿದೆ. ಇಸ್ರೇಲ್ ದಾಳಿಗೆ ಗಾಜಾ ನಗರವೇ ತತ್ತರಿಸಿಹೋಗಿದೆ. ಇಸ್ರೇಲ್ ದಾಳಿಯು ಹಲವು ಇಸ್ಲಾಮಿಕ್ ರಾಷ್ಟ್ರಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಹಾಗಾಗಿ, ಇರಾಕ್ ಬೆಂಬಲಿತ ಹೌತಿ ಉಗ್ರರು ಕೆಂಪು ಸಮುದ್ರದಲ್ಲಿ ನೌಕೆಗಳ ಅಪಹರಣ, ದಾಳಿ ನಡೆಸುತ್ತಿದ್ದಾರೆ. ಆದರೂ, ಭಾರತದ ನೌಕಾಪಡೆಯು ಉಗ್ರರು, ಕಡಲ್ಗಳ್ಳರಿಗೆ ಸರಿಯಾದ ತಿರುಗೇಟು ನೀಡಿ, ಹಡಗು, ನಾಗರಿಕರನ್ನು ರಕ್ಷಿಸುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ