Site icon Vistara News

Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

India Economy

ಬೆಂಗಳೂರು: ಐಎಂಎಫ್​​ನ ಏಷ್ಯಾ ಮತ್ತು ಪೆಸಿಫಿಕ್ (ಎಪಿಎಸಿ) ಇಲಾಖೆಯ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಅವರ ಪ್ರಕಾರ, ಭಾರತದ ಆರ್ಥಿಕತೆ (Indian Economy) ಚೀನಾವನ್ನು ಹಿಂದಿಕ್ಕಿ ವೇಗವಾಗಿ ಬೆಳೆಯುತ್ತಿದ್ದು, ಗಾತ್ರದಲ್ಲಿ ಭಾರತದ ಆರ್ಥಿಕತೆ ಚಿಕ್ಕದಾಗಿದ್ದರೂ ಸಾಗುತ್ತಿರುವ ವೇಗ ಹೆಚ್ಚಿದೆ ಎಂಬುದಾಗಿ ವಿವರಿಸಿದ್ದಾರೆ. ಜತೆಗೆ ಇದು ನಿರೀಕ್ಷಿತ ಹಾಗೂ ಅಚ್ಚರಿಯ ಸಂಗತಿಯೇನೂ ಅಲ್ಲ ಎಂದು ಹೇಳಿದ್ದಾರೆ.

“ಚೀನಾದ ಆರ್ಥಿಕತೆಯ ಗಾತ್ರ ಭಾರತಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ಆದರೆ ಭಾರತವು ಇಂದು ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದ್ದರೆ. ಇದು ಆಶ್ಚರ್ಯಕರವಲ್ಲ” ಎಂದು ಶ್ರೀನಿವಾಸನ್ ಎಎನ್ಐ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಕೃಷ್ಣ ಶ್ರೀನಿವಾಸನ್ ಅವರು ಭಾರತದ ಆರ್ಥಿಕ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದು, 2024-25ರ ಹಣಕಾಸು ವರ್ಷದಲ್ಲಿ ಭಾರತದ ಯೋಜಿತ ಬೆಳವಣಿಗೆಯ ದರ 6.8% ಎಂದು ನಿರೀಕ್ಷೆ ಮಾಡಿದ್ದಾರೆ.

ಇದನ್ನೂ ಓದಿ: China Missile : ಪಾಕಿಸ್ತಾನಕ್ಕೆ ಗುಟ್ಟಾಗಿ ಕ್ಷಿಪಣಿ ಕಳುಹಿಸಿದ ಚೀನಾದ ಎರಡು ಕಂಪನಿಗಳಿಗೆ ಅಮೆರಿಕದ ನಿರ್ಬಂಧ

ಕೋವಿಡ್ -19 ಸಾಂಕ್ರಾಮಿಕ ರೋಗ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಲ್ಫ್ ಪ್ರದೇಶದಲ್ಲಿ ಇತ್ತೀಚಿನ ಉದ್ವಿಗ್ನತೆ ಸೇರಿದಂತೆ ಅನೇಕ ಆಘಾತಗಳನ್ನು ಪರಿಹರಿಸು ಭಾರತದ ಸಾಮರ್ಥ್ಯದ ಬಗ್ಗೆ ಮಾತನಾಡಿದ ಶ್ರೀನಿವಾಸನ್, ದೇಶದ ಸ್ಥಿತಿಸ್ಥಾಪಕತ್ವವನ್ನು ಶ್ಲಾಘಿಸಿದರು. “ಇತ್ತೀಚಿನ ದಿನಗಳಲ್ಲಿ ನಾವು ನೋಡಿದ ಅನೇಕ ಆಘಾತಗಳನ್ನು ಭಾರತವು ಯಶಸ್ವಿಯಾಗಿ ನಿಭಾಯಿಸಿದೆ” ಎಂದು ಅವರು ಎಎನ್ಐಗೆ ತಿಳಿಸಿದರು.

ಭಾರತದ ಪ್ರಭಾವಶಾಲಿ ಬೆಳವಣಿಗೆಗೆ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆ ಕಾರಣ ಎಂದು ಶ್ರೀನಿವಾಸನ್ ಹೇಳಿದರು, “ನಾನು ಮುಂದಿನ ದಿನಗಳಲ್ಲಿ ಯಾವುದೇ ಅಡೆತಡೆಗಳನ್ನು ನೋಡುವುದಿಲ್ಲ” ಎಂಬುದಾಗಿಯೂ ಹೇಳಿದರು. ಆದಾಗ್ಯೂ, ಭಾರತದ ವಿಸ್ತರಿಸುತ್ತಿರುವ ಕಾರ್ಮಿಕ ಶಕ್ತಿಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಗಮನಾರ್ಹ ಸುಧಾರಣೆಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಕಾರ್ಮಿಕ ಶಕ್ತಿಯ ಬಳಕೆ ಅಗತ್ಯ

“ಭಾರತವು ಯುವ, ಬೆಳೆಯುತ್ತಿರುವ ಜನಸಂಖ್ಯೆಯನ್ನು ಹೊಂದಿದೆ. ಇದು ಪ್ರತಿವರ್ಷ ಸುಮಾರು 15 ಮಿಲಿಯನ್ ಜನರನ್ನು ಕಾರ್ಮಿಕ ಬಲಕ್ಕೆ ಸೇರಿಸುವ ನಿರೀಕ್ಷೆಯಿದೆ” ಎಂದು ಶ್ರೀನಿವಾಸನ್ ಗಮನಸೆಳೆದರು. “ಈ ಜನಸಂಖ್ಯಾ ಅನುಕೂಲವನ್ನು ಬಳಸಿಕೊಳ್ಳಲು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಗಣನೀಯ ಹೂಡಿಕೆಗಳು ನಿರ್ಣಾಯಕ. ಇದರಿಂದಾಗಿ ಬೆಳೆಯುತ್ತಿರುವ ಕಾರ್ಮಿಕ ಶಕ್ತಿಯು ಆರ್ಥಿಕತೆಗೆ ನೆರವು ನೀಡಬಹುದು ಎಂದು ಹೇಳಿದ್ದಾರೆ.

ಸುಮಾರು 6.5% ಬೆಳವಣಿಗೆಯ ದರದೊಂದಿಗೆ ಭಾರತದ ಮಧ್ಯಮಾವಧಿಯ ನಿರೀಕ್ಷೆಗಳ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಶ್ರೀನಿವಾಸನ್, ಹಲವು ಸುಧಾರಣೆಗಳ ಮಹತ್ವವನ್ನು ಒತ್ತಿ ಹೇಳಿದರು. ಸಮಗ್ರ ಸುಧಾರಣೆಗಳನ್ನು ಶ್ರದ್ಧೆಯಿಂದ ಜಾರಿಗೆ ತಂದರೆ ಮುಂದಿನ ಹಲವಾರು ವರ್ಷಗಳಲ್ಲಿ ಭಾರತವು 6.5% ಅಥವಾ ಅದಕ್ಕಿಂತ ಹೆಚ್ಚಿನ ಬೆಳವಣಿಗೆಯ ದರ ಸಾಧಿಸಬಹುದು ಎಂದು ಹೇಳಿದ್ದಾರೆ.

Exit mobile version