Site icon Vistara News

ವಿಸ್ತಾರ ಸಂಪಾದಕೀಯ: ಶಾಂಘೈ ಸಹಕಾರ ಒಕ್ಕೂಟದ ಸಭೆ ಮೂಲಕ ಭಾರತದ ವರ್ಚಸ್ಸು ಮತ್ತಷ್ಟು ವೃದ್ಧಿ

Narendra Modi

LPG Price Slashed Now, Next Petrol Price Cut? What Is Centre's Plan For Lok Sabha Election 2024

ಶಾಂಘೈ ಸಹಕಾರ ಒಕ್ಕೂಟದ (SCO Summit) ಈ ಬಾರಿಯ ಶೃಂಗದ ಆತಿಥ್ಯವನ್ನು ಭಾರತ ವಹಿಸಿದ್ದು, ಇದು ಯಶಸ್ವಿಯಾಗಿ ನೆರವೇರಿದೆ. ಮಂಗಳವಾರ ಎಸ್​ಇಒ ಒಕ್ಕೂಟದ ದೇಶಗಳ ನಾಯಕರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್, ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್​, ಪಾಕಿಸ್ತಾನ ಪ್ರಧಾನಿ ಶೆಹಬಾಜ್​ ಷರೀಫ್​, ತಜಕಿಸ್ತಾನ್, ಉಜ್ಬೇಕಿಸ್ತಾನ್​, ಕಜಾಕಿಸ್ತಾನ್​, ಕಿರ್ಗಿಸ್ತಾನ್ ದೇಶಗಳ ಅಧ್ಯಕ್ಷರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಭಯೋತ್ಪಾದನೆಯ ಬಗ್ಗೆ, ಅದನ್ನು ಪ್ರಾಯೋಜಿಸುತ್ತಿರುವ ದೇಶಗಳ ಬಗ್ಗೆ, ಅಂದರೆ ಪಾಕಿಸ್ತಾನ ಹಾಗೂ ಚೀನಾದ ಬಗ್ಗೆ ಪ್ರಧಾನಿ ಕಟುವಾಗಿ ಮಾತನಾಡಿದ್ದು, ಈ ಬಗ್ಗೆ ದೇಶದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್​ ಷರೀಫ್ ಎದುರೇ ಆ ದೇಶವನ್ನು ʼಭಯೋತ್ಪಾದಕರ ಸ್ವರ್ಗʼ ಎಂದು ಕರೆದಿರುವ ಪ್ರಧಾನಿ ಮೋದಿ, ‘ಭಯೋತ್ಪಾದನೆಯು ಜಾಗತಿಕ ಮತ್ತು ಪ್ರಾದೇಶಿಕ ಶಾಂತಿಗೆ ಗಂಭೀರ ಸ್ವರೂಪದ ಅಪಾಯ ತಂದೊಡ್ಡಿದೆ. ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ಉಪಕರಣವನ್ನಾಗಿ ಬಳಸಿಕೊಳ್ಳುತ್ತಿವೆ. ಎಸ್​ಸಿಒ ಒಕ್ಕೂಟದ ದೇಶಗಳು ಇದನ್ನು ಉಗ್ರವಾಗಿ ಖಂಡಿಸಬೇಕು. ಭಯೋತ್ಪಾದನೆ ವಿಚಾರದಲ್ಲಿ ಯಾರೂ ಇಬ್ಬಗೆಯ ನೀತಿ ಅನುಸರಿಸಬಾರದು’ ಎಂದಿದ್ದಾರೆ. ಜೊತೆಗೆ, ಶಾಂಘೈ ಒಕ್ಕೂಟದ ದೇಶಗಳು ಒಂದೇ ಕುಟುಂಬದಂತೆ ಇರಬೇಕು. ಭದ್ರತೆ, ಆರ್ಥಿಕ ಅಭಿವೃದ್ಧಿ, ಸಂಪರ್ಕ, ಒಗ್ಗಟ್ಟು, ಪರಸ್ಪರ ರಾಷ್ಟ್ರಗಳ ಸಾರ್ವಭೌಮತ್ವದೆಡೆಗೆ ಗೌರವ, ಪ್ರಾದೇಶಿಕ ಸಮಗ್ರತೆ, ಪರಿಸರ ರಕ್ಷಣೆ ಎಸ್​ಸಿಒದ ಆಧಾರ ಸ್ತಂಭಗಳಾಗಬೇಕು ಎಂಬ ಕಿವಿಮಾತನ್ನೂ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೂ, ಶೃಂಗದ ಆತಿಥ್ಯ ವಹಿಸಿರುವ ಭಾರತದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಭಾರತದ ನೇತೃತ್ವದಲ್ಲಿ ಎಸ್‌ಸಿಒ ಶೃಂಗವು ತೆಗೆದುಕೊಂಡಿರುವ ನಿರ್ಣಯಗಳನ್ನು ರಷ್ಯಾ ಸ್ವಾಗತಿಸಿದೆ. ಇದು ಭಾರತದೊಂದಿಗಿನ ರಷ್ಯಾದ ಬಾಂಧವ್ಯವನ್ನು ವೃದ್ಧಿಸಲಿದೆ ಎಂದೂ ಪುಟಿನ್‌ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಇರಾನ್‌ ದೇಶವನ್ನು ಕೂಡ ಎಸ್‌ಸಿಒಗೆ ಸೇರಿಸಿಕೊಳ್ಳಲಾಗಿದೆ.

ಎಸ್‌ಸಿಒ ಶೃಂಗ ಯಾಕೆ ಮಹತ್ವದ್ದಾಗಿವೆ ಎಂದರೆ, ಈ ಸಂಘಟನೆ ನೆರೆಕೆರೆಯ ದೇಶಗಳ ಒಕ್ಕೂಟವಾಗಿದೆ. ಅಮೆರಿಕದಂಥ ಬಲಿಷ್ಠ ರಾಷ್ಟ್ರದ ನಿಕಟ ಸ್ನೇಹ ಭಾರತಕ್ಕೆ ಇದ್ದರೂ, ವ್ಯಾಪಾರ- ವ್ಯವಹಾರಗಳಲ್ಲಿ ನೆರೆಹೊರೆಯ ದೇಶಗಳು ನಮಗೆ ಅತ್ಯಗತ್ಯವೇ ಆಗಿವೆ. ಇವುಗಳನ್ನು ಹೊರತುಪಡಿಸಿ ಯಾವ ವಾಣಿಜ್ಯ ವ್ಯವಹಾರವೂ ನಡೆಯುವುದಿಲ್ಲ. ಅದಕ್ಕಾಗಿಯೇ, ನ್ಯಾಟೊ ದೇಶಗಳು ರಷ್ಯಾಗೆ ನಿರ್ಬಂಧ ವಿಧಿಸಿದ್ದರೂ ಭಾರತ ರಷ್ಯಾದ ಜೊತೆಗೆ ವಾಣಿಜ್ಯ ವಹಿವಾಟು ನಡೆಸುತ್ತಿದೆ. ಯಾವ ದೇಶವೂ ಈ ಆಧುನಿಕ ಜಗತ್ತಿನಲ್ಲಿ ದ್ವೀಪವಾಗಿರಲು ಸಾಧ್ಯವಿಲ್ಲ. ಹೀಗಾಗಿ ರಷ್ಯಾ, ಚೀನಾ, ಇರಾನ್‌ ಜತೆಗಿನ ವಾಣಿಜ್ಯ ವಹಿವಾಟು ಕೂಡ ನಮಗೆ ಮುಖ್ಯವಾಗಿದೆ. ಇಂಥ ಮಹತ್ವದ ಶೃಂಗಸಭೆಯನ್ನು ಸಂಘಟಿಸುವ ಮೂಲಕ ಭಾರತ ತನ್ನ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮಹಾರಾಷ್ಟ್ರದ ರಾಜಕೀಯ ನಾಟಕ; ಅನುಕೂಲಸಿಂಧು ರಾಜಕಾರಣ

ಇನ್ನು ಭಯೋತ್ಪಾದನೆಯ ಬಗ್ಗೆ ಸರಿಯಾದ ಮಾತುಗಳನ್ನು, ಸರಿಯಾದ ಸಮಯದಲ್ಲಿ, ಸರಿಯಾದ ವೇದಿಕೆಯ ಮೇಲೆ ಮೋದಿಯವರು ಆಡಿದ್ದಾರೆ. ಆಂತರಿಕವಾಗಿ ಉಗ್ರರನ್ನು ತಯಾರು ಮಾಡಿ ಭಾರತದ ಮೇಲೆ ಛೂಬಿಡುತ್ತ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮುಗ್ಧನ ಪೋಸು ಕೊಡುವ ಪಾಕಿಸ್ತಾನದ ಕಪಟ ಎಲ್ಲರಿಗೂ ಸರಿಯಾಗಿ ಅರ್ಥವಾಗಬೇಕಿದೆ. ಹಾಗೆಯೇ ಪಾಕ್‌ ಮೂಲಕ ಭಯೋತ್ಪಾದನೆಗೆ ಸಹಾಯ ಹಸ್ತ ಚಾಚುತ್ತಿರುವ ಚೀನಾದ ಗೋಮುಖವ್ಯಾಘ್ರ ಬುದ್ಧಿ ಕೂಡ ಬಯಲಾಗಬೇಕಿದೆ. ಅದಕ್ಕಾಗಿ ಆಡಿದ ಮಾತುಗಳನ್ನೇ ಆದರೂ ಆಗಾಗ ಪುನರುಚ್ಚರಿಸುವ ಅಗತ್ಯವಿರುತ್ತದೆ. ವಿಶ್ವಸಂಸ್ಥೆಯಲ್ಲಿ ಕೂಡ ನಮ್ಮ ವಿದೇಶಾಂಗ ಸಚಿವರು, ಮೋದಿಯವರು ಪಾಕಿಸ್ತಾನ, ಚೀನಾದ ಮೇಲೆ ಕಟುವಾಗಿ ಮಾತಿನ ದಾಳಿ ನಡೆಸಿದ್ದಾರೆ. ಆದರೆ ಆ ದೇಶಗಳು ತಿದ್ದಿಕೊಳ್ಳುತ್ತಿಲ್ಲ ಎಂಬುದೇ ದುರಂತ. ಭಾರತದ ಈ ಒತ್ತಡದಿಂದ ಸೃಷ್ಟಿಯಾಗುವ ಅಂತಾರಾಷ್ಟ್ರೀಯ ಒತ್ತಡವು ಪಾಕ್‌ ಭಯೋತ್ಪಾದನೆಯಿಂದ ವಿಮುಖಗೊಳ್ಳಲು, ಚೀನಾದ ಕಪಟ ಕಡಿಮೆಯಾಗಲು ಕಾರಣವಾಗಲಿ ಎಂದು ನಾವು ಹಾರೈಸಬಹುದು.

Exit mobile version