ನಾನಾ ಕಾರಣಗಳಿಂದ ದವಸ ಧಾನ್ಯ, ತರಕಾರಿಗಳ ದರ ಏರಿಕೆಯಾಗಿ ದೇಶದ ಎಲ್ಲ ವರ್ಗದ ಜನ ಹಣದುಬ್ಬರದ ಪ್ರಹಾರ ಎದುರಿಸುವಂತಾಗಿದೆ. ಭಾರತೀಯ ಚಿಲ್ಲರೆ ಹಣದುಬ್ಬರವು (Retail Inflation) ಜುಲೈನಲ್ಲಿ ಶೇ.7.44ಕ್ಕೆ ನೆಗೆದಿತ್ತು. ಅಂಕಿ ಸಂಖ್ಯೆ ಗಮನಿಸಿದರೆ ಇದು ಕಳೆದ 15 ತಿಂಗಳಲ್ಲೇ ಗರಿಷ್ಠ ಮಟ್ಟದ ಏರಿಕೆ ಎನ್ನುವುದು ಸ್ಪಷ್ಟವಾಗಿತ್ತು. ಚಿಲ್ಲರೆ ಹಣದುಬ್ಬರವು ಜೂನ್‌ನಲ್ಲಿ ಶೇ.4.81 ಇತ್ತು ಎನ್ನುವುದು ಗಮನಾರ್ಹ.
ಟೊಮೆಟೊ ದರ 180 ರೂ.ವರೆಗೆ ಏರಿ ಜನಸಾಮಾನ್ಯರು ಕಂಗೆಟ್ಟಿದ್ದರು. ನೇಪಾಳದಿಂದ ಹೆಚ್ಚುವರಿಯಾಗಿ ಟೊಮೆಟೊಗಳನ್ನು ತರುವ ಮೂಲಕ ಕೇಂದ್ರ ಸರ್ಕಾರ ಇದರ ದರ ಇಳಿಸಲು ಯಶಸ್ವಿಯಾಗಿದೆ. ಇದೀಗ ಟೊಮೆಟೊ ದರವನ್ನೂ ಮೀರಿಸಿ ಈರುಳ್ಳಿ ಬೆಲೆ ದಾಪುಗಾಲು ಹಾಕುತ್ತಿದೆ. ಅಡುಗೆ ಮನೆಯಲ್ಲಿ ಈರುಳ್ಳಿಯ ಪಾತ್ರ ಟೊಮೆಟೊಗಿಂತ ಹೆಚ್ಚಿದೆ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕಿದೆ. ಈರುಳ್ಳಿ ದರ ಏರಿಕೆಯಾದರೆ ರಾಜಕೀಯ ವಲಯದಲ್ಲೂ ಅಲ್ಲೋಲಕಲ್ಲೋಲ ಸೃಷ್ಟಿಯಾಗುತ್ತದೆ ಎನ್ನುವುದನ್ನು ನಾವು ಈ ಹಿಂದೆ ನೋಡಿದ್ದೇವೆ. ಈರುಳ್ಳಿಗೆ ಒಂದು ಸರ್ಕಾರವನ್ನೇ ಉರುಳಿಸುವಷ್ಟು ಪವರ್ ಇದೆ!
ಈರುಳ್ಳಿ ರಫ್ತಿನ ಮೇಲೆ ಶೇ. 40ರಷ್ಟು ಸುಂಕ ವಿಧಿಸುವ ಮೂಲಕ ಕೇಂದ್ರ ಸರ್ಕಾರವು ದೇಶದಲ್ಲಿ ಬೆಳೆಯುವ ಈರುಳ್ಳಿ ವಿದೇಶಕ್ಕೆ ಹೋಗದಂತೆ, ಈ ಮೂಲಕ ಬೆಲೆ ಏರಿಕೆಗೆ ಕಡಿವಾಣ ಬೀಳುವಂತೆ ಕ್ರಮ ಕೈಗೊಂಡಿದೆ. ಡಿಸೆಂಬರ್ 31ರವರೆಗೂ ಇದು ಮುಂದುವರಿಯಲಿದೆ. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ತುರ್ತು ಸಂಗ್ರಹದ ಪ್ರಮಾಣವನ್ನೂ ಏರಿಸಲು ನಿರ್ಧರಿಸಿದೆ. 3 ಲಕ್ಷ ಟನ್ ಆರಂಭಿಕ ಖರೀದಿ ಗುರಿಯನ್ನು ಸಾಧಿಸಲಾಗಿದ್ದು, ಅದರ ಪ್ರಮಾಣವನ್ನು 5 ಲಕ್ಷ ಟನ್ಗೆ ಏರಿಸಲಾಗಿದೆ. ಈ ನಿಟ್ಟಿನಲ್ಲಿ, ಗ್ರಾಹಕ ವ್ಯವಹಾರಗಳ ಇಲಾಖೆ ಎನ್ಸಿಎಫ್ (NCFC) ಮತ್ತು ನಾಫೆಡ್ಗೆ (NAFED) ಹೆಚ್ಚುವರಿ ಖರೀದಿ ಗುರಿಯನ್ನು ಸಾಧಿಸಲು ತಲಾ 1 ಲಕ್ಷ ಟನ್ ಸಂಗ್ರಹಿಸಲು ನಿರ್ದೇಶನ ನೀಡಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಮುಖ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ತುರ್ತು ಸಂಗ್ರಹದಿಂದ ಈರುಳ್ಳಿಯನ್ನು ವಿಲೇವಾರಿ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸಂಗ್ರಹದಿಂದ 1,400 ಮೆಟ್ರಿಕ್ ಟನ್ ಈರುಳ್ಳಿಯನ್ನು ಉದ್ದೇಶಿತ ಮಾರುಕಟ್ಟೆಗಳಿಗೆ ರವಾನಿಸಲಾಗಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುವುದರ ಹೊರತಾಗಿಯೂ ಈರುಳ್ಳಿಯನ್ನು ಆಗಸ್ಟ್ 21ರಿಂದ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಎನ್ಸಿಎಫ್ ಮೊಬೈಲ್ ವ್ಯಾನ್ಗಳ ಮೂಲಕ ಗ್ರಾಹಕರಿಗೆ ಪ್ರತಿ ಕೆ.ಜಿ.ಗೆ 25 ರೂ.ಗಳ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇತರ ಏಜೆನ್ಸಿಗಳು ಮತ್ತು ಇ-ಕಾಮರ್ಸ್ ಫ್ಲ್ಯಾಟ್ಫಾರ್ಮ್ಗಳನ್ನು ಸೇರಿದಂತೆ ಮುಂಬರುವ ದಿನಗಳಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟವನ್ನು ಹೆಚ್ಚಿಸಲು ಸರಕಾರ ನಿರ್ಧರಿಸಿದೆ. ಟೊಮೆಟೊ, ಈರುಳ್ಳಿಯ ನಂತರ ಮುಂದೆ ಆಲೂಗಡ್ಡೆಯ ದರಕ್ಕೆ ಕಡಿವಾಣ ಹಾಕುವ ಸವಾಲು ಸರ್ಕಾರಗಳಿಗೆ ಎದುರಾಗಲಿದೆ!
ನಮ್ಮಲ್ಲಿ ಎಲ್ಲಿಯವರೆಗೆ ಸುಸಜ್ಜಿತ ದಾಸ್ತಾನು ವ್ಯವಸ್ಥೆ ಇರುವುದಿಲ್ಲವೋ ಅಲ್ಲಿಯವರೆಗೆ ಈ ದರ ಏರಿಳಿತ, ಉತ್ಪಾದನೆಯ ಕೊರತೆ ಸಮಸ್ಯೆ ಪ್ರತಿ ವರ್ಷ ಕಾಡುತ್ತಲೇ ಇರುತ್ತದೆ. ವ್ಯವಸ್ಥಿತವಾದ ವೈಜ್ಞಾನಿಕ ದಾಸ್ತಾನು ವ್ಯವಸ್ಥೆ ಇಲ್ಲದಿರುವುದು ದವಸ ಧಾನ್ಯ, ತರಕಾರಿಗಳ ದರ ಏರಿಳಿತಕ್ಕೆ ಮುಖ್ಯವಾಗಿ ಕಾರಣವಾಗುತ್ತಿದೆ. ಶೀತಲೀಕೃತ ಸಂಗ್ರಹಾಗಾರಗಳು ದೇಶಾದ್ಯಂತ ಇರಬೇಕು ಎಂದು ದಶಕಗಳಿಂದ ಹೇಳುತ್ತಲೇ ಬರುತ್ತಿದ್ದೇವೆ. ಆದರೆ ಅದಿನ್ನೂ ಪರಿಣಾಮಕಾರಿಯಾಗಿ ರೂಪುಗೊಂಡಿಲ್ಲ. ಉದಾಹರಣೆಗೆ, ಒಮ್ಮೆ ಟೊಮೊಟೊ ಬೆಳೆ ಪ್ರಮಾಣ ಕಡಿಮೆಯಾಗಿ ಬೆಲೆ ಆಕಾಶಕ್ಕೆ ಏರುತ್ತದೆ. ಇನ್ನೊಮ್ಮೆ ಉತ್ಪಾದನೆ ವಿಪರೀತ ಜಾಸ್ತಿಯಾಗಿ ಕೊಳ್ಳುವವರೇ ಇಲ್ಲದೆ ರೈತರು ಕಷ್ಟಪಟ್ಟು ಬೆಳೆದ ಟೊಮೊಟೊಗಳನ್ನು ಚರಂಡಿಗೆ ಸುರಿಯಬೇಕಾದ ಕರುಣಾಜನಕ ಸನ್ನಿವೇಶ ಎದುರಾಗುತ್ತದೆ. ಸೂಕ್ತ ಸಂಗ್ರಹಾಗಾರಗಳ ವ್ಯವಸ್ಥೆ ಇದ್ದಾಗ ಮಾತ್ರ ಅವುಗಳನ್ನು ಕೆಡದಂತೆ ಇರಿಸಿಕೊಳ್ಳಬಹುದು. ಇದರಿಂದ ಬೆಲೆ ನಿಯಂತ್ರಣವೂ ಸಾಧ್ಯವಾಗುತ್ತದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಜನ್ ಧನ್ ಉಂಟು ಮಾಡಿದ ಉಳಿತಾಯ ಕ್ರಾಂತಿ
ಇತ್ತೀಚಿನ ವರ್ಷಗಳಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಥ ಬೃಹತ್ ದಾಸ್ತಾನು ಸಂಗ್ರಹಾಲಯಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿದೆ. ಪ್ರತಿ ವರ್ಷ ಬಜೆಟ್‌ನಲ್ಲಿ ಹೆಚ್ಚುಹೆಚ್ಚು ಅನುದಾನ ಮೀಸಲಿಡುತ್ತಿದೆ. ದೇಶದ ಕೃಷಿ ವಲಯಕ್ಕೆ ಅಮೂಲ್ಯ ಕೊಡುಗೆ ಆಗಬಹುದಾದ ಈ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಆದಷ್ಟು ಬೇಗ ಸಾಕಾರಗೊಳ್ಳಬೇಕು. ಆಗ ಮಾತ್ರ ದರ ಏರಿಕೆಯ ಹಾಹಾಕಾರದಿಂದ ಜನಸಾಮಾನ್ಯರು ಪಾರಾಗಲು ಸಾಧ್ಯ.