ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಂಡಿಸಿರುವ ಮಧ್ಯಂತರ ಬಜೆಟ್‌ಗೆ (Budget 2024) ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದು, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಬಜೆಟ್ ಅನ್ನು ಖಂಡಿಸಿದ್ದಾರೆ. ಅಲ್ಲದೆ, ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂಬುದಾಗಿ ತಾರತಮ್ಯ ಮಾಡುತ್ತಿದ್ದು, ಹೀಗೇ ಮುಂದುವರಿದರೆ ದೇಶವನ್ನು ವಿಭಜನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ನವ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಸುರೇಶ್, ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಬಿಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ದಕ್ಷಿಣ ಭಾರತ ಬೇರೆ ದೇಶ ಆಗಬೇಕು ಎಂಬ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ನಾಮಫಲಕ ಮಾತ್ರ ಬದಲಾಯಿಸಲಾಗಿದೆ: ಡಿ.ಕೆ. ಸುರೇಶ್
ಸಂಸದ ಡಿ.ಕೆ. ಸುರೇಶ್ ದೆಹಲಿಯಲ್ಲಿ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಜೆಟ್‌ನಲ್ಲಿ ನಾಮಫಲಕವನ್ನು ಮಾತ್ರ ಬದಲಾಯಿಸಲಾಗಿದೆ. ಬೇರೆ ಬೇರೆ ದೇಸಿ ಹೆಸರುಗಳನ್ನು ಇಡಲಾಗಿದೆ. ಎಕನಾಮಿಕ್ ಸರ್ವೆಯವರು ಮುಂದಿಟ್ಟಿದ್ದಿದ್ದರೆ ಇವರ ಪರಿಸ್ಥಿತಿ ಏನಿದೆ? ಯಾವ ರೀತಿ ದೇಶ ಕಳೆದ ಸಾಲಿನಲ್ಲಿ ಸಾಧನೆಯನ್ನು ಸಾಧಿಸಿದೆ ಎಂಬುದು ತಿಳಿಯುತ್ತಿತ್ತು. ಈಗ ದೇಶದ ಸ್ಥಿತಿ ಬಗ್ಗೆ ಅನುಮಾನಗಳು ಪ್ರಾರಂಭವಾಗಿದೆ.
ಈ ಬಜೆಟ್ ಚುನಾವಣೆಗೆ ಸಂಬಂಧಪಟ್ಟಂತೆ ಒಂದಷ್ಟು ಘೋಷಣೆಗಳನ್ನು ನೀಡಿದೆ. ಆದರೆ, ಹೇಳಿಕೆಗಳಿಂದ ಕೂಡಿದ ಬಜೆಟ್ ಇದಾಗಿದೆ ಎಂದು ಹೇಳಬಹುದಾಗಿದೆ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇವತ್ತು ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂಥವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ ಎಂದು ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಬಡವರ ಏಳ್ಗೆಗೆ ಮಂಡನೆಯಾಗಿರುವ ಬಜೆಟ್: ಅಶೋಕ್
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್. ಅಶೋಕ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಉತ್ತಮವಾಗಿದೆ. ಭಾರತದ ತಂತ್ರಜ್ಞಾನ ಹಾಗೂ ಆರ್ಥಿಕತೆಯ ಏಳ್ಗೆಗೆ ಇದು ಸಹಕಾರಿಯಾಗಿದೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಹೆಸರಲ್ಲಿ ಬಜೆಟ್ ಮಂಡನೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಬಜೆಟ್ ಅನ್ನು ಮಂಡಿಸಿಲ್ಲ. ಸರ್ವರ ಏಳ್ಗೆಗೆ, ಬಡವರ ಏಳ್ಗೆಗೆ ಮಂಡನೆಯಾಗಿರುವ ಬಜೆಟ್ ಇದಾಗಿದೆ. ಏಳು ಲಕ್ಷ ರೂಪಾಯಿವರೆಗೂ ತೆರಿಗೆ ಇಲ್ಲ. ಒಂದು ಲಕ್ಷ ಕುಟುಂಬಕ್ಕೆ ಸೋಲಾರ್ ಎನರ್ಜಿ ಬಳಕೆಗೆ ಒತ್ತು ನೀಡಲಾಗಿದೆ. ದೇಶದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ನೀಡಲಾಗಿದೆ. 9-15 ವರ್ಷದ ಮಕ್ಕಳಿಗೆ ಉಚಿತ ಲಸಿಕೆ ನೀಡಲು ತೀರ್ಮಾನ ಮಾಡಲಾಗಿದೆ. ಮೀನುಗಾರಿಕೆಗೆ ಪ್ರತ್ಯೇಕ ವಸತಿ ನೀಡಲು ಮುಂದಾಗಲಾಗಿದೆ ಎಂದು ವಿವರಿಸಿದರು.
ರೈಲ್ವೇ ಟ್ರಾಫಿಕ್ ತಗ್ಗಿಸಲು ನಾಲ್ಕು ವಿಶೇಷ ಕಾರಿಡಾರ್‌ಗೆ, ಏರ್ಪೋರ್ಟ್ ಆಧುನೀಕರಣಕ್ಕೆ ಹಣಕಾಸು ನೆರವು ನೀಡಲಾಗಿದೆ. ಪ್ರವಾಸೋದ್ಯಮದಲ್ಲಿ ಪ್ರಪಂಚದ ಗಮನ ಸೆಳೆದ ಲಕ್ಷ ದ್ವೀಪಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ವಿಶ್ವದ ಗಮನ ಸೆಳೆಯಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಡ ಕುಟುಂಬಕ್ಕೆ ಮನೆ ಕೊಡುವುದು ಬಹಳ ವಿಶೇಷತೆಯಾಗಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಉನ್ನತ ಮಟ್ಟಕ್ಕೆ ಏರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ಗಿಮಿಕ್ ಪಾಲಿಟಿಕ್ಸ್ ಮಾಡದೆ, ಮುಂದಿನ ಜನಾಂಗಕ್ಕೆ ಉಪಯುಕ್ತ ಆಗುವಂತೆ ಮಂಡನೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Budget 2024: ಕೇಂದ್ರ ಬಜೆಟ್‌ಗೆ FKCCI ಸಂತಸ; ಭವಿಷ್ಯದ ಭಾರತ ಬಗ್ಗೆ ಸ್ಪಷ್ಟತೆ
ಗಂಡನಿಂದ ಕಿತ್ತು ಹೆಂಡತಿಗೆ ಕೊಡುವ ಸಿದ್ದರಾಮಯ್ಯ!
ಮುಂದೆ ಸಿಎಂ ಸಿದ್ದರಾಮಯ್ಯ ಬಜೆಟ್ ಬರುತ್ತದೆ. ಗಂಡನಿಂದ ಕಿತ್ತು, ಹೆಂಡತಿಗೆ ಕೊಡ್ತಾರೆ. ಬಿಯರ್ ಬೆಲೆ 15 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಗಂಡನಿಗೆ ಟ್ಯಾಕ್ಸ್ ಹಾಕಿದ್ದಾರೆ. ಅದನ್ನು ಕಿತ್ತು ಹೆಂಡತಿಗೆ ಕೊಡುತ್ತಿದ್ದಾರೆ. ಇದೇ ಇವರ ಗ್ಯಾರಂಟಿ ಬಜೆಟ್ ಆಗಿದೆ. ಕ್ವಾಟರ್ ಎಣ್ಣೆ 15 ರೂಪಾಯಿ ಇತ್ತು. ಈಗ ಬಿಯರ್ ಬೆಲೆ 15 ರೂಪಾಯಿ ಜಾಸ್ತಿ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಇದೇ ಬರೋದು ಎಂದು ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.