Site icon Vistara News

ವಿಸ್ತಾರ ಸಂಪಾದಕೀಯ: ಬೀದಿ ನಾಯಿಗಳಿಗೆ ಅಮಾಯಕ ಮಕ್ಕಳ ಬಲಿ, ಈ ಸಾವಿಗೆ ಯಾರು ಹೊಣೆ?

ಸಂಪಾದಕೀಯ

ಬಳ್ಳಾರಿಯಲ್ಲಿ ಬೀದಿ ನಾಯಿಗಳ ದಾಳಿಯಿಂದ ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿದ್ದಾರೆ. ನಿನ್ನೆಯಷ್ಟೇ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ತಡಸ ಬಳಿ ಬೀದಿ ನಾಯಿಗಳ ದಾಳಿಯಿಂದ ನಾಲ್ಕೂವರೆ ವರ್ಷದ ಬಾಲಕ ಮೃತಪಟ್ಟಿದ್ದಾನೆ. ಆಟವಾಡಲು ಹೊರಬಂದಿದ್ದ ಬಾಲಕನ ಮೇಲೆ ಏಳೆಂಟು ನಾಯಿಗಳು ದಾಳಿ ನಡೆಸಿದ್ದರಿಂದ ಬಾಲಕ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಶಿವಮೊಗ್ಗ ತಾಲೂಕಿನ ಪುರಲೆ ಗ್ರಾಮದಲ್ಲಿ ಬೀದಿ ನಾಯಿ ದಾಳಿಯಿಂದ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಇಂಥ ಪ್ರಕರಣಗಳು ಹೊಸತೇನಲ್ಲ. ಬೆಂಗಳೂರಿನಲ್ಲೂ ಹಲವು ಬಾರಿ ಬೀದಿ ನಾಯಿಗಳ ದಾಳಿಯಾಗಿದೆ. ಮಕ್ಕಳು ಸತ್ತೇ ಹೋದ ಉದಾಹರಣೆಗಳೂ ಇವೆ. ಹೆಚ್ಚಾಗಿ ಇವು ನಿರ್ಬಲರಾದ ಮಕ್ಕಳ ಮೇಲೇ ದಾಳಿ ಮಾಡುತ್ತವೆ. ಹಿಂಡು ಹಿಂಡಾಗಿ ಇವು ಬೇಟೆಯಾಡುವಂತೆ ಎರಗಿದಾಗ ಎದುರಿಸಲು ಮಕ್ಕಳಿಂದ ಸಾಧ್ಯವಿಲ್ಲ. ಮಕ್ಕಳೇನು, ದೊಡ್ಡವರ ಮೇಲೆ ಇವು ದಾಳಿ ಮಾಡಿ ಗಾಯಗೊಳಿಸಿದ ನಿದರ್ಶನಗಳು ಸಾಕಷ್ಟಿವೆ. ಇವೆಲ್ಲ ಗಂಭೀರ ಹಾಗೂ ಆತಂಕಕಾರಿ ಸಂಗತಿ.

ನಾಯಿಗಳ ಮೂಲ ಪ್ರವೃತ್ತಿಯೇ ಬೇಟೆ. ಮನುಷ್ಯ ಅವುಗಳನ್ನು ಮನೆಗೆ ತಂದು ಸಾಕಿಕೊಳ್ಳುತ್ತಾನಷ್ಟೆ. ಸಾಕುನಾಯಿಗಳನ್ನು ನಾನಾ ತರಬೇತಿಗಳ ಮೂಲಕ ಪಳಗಿಸಿ ಅವುಗಳ ಬೇಟೆಯ ಗುಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಾಗುತ್ತದೆ. ಇಷ್ಟಾಗಿಯೂ ಸಾಕು ನಾಯಿಗಳು ದಾಳಿ ಮಾಡಿದ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇನ್ನು ಬೀದಿ ನಾಯಿಗಳು ತಮ್ಮನ್ನು ನೋಡಿ ಗಾಬರಿಯಿಂದ ಓಡುವ ಮಕ್ಕಳನ್ನು ಬೇಟೆಯೆಂದೇ ತಿಳಿದು ಬೆನ್ನಟ್ಟುತ್ತವೆ. ಹಾಗಾದರೆ ಪರಿಹಾರವೇನು? ಬೀದಿನಾಯಿಗಳ ಸಂಖ್ಯೆ ಹೆಚ್ಚಾದಾಗ ಅವುಗಳನ್ನು ಕೊಲ್ಲುವ ಒಂದು ಪದ್ಧತಿ ಜಾರಿಯಲ್ಲಿತ್ತು. ಇದು ಮಾನವೀಯವಲ್ಲ ಎಂಬ ಅರಿವು ಮೂಡಿದ ಬಳಿಕ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಮೂಲಕ ಅವುಗಳ ಸಂಖ್ಯೆ ತಾನಾಗಿ ಕಡಿಮೆಯಾಗುವಂತೆ ಮಾಡುವ ಪದ್ಧತಿಯನ್ನು ರೂಢಿಸಲಾಯಿತು. ಇದನ್ನು ಸ್ಥಳೀಯಾಡಳಿತಗಳು ಮಾಡಬೇಕು. ಆದರೆ ಮಾಡುತ್ತಿವೆಯೇ? ಮಾಡುತ್ತಿದ್ದರೆ, ಅವುಗಳು ಇಷ್ಟೊಂದು ಸಂಖ್ಯೆಯಲ್ಲಿ ಹೆಚ್ಚಲು ಹಾಗೂ ಮನುಷ್ಯರ ಮೇಲೇ ದಾಳಿ ಮಾಡುವಷ್ಟು ಸೊಕ್ಕಿಕೊಳ್ಳಲು ಕಾರಣವೇನು? ಬೀದಿ ನಾಯಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದರಷ್ಟೇ ಮನುಷ್ಯರ ಮೇಲೆ ದಾಳಿ ಮಾಡುವ ಧೈರ್ಯ ಅವುಗಳಿಗೆ ಬರಲು ಸಾಧ್ಯ. ಅವುಗಳ ಸಂಖ್ಯೆ ಮಿತಿ ಮೀರಿದೆ ಎನ್ನಲು ಇವು ನಿದರ್ಶನ.

ಸ್ಥಳೀಯ ಆಡಳಿತ ಬೀದಿನಾಯಿಗಳನ್ನು ನಿಯಂತ್ರಿಸಲು ವಿಫಲವಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಇವುಗಳಿಗೆ ಸೂಕ್ತ ಚಿಕಿತ್ಸೆ, ಸಂತಾನಹರಣ ಶಸ್ತ್ರಚಿಕಿತ್ಸೆ ಸಿಗುತ್ತಿಲ್ಲ. ನಾಯಿಗಳ ಸಂತಾನ ನಿಯಂತ್ರಣಕ್ಕೆ ಬಜೆಟ್‌ನಲ್ಲಿ ಒಂದಷ್ಟು ಪ್ರಮಾಣದ ಹಣವನ್ನು ಮೀಸಲಿಡಲಾಗುತ್ತದೆ. ಆದರೆ ಇದು ಹೇಗೆ ವಿನಿಯೋಗವಾಗಿದೆ ಎಂಬುದರ ಲೆಕ್ಕ ಇದ್ದಂತಿಲ್ಲ. ಇದು ಸರಿಯಾಗಿ ವಿನಿಯೋಗವಾಗಿದ್ದರೆ ನಾಯಿಗಳ ಸಂಖ್ಯೆ ಕಡಿಮೆಯಾಗಬೇಕಿತ್ತು. ಹಾಗಾಗಿಲ್ಲ. ಬೆಂಗಳೂರೂ ಸೇರಿದಂತೆ ರಾಜ್ಯದ ನಗರದ ಬೀದಿಗಳು ತಿಪ್ಪೆಗುಂಡಿಗಳಾಗಿರುತ್ತವೆ; ಇವೇ ನಾಯಿಗಳ ಉದರಪೋಷಣೆಗೆ ಸೂಕ್ತ ತಾಣಗಳಾಗಿವೆ. ಮಾಂಸದ ಅಂಗಡಿಗಳು ಅಳಿದುಳಿದ ಮಾಂಸ- ಮೂಳೆಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಎಸೆದುಬಿಡುವುದೂ ನಾಯಿಗಳು ಕೊಬ್ಬಲು ಕಾರಣ. ನಗರಸಭೆ, ಪಾಲಿಕೆಗಳು ಮಾಂಸದಂಗಡಿಗಳನ್ನು ಹದ್ದುಬಸ್ತಿನಲ್ಲಿ ಇಟ್ಟಿಲ್ಲ. ಇದೀಗ ಅಮಾಯಕ ಮಕ್ಕಳ ಸಾವಿಗೆ ಯಾರು ಹೊಣೆ ಹೊರಬೇಕು? ಸ್ಥಳೀಯಾಡಳಿತ ಅಥವಾ ಸರ್ಕಾರವೇ ಇದರ ತಪ್ಪಿತಸ್ಥ. ಪರಿಹಾರ ನೀಡಲು, ಬೀದಿಗಳಲ್ಲಿ ನಾಯಿ ಸಂಖ್ಯೆ ನಿಯಂತ್ರಿಸಲು ಸರ್ಕಾರ ಬದ್ಧವಾಗಬೇಕು.

ಬೀದಿ ನಾಯಿಗಳನ್ನು ಆಹಾರ ಹಾಕಿ ಸಾಕುವವರು ದೊಡ್ಡಸಂಖ್ಯೆಯಲ್ಲಿ ಇದ್ದಾರೆ. ಪ್ರಾಣಿ ಪ್ರೀತಿ ತಪ್ಪಲ್ಲ. ಆದರೆ ಅವುಗಳ ಸಂಖ್ಯೆ ಹೆಚ್ಚದಂತೆ ನೋಡಿಕೊಳ್ಳಲೂ ಇವರು ಜವಾಬ್ದಾರರಾಗಬೇಕಾಗುತ್ತದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಒಂದು ತೀರ್ಪನ್ನು ಇಲ್ಲಿ ಸ್ಮರಿಸಬಹುದು. ಕೇರಳದಲ್ಲಿ ಹೆಚ್ಚಿರುವ ಬೀದಿನಾಯಿಗಳ ಹಾವಳಿ ಕುರಿತು ಸಲ್ಲಿಸಲಾದ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯ, ಇವುಗಳ ಕಾಟಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿತ್ತು. ಜನರ ಸುರಕ್ಷತೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಅವಶ್ಯಕ ಎಂದಿತ್ತು. ಬೀದಿ ನಾಯಿಗಳು ಕಚ್ಚಿದರೆ, ಶ್ವಾನಗಳಿಗೆ ಆಹಾರ ಹಾಕುವವರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿಗಳ ವೈದ್ಯಕೀಯ ವೆಚ್ಚವನ್ನೂ ಬೀದಿ ನಾಯಿಗಳಿಗೆ ಆಹಾರ ಒದಗಿಸುವವರು ಭರಿಸಬೇಕು. ಜತೆಗೆ ಶ್ವಾನಗಳಿಗೆ ಲಸಿಕೆ ಹಾಕಿಸುವ ಜವಾಬ್ದಾರಿಯನ್ನೂ ಅವರೇ ಹೊರಬೇಕು. ನಾಯಿಗಳನ್ನು ಪ್ರೀತಿಸಿದರೆ ಸಾಲದು, ಅವುಗಳ ಕಾಳಜಿಯನ್ನೂ ಮಾಡಬೇಕು. ಬೀದಿ ನಾಯಿಗಳು ಅಮಾಯಕರಿಗೆ ಹಾನಿ ಮಾಡುವುದನ್ನು ಸಹಿಸಲಾಗದು ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಜೆ.ಕೆ. ಮಹೇಶ್ವರಿ ಅವರನ್ನು ಒಳಗೊಂಡ ಪೀಠ ಹೇಳಿತ್ತು. ಇದನ್ನೂ ಗಮನಿಸಬೇಕು.

ಬೀದಿ ನಾಯಿಗಳ ಬಗ್ಗೆ ಮಹಾತ್ಮ ಗಾಂಧಿಯವರು ಹೇಳಿದ್ದ ಒಂದು ಮಾತನ್ನೂ ಇಲ್ಲಿ ಸ್ಮರಿಸಬಹುದು. 1926ರಲ್ಲಿ “ಯಂಗ್‌ ಇಂಡಿಯಾʼ ಪತ್ರಿಕೆಯಲ್ಲಿ ಮಹಾತ್ಮರು ಬರೆದಿದ್ದ ಒಂದು ಲೇಖನದಲ್ಲಿ, ʼʼಮಾಲಿಕನಿಲ್ಲದ ಬೀದಿ ನಾಯಿ ಸಮಾಜದ ಪಾಲಿಗೆ ಸಮಸ್ಯೆ. ಅವುಗಳನ್ನು ಬೀದಿಯಲ್ಲಿ ತಿರಗಾಡಲು ಬಿಡಬಾರದು. ಅವುಗಳನ್ನು ಸಾಕಲು ಪಿಂಜರಾಪೋಲ್‌ಗಳ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದಾದರೆ, ಅವುಗಳನ್ನು ಕೊಲ್ಲದೇ ಬೇರೆ ವಿಧಿಯಿಲ್ಲʼʼ ಎಂದಿದ್ದರು. 2015ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಮುಂದೆ ಬಂದ ಒಂದು ಪ್ರಕರಣದಲ್ಲಿ ಗಾಂಧೀಜಿಯ ಈ ಲೇಖನವನ್ನು ಉಲ್ಲೇಖಿಸಲಾಗಿತ್ತು. ಅಹಿಂಸೆಯ ಮಹಾಮಾದರಿ ಎಂದೇ ಪರಿಗಣಿತರಾದ ಗಾಂಧೀಜಿಯೇ ಈ ಮಾತುಗಳನ್ನು ಆಡಿದ್ದಾರೆಂದರೆ, ಬೀದಿ ನಾಯಿಗಳ ಹಾವಳಿಯನ್ನು ಅವರೂ ಸಮಾಜಕ್ಕೊಂದು ಸಮಸ್ಯೆ ಎಂದು ಪರಿಗಣಿಸಿದ್ದರೆಂದು ಅರ್ಥ ಮಾಡಿಕೊಳ್ಳಬೇಕು. ಇವೆಲ್ಲದರ ಹಿನ್ನೆಲೆಯಲ್ಲಿ, ಇಂದು ನಾವು ಬೀದಿ ನಾಯಿಗಳನ್ನು ಕೊಲ್ಲುವುದಲ್ಲವಾದರೂ, ಸಂತಾನಶಕ್ತಿಹರಣ ಮಾಡುವ, ನಿಯಂತ್ರಿಸುವ ಕಾರ್ಯವನ್ನಾದರೂ ಕಟ್ಟುನಿಟ್ಟಾಗಿ ಮಾಡಬೇಕಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕಾಲೇಜು ಸರಿಯಲ್ಲ

Exit mobile version