Site icon Vistara News

ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪತಿ; ಇನ್‌ಸ್ಟಾಗ್ರಾಂನಲ್ಲಿ ಲಕ್ಷ ಫಾಲೋವರ್ಸ್‌ ಇದ್ದಿದ್ದೇ ಕಾರಣ?

Instagram Influencer Anamika Bishnoi

Instagram Influencer Anamika Bishnoi's Husband Shoots Her Dead In Rajasthan

ಜೈಪುರ: ಸಾಮಾಜಿಕ ಜಾಲತಾಣಗಳ ಯುಗದಲ್ಲಿ (Social Media Era) ಅವುಗಳಿಂದ ಜನರಿಗೆ ಭಾರಿ ಉಪಯೋಗವಾಗುತ್ತಿದೆ. ಅದರಲ್ಲೂ, ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕ ಯುವಕ-ಯುವತಿಯರು ಸೇರಿ ಎಲ್ಲರೂ ಫೇಮಸ್‌ ಆಗುತ್ತಿದ್ದಾರೆ. ಹಣವನ್ನೂ ಗಳಿಸುತ್ತಿದ್ದಾರೆ. ಆದರೆ, ಇದೇ ಕೆಲವರ ಬಾಳಿನಲ್ಲಿ ಮುಳುವಾಗುತ್ತಿದೆ. ಸಾಮಾಜಿಕ ಜಾಲತಾಣವು ಗಂಡ-ಹೆಂಡತಿ ಮಧ್ಯೆ ವಿರಸಕ್ಕೆ ಕಾರಣವಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ರಾಜಸ್ಥಾನದಲ್ಲಿ (Rajasthan) ವ್ಯಕ್ತಿಯೊಬ್ಬ ಪತ್ನಿಯನ್ನೇ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯು ಲಕ್ಷಾಂತರ ಫಾಲೋವರ್ಸ್‌ (Instagram Followers) ಹೊಂದಿದ್ದು, ಅವರು ರೀಲ್ಸ್‌ ಮಾಡುವುದೇ ಜಗಳ, ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.

ರಾಜಸ್ಥಾನದ ಫಲೋಡಿಯಲ್ಲಿ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಆಗಿದ್ದ ಅನಾಮಿಕಾ ಬಿಷ್ಣೋಯಿ ಎಂಬುವರನ್ನು ಅವರ ಪತಿ ಮಹಿರಾಮ್‌ ಎಂಬಾತ ಗುಂಡಿಕ್ಕಿ ಕೊಂದಿದ್ದಾನೆ. ಮಹಿಳೆಯು ಲೇಡೀಸ್‌ ಕಾರ್ನರ್‌ ಶಾಪ್‌ ಇಟ್ಟುಕೊಂಡಿದ್ದು, ಇನ್‌ಸ್ಟಾಗ್ರಾಂ ವಿಡಿಯೊಗಳ ಮೂಲಕವೇ ಖ್ಯಾತಿ ಗಳಿಸಿದ್ದರು. ಇವರ ಅಂಗಡಿಗೆ ಬಂದ ಮಹಿರಾಮ್, ಅವರ ಜತೆ ಮಾತುಕತೆ ನಡೆಸಿದ್ದಾನೆ. ಇದಾದ ಬಳಿಕ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅನಾಮಿಕಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಅನಾಮಿಕಾ ಬಿಷ್ಣೋಯಿ ಮೇಲೆ ಮಹಿರಾಮ್‌ ಗುಂಡು ಹಾರಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮೂಲಗಳ ಪ್ರಕಾರ, ಅನಾಮಿಕಾ ಬಿಷ್ಣೋಯಿ ಹಾಗೂ ಮಹಿರಾಮ್‌ ಅವರ ಮಧ್ಯೆ ಜಗಳ ನಡೆಯುತ್ತಿದ್ದವು. ಇದರಿಂದಾಗಿ ಇಬ್ಬರೂ ಬೇರೆಯಾಗಿ, ಒಬ್ಬೊಬ್ಬರು ಒಂದೊಂದು ಕಡೆ ವಾಸಿಸುತ್ತಿದ್ದರು. ಅನಾಮಿಕಾ ಬಿಷ್ಣೋಯಿ ಅವರು ಇನ್‌ಸ್ಟಾಗ್ರಾಂ ವಿಡಿಯೊಗಳನ್ನು ಪೋಸ್ಟ್‌ ಮಾಡುವುದು ಮಹಿರಾಮ್‌ಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕಾಗಿ ಇಬ್ಬರ ಮಧ್ಯೆ ಪದೇಪದೆ ಜಗಳಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಂ ಗೆಳೆಯನಿಂದ ಯುವತಿ ಮೇಲೆ ಅತ್ಯಾಚಾರ; ಯುವತಿಯರೇ ಹುಷಾರ್!

ಇನ್‌ಸ್ಟಾಗ್ರಾಂ ವಿಡಿಯೊಗಳಿಂದಲೇ ಖ್ಯಾತಿ ಗಳಿಸಿದ್ದ, ಸುಮಾರು 1.1 ಲಕ್ಷ ಫಾಲೋವರ್ಸ್‌ ಹೊಂದಿರುವ ಅನಾಮಿಕಾ ಬಿಷ್ಣೋಯಿ ಅವರು ತಮ್ಮ ಪಾಡಿಗೆ ತಾವು ಒಬ್ಬರೇ ವಾಸಿಸುತ್ತಿದ್ದರು. ಆದರೆ, ಅನಾಮಿಕಾ ಬಿಷ್ಣೋಯಿ ಇದ್ದ ಅಂಗಡಿಗೇ ಬಂದ ಮಹಿರಾಮ್‌ ಜಗಳವಾಡಿದ್ದಾನೆ. ಅವರ ಮೇಲಿನ ಕೋಪಕ್ಕಾಗಿ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಮಹಿರಾಮ್‌ನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version