Site icon Vistara News

ವಿಸ್ತಾರ ಸಂಪಾದಕೀಯ: ಸುಡಾನ್‌ನಲ್ಲಿ ಆಂತರಿಕ ದಂಗೆ, ಕನ್ನಡಿಗರನ್ನು ರಕ್ಷಿಸಿ

Internal Rebellion in Sudan, Protect the Kannadigas

#image_title

ಆಫ್ರಿಕನ್ ದೇಶ ಸುಡಾನ್‌ನಲ್ಲಿ ಸೇನೆ ಮತ್ತು ಅರೆ ಸೇನಾ ಪಡೆಗಳ ನಡುವೆ ಸಂಘರ್ಷ ಭುಗಿಲೆದ್ದಿದೆ. ಒಬ್ಬ ಭಾರತೀಯ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈಗಿನ ಮಾಹಿತಿಯಂತೆ ಸುಡಾನ್‌ನಲ್ಲಿ 181 ಮಂದಿ ಕನ್ನಡಿಗರು ಸಿಲುಕಿದ್ದಾರೆ. ಆಹಾರ, ನೀರಿಲ್ಲದೆ ಪರದಾಡುತ್ತಿದ್ದಾರೆ. ಅಲ್ಲಿಂದ ವಾಪಸ್ ಭಾರತಕ್ಕೆ ಬರಲಾಗದೆ ಪ್ರಾಣ ಭೀತಿ ಎದುರಿಸುತ್ತಿದ್ದಾರೆ. ದಾವಣಗೆರೆ, ಶಿವಮೊಗ್ಗ ಮತ್ತು ಮೈಸೂರಿನ ಹಕ್ಕಿಪಿಕ್ಕಿ ಜನಾಂಗದವರು ಆಯುರ್ವೇದ ಉತ್ಪನ್ನ ಮಾರಲು ಆಫ್ರಿಕನ್ ದೇಶಗಳಿಗೆ ತೆರಳುತ್ತಿರುತ್ತಾರೆ. ಈಗ ಸುಡಾನ್‌ನಲ್ಲಿ ಸಿಲುಕಿದವರಲ್ಲಿ ಈ ಹಕ್ಕಿಪಿಕ್ಕಿ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಟ್ಟಾರೆ ದೇಶದ 800ಕ್ಕೂ ಹೆಚ್ಚು ಮಂದಿ ಸುಡಾನ್‌ನಲ್ಲಿ ಸಿಲುಕಿದ್ದಾರೆ. ಇವರನ್ನು ಕರೆತರಲು ಇದೀಗ ವಿದೇಶಾಂಗ ನೀತಿಯ ಗರಿಷ್ಠ ಪ್ರಯೋಜನ ಪಡೆಯಬೇಕಾಗಿದೆ.

ಸುಡಾನ್‌ನಲ್ಲಿ ಈಗ ನಡೆಯುತ್ತಿರುವುದು ಆಂತರಿಕ ದಂಗೆ. ಅಲ್ಲಿನ ಸೇನಾಪಡೆ ಮುಖ್ಯಸ್ಥನಿಗೆ ಅರೆಸೇನಾಪಡೆ ಜನರಲ್‌ಗೂ ಉಂಟಾಗಿರುವ ಬಿಕ್ಕಟ್ಟು ಎರಡು ಬಣಗಳಾಗಿ, ಸೇನಾಪಡೆಗಳು ಕಾದಾಡುವ ಹಂತ ತಲುಪಿದೆ. ಅಲ್ಲಿ ಸರಿಯಾದ ಚುನಾಯಿತ ಸರ್ಕಾರ ಇಲ್ಲವಾದ್ದರಿಂದ, ಮಿಲಿಟರಿಯ ಮಾತೇ ವೇದವಾಕ್ಯವಾಗಿದೆ. ಈ ಹಿಂದೆಯೂ ನರಮೇಧಗಳು ನಡೆದ ದೇಶ ಸುಡಾನ್.‌ ಇಲ್ಲಿ ಸರಿಯಾದ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲ. ಇಂಥ ದೇಶದ ಜತೆಗೆ ಒಡನಾಡುವಾಗ ಎಚ್ಚರ ಬೇಕು. ಸುಡಾನ್‌ನಲ್ಲಿ ಭಾರತದ ರಾಯಭಾರ ಕಚೇರಿಯಿದೆ. ಸದ್ಯ ತಲೆದೋರಿರುವ ಬೀದಿಗಲಭೆಯ ಹಿನ್ನೆಲೆಯಲ್ಲಿ, ಹೊರಗಡೆ ಹೋಗದಂತೆ ಭಾರತೀಯರಿಗೆ ನಮ್ಮ ವಿದೇಶಾಂಗ ಕಚೇರಿ ಎಚ್ಚರಿಕೆ ನೀಡಿದೆ. ಭಾರತ ಇದುವರೆಗೂ ಇಬ್ಬರಲ್ಲಿ ಯಾವುದೇ ಜನರಲ್‌ ಪರ ನಿಲುವು ತಾಳದೆ ತಟಸ್ಥವಾಗಿರುವುದರಿಂದ, ಸದ್ಯ ಭಾರತೀಯರಿಗೆ ತೊಂದರೆ ಇದ್ದಂತಿಲ್ಲ.‌ ಆದರೆ ರೋಗಗ್ರಸ್ತ ಸರ್ವಾಧಿಕಾರಿಗಳ ಕೈಯಲ್ಲಿರುವ ರಾಷ್ಟ್ರಗಳ ಸೈನ್ಯ ಹೇಗೆ ಬೇಕಿದ್ದರೂ ವರ್ತಿಸಬಹುದು.

ಆಂತರಿಕ ಸಂಘರ್ಷ, ಯುದ್ಧ ಇತ್ಯಾದಿ ಬಿಕ್ಕಟ್ಟಿನ ಸಂದರ್ಭ ಬೇರೆ ದೇಶಗಳಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಕೇಂದ್ರ ಸರ್ಕಾರ ಸಾಹಸಿಕ ಕಾರ್ಯಾಚರಣೆ ಮೂಲಕ ಹಲವು ಬಾರಿ ಪಾರು ಮಾಡಿದೆ. ಆಫ್ಘಾನಿಸ್ತಾನ, ಉಕ್ರೇನ್‌ ಮೊದಲಾದವುಗಳನ್ನು ಇತ್ತೀಚಿನ ಉದಾಹರಣೆಯಾಗಿ ಗಮನಿಸಬಹುದು. ಭಾರತ ನಡೆಸಿದ ಇಂಥ ಹಲವು ಕಾರ್ಯಾಚರಣೆಗಳು ಇನ್ನಿತರ ಬೃಹತ್‌ ದೇಶಗಳಿಂದಲೂ ಸಾಧ್ಯವಾಗಿಲ್ಲ. ಮನೆಯಿಂದ ಹೊರಗಡೆ ಬರಬೇಡಿ ಎಂದು ವಿದೇಶಾಂಗ ಕಚೇರಿ ಸೂಚನೆ ನೀಡಿದ್ದರೂ, ದಿನಸಿ ಮುಂತಾದ ಅಗತ್ಯ ವಸ್ತುಗಳಿಗಾಗಿ ಹೊರಗೆ ಬರಲೇಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಇದನ್ನು ಗಮನಿಸಿ ಅಲ್ಲಿ ಸಿಕ್ಕಿಬಿದ್ದವರಿಗೆ ಆಹಾರ, ಭಾರತಕ್ಕೆ ಹಿಂದಿರುಗಬಯಸುವವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಸಲಿಂಗ ವಿವಾಹಕ್ಕೆ ಅನುಮತಿ, ಆತುರದ ತೀರ್ಮಾನ ಬೇಡ

ವಿಶ್ವಸಂಸ್ಥೆ ಶಾಂತಿ ಪಾಲನಾ ಪಡೆ ಸೇರಲು ಈಗಾಗಲೇ ಭಾರತೀಯ ಸೇನಾ ತುಕಡಿ ಸುಡಾನ್‌ಗೆ ತೆರಳಿದೆ. ಇಂದು ಯಾವುದೇ ದೇಶದಲ್ಲಿ ನಡೆಯುವ ಯುದ್ಧಗಳು, ಆಂತರಿಕ ವಿಪ್ಲವಗಳು ಅಲ್ಲಿಗಷ್ಟೇ ಸೀಮಿತವಾಗುವುದಿಲ್ಲ. ಉಕ್ರೇನ್‌ನಲ್ಲಿ ಉಂಟಾದ ಸಮರದಿಂದ ಎಷ್ಟೊಂದು ಭಾರತೀಯ ಮೆಡಿಕಲ್‌ ವಿದ್ಯಾರ್ಥಿಗಳ ಬದುಕು ದುಃಸ್ವಪ್ನವಾಯಿತು ಎಂದು ಕಂಡಿದ್ದೇವೆ. ಹಾಗೆಯೇ ಬೇರೆ ಬೇರೆ ದೇಶಗಳಿಗೆ, ವ್ಯಾಪಾರ- ಶಿಕ್ಷಣ- ಉದ್ಯೋಗ ನಿಮಿತ್ತವಾಗಿ ಹೋದವರು ಅಲ್ಲಿ ತಮ್ಮದೊಂದು ಜಗತ್ತನ್ನು ಸೃಷ್ಟಿಸಿಕೊಂಡಿರುತ್ತಾರೆ. ಯುದ್ಧದ ಕಾರಣದಿಂದ ಅಲ್ಲಿ ಚೂರಾಗುವ ಜಗತ್ತನ್ನು ಮರಳಿ ಕಟ್ಟಿಕೊಳ್ಳೂವ ಸವಾಲು ಬೇರೆ; ಮೊದಲು ಅಲ್ಲಿಂದ ಪಾರಾಗಿ ಬದುಕುಳಿದು ಬರುವ ಸವಾಲೇ ಬೇರೆ. ಮಾತೃನೆಲದ ಸಹಾಯವಿಲ್ಲದೆ ಅದು ಸಾಧ್ಯವಾಗದು. ಸದ್ಯ ವಿಧಾನಸಭೆ ಚುನಾವಣೆ ಗಡಿಬಿಡಿಯಲ್ಲಿರುವ ರಾಜ್ಯದ ಆಡಳಿತ, ಸುಡಾನ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ಪಾರು ಮಾಡಲು ಗರಿಷ್ಠ ಪ್ರಯತ್ನ ಮಾಡಬೇಕು. ಕರ್ನಾಟಕ ರಾಜ್ಯಾಡಳಿತ ಕೇಂದ್ರ ಸರ್ಕಾರದ ಜತೆ ಕ್ಷಿಪ್ರ ಸಮನ್ವಯ ಸಾಧಿಸಿ, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ.

Exit mobile version