Site icon Vistara News

Yoga Day 2022 | ಐತಿಹಾಸಿಕ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಕ್ಷಣಗಣನೆ

yoga day countdown

ಮೈಸೂರು: ಯೋಗ ನಗರಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (Yoga Day 2022) ಪ್ರಧಾನ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ಇಲ್ಲಿಯ ಅರಮನೆ ಆವರಣದಲ್ಲಿ ನಡೆಯಲಿರುವ ಯೋಗ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವ ಕಾತರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಆಗಮನದಿಂದ ಯೋಗ ಪಟುಗಳ ಉತ್ಸಾಹ ಮುಗಿಲು ಮುಟ್ಟಿದೆ.
ಇಂದು ಬೆಳಗ್ಗೆ ೬.೩೦ ಕ್ಕೆ ಈ ವರ್ಷದ ಯೋಗದಿನಾಚರಣೆಯ ಪ್ರಧಾನ ಕಾರ್ಯಕ್ರಮ ಆರಂಭವಾಗಲಿದೆ. ಯೋಗ ದಿನಾಚರಣೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಣೆಯಾಗಲು ಕಾರಣರಾದ ಪ್ರಧಾನಿ ಮೋದಿ ೧೫ ಸಾವಿರ ಮಂದಿಯೊಂದಿಗೆ ಯೋಗ ಮಾಡಲಿದ್ದಾರೆ.

ಇದಕ್ಕಾಗಿ ಈಗಾಗಲೇ ಮೂರು ಬಾರಿ ತಾಲೀಮು ನಡೆಸಲಾಗಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿ ವಿವಿಧ ಆಸನ ಪ್ರದರ್ಶಿಸಲಿದ್ದು, ಅವರೇ ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಸೋಮವಾರವೇ ಸಾಂಸ್ಕೃತಿಕ ನಗರಿಗೆ ಆಗಮಿಸಿರುವ ಪ್ರಧಾನಿ ಮೋದಿ, ಇಲ್ಲಿಯ ರ‍್ಯಾಡಿಸನ್‌ ಬ್ಲ್ಯೂ ಹೋಟೇಲ್‌ನಲ್ಲಿ ಉಳಿದುಕೊಂಡಿದ್ದು, ಇಲ್ಲಿಂದ ೬.೨೦ಕ್ಕೆ ಹೊರಟು ೬.೩೦ಕ್ಕೆ ಅರಮನೆ ಆವರಣ ಪ್ರವೇಶಿಸಲಿದ್ದಾರೆ. ಮೊದಲಿಗೆ ಯೋಗ ದಿನಾಚರಣೆಯ ಕಾರ್ಯಕ್ರಮ ನಡೆಯಲಿದ್ದು, ನಂತರ ಯೋಗಾಭ್ಯಾಸ ನಡೆಸಲಿದ್ದಾರೆ.

ಭವ್ಯ ವೇದಿಕೆ ಸಜ್ಜು
ಅರಮನೆ ಪೂರ್ವ ದಿಕ್ಕಿನಲ್ಲಿರುವ ಜಯಮಾರ್ತಾಂಡ ದ್ವಾರದ ಬಳಿ ಭವ್ಯವೇದಿಕೆ ನಿರ್ಮಿಸಲಾಗಿದ್ದು, ಯೋಗಾಸನ ಮಾಡಲು ಅನುಕೂಲವಾಗುವಂತೆ ಈ ಬೃಹತ್ತಾದ ವೇದಿಕೆಯಲ್ಲಿ ಮ್ಯಾಟ್‌ ವ್ಯವಸ್ಥೆ ಮಾಡಲಾಗಿದೆ.

ಯೋಗ ಪ್ರದರ್ಶನ ನಡೆಯುವ ಎಲ್ಲ ಕಡೆ ಎಲ್‌ಇಡಿ ಪರದೆಗಳನ್ನು ವ್ಯವಸ್ಥೆ ಮಾಡಲಾಗಿದ್ದು, ವೇದಿಕೆಯ ಕಾರ್ಯಕ್ರಮವನ್ನು ಇದರಲ್ಲಿ ಪ್ರಸಾರ ಮಾಡಲಾಗುತ್ತದೆ. ಮೋದಿಯವರೊಂದಿಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌ ಟಿ ಸೋಮಶೇಖರ್‌ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದ್ದು, ಮೊಬೈಲ್‌ ಶೌಚಾಲಯದ ವ್ಯವಸ್ಥೆ ಕೂಡ ಇರಲಿದೆ.

ನಗರಕ್ಕೆ ಬಂದ ಯೋಗಾಸಕ್ತರು
ಇಲ್ಲಿಯ ಯೋಗ ದಿನಾಚರಣೆಯು ಇಡೀ ವಿಶ್ವದ ಗಮನ ಸೆಳೆಯುತ್ತಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೇಶದ ಬೇರೆ ಬೇರೆ ಭಾಗದಿಂದ ಯೋಗಾಸಕ್ತರು ಯೋಗ ನಗರಿಗೆ ಆಗಮಿಸಿದ್ದಾರೆ. ಈಗಾಗಲೇ ರಾಜ್ಯದ ಅನೇಕ ಜಿಲ್ಲೆಯ ಯೋಗ ಶಿಕ್ಷಕರು, ಯೋಗ ಶಾಲೆಗಳ ತರಬೇತಿದಾರರು ಆಗಮಿಸಿದ್ದು, ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಾತರಿಸುತ್ತಿದ್ದಾರೆ.

ಹೇಗೆ ನಡೆಯಲಿದೆ ಈ ಕಾರ್ಯಕ್ರಮ?
ಬೆಳಗ್ಗೆ ೬.೩೦ ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದ್ದು, ಮೊದಲಿಗೆ ಕೇಂದ್ರ ಆಯುಷ್‌ ಇಲಾಖೆಯ ಸಚಿವರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ತಲಾ ೫ ನಿಮಿಷ ಮಾತನಾಡಲಿದ್ದಾರೆ. ಇದಾದ ನಂತರ ಕಾರ್ಯಕ್ರಮದ ಕೇಂದ್ರ ಬಿಂದು ಪ್ರಧಾನಿ ನರೇಂದ್ರ ಮೋದಿ ೨೦ ನಿಮಿಷ ಯೋಗ ದಿನಾಚರಣೆಯ ಸಂದೇಶ ನೀಡಲಿದ್ದಾರೆ. ಇದಾದ ಬಳಿಕ ಅಂದರೆ ೭ ರಿಂದ ೭.೪೫ರವರೆಗೆ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ.

ಇದರಲ್ಲಿ ಮೊದಲ ಒಂದು ನಿಮಿಷ ಪ್ರಾರ್ಥನೆ, ೪ ನಿಮಿಷ ಚಲನಕ್ರಿಯೆ, ೨೫ ನಿಮಿಷ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ-೧, ಪಾದಹಸ್ತಾಸನ-೨, ಅರ್ಧಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಆರ್ಧುಷ್ಠಾಸನ, ಉಷ್ಠಾಸನ, ಶಶಾಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಸನ, ಪವನಮುಕ್ತಾಸನ, ಶವಾಸನಗಳ ಪ್ರದರ್ಶನ ನಡೆಯಲಿದೆ.

ಇದರಾದ ನಂತರ ೧೪ ನಿಮಿಷ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ ಇರಲಿದೆ. ಕೊನೆಗೆ ಒಂದು ನಿಮಿಷ ಶಾಂತಿ ಮಂತ್ರ ಹಾಗೂ ಎರಡು ನಿಮಿಷ ಸಂಕಲ್ಪ ಇರಲಿದೆ. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಪ್ರಮೋದಾದೇವಿ ಒಡೆಯರ್‌ ಕೂಡ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ | Yoga Day 2022 | ಜೀವನನ್ನು ಶಿವನನ್ನಾಗಿ ಮಾಡುವ ಮಹಾ ಮಾರ್ಗವೇ ಈ ಯೋಗ

Exit mobile version