Site icon Vistara News

ಒಂದೇ ವರ್ಷದೊಳಗೆ 3ನೇ ಬಾರಿ ಮದ್ಯದ ದರ ಏರಿಕೆ? ಉಚಿತ ಯೋಜನೆಗೆ ಹಣ ಹೊಂದಿಸುವ ಕಸರತ್ತು

Alcohal

Is Karnataka government considering third liquor price hike within one year?

ಬೆಂಗಳೂರು: ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು (Guarantee Schemes) ಜಾರಿಗೆ ತಂದು, ಹಲವು ಉಚಿತ ಕೊಡುಗೆಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರವು (Karnataka Government), ವರ್ಷಕ್ಕೆ ಇವುಗಳಿಗೆಂದೇ ಸುಮಾರು 59 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗಾಗಿಯೇ ಸಂಪನ್ಮೂಲ ಕ್ರೋಡೀಕರಿಸಲು ರಾಜ್ಯ ಸರ್ಕಾರವು ಹಲವು ರೀತಿಯ ಬೆಲೆಯೇರಿಕೆಯ ಅಸ್ತ್ರ ಬಳಸುತ್ತಿದೆ. ಅದರಲ್ಲೂ, ಕಳೆದ ಒಂದು ವರ್ಷದಲ್ಲಿಯೇ ಎರಡು ಬಾರಿ ಮದ್ಯದ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರವು ಈಗ ವರ್ಷದೊಳಗೇ ಮೂರನೇ ಬಾರಿ ಬೆಲೆಯೇರಿಕೆ (Liquor Price Hike ) ಮಾಡುವ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಇದು ಮದ್ಯಪ್ರಿಯರಿಗೆ ಶಾಕಿಂಗ್‌ ಎನಿಸಿದೆ.

ಹೌದು, ಅಬಕಾರಿ ಇಲಾಖೆಯು ಮದ್ಯದ ಬೆಲೆಯೇರಿಕೆ ಮಾಡುವ ಕುರಿತು ಚಿಂತನೆ ನಡೆಸಿದ್ದು, ಈ ಬಗ್ಗೆ ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಿದೆ ಎಂದು ತಿಳಿದುಬಂದಿದೆ. ಹಾಗೊಂದು ವೇಳೆ ರಾಜ್ಯ ಸರ್ಕಾರವು ಬೆಲೆಯೇರಿಕೆ ಮಾಡಿದರೆ ಓಲ್ಡ್‌ ಮಾಂಕ್‌, ಎಂಸಿ ರಮ್‌, ಬಿಪಿ, ಒಟಿ ಹಾಗೂ 8 ಪಿಎಂ ಬ್ರ್ಯಾಂಡ್‌ನ ಮದ್ಯದ ಬಾಟಲಿಗಳ ಬೆಲೆಯೇರಿಕೆ ಆಗಲಿದೆ. ಲೋಕಸಭೆ ಚುನಾವಣೆ ಮುಕ್ತಾಯಗೊಂಡಿದೆ. ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರವು ಸಂಪನ್ಮೂಲ ಕ್ರೋಡೀಕರಣ ಮಾಡಲು ಮದ್ಯದ ಬೆಲೆಯೇರಿಕೆ ಪ್ರಮುಖ ಅಸ್ತ್ರವಾಗಲಿದೆ. ಹಾಗಾಗಿ, ರಾಜ್ಯ ಸರ್ಕಾರವು ಶೀಘ್ರದಲ್ಲೇ ಬೆಲೆಯೇರಿಕೆ ಘೋಷಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

Constables

2023ರ ಜೂನ್‌ ತಿಂಗಳಲ್ಲಿ ಮದ್ಯದ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಮದ್ಯದ ದರದಲ್ಲಿ ಪ್ರತಿ ಬಾಟಲ್‌ಗೆ 10 ರೂ.ನಿಂದ 20 ರೂ.ವರೆಗೆ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿತ್ತು, ಬಿಯರ್ ಸೇರಿದಂತೆ ಹಾರ್ಡ್ ಡ್ರಿಂಕ್ಸ್ ಗಳ ಬೆಲೆಯಲ್ಲಿ ಹೆಚ್ಚಳವಾಗಿತ್ತು. ಬಡ್ ವೈಸರ್ ಬಿಯರ್ ದರ 198 ರೂ.ನಿಂದ 220 ರೂ.ಗೆ ಏರಿಕೆ ಮಾಡಲಾಗಿತ್ತು. ಕಿಂಗ್‌ಫಿಶರ್ ಬಿಯರ್ ದರವನ್ನು 160 ರೂ.ನಿಂದ 170 ರೂ.ಗೆ ಏರಿಕೆ ಮಾಡಲಾಗಿತ್ತು. ಯುಬಿ ಪ್ರೀಮಿಯಂ ದರವನ್ನು 125 ರೂ.ನಿಂದ 130-135 ರೂ.ಗೆ ಏರಿಕೆಸಲಾಗಿತ್ತು.

ಇದಾದ ಕೆಲವೇ ತಿಂಗಳಲ್ಲಿ ಮತ್ತೆ ಮದ್ಯದ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಬಿಯರ್‌ ಮೇಲಿನ ದರವನ್ನು ಹೆಚ್ಚಳ ಮಾಡಲು ಅಬಕಾರಿ ಇಲಾಖೆ 2024ರ ಜನವರಿಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು. ಅದರಂತೆ, ಒಂದು ಬಿಯರ್‌ ಮೇಲೆ 8ರಿಂದ 10 ರೂಪಾಯಿ ಹೆಚ್ಚಳ ಮಾಡಲು ಸರ್ಕಾರಕ್ಕೆ ಮನವಿ ಮಾಡಿತ್ತು. ಅದರಂತೆ, ಫೆಬ್ರವರಿಯಲ್ಲಿ ಬಜೆಟ್‌ ಮಂಡಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮದ್ಯದ ಬೆಲೆಯೇರಿಕೆ ಕುರಿತು ಘೋಷಣೆ ಮಾಡಿದ್ದರು. ಈಗ ಮೂರನೇ ಬಾರಿ ಬೆಲೆಯೇರಿಕೆ ಮಾಡಿದರೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 500 ಕೋಟಿ ರೂ. ಸೇರಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Congress Guarantee: ಗ್ಯಾರಂಟಿ ನಿಲ್ಲಿಸುವ ಮಾತು ಬೇಡ: ಕೈ ನಾಯಕರಿಗೆ ಎಚ್.ಎಂ ರೇವಣ್ಣ ಎಚ್ಚರಿಕೆ

Exit mobile version