ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳು ತಮಿಳುನಾಡಿನ ವೆಲ್ಲೋರ್ ಜೈಲಿನಿಂದ ಹೊರ ಬಂದಿದ್ದಾರೆ. ಶುಕ್ರವಾರವಷ್ಟೇ ಸುಪ್ರೀಂ ಕೋರ್ಟ್, ಆರೂ ಅಪರಾಧಿಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು. 30 ವರ್ಷಗಳಿಂದ ಜೈಲಿನಲ್ಲಿದ್ದ ನಳಿನಿ ಶ್ರೀಹರನ್, ಆಕೆಯ ಪತಿ ವಿ ಶ್ರೀಹರನ್ ಅಲಿಯಾಸ್ ಮುರುಗನ್, ರಾಬರ್ಟ್ ಪಯಾಸ್, ರವಿಚಂದ್ರನ್, ಸಂತಾನ್ ಮತ್ತು ಜಯಕುಮಾರ್ ಈಗ ಬಂಧಮುಕ್ತರಾಗಿದ್ದಾರೆ. ಸಂವಿಧಾನದ 142ನೇ ಆರ್ಟಿಕಲ್ ಅನುಸಾರ ಸುಪ್ರೀಂ ಕೋರ್ಟ್ ತನ್ನ ಪರಮಾಧಿಕಾರವನ್ನು ಬಳಸಿಕೊಂಡು ಈ ಆದೇಶ ಮಾಡಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶವನ್ನು ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆ, ಪ್ರತಿಪಕ್ಷ ಎಐಎಡಿಎಂಕೆ ಪಕ್ಷಗಳು ಸ್ವಾಗತಿಸಿವೆ. ಬಿಜೆಪಿ ಮೌನ ವಹಿಸಿದ್ದು, ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ‘ಬಿಜೆಪಿ ಉಗ್ರರರೊಂದಿಗೆ ರಾಜಿ ಮಾಡಿಕೊಂಡಿದೆ’ ಎಂದು ಅದು ಕಟುವಾಗಿ ಟೀಕಿಸಿದೆ.
ರಾಜೀವ್ ಗಾಂಧಿ ಹಂತಕರ ಬಿಡುಗಡೆಯು ನಾನಾ ರೀತಿಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಕಾನೂನಾತ್ಮಕವಾಗಿ ಸುಪ್ರೀಂ ಕೋರ್ಟ್ ತೆಗೆದುಕೊಂಡಿರುವ ನಿರ್ಧಾರ ಸರಿ ಇರಬಹುದು. ಆದರೆ, ದೇಶದ ಪ್ರಧಾನಿಯಾಗಿದ್ದವರನ್ನು ಹತ್ಯೆ ಮಾಡಿದ ಅಪರಾಧ ಸಾಬೀತಾದ ಕಾರಣಕ್ಕೆ ಅವರಿಗೆ ನೇಣು ಶಿಕ್ಷೆಯನ್ನು ನೀಡಲಾಗಿತ್ತು. ಆ ನಂತರ ಸುಪ್ರೀಂ ಕೋರ್ಟ್ ನೇಣು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಈಗ ಎಲ್ಲ ಶಿಕ್ಷೆಯಿಂದಲೂ ಅವರನ್ನು ಮುಕ್ತಗೊಳಿಸಲಾಗಿದೆ! ಇದು ಯಾವ ಸಂದೇಶವನ್ನು ರವಾನಿಸುತ್ತದೆ ಎಂಬುದು ಮುಖ್ಯ. ತಮಿಳುನಾಡಿನಲ್ಲಿ ತಮಿಳು ರಾಜಕೀಯ ಕಾರಣಕ್ಕೆ ಮೊದಲಿನಿಂದಲೂ ಈ ಅಪರಾಧಿಗಳ ಪರವಾಗಿಯೇ ಎಲ್ಲ ರಾಜಕೀಯ ಪಕ್ಷಗಳು ವರ್ತಿಸಿವೆ. ಅಂದ ಮಾತ್ರಕ್ಕೆ ಅಪರಾಧಿಗಳನ್ನು ಶಿಕ್ಷೆಯಿಂದ ಮುಕ್ತಗೊಳಿಸುವುದೇ ಸರಿಯೇ?
ಇಲ್ಲಿ ನಾವು ಗಮನಿಸಬೇಕಾದ ಮತ್ತೊಂದು ಸಂಗತಿ ಇದೆ. ರಾಜೀವ್ ಗಾಂಧಿಯವರನ್ನು ಗುರಿಯಾಗಿಸಿಕೊಂಡು ಎಲ್‌ಟಿಟಿಇ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸತ್ತಿದ್ದು 14 ಜನರು. ಅಂದರೆ, ರಾಜೀವ್ ಗಾಂಧಿ ಮಾತ್ರವಲ್ಲದೇ ಹಂತಕರು ಇನ್ನುಳಿದ ಅಮಾಯಕ 13 ಜನರ ಸಾವಿಗೂ ಕಾರಣವಾಗಿದ್ದಾರೆ. ಇದು ಹೀನಾತಿಹೀನ ಕೃತ್ಯವೇ ಸರಿ. ಈಗ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದರಿಂದ, ತಮ್ಮ ಹತ್ತಿರದವರನ್ನು ಕಳೆದುಕೊಂಡು ಆ ಎಲ್ಲ 14 ಕುಟುಂಬಗಳಿಗೆ ಅನ್ಯಾಯ ಮಾಡಿದಂತಾಗಿದೆ. ಆ ಕುಟುಂಬಗಳಿಗೆ ನ್ಯಾಯ ಕೊಡಿಸುವವರಾರು? ಇದೆಲ್ಲವನ್ನೂ ಕಾನೂನಿನ ಉತ್ತರ ತೋರಿಸಿ, ಮರೆಮಾಚಬಹುದು. ಆದರೆ, ನೈತಿಕವಾಗಿ, ವಾಸ್ತವಿಕವಾಗಿ? ಈ ನೆಲೆಯಲ್ಲಿ ಯೋಚಿಸಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈಗ ಬಿಡುಗಡೆಯಾಗಿರುವವರೆಲ್ಲರೂ ಸಾಮಾನ್ಯ ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರಲ್ಲ, ಉಗ್ರ ಕೃತ್ಯದಲ್ಲಿ ಶಿಕ್ಷೆ ಅನುಭವಿಸುತ್ತಿದ್ದವರು! ಅಪರಾಧಿಗಳ ನಡತೆ ತೃಪ್ತಿಕರವಾಗಿದೆ; ಶೈಕ್ಷಣಿಕ ಡಿಗ್ರಿಗಳನ್ನು ಸಂಪಾದಿಸಿದ್ದಾರೆ; ಲೇಖನಗಳನ್ನು ಬರೆದಿದ್ದಾರೆ ಎಂಬೆಲ್ಲ ಸಂಗತಿಗಳನ್ನು ಪರಿಗಣಿಸುವುದಾದರೆ, ಇದೇ ಹಾದಿಯನ್ನು ಬೇರೆ ಅಪರಾಧಿಗಳು ಹಿಡಿಯಬಹುದಲ್ಲವೇ? ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ರಾಜಕೀಯ ಕಾರಣಕ್ಕೆ ಬಿಡುಗಡೆಯಾದಂತೆ, ಅಪರಾಧಿಗಳು ತಮ್ಮ ಜಾತಿ, ರಾಜಕೀಯ ‘ದೈತ್ಯಶಕ್ತಿ’ಗಳನ್ನು ಉಪಯೋಗಿಸಿ, ಬಂಧಮುಕ್ತರಾದರೆ, ನೆಲದ ಕಾನೂನಿಗೆ ಬೆಲೆ, ನೆಲೆ ಎರಡೂ ಇರುವುದಿಲ್ಲ. ಅಪರಾಧ ಎಸಗುವವರಿಗೆ ಹೊಸ ದಾರಿಗಳನ್ನು ತೋರಿಸಿಕೊಟ್ಟಂತಿದೆ ಈ ಪ್ರಕರಣ.
ರಾಜೀವ್ ಪುತ್ರಿ ಪ್ರಿಯಾಕಾ ಗಾಂಧಿ ಅವರು 2008ರಲ್ಲಿ ವೆಲ್ಲೋರ್ ಸೆಂಟ್ರಲ್ ಜೈಲಿನಲ್ಲಿ ನಳಿನಿಯನ್ನು ಭೇಟಿ ಮಾಡಿದ್ದರು. ಅದೊಂದು ಮಾನವೀಯ ದೃಷ್ಟಿಯ ನಡೆ. ಜತೆಗೆ, ಈಗ ಇಡೀ ಜಗತ್ತಿನಾದ್ಯಂತ ಗಲ್ಲು ಶಿಕ್ಷೆಯ ವಿರುದ್ಧ ದೊಡ್ಡ ಮಟ್ಟದ ಕೂಗು ಇದೆ. ಹಾಗೆಯೇ ಸುಪ್ರೀಂ ಕೋರ್ಟ್ ರಾಜೀವ್ ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದ್ದು ಒಪ್ಪಬಹುದಿತ್ತು. ಆದರೆ, ಅವರನ್ನು ಪೂರ್ತಿಯಾಗಿ ಬಿಡುಗಡೆ ಮಾಡಿದ್ದು ಮಾತ್ರ ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ವಿಶೇಷ ಎಂದರೆ, ಭಯೋತ್ಪಾದನೆಯ ವಿರುದ್ಧ ಸಮರವನ್ನೇ ಸಾರಿರುವ ಆಡಳಿತಾರೂಢ ಬಿಜೆಪಿ ಮೌನ ವಹಿಸಿದೆ. ತಮಿಳುನಾಡಿನಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುವ ತವಕದಲ್ಲಿರುವ ಬಿಜೆಪಿ, ಆ ಕಾರಣಕ್ಕಾಗಿ ತುಟಿ ಪಿಟಿಕ್ ಎನ್ನುತ್ತಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲದಿಲ್ಲ.
ಎಲ್ಲ ರಾಜಕೀಯ ಕಾರಣಗಳನ್ನು ಹಾಗೂ ಮಾನವೀಯ ಹಕ್ಕುಗಳನ್ನು ಬದಿಗಿಟ್ಟು ನೋಡುವುದಾದರೆ, ದೇಶದ ಪ್ರಧಾನಿಯಾಗಿದ್ದವರನ್ನು ಮತ್ತು ಒಟ್ಟು 14 ಜನರನ್ನು ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ಹತ್ಯೆ ನಡೆಸಿದ ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಲ್ಗೊಂಡವರನ್ನು ಬಂಧಮುಕ್ತಗೊಳಿಸಿರುವುದು ಸಮರ್ಥನೀಯವಲ್ಲ ಎಂದೇ ಸ್ಪಷ್ಟವಾಗಿ ಹೇಳಬೇಕಾಗುತ್ತದೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಮಕ್ಕಳ ಆತ್ಮಹತ್ಯೆ ಸರಣಿ ಕಳವಳಕಾರಿ