Site icon Vistara News

ವಿಸ್ತಾರ ಸಂಪಾದಕೀಯ: ಮರಣ ದಂಡನೆಯನ್ನು ಇನ್ನಷ್ಟು ಆರಾಮದಾಯಕಗೊಳಿಸುವ ಅಗತ್ಯ ಇದೆಯೆ?

is-there-a-need-to-make-the-death-penalty-more-comfortable

#image_title

ಮರಣ ದಂಡನೆಗೆ ಒಳಗಾದ ಕೈದಿಗಳಿಗೆ ಕಡಿಮೆ‌ ಯಾತನಾದಾಯಕವಾದ ಹಾಗೂ ಹೆಚ್ಚು ಪರಿಣಾಮಕಾರಿಯಾದ ವಿಧಾನವನ್ನು ಕಂಡುಕೊಳ್ಳಲು ಸಾಧ್ಯವಾದರೆ, ಈಗಿರುವ ನೇಣಿಗೇರಿಸುವ ವಿಧಾನ ಕೈಬಿಟ್ಟು ಅದನ್ನೇ ಅಳವಡಿಸುವ ಕುರಿತು ಚಿಂತಿಸುವುದಾಗಿ, ಆ ಕುರಿತು ಪರಿಶೀಲಿಸಲು ಒಂದು ಸಮಿತಿ ರಚಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇದನ್ನು ಇನ್ನೊಮ್ಮೆ ವಿವೇಚಿಸಬೇಕಾದೀತು.

ಮರಣ ದಂಡನೆ ಕಡಿಮೆ ನೋವಿನಿಂದ ಕೂಡಿರಬೇಕು. ಈಗ ನೀಡುತ್ತಿರುವ ಗಲ್ಲು ಶಿಕ್ಷೆ ಅಪರಾಧಿಗೆ ಹೆಚ್ಚು ನೋವುಂಟು ಮಾಡುತ್ತದೆ ಎಂದು ಕೆಲವರು ವಾದಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಭಾರತದಲ್ಲಿ‌ ಮರಣ ದಂಡನೆ ಎಂದರೆ, ಅಪರಾಧಿಯನ್ನು ‘ಸಾಯುವವರೆಗೂ ನೇಣು ಬಿಗಿದು ನೇತು ಹಾಕುವುದು’ ಎಂಬುದು ದಂಡ ಸಂಹಿತೆಯಲ್ಲಿದೆ. ಆದರೆ ಇದು ಅಮಾನವೀಯ, ಕ್ರೂರ, ಮನುಷ್ಯ ಘನತೆಯನ್ನು ನಿರಾಕರಿಸುವಂಥದ್ದು ಎನ್ನುವುದು ಅವರ ವಾದವಾಗಿದೆ. ಇನ್ನೂ ಕೆಲವರು ಮರಣ ದಂಡನೆಯನ್ನೇ ರದ್ದು ಪಡಿಸಬೇಕು ಎಂದು ವಾದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌, ಕಡಿಮೆ ನೋವಿರುವ ಬೇರೆ ವಿಧಾನ ಇದ್ದರೆ ಗಲ್ಲಿಗೇರಿಸುವುದನ್ನೇ ರದ್ದುಪಡಿಸಬಹುದು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಸುಪ್ರೀಂ ಕೋರ್ಟ್‌ 2018ರಲ್ಲೇ ಒಮ್ಮೆ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ನೋಟಿಸ್‌ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರ, ನೇಣಿಗೆ ಹಾಕುವುದು ಮರಣ ದಂಡನೆಯ ಅತ್ಯಂತ ಸುರಕ್ಷಿತ ಮತ್ತು ತ್ವರಿತ ವಿಧಾನವಾಗಿದೆ ಎಂದು ಪ್ರತಿಕ್ರಿಯಿಸಿತ್ತು. ಕೆಲವು ಮುಂದುವರಿದ ದೇಶಗಳಲ್ಲಿ ವಿಷದ ಚುಚ್ಚು ಮದ್ದು ನೀಡಲಾಗುತ್ತದೆ. ಆದರೆ ಇದರಲ್ಲೂ ರಾಸಾಯನಿಕ ವೈಫಲ್ಯದ ಸಾಧ್ಯತೆ ಇರುತ್ತದೆ. ಮಾತ್ರವಲ್ಲ ಇದರ ಜಾರಿಗೆ ಸೂಕ್ತರಾದ ತಜ್ಞರೂ ಇಲ್ಲ ಎಂದು ವಾದಿಸಿತ್ತು.

ಮರಣ ದಂಡನೆಯ ಬಗ್ಗೆ ಎಲ್ಲ ದೇಶಗಳಲ್ಲೂ ಒಂದೇ ಅಭಿಪ್ರಾಯವಿಲ್ಲ. ಮುಂದುವರಿದ ದೇಶವಾದ ಅಮೆರಿಕದಲ್ಲಿ ಮರಣ ದಂಡನೆಗೆ ಗಲ್ಲು, ವಿಷದ ಇಂಜೆಕ್ಷನ್, ವಿದ್ಯುತ್ ಪ್ರವಾಹ ಮುಂತಾದವುಗಳನ್ನು ಬಳಸಲಾಗುತ್ತದೆ. ಅಲ್ಲಿ ಮರಣ ದಂಡನೆಗೆ ಮುನ್ನ ಅಪರಾಧಿಗೆ ಅರಿವಳಿಕೆ ನೀಡುವ ಪರಿಪಾಠ ಇದೆ. ಹೀಗಾಗಿ ಅಪರಾಧಿಗೆ ನೋವಿನ ಅನುಭವವಿಲ್ಲ. ಇಂಗ್ಲೆಂಡ್‌ನಲ್ಲಿ 1969ರಿಂದ ಈಚೆಗೆ ಯಾರಿಗೂ ಮರಣ ದಂಡನೆಯನ್ನೇ ನೀಡಿಲ್ಲ. ಹೀಗಾಗಿ ವಿಧಾನದ ಕುರಿತ ವಿವಾದವೇ ಇಲ್ಲ. ಇನ್ನುಳಿದ ಹೆಚ್ಚಿನ ದೇಶಗಳಲ್ಲಿ ನೇಣು ಹಾಗೂ ವಿಷದ ಇಂಜೆಕ್ಷನ್ ಎರಡೂ ವಿಧಾನಗಳು ಬಳಕೆಯಲ್ಲಿವೆ. ಅಂದರೆ ನೇಣು ಅಥವಾ ವಿಷದ ಇಂಜೆಕ್ಷನ್‌ನಲ್ಲಿ ವಿಷವೇ ಮೇಲು ಎನ್ನಲು ಸೂಕ್ತ ಸಾಕ್ಷ್ಯಾಧಾರವಿಲ್ಲ.

ಈಗ ಕೇಂದ್ರ ಸರ್ಕಾರ ಹೊಸ ಸಾಧ್ಯತೆ ಬಗ್ಗೆ ಪರಿಶೀಲಿಸಲು ಸಮಿತಿ ರಚಿಸುವುದಾಗಿ ಹೇಳಿದೆ. ವಾಸ್ತವ ಏನೆಂದರೆ ಮರಣ ದಂಡನೆ ಶಿಕ್ಷೆ ಎನ್ನುವುದೇ ಈಗ ಒಂದು ವಿಡಂಬನೆಯಾಗಿದೆ. ಏಕೆಂದರೆ ದೇಶದ ಒಂದಲ್ಲ ಒಂದು ಕೋರ್ಟ್‌ ಪಾತಕಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುತ್ತಲೇ ಇರುತ್ತದೆ. ಆದರೆ ವರ್ಷದಲ್ಲಿ ಕನಿಷ್ಠ ಒಬ್ಬನೇ ಒಬ್ಬ ಅಪರಾಧಿ ಗಲ್ಲಿಗೇರುವುದಿಲ್ಲ. ದೇಶದ ಪ್ರಧಾನಿ, ಮುಖ್ಯಮಂತ್ರಿಯನ್ನು ಬರ್ಬರವಾಗಿ ಕೊಂದ ಪಾತಕಿಗಳನ್ನೇ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಗಲ್ಲಿಗೇರಿಸಲು ಸಾಧ್ಯವಾಗಿಲ್ಲ. ಶಿಶುವಿನ ಮೇಲೆಯೇ ಅತ್ಯಾಚಾರ ಮಾಡಿ ಕೊಂದವರು, ಸಾಮೂಹಿಕ ಹತ್ಯಾಕಾಂಡ ನಡೆಸಿದವರೂ ಗಲ್ಲಿಗೇರದೆ ಜೈಲಿನಲ್ಲಿ ಹಾಯಾಗಿದ್ದಾರೆ. ಭಾರತದ ಜೈಲುಗಳಲ್ಲಿ ಗಲ್ಲಿಗೊಳಗಾದ 488 ಪಾತಕಿಗಳಿದ್ದಾರೆ.‌ ಆದರೆ 2020ರ ಬಳಿಕ ಯಾರನ್ನೂ ಗಲ್ಲಿಗೇರಿಸಿಲ್ಲ. ನೂರಾರು ಮಂದಿಯ ಕ್ಷಮಾದಾನ ಯಾಚನೆಯ ಅರ್ಜಿಗಳು ರಾಷ್ಟ್ರಪತಿಗಳ ಮುಂದಿವೆ. ಅವಕ್ಕೂ ಮುಕ್ತಿಯಿಲ್ಲ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ‘ದಿ ಕೇರಳ ಸ್ಟೋರಿ’ ನಿಷೇಧದ ಮಾತೇಕೆ?

ಮರಣದಂಡನೆಯನ್ನೇ ಕೈಬಿಡಬೇಕು ಎಂದು ಹಲವರು ವಾದಿಸುತ್ತಾರೆ. ಆದರೆ ಈ ಬಗ್ಗೆ ವಿವರವಾದ ವರದಿ ನೀಡಿದ್ದ 35ನೇ ಕಾನೂನು ಆಯೋಗ, ಮರಣದಂಡನೆ ಉಳಿಸಿಕೊಳ್ಳಲು ಸೂಚಿಸಿದೆ. ಭಾರತದಲ್ಲಿರುವ ಶಿಕ್ಷಣ, ನೈತಿಕತೆಯ ಪರಿಕಲ್ಪನೆ, ಜನಸಂಖ್ಯೆ, ಅಪರಾಧ ಪ್ರಮಾಣ ಹಾಗೂ ಗಂಭೀರತೆ ಇವೆಲ್ಲವುಗಳ ಹಿನ್ನೆಲೆಯಲ್ಲಿ, ಮರಣದಂಡನೆ ರದ್ದುಗೊಳಿಸಲು ಕಾಲ ಪಕ್ವವಾಗಿಲ್ಲ ಎಂದಿತ್ತು.

ಇನ್ನೊಂದೆಡೆ ದೇಶದಲ್ಲಿ ಪಾತಕ ಕೃತ್ಯಗಳು ದಿನೇದಿನೆ ಹೆಚ್ಚುತ್ತಲೇ ಇವೆ. ಇದೀಗ ಅಪರೂಪದಲ್ಲಿ ಅಪರೂಪಕ್ಕೆ ನೀಡುವ ಮರಣ ದಂಡನೆಯನ್ನೂ ಮತ್ತಷ್ಟು ಆರಾಮದಾಯಕ ಮಾಡಿಬಿಟ್ಟರೆ ಪಾತಕ ಕೃತ್ಯ ಎಸಗುವವರಿಗೆ ಶಿಕ್ಷೆಯ ಭಯವೇ ಇಲ್ಲದಂತಾಗುತ್ತದೆ. ಘೋರ ಅಪರಾಧ ಕೃತ್ಯ ಎಸಗಿದವರಿಗೆ ವಿಧಿಸಿರುವ ಮರಣ ದಂಡನೆಯನ್ನು ತ್ವರಿತವಾಗಿ ಜಾರಿ ಮಾಡುವ ನಿಟ್ಟಿನಲ್ಲಿ ನ್ಯಾಯಾಂಗ ಮತ್ತು ಕಾರ್ಯಾಂಗಗಳು ಗಂಭೀರ ಕ್ರಮ ಕೈಗೊಳ್ಳಬೇಕಿದೆ.

Exit mobile version