ಟೆಲ್ ಅವಿವ್: 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ನಡೆಸಿದ ದಾಳಿಗೆ ತೀವ್ರ ಪ್ರಮಾಣದಲ್ಲಿ ಪ್ರತಿದಾಳಿ (Israel Hamas War) ನಡೆಸುತ್ತಿರುವ ಇಸ್ರೇಲ್ ಸೈನಿಕರು ಇಂದಿಗೂ ಕದನ ವಿರಾಮ ಘೋಷಿಸಿಲ್ಲ. ಹಮಾಸ್ ಉಗ್ರರ ಅಡಗು ತಾಣವಾಗಿರುವ ಗಾಜಾ ನಗರದ ಮೇಲೆ ಇಸ್ರೇಲ್ ಸತತವಾಗಿ ದಾಳಿ ನಡೆಸಿ, ಉಗ್ರರನ್ನು ಸದೆಬಡಿಯುತ್ತಿದೆ. ಇಸ್ರೇಲ್ ದಾಳಿಯಲ್ಲಿ ನಾಗರಿಕರೂ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ, ಇಸ್ರೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್‌ಜಜೀರಾ ಸುದ್ದಿವಾಹಿನಿಯನ್ನು ಇಸ್ರೇಲ್ ಸ್ಥಗಿತಗೊಳಿಸಿದೆ. ಚಾನೆಲ್ ಬಂದ್ ಮಾಡುವ ಕುರಿತು ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಘೋಷಣೆ ಮಾಡಿದ್ದಾರೆ.
“ಅಲ್‌ಜಜೀರಾ ಚಾನೆಲ್‌ಅನ್ನು ಇಸ್ರೇಲ್‌ನಲ್ಲಿ ಸ್ಥಗಿತಗೊಳಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಹಾಗಾಗಿ, ಚಾನೆಲ್‌ಅನ್ನು ಸ್ಥಗಿತಗೊಳಿಸಲಾಗುತ್ತಿದೆ” ಎಂದು ಬೆಂಜಮಿನ್ ನೆತನ್ಯಾಹು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕುರಿತು ಬೆಂಜಮಿನ್ ನೆತನ್ಯಾಹು ವಕ್ತಾರ (ಅರಬ್ ವರ್ಲ್ಡ್) ಒಫಿರ್ ಜೆಂಡಲ್‌ಮ್ಯಾನ್ ಕೂಡ ಮಾಹಿತಿ ನೀಡಿದ್ದಾರೆ. “ಕೂಡಲೇ ಅಲ್‌ಜಜೀರಾ ಚಾನೆಲ್‌ಅನ್ನು ಸ್ಥಗಿತಗೊಳಿಸುತ್ತೇವೆ. ಕೇಬಲ್ ಹಾಗೂ ಸ್ಯಾಟಲೈಟ್ ಟೆಲಿವಿಷನ್ ಕಂಪನಿಗಳಿಂದ ಚಾನೆಲ್‌ಅನ್ನು ತೆಗೆಯಲಾಗುತ್ತದೆ. ವರದಿಗಾರರು ಕೂಡ ಕೆಲಸ ಮಾಡಲು ಬಿಡುವುದಿಲ್ಲ” ಎಂದು ತಿಳಿಸಿದ್ದಾರೆ. ಇದಾದ ಬೆನ್ನಲ್ಲೇ, ಚಾನೆಲ್‌ಗೆ ತೆರಳಿದ ಪೊಲೀಸರು ಸುದ್ದಿವಾಹಿನಿಯನ್ನು ಸ್ಥಗಿತಗೊಳಿಸಿದ್ದಾರೆ. ಇದಕ್ಕೆ ಅಲ್‌ಜಜೀರಾ ಪ್ರತಿಕ್ರಿಯಿಸಿದ್ದು, ಅಸಮಾಧಾನ ವ್ಯಕ್ತಪಡಿಸಿದೆ.
Israeli police have entered Al Jazeera's office in Jerusalem in order to forcibly close it. pic.twitter.com/qwt4NAZN5j
— Séamus Malekafzali (@Seamus_Malek) May 5, 2024
ಕತಾರ್ ಮೂಲದ ಸುದ್ದಿವಾನಿಯಾದ ಅಲ್‌ಜಜೀರಾ, ಹಮಾಸ್ ಪರವಾಗಿ ಕೆಲಸ ಮಾಡುತ್ತಿದೆ. ಇದರಿಂದ ಇಸ್ರೇಲ್ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂಬುದು ಇಸ್ರೇಲ್ ವಾದವಾಗಿದೆ. “ಇಸ್ರೇಲ್ ವಿರೋಧಿ ನೀತಿಯನ್ನು ಅಲ್‌ಜಜೀರಾ ಅನುಸರಿಸುತ್ತಿದೆ. ಅದು ಹಮಾಸ್ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತಿದೆ. ಇದು ದೇಶದ ಭದ್ರತೆಗೆ ಧಕ್ಕೆ ತರುವ ವಿಷಯವಾಗಿದೆ. ಹಾಗಾಗಿ, ಚಾನೆಲ್ ಸ್ಥಗಿತಗೊಳಿಸಲು ಆದೇಶಿಸಲಾಗಿದೆ” ಎಂದು ಇಸ್ರೇಲ್ ಸಚಿವರೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ನಾಗರಿಕರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್, ಗಾಜಾಪಟ್ಟಿಯಲ್ಲಿನ ಹಮಾಸ್ ಉಗ್ರರನ್ನು ನಾಶ ಮಾಡುವ ಪಣತೊಟ್ಟು, ಸೇನಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಗಾಜಾ ನಗರದ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಗಳಿಂದಾಗಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿವೆ. ಇಷ್ಟಾದರೂ ಇಸ್ರೇಲ್ ಪ್ರತಿದಾಳಿ ನಿಲ್ಲಿಸುತ್ತಿಲ್ಲ.
ಇದಕ್ಕೂ ಮೊದಲು ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧ ಮಂಡಿಸಿದ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿತ್ತು. ಪ್ಯಾಲೆಸ್ತೀನ್‌ನ ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲ್ ಆಕ್ರಮಣಕಾರಿ ನೀತಿಯನ್ನು ಖಂಡಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಈ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿರುವುದು ವಿಶೇಷವಾಗಿತ್ತು. ಇದಾದ ನಂತರ ಇಸ್ರೇಲ್ ವಿರುದ್ಧ ಮಂಡಿಸಿದ ನಿರ್ಣಯದ ಮತದಾನದಿಂದ ಭಾರತ ದೂರ ಉಳಿದಿದೆ.
ಇದನ್ನೂ ಓದಿ: War and Love : ಹಮಾಸ್ ಒತ್ತೆಯಾಳುವಾಗಿರುವ ಪ್ರಿಯತಮನಿಗಾಗಿ 6 ತಿಂಗಳಿಂದ ಕಾಯುತ್ತಿದ್ದಾಳೆ ಇಸ್ರೇಲ್ ಯುವತಿ!