ಟೆಲ್‌ಅವಿವ್: ಇಸ್ರೇಲ್ ಮೇಲೆ ಇರಾನ್ 200ಕ್ಕೂ ಅಧಿಕ ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ಮೂಲಕ ದಾಳಿ (Israel Iran War) ನಡೆಸಿದ್ದು, ಮೂರನೇ ಮಹಾಯುದ್ಧದ ಭೀತಿ ಹೆಚ್ಚಾಗಿದೆ. ಹಮಾಸ್ ಉಗ್ರರ ದಾಳಿಗೆ ಸಿಲುಕಿದ್ದ ಇಸ್ರೇಲ್ ಈಗ ಮತ್ತೊಂದು ದಾಳಿ ಎದುರಿಸುತ್ತಿದೆ. ಇದರ ಬೆನ್ನಲ್ಲೇ, ಇಸ್ರೇಲ್‌ನಲ್ಲಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದು, ಟೆಲ್‌ಅವಿವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು (Indian Embassy In Israel) ಸಹಾಯವಾಣಿ (Helpline) ತೆರೆದಿದೆ. “ಯಾರೂ ಆತಂಕಕ್ಕೀಡಾಗಬಾರದು. ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ” ಎಂಬ ಸಂದೇಶವನ್ನೂ ರವಾನಿಸಿದೆ.
“ಇಸ್ರೇಲ್‌ನಲ್ಲಿ ಇತ್ತೀಚಿನ ಬೆಳವಣಿಗೆಯಿಂದಾಗಿ ಇಲ್ಲಿ ನೆಲೆಸಿರುವ ಭಾರತೀಯರು ಆತಂಕಪಡಬೇಕಿಲ್ಲ. ಭಾರತೀಯರು ಸ್ಥಳೀಯ ಅಧಿಕಾರಿಗಳು ಸೂಚಿಸಿರುವ ಶಿಷ್ಟಾಚಾರಗಳನ್ನು ಪಾಲಿಸಿ. ಭಾರತದ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತೀಯರ ರಕ್ಷಣೆ ದೃಷ್ಟಿಯಿಂದ ಇಸ್ರೇಲ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದೆ. ಹಾಗಾಗಿ, ಯಾರೂ ಆತಂಕಕ್ಕೀಡಾಗಬಾರದು. ಯಾವುದೇ ತುರ್ತು ಸಂದರ್ಭದಲ್ಲಿ ಭಾರತೀಯ ರಾಯಭಾರ ಕಚೇರಿಗೆ ಕರೆ ಮಾಡಿ” ಎಂಬುದಾಗಿ ಸಹಾಯವಾಣಿ ಹೊರಡಿಸಿದೆ.
📢*IMPORTANT ADVISORY FOR INDIAN NATIONALS IN ISRAEL*
— India in Israel (@indemtel) April 14, 2024
Link : https://t.co/OEsz3oUtBJ pic.twitter.com/ZJJeu7hOug
ಇರಾನ್ ಕ್ಷಿಪಣಿಗಳನ್ನು ನಿಗ್ರಹಿಸಿದ ಇಸ್ರೇಲ್
ಶನಿವಾರ (ಏಪ್ರಿಲ್ 13) ರಾತ್ರಿ ಇರಾನ್ ನೂರಾರು ಕ್ಷಿಪಣಿಗಳೊಂದಿಗೆ ದಾಳಿ ನಡೆಸಿದೆ. ದಾಳಿಯಾಗುತ್ತಲೇ ಇಸ್ರೇಲ್‌ನಲ್ಲಿ ಬಾಂಬ್ ಕುರಿತು ಎಚ್ಚರಿಕೆ ನೀಡುವ ಸೈರನ್‌ಗಳು ಕೂಗಿವೆ. ಅಷ್ಟೇ ಅಲ್ಲ, ಇಸ್ರೇಲಿ ಡಿಫೆನ್ಸ್ ಫೋರ್ಸ್‌ನ ಐರನ್ ಡೋಮ್‌ಗಳು ಇರಾನ್‌ನ ನೂರಾರು ಕ್ಷಿಪಣಿಗಳನ್ನು ತಡೆದಿವೆ. ಇಸ್ರೇಲ್ ಮೇಲೆ ಇರಾನ್ ದಾಳಿಯಲ್ಲಿ 12 ವರ್ಷದ ಬಾಲಕಿಯೊಬ್ಬಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇರಾನ್ ಕ್ಷಿಪಣಿಗಳನ್ನು ತಡೆದಿರುವ ಕುರಿತು ಇಸ್ರೇಲ್ ವಿಡಿಯೊ ಕೂಡ ಬಿಡುಗಡೆ ಮಾಡಿದೆ.
Israelis’ reality in the last hours: pic.twitter.com/VXeHM8WqJi
— Israel Defense Forces (@IDF) April 14, 2024
“ಕಳೆದ ಕೆಲವು ದಿನಗಳಿಂದ ಇರಾನ್ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂಬ ಸುಳಿವು ಸಿಕ್ಕಿತ್ತು. ಅದಕ್ಕಾಗಿ ಇಸ್ರೇಲ್ ಕೂಡ ಪ್ರತಿದಾಳಿಗೆ ಸಿದ್ಧವಾಗಿದೆ. ಇಸ್ರೇಲ್ ಬಲಿಷ್ಠವಾಗಿದೆ. ಇಲ್ಲಿನ ರಕ್ಷಣಾ ವ್ಯವಸ್ಥೆಯು ಸಮರ್ಥವಾಗಿದೆ. ಈಗ ಇರಾನ್ ನಮ್ಮ ಮೇಲೆ ದಾಳಿ ಮಾಡಿದ್ದು, ನಾವೇನೂ ಕೈಕಟ್ಟಿ ಕೂರುವವರಲ್ಲ. ನಮ್ಮ ಜತೆ ಅಮೆರಿಕ ನಿಂತಿದೆ. ಬ್ರಿಟನ್ ಕೂಡ ನಮಗೆ ಬೆಂಬಲ ಸೂಚಿಸಿದೆ. ಹಾಗಾಗಿ, ಇರಾನ್‌ಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ” ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಅಮೆರಿಕಕ್ಕೆ ಇರಾನ್ ಎಚ್ಚರಿಕೆ
ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡಿದರೆ, ನಾವು ಇಸ್ರೇಲ್ ಪರ ನಿಲ್ಲುತ್ತೇವೆ ಎಂದು ಅಮೆರಿಕ ತಿಳಿಸಿದ ಬೆನ್ನಲ್ಲೇ ಅಮೆರಿಕಕ್ಕೆ ಇರಾನ್ ಎಚ್ಚರಿಕೆ ನೀಡಿದೆ. “ಡಮಾಸ್ಕಸ್‌ನಲ್ಲಿರುವ ನಮ್ಮ ರಾಜತಾಂತ್ರಿಕ ಕಚೇರಿಗಳ ಮೇಲೆ ಯಹೂದಿಗಳು (ಇಸ್ರೇಲ್) ಆಕ್ರಮಣಕಾರಿ ನೀತಿ ಅನುಸರಿಸುತ್ತಿರುವ ಕಾರಣ ಪ್ರತಿಕ್ರಿಯೆ ರೂಪದಲ್ಲಿ ಇರಾನ್ ಮಿಲಿಟರಿ ಪಡೆಗಳು ದಾಳಿ ನಡೆಸುತ್ತಿವೆ. ಇದಕ್ಕೆ ಇಸ್ರೇಲ್ ಕೂಡ ಪ್ರತಿದಾಳಿ ಮಾಡಬಹುದು. ಹಾಗಾಗಿ, ಮುಂದಿನ ದಿನಗಳಲ್ಲಿ ಪರಿಣಾಮಗಳು ಭೀಕರವಾಗಿರಲಿವೆ. ಇದು ಇಸ್ರೇಲ್ ಹಾಗೂ ಇರಾನ್ ನಡುವಿನ ಸಮರವಾಗಿದೆ. ಹಾಗಾಗಿ, ಇದರಿಂದ ಅಮೆರಿಕ ದೂರ ಉಳಿಯಲೇಬೇಕು” ಎಂದು ಇರಾನ್ ಎಚ್ಚರಿಸಿದೆ.
ಇದನ್ನೂ ಓದಿ: Israel Iran War: ಇರಾನ್‌ಗೆ ಪಾಠ ಕಲಿಸದೆ ಬಿಡಲ್ಲ; ದಾಳಿಯ ಬೆನ್ನಲ್ಲೇ ಇಸ್ರೇಲ್ ಖಡಕ್ ಎಚ್ಚರಿಕೆ