ಹೊಸದಿಲ್ಲಿ: ಇರಾನ್ ವಾಯುನೆಲೆ ಮೇಲೆ ಇಸ್ರೇಲ್ ವಾಯುದಾಳಿ (Israel- Iran war) ಆರಂಭಿಸಿದೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿರುವಂತೆ ಶುಕ್ರವಾರ ಕಚ್ಚಾ ತೈಲ ಬೆಲೆ (Crude Oil Price) 4%ರಷ್ಟು ಏರಿವೆ. ಬ್ರೆಂಟ್ (Brent) ತೈಲದ ಬೆಲೆ ಬ್ಯಾರೆಲ್‌ಗೆ $90ಕ್ಕಿಂತ ಹೆಚ್ಚಾಗಿದೆ. ಇಸ್ರೇಲಿನ ಕ್ಷಿಪಣಿಗಳು ಇರಾನ್‌ಗೆ ಅಪ್ಪಳಿಸಿದ ವರದಿಗಳು ಬಂದ ನಂತರ ತೈಲ ಬೆಲೆಗಳು ಹಠಾತ್ ಏರಿದವು.
ಜಾಗತಿಕ ಮಾನದಂಡವಾದ ಬ್ರೆಂಟ್ ತೈಲವು ಬ್ಯಾರೆಲ್‌ಗೆ $90.54ಕ್ಕೆ, 3.94%ರಷ್ಟು ಏರಿತು. ಆದರೆ US ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು 4.06%ರಷ್ಟು ಏರಿಕೆಯಾಗಿ $ 86.09ಕ್ಕೆ ತಲುಪಿದೆ.
ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆ ಪ್ರಕಾರ, ಇರಾನಿನ ಇಸ್ಫಹಾನ್ ನಗರದ ವಿಮಾನ ನಿಲ್ದಾಣದಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಇಸ್ಫಹಾನ್ ಇರಾನ್ ಮಿಲಿಟರಿಯ ಮುಖ್ಯ ವಾಯುನೆಲೆ ಮತ್ತು ಅದರ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಸ್ಥಳಗಳಿಗೆ ನೆಲೆಯಾಗಿದೆ. ಇಸ್ಫಹಾನ್ ನಗರದ ಪ್ರಮುಖ ವಾಯುನೆಲೆಯ ಬಳಿ ಸ್ಫೋಟಗಳ ವರದಿಗಳ ನಂತರ ಇರಾನ್ ಶುಕ್ರವಾರ ಮುಂಜಾನೆ ವಾಯು ರಕ್ಷಣಾ ಸೆಲ್‌ಗಳನ್ನು ಹಾರಿಸಿತು.
ಇಸ್ರೇಲ್ ಮೇಲೆ ಇರಾನ್‌ನ ಅಭೂತಪೂರ್ವ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇಸ್ರೇಲಿ ಮಿಲಿಟರಿ ಅಧಿಕಾರಿಗಳ ಪ್ರಕಾರ, ಕಳೆದ ಶನಿವಾರ ಇರಾನ್, ಇಸ್ರೇಲ್ ಸುತ್ತಲಿನ ಗುರಿಗಳ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದೆ. ಕ್ಷಿಪಣಿ ಉಡಾವಣೆಗಳು ಆಗಿವೆ. 300 ಮಾನವರಹಿತ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿಯನ್ನು ಇಸ್ರೇಲ್ ಎದುರಿಸಿದೆ.
ಕಚ್ಚಾ ತೈಲ ಬೆಲೆಗಳು ಮಧ್ಯಪ್ರಾಚ್ಯದಲ್ಲಿ ಹದಗೆಡುತ್ತಿರುವ ಬಾಂಧವ್ಯ ಮತ್ತು OPEC ಪೂರೈಕೆ ಕಡಿತ ಉಂಟಾಗಿರುವ ಪರಿಸ್ಥಿತಿಗಳಿಂದಾಗಿ ಈ ವರ್ಷ ತೈಲ ಬೆಲೆಗಳು ಇನ್ನಷ್ಟು ಏರಿವೆ.
ಇರಾನ್ ಇತ್ತೀಚೆಗೆ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ನಂತರ ಇಸ್ರೇಲಿ ಕ್ಷಿಪಣಿಗಳು ಇರಾನ್ ಅನ್ನು ಅಪ್ಪಳಿಸಿದವು. ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಹಲವಾರು ವಾಣಿಜ್ಯ ವಿಮಾನಗಳನ್ನು ಪಶ್ಚಿಮ ಇರಾನ್‌ನಿಂದ ಬೇರೆ ಕಡೆಗೆ ತಿರುಗಿಸಿ ಬಿಡಲಾಯಿತು. ಇಸ್ಫಹಾನ್ ನಗರದಲ್ಲಿ ಸ್ಫೋಟಗಳು ಉಂಟಾದವು.
ಈ ನಡುವೆ ಇಸ್ರೇಲ್ ಗಡಿಭಾಗದಲ್ಲಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿ ಮುಂದುವರಿದಿದ್ದು, ಇಸ್ರೇಲ್ ಅದನ್ನು ತಡೆಹಿಡಿಯುತ್ತಲೇ ಇದೆ. ಏಪ್ರಿಲ್ 13ರಂದು ನಡೆದ ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ತಾನು ಕಠಿಣವಾಗಿ ಪ್ರತಿಕ್ರಿಯಿಸುವುದಾಗಿ ಇಸ್ರೇಲ್ ಈ ಹಿಂದೆಯೇ ಘೋಷಿಸಿದೆ.
ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್‌ನ ಕಾನ್ಸುಲೇಟ್ ಕಟ್ಟಡದ ಮೇಲೆ ಎರಡು ವಾರಗಳ ಮೊದಲು ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಇಬ್ಬರು ಇರಾನಿನ ಜನರಲ್‌ಗಳನ್ನು ಕೊಂದಿತ್ತು. ಇದಕ್ಕೆ ಪ್ರತೀಕಾರವಾಗಿ ಏಪ್ರಿಲ್ 13ರಂದು ಇರಾನ್ ದಾಳಿ ನಡೆಸಿತ್ತು.
ಇದನ್ನೂ ಓದಿ: Israel Iran War : ಇಸ್ರೇಲ್ ಮೇಲಿನ ದಾಳಿಗೆ ಪ್ರತಿಕಾರ; ಅಮೆರಿಕ, ಬ್ರಿಟನ್ ನಿಂದ ಇರಾನ್‌ಗೆ ಭಾರಿ ನಿರ್ಬಂಧ