Site icon Vistara News

ISRO Mission : ಭೂ ಪರಿವೀಕ್ಷಣಾ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ

ISRO Mission

ಬೆಂಗಳೂರು: ಭೂಪರಿವೀಕ್ಷಣಾ ಉಪಗ್ರಹಗಳನ್ನು (EOS-08) ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO Mission) ಶುಕ್ರವಾರ ಯಶಸ್ವಿಯಾಗಿ ಭೂ ಕಕ್ಷೆಯಲ್ಲಿ ಸ್ಥಾಪಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್ಎಸ್ಎಲ್​ವಿ-ಡಿ 3) ಈ ಉಪಗ್ರಹಗಳನ್ನು ಹೊತ್ತೊಯ್ದಿತು. ಚೆನ್ನೈನಿಂದ ಪೂರ್ವಕ್ಕೆ 135 ಕಿ.ಮೀ ದೂರದಲ್ಲಿರುವ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್​ನಿಂದ ಬೆಳಿಗ್ಗೆ 9.17 ಕ್ಕೆ ಉಪಗ್ರಹಗಳನ್ನು ಹೊತ್ತಿದ್ದ ಎಸ್​​ಎಸ್​ಎಲ್​​ವಿ ಹಾರಾಟ ಆರಂಭಿಸಿತು.

ಮೈಕ್ರೋಸ್ಯಾಟ್​ಲೈಟ್​ ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದು ಮತ್ತು ಮೈಕ್ರೋಸ್ಯಾಟ್​ಲೈಟ್​ ಬಸ್​ಗೆ ಹೊಂದಿಕೆಯಾಗುವ ಪೇಲೋಡ್ ಉಪಕರಣಗಳನ್ನು ರಚಿಸುವುದು ಎಸ್ಎಸ್ಎಸ್​ವಿ -ಡಿ3 ಮತ್ತು ಇಒಎಸ್ -08 ಯೋಜನೆಯ ಉದ್ದೇಶ ಎಂದು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ISRO) ತಿಳಿಸಿದೆ. ಎಸ್ಎಸ್ಎಲ್​​ವಿ -ಡಿ3 ಮಿಷನ್ ಮೊದಲಿಗೆ ಆಗಸ್ಟ್ 15 ರಂದು ನಿಗದಿಯಾಗಿತ್ತು. ಬಳಿಕ ಒಂದು ದಿನ ಮುಂದೂಡಲ್ಪಟ್ಟು 16ರಂದು ಉಡಾವಣೆಗೊಂಡಿತು. ಇದು ಬಾಹ್ಯಾಕಾಶಕ್ಕೆ ಕಡಿಮೆ ವೆಚ್ಚದಲ್ಲಿ ಯಾನ ಮಾಡುವ ಇಸ್ರೋದ ಪ್ರಯತ್ನಗಳಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಉಡಾವಣೆ ಭಾರತೀಯ ಕಾಲಮಾನ 09:17 ಕ್ಕೆ ಆರಂಭಗೊಂಡಿತು. ಉಡಾವಣೆಯಾದ ಸುಮಾರು 17 ನಿಮಿಷಗಳ ನಂತರ, ಇಒಎಸ್ -08 ಉಪಗ್ರಹವನ್ನು ಎಸ್ಆರ್ -0 ಡೆಮೊಸ್ಯಾಟ್ ಜೊತೆಗೆ 475 ಕಿ.ಮೀ ವೃತ್ತಾಕಾರದ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಯಿತು. ಉಪಗ್ರಹವು 175.5 ಕೆ.ಜಿ ತೂಕವನ್ನು ಹೊಂದಿದೆ. ಇದರಲ್ಲಿ ಹೊಸ ತಾಂತ್ರಿಕತೆ ಹಾಗೂ ಪೇಲೋಡ್​ಗಳಿವೆ.

ಇದನ್ನೂ ಓದಿ:Rahul Gandhi : ಕೆಂಪುಕೋಟೆಯಲ್ಲಿ ರಾಹುಲ್ ಗಾಂಧಿಗೆ ಲಾಸ್ಟ್​ ಬೆಂಚ್​; ಬಿಜೆಪಿ- ಕಾಂಗ್ರೆಸ್​ ಜಟಾಪಟಿ

ಕಾರ್ಯವೇನು?

ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮೇಲ್ವಿಚಾರಣೆ, ಪರಿಸರದ ಮೇಲ್ವಿಚಾರಣೆ, ಬೆಂಕಿ ಪತ್ತೆ, ಜ್ವಾಲಾಮುಖಿ ಚಟುವಟಿಕೆ ವೀಕ್ಷಣೆ ಮತ್ತು ಕೈಗಾರಿಕಾ ಮತ್ತು ವಿದ್ಯುತ್ ಸ್ಥಾವರಗಳ ವಿಪತ್ತು ಮೇಲ್ವಿಚಾರಣೆಗೆ ಈ ಉಪಗ್ರಹ ಬಳಕೆಯಾಗಲಿದೆ. ಹಗಲು ಮತ್ತು ರಾತ್ರಿ ಮಿಡ್-ವೇವ್ ಐಆರ್ (ಎಂಐಆರ್) ಮತ್ತು ಲಾಂಗ್-ವೇವ್ ಐಆರ್ (ಎಲ್ಡಬ್ಲ್ಯುಐಆರ್) ಬ್ಯಾಂಡ್​ಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯಲು ಇಒಐಆರ್ ಪೇಲೋಡ್ ಇದು ಹೊಂದಿದೆ

ಸಾಗರ ಮೇಲ್ಮೈ ಗಾಳಿ ವಿಶ್ಲೇಷಣೆ, ಮಣ್ಣಿನ ತೇವಾಂಶ ಮೌಲ್ಯಮಾಪನ, ಹಿಮಾಲಯ ಪ್ರದೇಶದ ಕ್ರಯೋಸ್ಪಿಯರ್ ಅಧ್ಯಯನಗಳು, ಪ್ರವಾಹ ಪತ್ತೆ ಮತ್ತು ಒಳನಾಡಿನ ಜಲಮೂಲದ ಪತ್ತೆಯಂತಹ ಕಾರ್ಯವನ್ನೂ ಇದು ಮಾಡಬಲ್ಲುದು.

ಎಸ್ಎಸ್ಎಲ್​ವಿ ಸಾಧನೆ

ಎಸ್ಎಸ್ಎಲ್​ವಿ ಡಿ 3 ಮಿಷನ್ ಉಪಗ್ರಹ ಮೇನ್​​ಫ್ರೇಮ್​ ವ್ಯವಸ್ಥೆಗಳಲ್ಲಿ ಗಮನಾರ್ಹ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಇದರಲ್ಲಿ ಇಂಟಿಗ್ರೇಟೆಡ್ ಏವಿಯಾನಿಕ್ಸ್ ಸಿಸ್ಟಮ್ ಕೂಡ ಸೇರಿದೆ. ಇದು ಅನೇಕ ಕಾರ್ಯಗಳನ್ನು ಒಂದೇ ಘಟಕದ ಮೂಲಕ ನಿಯಂತ್ರಿಸುತ್ತದೆ. 400 ಜಿಬಿ ಡೇಟಾ ಸಂಗ್ರಹಣೆ ಸಾಮರ್ಥ್ಯವೂ ಇದೆ. ಈ ಮಿಷನ್ ಸಣ್ಣ ಉಪಗ್ರಹ ಉಡಾವಣೆಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಹೊಂದಿಕೊಳ್ಳುವ ಇಸ್ರೋದ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಈ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರೊಂದಿಗೆ ಇಸ್ರೋ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ತನ್ನ ಸಾಮರ್ಥ್ಯಗಳನ್ನು ವಿಸ್ತರಿಸಿದೆ. ಮಿನಿ, ಮ್ರೈಕ್ರೊ ಮತ್ತು ನ್ಯಾನೊ ಉಪಗ್ರಹಗಳನ್ನು ಉಡಾವಣೆ ಮಾಡಲು ಸಜ್ಜಾಗಿದೆ. ಇಒಎಸ್ -08 ಮಿಷನ್ ಭಾರತದ ಬಾಹ್ಯಾಕಾಶ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಅಂತರರಾಷ್ಟ್ರೀಯ ಬಾಹ್ಯಾಕಾಶ ಸಮುದಾಯದಲ್ಲಿ ಅದರ ಸ್ಥಾನ ಬಲಪಡಿಸುತ್ತದೆ.

Exit mobile version