21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ನಿರ್ಬಂಧವನ್ನು ಸಡಿಲಿಸಿ ವಯಸ್ಸಿನ ಮಿತಿಯನ್ನು 18 ವರ್ಷಗಳಿಗೆ ಇಳಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಕರ್ನಾಟಕ ಅಬಕಾರಿ ಪರವಾನಗಿಗಳು (ಸಾಮಾನ್ಯ ಷರತ್ತುಗಳು) ನಿಯಮಗಳು–1967ಕ್ಕೆ ಈ ಕುರಿತು ತಿದ್ದುಪಡಿ ತರಲಾಗುತ್ತಿದೆ. ತಿದ್ದುಪಡಿಗೆ ಇಲಾಖೆಯು ಸಿದ್ಧಪಡಿಸಿರುವ ಕರಡು ಪ್ರತಿಯನ್ನು ಸೋಮವಾರ (ಜನವರಿ 9) ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ಅಬಕಾರಿ ಪರವಾನಗಿ ನಿಯಮಗಳು ಸೆಕ್ಷನ್ 10 (1) (ಇ) ಅಡಿಯಲ್ಲಿ ಮದ್ಯ ಖರೀದಿದಾರನ ವಯಸ್ಸಿಗೆ ವಿಧಿಸಿದ್ದ ನಿರ್ಬಂಧವನ್ನು ಸಡಿಲಿಸುವ ಉಲ್ಲೇಖ ತಿದ್ದುಪಡಿ ಕರಡಿನಲ್ಲಿದೆ. ನಿಜಕ್ಕೂ ಇದೊಂದು ಆಘಾತಕಾರಿ ಬೆಳವಣಿಗೆ.
ಈಗಾಗಲೇ ಯುವ ಜನ ಮದ್ಯಪಾನ ಚಟಕ್ಕೆ ದಾಸರಾಗುತ್ತಿದ್ದಾರೆ. ಈ ಆತಂಕದ ನಡುವೆಯೇ ರಾಜ್ಯ ಸರ್ಕಾರ ಮದ್ಯಪಾನ ಖರೀದಿಸುವ, ಮದ್ಯಪಾನ ಮಾಡುವ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲು ಹೊರಟಿರುವುದು ಆತಂಕಕಾರಿ. ಈಗಾಗಲೇ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮದ್ಯ ಸೇವಿಸಿ ತೂರಾಡುವ ದೃಶ್ಯಗಳು ಆಗಾಗ ಕಣ್ಣಿಗೆ ಬೀಳುತ್ತವೆ. ಈ ಬಗ್ಗೆ ಪೋಷಕರ ವಲಯದಲ್ಲಿ ವ್ಯಾಪಕ ಕಳವಳ ವ್ಯಕ್ತವಾಗುತ್ತಿದೆ. ಹೀಗಿರುವಾಗ ಸರ್ಕಾರ ಮದ್ಯಪಾನ ಮಾಡಬಹುದಾದ ವಯಸ್ಸನ್ನು 18ಕ್ಕೆ ಇಳಿಸಿ ಬಿಟ್ಟರೆ, ಇನ್ನು ಮುಂದೆ ಪಿಯುಸಿ ಓದುವ ಮಕ್ಕಳೂ ಮದ್ಯಪಾನ ಮಾಡಿ ರಾಜಾರೋಷವಾಗಿ ಕಾಲೇಜಿಗೆ ಹೋಗಬಹುದು! ಸರಕಾರದ ಈ ನಿರ್ಧಾರ ಅನಾಹುತಕಾರಿ, ಆಕ್ಷೇಪಾರ್ಹ ಮತ್ತು ಖಂಡನೀಯ.
ಸಾಮಾನ್ಯವಾಗಿ 18 ವರ್ಷ ಎಂಬುದು ಇನ್ನೂ ಸರಿಯಾದ ಸಾಂಪ್ರದಾಯಿಕ ಶಿಕ್ಷಣವೇ ಮುಗಿದಿರದ ವಯಸ್ಸು. ಜೀವನದ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ, ಇನ್ನೂ ಪೋಷಕರ ಬೆಂಬಲ ಬೇಕಾಗುವ ವಯಸ್ಸದು. ಜತೆಗೆ ಜವಾಬ್ದಾರಿಯುತ ಕಲಿಕೆಯ ಹೊಣೆಯೂ ಇರುತ್ತದೆ. ಇಂಥ ವಯಸ್ಸಿನಲ್ಲಿ ಮದ್ಯ ಸೇವಿಸಬಹುದು ಎಂದು ಸರ್ಕಾರವೇ ಹೇಳಿದರೆ ಹದಿಹರೆಯದವರು ಅದನ್ನು ಸ್ವಚ್ಛಂದತೆಯ ಪರವಾನಗಿ ಎಂದು ತಿಳಿದುಕೊಳ್ಳುವ ಸಾಧ್ಯತೆ ಅಧಿಕ. ಕಾನೂನು, ಪೊಲೀಸರ ಭಯವೇ ಅನೇಕ ಸಲ ಕಾನೂನುಬಾಹಿರ ಕೃತ್ಯಗಳನ್ನು ಮಾಡದಂತೆ ಕಟ್ಟಿಹಾಕುತ್ತದೆ. ಇದ್ಯಾವ ಭಯವೂ ಇಲ್ಲ ಎಂದಾದರೆ ಕೇಳುವವರೇ ಇಲ್ಲದಂತಾಗುತ್ತದೆ. ಕಾಲೇಜು ಆವರಣಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲೇ ಈ ಸುದ್ದಿ ಬಂದಿರುವುದು ಆತಂಕಕಾರಿ.
ಮದ್ಯಪಾನ ಆರೋಗ್ಯಕರ ಸಮಾಜಕ್ಕೆ ಹಾನಿಕಾರಕ. ಹಾಗಾಗಿ ರಾಜ್ಯಾದ್ಯಂತ ಮದ್ಯ ನಿಷೇಧ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಗುಜರಾತ್ ನಲ್ಲಿ ಬಹಳ ಹಿಂದಿನಿಂದಲೇ ಪಾನ ನಿಷೇಧವಿದೆ. ಬಿಹಾರದಲ್ಲೂ ಇತ್ತೀಚೆಗೆ ಮದ್ಯ ನಿಷೇಧ ಜಾರಿ ಮಾಡಲಾಗಿದೆ. ಹೀಗಿರುವಾಗ ಕರ್ನಾಟಕ ಸರ್ಕಾರ ಮತ್ತಷ್ಟು ಯುವ ಜನತೆಗೆ ಮದ್ಯಪಾನದ ಚಟ ಅಂಟಿಸಿ ಅವರನ್ನು ಹಾಳುಗೆಡವಲು ಹೊರಟಿದ್ದು ಆತಂಕಕಾರಿ. ಪ್ರತಿಯೊಂದಕ್ಕೂ ಗುಜರಾತ್ ಮಾದರಿ ಎನ್ನುವ ಬಿಜೆಪಿ, ಮದ್ಯಪಾನ ವಿಷಯದಲ್ಲಿ ಗುಜರಾತ್ ಮಾದರಿ ಪಾಲಿಸದಿರುವುದು ಏಕೆ? ಅಮೆರಿಕದಂಥ ಮುಂದುವರಿದ ದೇಶದಲ್ಲೇ ಕನಿಷ್ಠ ಕಾನೂನುಬದ್ಧ ಮದ್ಯಪಾನ ವಯಸ್ಸನ್ನು 21ಕ್ಕೆ ನಿಗದಿಪಡಿಸಲಾಗಿದೆ. ನಮ್ಮ ದೇಶದ ಹರ್ಯಾಣದಲ್ಲಿ ಇತ್ತೀಚಿನವರೆಗೂ ವಯಸ್ಸಿನ ಮಿತಿ 25 ವರ್ಷಗಳಾಗಿತ್ತು. ಅದನ್ನೀಗ 21ಕ್ಕಿಳಿಸಲಾಗಿದೆ. ಇನ್ನಷ್ಟು ಇಳಿಸುವುದು ಒಳ್ಳೆಯ ಮಾದರಿಯಲ್ಲ.
ರಾಜ್ಯದ ಬೊಕ್ಕಸ ತುಂಬಲು ಯುವ ಜನತೆಯನ್ನು ಕುಡುಕರನ್ನಾಗಿ ಮಾಡಬೇಕೆ? ಇದು ನಾಚಿಕೆಗೇಡಿನ ವಿಚಾರ. ಸೋರಿಕೆ, ಭ್ರಷ್ಟಾಚಾರ ತಡೆ, ಮಿತವ್ಯಯ, ಮದ್ಯದ ಸುಂಕ ಹೆಚ್ಚಳ ಮೂಲಕ ಖಜಾನೆ ತುಂಬುವುದನ್ನು ಬಿಟ್ಟು ಯುವ ಜನತೆಗೆ ಮದ್ಯ ಕುಡಿಸಿ ಖಜಾನೆ ತುಂಬಲು ಹೊರಟಿದ್ದನ್ನು ಯಾವ ಕಾರಣಕ್ಕೂ ಒಪ್ಪಲಾಗದು. ಮಹಾತ್ಮ ಗಾಂಧಿಯವರು “ಮದ್ಯ ದೆವ್ವದ ಆವಿಷ್ಕಾರ. ಅದು ಮನುಷ್ಯನಿಂದ ಅರಿವನ್ನು ಕಿತ್ತುಕೊಳ್ಳುತ್ತದೆ” ಎಂದಿದ್ದರು. ಅವರ ಸೂಚನೆಯಿಂದಾಗಿಯೇ ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ‘ಸಂಪೂರ್ಣ ಮದ್ಯಪಾನ ನಿಷೇಧ’ವನ್ನು ಆಶಯವಾಗಿ ಪ್ರತಿಪಾದಿಸಲಾಗಿದೆ. ಇದನ್ನು ಆಗುಮಾಡಿಸುವುದು ಸರ್ಕಾರದ ಹೊಣೆಯೇ ಹೊರತು ಮದ್ಯಪಾನ ಹೆಚ್ಚಿಸುವುದಲ್ಲ. ರಾಜ್ಯ ಸರ್ಕಾರ ತಕ್ಷಣ ಈ ನಿರ್ಧಾರಕ್ಕೆ ವಿಷಾದ ವ್ಯಕ್ತಪಡಿಸಿ, ಈ ಪ್ರಸ್ತಾಪ ಹಿಂತೆಗೆದುಕೊಳ್ಳಬೇಕು.
ಸಂಪಾದಕೀಯ | ವಿಸ್ತಾರ ಸಂಪಾದಕೀಯ | ಕರಾವಳಿಯಲ್ಲಿನ ಡ್ರಗ್ಸ್ ಜಾಲ ಮಟ್ಟ ಹಾಕಿ