Site icon Vistara News

ವಿಸ್ತಾರ ಸಂಪಾದಕೀಯ: ಸಂತ್ರಸ್ತ ಆದಿವಾಸಿಯ ಕಾಲು ತೊಳೆದರೆ ಸಾಲದು, ಸಮಾಜದ ಮನೋಭಾವವೇ ಬದಲಾಗಬೇಕು

Caste System

ಮಧ್ಯಪ್ರದೇಶದಲ್ಲಿ ಆದಿವಾಸಿ ಕಾರ್ಮಿಕ ದಶಮತ್‌ ರಾವತ್‌ ಎಂಬುವರ ಮೇಲೆ ಮೂತ್ರ ವಿಸರ್ಜನೆ ಮಾಡುವ ಮೂಲಕ ವಿಕೃತಿ ಮೆರೆದ ರಾಜಕೀಯ ಮುಖಂಡನೊಬ್ಬನ ಆಪ್ತ ಪ್ರವೇಶ್‌ ಶುಕ್ಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಆತನ ಮನೆಯನ್ನು ಕೂಡ ಸರ್ಕಾರ ಧ್ವಂಸ ಮಾಡಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಆದಿವಾಸಿ ಕಾರ್ಮಿಕ ದಶಮತ್‌ ರಾವತ್‌ ಅವರ ಕಾಲು ತೊಳೆದಿದ್ದಾರೆ. ʼʼನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ” ಎಂದಿದ್ದಾರೆ. ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಸಂತ್ರಸ್ತರ ಪಾದ ತೊಳೆದಿರುವುದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದೊಂದು ಅಪರೂಪದ ನಡವಳಿಕೆ. ಉನ್ನತ ಅಧಿಕಾರದಲ್ಲಿ ಇರುವವರು ಸಂತ್ರಸ್ತರ ಪರ, ದೀನದಲಿತರು- ಶೋಷಿತರ ಪರ ಹೀಗೆ ಸಾರ್ವಜನಿಕವಾಗಿ ತಮ್ಮ ನಿಲುವಿನ ಪ್ರದರ್ಶನ ಮಾಡಿದಾಗ, ಅನೇಕ ಸಂದೇಶಗಳು ರವಾನೆ ಆಗುತ್ತಿರುತ್ತವೆ. ಇಂಥ ವಿಕೃತಿ- ಅಪರಾಧಗಳಿಗೆ ಆಸ್ಪದವನ್ನು ತಮ್ಮ ಆಡಳಿತದಲ್ಲಿ ನೀಡಲಾಗುವುದಿಲ್ಲ ಎಂಬುದು ಒಂದು; ಸಂತ್ರಸ್ತರಿಗೆ ಧೈರ್ಯ ತುಂಬುವುದು ಇನ್ನೊಂದು. ಸದಾ ಶೋಷಣೆಗೆ ಒಳಗಾಗುವ ಇಂಥ ಆದಿವಾಸಿ ಸಮುದಾಯಗಳಲ್ಲಿ, ಹೀಗೇನಾದರೂ ದೌರ್ಜನ್ಯ ನಡೆದರೆ ಆಳುವವರು ತಮ್ಮ ಜತೆಗಿದ್ದಾರೆ ಎಂಬ ಸಂದೇಶವನ್ನು ಇದು ರವಾನಿಸುತ್ತದೆ. ಹಾಗೆಯೇ, ಹೀಗೆ ದೌರ್ಜನ್ಯ ಎಸಗುವವರಲ್ಲಿ ಒಂದು ಬಗೆಯ ಭಯವನ್ನೂ ಇದು ಮೂಡಿಸುತ್ತದೆ.

ಇನ್ನಷ್ಟು ಮುಂದುವರಿದು ಪಾತಕಿ ಪ್ರವೇಶ್‌ ಶುಕ್ಲಾನ ಅಕ್ರಮ ಮನೆಯನ್ನು ಧ್ವಂಸಗೊಳಿಸಲಾಗಿದೆ. ಈ ಪ್ರವೇಶ್‌ ಶುಕ್ಲಾ, ಬಿಜೆಪಿ ಶಾಸಕ ಕೇದಾರ್‌ ಶುಕ್ಲಾ ಅವರ ಪ್ರತಿನಿಧಿ ಎಂಬುದು ಗೊತ್ತಾಗಿದೆ. ಆದರೆ ಈತನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ಪ್ರಕರಣ ದಾಖಲಿಸುವಂತೆ ಸ್ವತಃ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಚೌಹಾಣ್‌ ಸೂಚಿಸಿದ್ದರು. ಎನ್‌ಎಸ್‌ಎ ಪ್ರಕರಣ ದಾಖಲಾದ ಬಳಿಕ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಅಕ್ರಮವಾಗಿ ನಿರ್ಮಿಸಿದ ಪ್ರವೇಶ್‌ ಮಿಶ್ರಾ ಮನೆಯನ್ನು ಈಗಾಗಲೇ ಬುಲ್ಡೋಜರ್‌ ಮೂಲಕ ಧ್ವಂಸಗೊಳಿಸಿದ್ದು, ಅಪರಾಧಿಗಳಿಗೆ ತಕ್ಕ ಪಾಠ ಕಲಿಸಲಿದ್ದೇವೆ ಎಂಬ ಸಂದೇಶ ರವಾನಿಸಲಾಗಿದೆ. ಅಪರಾಧಿಗಳು ತಮ್ಮದೇ ಪಕ್ಷದವರಾಗಿದ್ದರೂ ಅದನ್ನು ಸಹಿಸಲಾಗುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ನೀಡಲಾಗಿದೆ. ಎಲ್ಲ ಸರ್ಕಾರಗಳಿಗೂ ಇದು ಮಾದರಿ.

ಇದು ಸಾಮಾನ್ಯ ಅಪರಾಧವಲ್ಲ. ಇಂಥದೊಂದು ಕೃತ್ಯದ ಹಿಂದಿರಬಹುದಾದ ಮಾನಸಿಕ ಸ್ಥಿತಿಯನ್ನು ಯೋಚಿಸಿದರೆ ಆಘಾತವಾಗದೆ ಇರದು. ಇನ್ನೊಬ್ಬ ಮನುಷ್ಯನ ಮೇಲೆ ಮೂತ್ರ ವಿಸರ್ಜನೆ ಮಾಡಬಹುದು, ಮಾಡಿ ಯಾವುದೇ ಶಿಕ್ಷೆಯಿಲ್ಲದೆ ಪಾರಾಗಬಹುದು ಎನ್ನುವ ಮನಸ್ಥಿತಿ ಯಾವ ಬಗೆಯದ್ದು? ಇದು ಎಂಥ ಪಾಳೇಗಾರಿಕೆಯ ವಾತಾವರಣದಲ್ಲಿ ಬೆಳೆದುಬಂದಿರಬಹುದು? ಸಂವಿಧಾನ ಪ್ರತಿಪಾದಿಸುವ ಸಮಾನತೆ, ಸಾಮಾಜಿಕ ನ್ಯಾಯ ಇತ್ಯಾದಿಗಳ ಬಗ್ಗೆ ಈ ವ್ಯಕ್ತಿಗೆ ಏನೂ ಗೊತ್ತೇ ಇಲ್ಲವೇ? ಇವೆಲ್ಲ ಹೋಗಲಿ, ಕನಿಷ್ಠ ಮಾನವೀಯತೆಯೂ ಇಲ್ಲದ ಈ ವ್ಯಕ್ತಿಯ ಮನೋಭಾವ ಎಂಥದು? ಇದಕ್ಕೆ ಯಾವ ಶಿಕ್ಷೆ ಸರಿಹೋಗಬಹುದು ಎಂಬುದನ್ನು ನ್ಯಾಯಾಂಗ ಇನ್ನಷ್ಟೇ ಯೋಚಿಸಬೇಕೋ ಏನೋ. ಮನುಷ್ಯ ಘನತೆಯನ್ನೇ ನಾಶ ಮಾಡುವ ಈ ಕೃತ್ಯಕ್ಕೆ ಕಠಿಣ ಜೈಲುಶಿಕ್ಷೆ ಅಗತ್ಯವಿದೆ. ಜತೆಗೆ ಶಿಕ್ಷಣವೂ ಅಗತ್ಯವಿದೆ.

ಇದನ್ನೂ ಓದಿ : Yadagiri News: ಯಾದಗಿರಿಯ ಯರಗೋಳ ಗ್ರಾಮದಲ್ಲಿ ಸಂಭ್ರಮದಿಂದ ಟೀಕಾಚಾರ್ಯರ ಪೂರ್ವಾರಾಧನೆ

ಆದಿವಾಸಿಗಳು, ದೀನ ದಲಿತರು ಪಾಳೇಗಾರಿಕೆ ಮನಸ್ಥಿತಿಯ ಮಂದಿಯಿಂದ ಅನುಭವಿಸುತ್ತಿರುವ ದೌರ್ಜನ್ಯಗಳಿಗೆ ಈ ಪ್ರಕರಣ ಒಂದು ರೂಪಕದಂತಿದೆ. ಇಂಥ ಸನ್ನಿವೇಶಗಳು ಆದಾಗ ಸರ್ಕಾರ ಹೇಗೆ ನಡೆದುಕೊಳ್ಳಬೇಕು ಎಂಬುದನ್ನೂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ನಡೆ ಮನದಟ್ಟು ಮಾಡಿಕೊಟ್ಟಿದೆ. ದೌರ್ಜನ್ಯಕ್ಕೆ ಪ್ರತಿಯಾಗಿ ಶಿಕ್ಷೆ ಆಗಬೇಕು; ಹಾಗೆಯೇ ಇಂಥ ಮನಸ್ಥಿತಿ ಮತ್ತೆ ತಲೆದೋರದಂತೆ ಸರಿಯಾದ ಶಿಕ್ಷಣವೂ ಸಮುದಾಯಗಳಿಗೆ ದೊರೆಯಬೇಕು. ತಾವು ಯಾವುದೇ ದೌರ್ಜನ್ಯವನ್ನು ಸಹಿಸಲಾರೆವು ಎಂದು ಹೇಳಬಲ್ಲ ದಿಟ್ಟತನವನ್ನು ಆದಿವಾಸಿ ಸಮುದಾಯಗಳಲ್ಲಿ ರೂಢಿಸುವ ಕಾನೂನುಬಲ, ಶಿಕ್ಷಣಬಲವನ್ನು ಅವರಲ್ಲಿ ತುಂಬಬೇಕಿದೆ. ಆದಿವಾಸಿ ವ್ಯಕ್ತಿಯ ಕಾಲು ತೊಳೆಯುವ ಮುಖ್ಯಮಂತ್ರಿಯ ನಡೆ ಸಾಂಕೇತಿಕ; ಅದು ಸಮುದಾಯದ ಕಡೆ ತಿರುಗಿದರೆ ಇನ್ನಷ್ಟು ಅರ್ಥಪೂರ್ಣವಾಗುತ್ತದೆ.

Exit mobile version