ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡಿದ್ದ ಹಲವಾರು ಪ್ರಮುಖ ನಿರ್ಧಾರಗಳನ್ನು, ಕಾಯಿದೆಗಳನ್ನು ಹೊಸ ಕಾಂಗ್ರೆಸ್ ಸರ್ಕಾರ ಬರ್ಖಾಸ್ತ್ ಮಾಡಲು ನಿರ್ಧರಿಸಿದೆ. 13 ತಿಂಗಳ ಹಿಂದಷ್ಟೇ ಜಾರಿಯಾಗಿದ್ದ ಮತಾಂತರ ನಿಷೇಧ ಕಾಯಿದೆಯನ್ನೂ ವಾಪಸ್ ಪಡೆಯಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಹಿಂದಿನ ಸರ್ಕಾರ ತೆಗೆದುಕೊಂಡ ಕ್ರಮಗಳನ್ನೆಲ್ಲ ರದ್ದುಪಡಿಸುವುದೇ ಸರ್ಕಾರಗಳ ರೂಢಿಯಾಗಿಬಿಟ್ಟರೆ ಅದು ಶಾಸನಸಭೆಗಳ ವಿವೇಕಕ್ಕೆ ಸವಾಲಾಗಿ, ಪ್ರಜಾತಂತ್ರದ ಅಣಕವಾಗಿಬಿಡುತ್ತದೆ.
ಹಿಂದೂ ಧರ್ಮವು ಕಳೆದ ಹಲವು ದಶಕಗಳಿಂದ ಅನ್ಯಧರ್ಮೀಯ ಮತಾಂತರಿಗಳಿಂದ ಬೆದರಿಕೆ ಎದುರಿಸುತ್ತಿರುವುದು ಹಗಲಿನಷ್ಟೇ ಸತ್ಯ. ಆಮಿಷ ಒಡ್ಡಿ, ಬೆದರಿಕೆ ಒಡ್ಡಿ ಅಥವಾ ಪ್ರೀತಿ ಪ್ರೇಮದ ಹೆಸರಿನಲ್ಲಿ ಹಿಂದೂಗಳ ಮತಾಂತರ ನಡೆಯುತ್ತಿರುವ ಬಗ್ಗೆ ಪೊಲೀಸ್ ದೂರು ದಾಖಲಾಗುತ್ತಲೇ ಇದೆ. ಹಾಗಾಗಿ ಬಲವಂತವಾಗಿ ಮತಾಂತರ ಆಗುವುದನ್ನು ತಡೆಯಲು ಹಿಂದಿನ ಸರ್ಕಾರ ಮತಾಂತರ ನಿಷೇಧ ಕಾಯಿದೆಯನ್ನು ಜಾರಿ ಮಾಡಿತ್ತು. ಈ ಕಾಯಿದೆಯಲ್ಲಿ ಬಲವಂತವಾಗಿ ಮತಾಂತರ ಮಾಡಿದವರಿಗೆ ಮಾತ್ರ ಶಿಕ್ಷೆ ಇತ್ತು. ಸ್ವ ಇಚ್ಛೆಯಿಂದ ಮತಾಂತರ ಆಗುವುದಕ್ಕೆ ವಿರೋಧ ಇರಲಿಲ್ಲ. ಅದರ ಪ್ರಕಾರ ಪುರುಷ ಅಥವಾ ಮಹಿಳೆಯನ್ನು ಬಲವಂತವಾಗಿ, ವಂಚಿಸಿ, ಪ್ರಭಾವ ಬೀರಿ, ಮದುವೆ ಆಗುವುದಾಗಿ ವಾಗ್ದಾನ ಮುಂತಾದ ಆಮಿಷ ಒಡ್ಡುವ ಮೂಲಕ ನೇರವಾಗಿ ಅಥವಾ ಇನ್ನಾವುದೋ ಮಾರ್ಗದ ಮೂಲಕ ಮತಾಂತರ ಮಾಡುವುದು ಕಾನೂನು ಬಾಹಿರ ಎಂದು ವ್ಯಾಖ್ಯಾನಿಸಿತ್ತಲ್ಲದೆ, ಇದರ ತನಿಖೆ ಹಾಗೂ ವಿಚಾರಣೆಯ ಸಾಧ್ಯತೆಗಳನ್ನು ಪಾರದರ್ಶಕವಾಗಿ ರೂಪಿಸಿತ್ತು. ಈಗಾಗಲೇ ಹಲವಾರು ರಾಜ್ಯಗಳಲ್ಲಿ ಇಂಥ ಕಾಯಿದೆಗಳಿದ್ದು, ಮತಾಂತರ ತಡೆಗಟ್ಟಲು ಪರಿಣಾಮಕಾರಿ ಎನಿಸಿವೆ. ಕರ್ನಾಟಕ ಕೂಡ ಆ ಹಾದಿಯಲ್ಲಿತ್ತು. ಆದರೆ ನೂತನ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಹಿಂದಕ್ಕಿರಿಸಿದೆ.
ನ್ಯಾಯಾಲಯಗಳು ಕೂಡ ಹಲವಾರು ಬಾರಿ ಮತಾಂತರ ಪಿಡುಗಿನ ಬಗ್ಗೆ ಎಚ್ಚರಿಸಿದ್ದವು. ಸ್ವತಃ ಸುಪ್ರೀಂ ಕೋರ್ಟ್, ದೇಶದಲ್ಲಿ ಬಲವಂತದ ಧಾರ್ಮಿಕ ಮತಾಂತರ ಆರೋಪ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದಲ್ಲದೆ, ಇದನ್ನು ತಡೆಯದೇ ಇದ್ದರೆ ದೇಶದ ಭದ್ರತೆಗೆ ಅಪಾಯವಿದೆ ಎಂದಿತ್ತು. ನಾಗರಿಕರ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಇದರಿಂದ ಧಕ್ಕೆಯಾಗಬಹುದು. ಬಲವಂತದ ಮತಾಂತರ ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಸಕಾಲವಿದು ಎಂದಿತ್ತು. ಕೇಂದ್ರವು ಸುಪ್ರೀಂ ಕೋರ್ಟ್‌ನಲ್ಲಿ ಮಂಡಿಸಿದ್ದ ವರದಿಯ ಪ್ರಕಾರ, ಹಿಂದು ಧರ್ಮದಲ್ಲಿರುವ ದಲಿತರು ಇಸ್ಲಾಂ, ಕ್ರೈಸ್ತ ಮತಕ್ಕೆ ಮತಾಂತರಗೊಂಡ ಬಳಿಕವೂ ಅವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ಕೊಟ್ಟು, ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದಿತ್ತು. ಕೋರ್ಟ್‌ನ ಟಿಪ್ಪಣಿಯನ್ನು ಸಮರ್ಥಿಸುವ ಹಲವು ನಿದರ್ಶನಗಳು ಸಿಗುತ್ತವೆ. ದೇಶದಲ್ಲಿ ಮತಾಂತರ ಹಲವು ಬಗೆಯಲ್ಲಿ ನಡೆಯುತ್ತಿದೆ. ಉತ್ತಮ ಬದುಕು, ಉದ್ಯೋಗ, ಆಹಾರ ಹಾಗೂ ವೈವಾಹಿಕ ಸಂಗಾತಿಯ ಆಮಿಷವನ್ನೂ ಒಡ್ಡಲಾಗುತ್ತಿದೆ. ಆದರೆ ಮತಾಂತರದ ಬಳಿಕ ವಾಸ್ತವಿಕ ಸತ್ಯದ ಅನಾವರಣವಾಗಿ ಭ್ರಮನಿರಸನಗೊಂಡವರಿದ್ದಾರೆ. ಕೇರಳದಲ್ಲಿ ನಡೆದ ಹಲವಾರು ಮತಾಂತರಗಳು ಅಂತಿಮವಾಗಿ ಭಯೋತ್ಪಾದನೆಯತ್ತ ಚಾಚಿಕೊಂಡದ್ದನ್ನು ಗಮನಿಸಬಹುದಾಗಿದೆ. ಇದು ದೇಶದ ಭದ್ರತೆ, ಸಾರ್ವಭೌಮತೆ, ಸಾಮಾಜಿಕ ಸೌಹಾರ್ದ ಎಲ್ಲದಕ್ಕೂ ಧಕ್ಕೆಯುಂಟುಮಾಡುವಂಥದು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಏಕರೂಪ ನಾಗರಿಕ ಸಂಹಿತೆ ವ್ಯವಸ್ಥಿತವಾಗಿ ಜಾರಿಗೆ ಬರಲಿ
ನಮ್ಮ ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಇಲ್ಲಿ ಯಾರು ಬೇಕಿದ್ದರೂ ತಮ್ಮ ಧರ್ಮವನ್ನು ಆಚರಿಸಬಹುದು, ಸಾರ್ವಜನಿಕವಾಗಿ ಅದರ ಬಗ್ಗೆ ಒಲವು ವ್ಯಕ್ತಪಡಿಸಬಹುದು, ತಮ್ಮ ಧರ್ಮದ ಶ್ರೇಷ್ಠತೆಯ ಬಗ್ಗೆ ಸಾರಿಕೊಳ್ಳಬಹುದು. ಇದ್ಯಾವುದೂ ಅಪರಾಧವಲ್ಲ. ಆದರೆ ಬೆದರಿಕೆಯೊಡ್ಡಿ ಅಥವಾ ಆಮಿಷವೊಡ್ಡಿ ತಮ್ಮ ಧರ್ಮಕ್ಕೆ ಮತಾಂತರಿಸಿಕೊಳ್ಳುವುದು ಮಾತ್ರ ಅಪರಾಧ. ಇದನ್ನೇ ಈ ಕಾಯಿದೆಯೇ ಒತ್ತಿ ಹೇಳಿದೆ. ಹೀಗಿರುವಾಗ ಈಗ ಏಕಾಏಕಿ ಈ ಕಾಯಿದೆಯನ್ನು ವಾಪಸ್ ತೆಗೆದುಕೊಳ್ಳುವುದು ಸರಿಯಲ್ಲ. 135 ಸ್ಥಾನ ಗೆದ್ದಿದ್ದೇವೆ ಎಂಬ ಕಾರಣದಿಂದ ತಾವು ಯಾವ ನಿರ್ಧಾರ ತೆಗೆದುಕೊಂಡರೂ ನಡೆಯುತ್ತದೆ ಎಂಬ ಭಾವನೆಯೂ ತಿರುಮಂತ್ರವಾಗಬಹುದು. ಜಿದ್ದಿಗಾಗಿ, ಹಟಕ್ಕಾಗಿ, ಒಂದು ಧರ್ಮದ ಮತದಾರರನ್ನು ಓಲೈಸಲು ಬಹುಸಂಖ್ಯಾತ ಹಿಂದೂಗಳ ಹಿತಾಸಕ್ತಿಯನ್ನು ಬಲಿ ಕೊಡುವುದು ಸರಿಯಲ್ಲ. ಸರ್ಕಾರ ತನ್ನ ತೀರ್ಮಾನವನ್ನು ಮರು ಪರಿಶೀಲಿಸಲಿ.