ಬೆಂಗಳೂರು: ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ಗೆ ಮತ್ತೊಂದು ನೋಟಿಸ್ (IT Notice) ನೀಡಿದ್ದು 2014-15ರಿಂದ 2016-17ರವರೆಗಿನ ಅವಧಿಯ 1,745 ಕೋಟಿ ರೂಪಾಯಿ ಪಾವತಿಸುವಂತೆ ಹೇಳಿದೆ. ಹೊಸ ನೋಟಿಸ್ ಬಳಿಕ 1994-95 ಮತ್ತು 2017-18 ರಿಂದ 2020-21 ರವರೆಗೆ ಒಟ್ಟು 3,567 ಕೋಟಿ ರೂಪಾಯಿಗಳನ್ನು ಪಾವತಿ ಮಾಡುವಂತೆ ಆದಾಯ ತೆರಿಗೆ ಇಲಾಖೆ ಬೇಡಿಕೆ ಇಟ್ಟಿದೆ.
ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಅವರು ಶನಿವಾರ “ಕಳೆದ ರಾತ್ರಿ ನಮಗೆ ಇನ್ನೂ ಎರಡು ನೋಟಿಸ್ಗಳನ್ನು ಕಳುಹಿಸಲಾಗಿದೆ” ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಅವರು “ತೆರಿಗೆ ಭಯೋತ್ಪಾದನೆ” ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಹೊಸ ನೋಟಿಸ್ಗಳು 2014-15 (663 ಕೋಟಿ ರೂಪಾಯಿ), 2015-16 (ಸುಮಾರು 664 ಕೋಟಿ ರೂಪಾಯಿ) ಮತ್ತು 2016-17 (ಸುಮಾರು 417 ಕೋಟಿ ರೂಪಾಯಿ) ಸಂಬಂಧಿಸಿವೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ಪಕ್ಷಗಳಿಗೆ ಲಭ್ಯವಿರುವ ತೆರಿಗೆ ವಿನಾಯಿತಿ ಮೀರಿದ ಹಿನ್ನೆಲೆಯಲ್ಲಿ ಆದಾಯ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಒಟ್ಟು ಸಂಗ್ರಹಕ್ಕೆ ಪಕ್ಷಕ್ಕೆ ತೆರಿಗೆ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಾಳಿ ವೇಳೆ ವಶಪಡಿಸಿಕೊಂಡ ದಾಖಲೆ
ದಾಳಿಯ ಸಮಯದಲ್ಲಿ ತನಿಖಾ ಸಂಸ್ಥೆಗಳು ಕಾಂಗ್ರೆಸ್ ಪಕ್ಷದಿಂದ ವಶಪಡಿಸಿಕೊಂಡ ಕೆಲವು ಡೈರಿಗಳಲ್ಲಿ ಮೂರನೇ ವ್ಯಕ್ತಿಯ ಪಾಲುದಾರಿಕೆ ಎಂದು ಬರೆಯಲಾಗಿತ್ತು. ಅದರ ಪ್ರಕಾದ ತೆರಿಗೆ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆದಾಯ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ನಾಲ್ಕು ಹೊಸ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ವಜಾಗೊಳಿತ್ತು. ಆದಾದ ಒಂದು ದಿನದ ನಂತರ 2017-18 ಮತ್ತು 2020-21ರ ಮೌಲ್ಯಮಾಪನ ವರ್ಷಗಳಿಗೆ 1,823 ಕೋಟಿ ರೂ.ಗಳ ತೆರಿಗೆ ನೋಟಿಸ್ ನೀಡಲಾಗಿತ್ತು. ಹೊಸ ನೋಟಿಸ್ ದಂಡ ಮತ್ತು ಅದರ ಮೇಲಿನ ಬಡ್ಡಿಯನ್ನು ಸಹ ಒಳಗೊಂಡಿದೆ.
ಇದನ್ನೂ ಓದಿ: Lok Sabha Election 2024: ಶ್ರೀನಿವಾಸ್ ಪ್ರಸಾದ್ ಮನೆಯತ್ತ ಸಿಎಂ; ಕಾಂಗ್ರೆಸ್ ಸೇರ್ತಾರಾ ಬಿಜೆಪಿ ಸಂಸದ?
ನ್ಯಾಯಾಲಯವು ವಜಾಗೊಳಿಸಿದ ನಾಲ್ಕು ಅರ್ಜಿಗಳು 2017-18, 2018-19, 2019-20 ಮತ್ತು 2020-21ರ ಆರ್ಥಿಕ ವರ್ಷಗಳಿಗೆ ಸಂಬಂಧಿಸಿದ್ದಾಗಿವೆ.
ಶುಕ್ರವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, “ಸರ್ಕಾರ ಬದಲಾದಾಗ, ಪ್ರಜಾಪ್ರಭುತ್ವವನ್ನು ಹಾಳುಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಕೇಸರಿ ಪಕ್ಷ ನೆನಪಿನಲ್ಲಿಡಬೇಕು” ಎಂದು ಹೇಳಿದರು. ಕೆಲವೊಂದು ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಇದರಿಂದ ಯಾರೂ ಮತ್ತೆ ಇದೆಲ್ಲವನ್ನೂ ಮಾಡಲು ಧೈರ್ಯ ಮಾಡುವುದಿಲ್ಲ. ಇದು ನನ್ನ ಗ್ಯಾರಂಟಿ” ಎಂದು ಅವರು ಹೇಳಿದ್ದರು.