Site icon Vistara News

ವಿಸ್ತಾರ ಸಂಪಾದಕೀಯ: ರಾಹುಲ್ ಗಾಂಧಿಗೆ ಜೈಲು ಶಿಕ್ಷೆ: ಬೇಕಾಬಿಟ್ಟಿ ಹೇಳಿಕೆ ನೀಡುವ ರಾಜಕಾರಣಿಗಳಿಗೆ ಎಚ್ಚರಿಕೆಯ ಪಾಠ

Rahul Gandhi gets bail in defamation case

ಮಾನಹಾನಿಕರ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ಸುಪ್ರೀಂ ಲೀಡರ್‌ ರಾಹುಲ್‌ ಗಾಂಧಿಯವರಿಗೆ ಎರಡು ವರ್ಷ ಜೈಲು ಶಿಕ್ಷೆ ಘೋಷಣೆಯಾಗಿದೆ. 2019ರ ಲೋಕಸಭೆ ಚುನಾವಣೆ ವೇಳೆ ರಾಹುಲ್ ಗಾಂಧಿಯವರು ಕರ್ನಾಟಕದ ಕೋಲಾರದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡುತ್ತ ‘ಎಲ್ಲ ಕಳ್ಳರ ಸರ್​ನೇಮ್​​ಗಳೂ ಮೋದಿ ಎಂದೇ ಇರುತ್ತವೆ. ಅದು ಹೇಗೆ ಎಂಬ ಬಗ್ಗೆ ನನಗೆ ಅಚ್ಚರಿಯಾಗುತ್ತದೆ’ ಎಂದು ಹೇಳಿದ್ದರು. ಈ ಬಗ್ಗೆ ದಾಖಲಾದ ಕ್ರಿಮಿನಲ್​ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ಸೂರತ್​ ಕೋರ್ಟ್​, ರಾಹುಲ್ ಗಾಂಧಿಯವರನ್ನು ದೋಷಿ ಎಂದು ತೀರ್ಪು ನೀಡಿ, 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಸದ್ಯ ರಾಹುಲ್ ಗಾಂಧಿ ಜಾಮೀನು ಪಡೆದು ಶಿಕ್ಷೆಯಿಂದ ತಾತ್ಕಾಲಿಕವಾಗಿ ಪಾರಾಗಿದ್ದಾರೆ. ಆದರೆ ದೋಷಿ ಎಂಬ ಕಳಂಕ ಸದ್ಯಕ್ಕೆ ದೂರವಾಗದು. ಮುಂದಿನ ಪ್ರಧಾನಿ ಎಂದು ಕಾಂಗ್ರೆಸ್‌ ಪಕ್ಷದವರಿಂದ ಬಿಂಬಿತವಾಗುತ್ತಿರುವ ರಾಹುಲ್‌ ಗಾಂಧಿಯವರಿಗೆ ಇದು ಕಳಂಕವೇ ಸರಿ.

ರಾಹುಲ್‌ ಅವರಿಗೆ ಜಾಮೀನು ದೊರೆತಿದೆ, ಶಿಕ್ಷೆಯಿಂದ ಸದ್ಯ ಪಾರಾಗಿದ್ದಾರೆ, ನಾಳೆ ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತರಲೂಬಹುದು. ಆದರೆ ನ್ಯಾಯಪೀಠ ಸುಖಾಸುಮ್ಮನೇ, ಸಾಕ್ಷಿಗಳಿಲ್ಲದೇ ಯಾರನ್ನೂ ಶಿಕ್ಷಿಸುವುದಿಲ್ಲ. ಅದರಲ್ಲೂ ರಾಹುಲ್‌ ಗಾಂಧಿಯವರಂಥ ಹೈ ಪ್ರೊಫೈಲ್‌ ವ್ಯಕ್ತಿಗಳಿಗೆ ಶಿಕ್ಷೆ ನೀಡುವ ಮುನ್ನ ಸಾವಿರ ಬಾರಿ ಯೋಚಿಸುತ್ತದೆ. ಈ ಶಿಕ್ಷೆ ರಾಹುಲ್‌ ಅವರಿಗೆ ಮಾತ್ರವಲ್ಲ, ಇನ್ನುಳಿದ ರಾಜಕಾರಣಿಗಳಿಗೂ ಪಾಠವಾಗಬೇಕು. ರಾಹುಲ್‌ ಗಾಂಧಿಯವರೊಬ್ಬರಿಗೆ ಶಿಕ್ಷೆಯಾಗಿರಬಹುದು. ಆದರೆ ಇಂಥ ಹೇಳಿಕೆ ನೀಡುವ, ಈಗಾಗಲೇ ನೀಡಿರುವ ಹತ್ತು ಹಲವು ರಾಜಕಾರಣಿಗಳು ಈ ದೇಶದಲ್ಲಿದ್ದಾರೆ. ಕಾಂಗ್ರೆಸ್‌ನಲ್ಲೂ ಇದ್ದಾರೆ; ಬಿಜೆಪಿಯಲ್ಲೂ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಹೇಳಿಕೆಗೆ ಲಂಗುಲಗಾಮೇ ಇಲ್ಲದಂತಾಗಿದೆ. ಮರ್ಯಾದೆ, ಘನತೆಯ ಪರಿಧಿ ದಾಟಿ ಹೇಳಿಕೆ ನೀಡುವ ಕೆಟ್ಟ ಪರಂಪರೆ ಆರಂಭವಾಗಿದೆ. ಲೋಕಲ್ ಪುಢಾರಿಗಳು ಮಾತ್ರವಲ್ಲ, ಹಿರಿಯ ರಾಜಕಾರಣಿಗಳೂ ತಮ್ಮ ಸೂಕ್ಷ್ಮತೆ ಕಳೆದುಕೊಂಡಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿರುವಂತೆ ಜನಪ್ರತಿನಿಧಿಗಳ ನಾಲಿಗೆಗಳು ತೀಕ್ಷ್ಣವಾಗಿ ಝಳಪಿಸುತ್ತಿವೆ. ಮಾತಿನ ಯುದ್ಧ ಎಲ್ಲ ಪಕ್ಷಗಳ ನಡುವೆ ದೊಡ್ಡ ಪ್ರಮಾಣದಲ್ಲಿ ಮುಂದುವರಿಯುತ್ತಿದೆ. ಇವ್ಯಾವುದೂ ಒಳ್ಳೆಯ ಅಭಿರುಚಿಯ ಮಾತುಗಳಲ್ಲ. ಎದುರಾಳಿಯ ಕೀಳು ನಿಂದನೆ, ಅವಾಚ್ಯ ಪದಗಳ ಬಳಕೆ ಎದ್ದು ಕಾಣಿಸುತ್ತಿದೆ. ಮಾನಹಾನಿಕರವಾದ ಮಾತುಗಳಿವೆ; ದ್ವೇಷ ಮೂಡಿಸುವ ಮಾತುಗಳಿವೆ; ಅಪರಾಧಕ್ಕೆ ಪ್ರಚೋದಿಸುವ, ಹತ್ಯೆ ಮಾಡಲು ಕರೆ ಕೊಡುವ ಮಾತುಗಳೂ ಬಂದಿವೆ. ಮಧ್ಯಪ್ರದೇಶದ ಕಾಂಗ್ರೆಸ್‌ ಮುಖಂಡನೊಬ್ಬ, ಸಂವಿಧಾನವನ್ನು ಉಳಿಸಲು ನರೇಂದ್ರ ಮೋದಿಯವರನ್ನು ಕೊಲ್ಲುವ ಅಗತ್ಯವಿದೆ ಎಂದು ಹೇಳಿದ್ದ. ಇಂಥವರಿಗೆಲ್ಲ ಕಠಿಣ ಶಿಕ್ಷೆಯಾಗುವುದೇ ಸರಿ.

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಜೋರಾಗುವುದು ಸಹಜ. ಆದರೆ ಅದು ಮಿತಿಯನ್ನು ಮೀರದಂತೆ, ವಾಗ್ದಾಳಿಗಳು ಸಭ್ಯತೆಯ ಎಲ್ಲೆ ಮೀರದಂತೆ ಜನಪ್ರತಿನಿಧಿಗಳು ನೋಡಿಕೊಳ್ಳಬೇಕು. ಇದನ್ನು ನಿಯಂತ್ರಿಸುವುದಕ್ಕೂ ಕೋರ್ಟ್‌ ಮಧ್ಯೆ ಪ್ರವೇಶಿಸುವಂತಾಗಬಾರದು. ಜನತಾ ನ್ಯಾಯಾಲಯವೂ ಇಂಥ ಮಾತುಗಳಿಗೆ ಶಿಕ್ಷೆ ನೀಡುತ್ತದೆ ಎಂಬುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು. 2007ರಲ್ಲಿ ನರೇಂದ್ರ ಮೋದಿಯವರನ್ನು ʼಸಾವಿನ ಸರದಾರʼ ಎಂದು ಕರೆದಿದ್ದ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ, 2017ರಲ್ಲಿ ಮೋದಿಯವರನ್ನು ʼನೀಚʼ ಎಂದು ಕರೆದಿದ್ದ ಮಣಿಶಂಕರ ಅಯ್ಯರ್‌ ಅವರ ಮಾತುಗಳೇ ಆ ಪಕ್ಷವನ್ನು ಸೋಲಿಸಿದ್ದನ್ನು ನೆನಪಿಸಿಕೊಳ್ಳಬಹುದು. ಮತದಾರರು ಕೂಡ ತಮ್ಮ ಜನನಾಯಕರು ಹೇಗಿದ್ದವರು ಎಂಬುದನ್ನು ಅವರ ಮಾತುಗಳಿಂದಲೇ ಅರ್ಥ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಪಿತೃಪ್ರಧಾನ ವೈಭವೀಕರಣ ಏಕೆ? ಸುಪ್ರೀಂ ಕೋರ್ಟ್ ಪ್ರಶ್ನೆ ಚಿಂತನಾರ್ಹ

ಎದುರಾಳಿಯನ್ನು ಎದುರಿಸುವುದರಲ್ಲೂ ಘನತೆ ಇರಬೇಕು. ಚುನಾವಣೆ ಸಂದರ್ಭದಲ್ಲಿ ಪ್ರಗತಿ, ಭ್ರಷ್ಟಾಚಾರ, ಸಾಧನೆ, ವೈಫಲ್ಯಗಳ ಬಗ್ಗೆ ಅರ್ಥಪೂರ್ಣ ಚರ್ಚೆ ಆಗಬೇಕು. ಆಡಳಿತ ಪಕ್ಷ ಸರಿಯಾಗಿ ಕೆಲಸ ಮಾಡಿದೆಯೇ ಇಲ್ಲವೇ ಎಂದು ಪ್ರತಿಪಕ್ಷ ವಿಮರ್ಶಿಸಬೇಕು. ತಾನು ಮಾಡಿರುವ ಕೆಲಸಗಳಿಗೆ ಆಡಳಿತ ಪಕ್ಷ ಕನ್ನಡಿ ಹಿಡಿಯಬೇಕು, ಪ್ರತಿಪಕ್ಷದ ವೈಫಲ್ಯಗಳನ್ನು ಸಾಣೆಗೆ ಹಿಡಿಯಬೇಕು. ಹಿಡಿತ ಮೀರಿದ ನಾಲಿಗೆಯಿಂದ ಅನರ್ಥ ಖಾತ್ರಿ. ಇದಕ್ಕೆ ರಾಹುಲ್‌ ಗಾಂಧಿಯವರೇ ದೃಷ್ಟಾಂತ. ಇಂಥದು ಮರುಕಳಿಸದಿರಲಿ.

Exit mobile version