ನವ ದೆಹಲಿ : ಬಾಂಡಾ ಜೈಲಿನಲ್ಲಿ ಮೃತಪಟ್ಟ ಗ್ಯಾಂಗ್‌ಸ್ಟರ್ (Gangster) ಮತ್ತು ರಾಜಕಾರಣಿ (Politcian) ಮುಖ್ತಾರ್ ಅನ್ಸಾರಿ (Mukhtar Ansari) ಸಾವಿಗೆ ಹೃದಯಾಘಾತವೇ (Cardiac Arrest) ಕಾರಣ ಎಂಬುದಾಗಿ ಆರಂಭಿಕ ಮರಣೋತ್ತರ ಪರೀಕ್ಷೆಯು ಹೇಳಿದೆ. ಈ ಮೂಲಕ ಜೈಲಿನಲ್ಲಿ ಆತನಿಗೆ ನಿಧಾನ ವಿಷ ನೀಡಲಾಗಿದೆ ಎಂಬ ಆರೋಪವನ್ನು ವೈದ್ಯಕೀಯ ಪರಿಣತರ ಸಮಿತಿ ನಿರಾಕರಿಸಿದೆ. ಮುಖ್ತಾರ್ ಅನ್ಸಾರಿಯ ಕುಟುಬ ಸದಸ್ಯರು ನಿಧಾನವಾಗಿ ವಿಷ ನೀಡಿ ಕೊಲ್ಲಲಾಗಿದೆ ಎಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ಉನ್ನತ ಮಟ್ಟದ ಸಮಿತಿಯ ತನಿಖೆಗೂ ಬಾಂಡಾದ ನ್ಯಾಯಾಲಯ ಆದೇಶ ನೀಡಿತ್ತು. ಇದೀಗ ಮರಣೋತ್ತರ ಪರೀಕ್ಷೆಯ ಮೊದಲ ಸುಳಿವು ಹೊರಗೆ ಬಂದಿದ್ದು ಸಾವಿಗೆ ಹೃದಯಾಘಾತವೇ ಕಾರಣ ಎಂದು ಹೇಳಲಾಗಿದೆ.
ಬಾಂಡಾ ಜೈಲಿನಲ್ಲಿದ್ದ ಅನ್ಸಾರಿಗೆ ಹೃದಯಾಘಾತವಾಗಿ ಬ್ಯಾರಕ್ ನಲ್ಲಿ ಬಿದ್ದಿದ್ದ. ಆತನನ್ನು ಅಲ್ಲಿಂದ ಬಾಂಡಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾನೆ. ಸಾವಿನ ಹಿನ್ನೆಯಲ್ಲಿ ಲಖನೌ ಮತ್ತು ಮೌ ಸದರ್ ಮತ್ತು ಗಾಜಿಪುರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎರಡು ದಿನಗಳಲ್ಲಿ ಎರಡನೇ ಬಾರಿಗೆ ಆತನ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅನ್ಸಾರಿಯನ್ನು ಮಂಗಳವಾರ ಬಾಂಡಾದಲ್ಲಿ ಸುಮಾರು 14 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆತನನ್ನು ಬಿಡುಗಡೆ ಮಾಡಲಾಗಿತ್ತು. ಏತನ್ಮಧ್ಯೆ. ತನ್ನ ಸಹೋದರನಿಗೆ ಜೈಲಿನಲ್ಲಿ ವಿಷಪ್ರಾಷನ ಮಾಡಲಾಗುತ್ತಿದೆ ಎಂದು ಮುಖ್ತಾರ್ ಸಹೋದರ ಅಫ್ಜಲ್ ಅನ್ಸಾರಿ ಅರೋಪಿಸಿದ್ದಾರೆ.
60 ಹೆಚ್ಚು ಪ್ರಕರಣಗಳ ಆರೋಪಿ, ಎಂಟರಲ್ಲಿ ಅಪರಾಧಿ
ಮೌ ಸದರ್ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿದ್ದ ಮುಖ್ತಾರ್ ಅನ್ಸಾರಿ 2005ರಿಂದ ಉತ್ತರ ಪ್ರದೇಶ ಮತ್ತು ಪಂಜಾಬ್ ನಲ್ಲಿ ಜೈಲಿನಲ್ಲಿದ್ದ. ಆತನ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಸೆಪ್ಟೆಂಬರ್ 2022 ರಿಂದ ಯುಪಿಯ ವಿವಿಧ ನ್ಯಾಯಾಲಯಗಳು ಎಂಟು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿದ್ದು, ಅವರನ್ನು ಬಾಂಡಾ ಜೈಲಿನಲ್ಲಿರಿಸಲಾಗಿತ್ತು.
ಇದನ್ನೂ ಓದಿ: Satyendar Jain : ಆಪ್ಗೆ ಇನ್ನಷ್ಟು ಸಂಕಷ್ಟ; ಸತ್ಯೇಂದರ್ ಜೈನ್ ವಿರುದ್ಧ ಸಿಬಿಐ ತನಿಖೆಗೆ ಆದೇಶ
ಕಳೆದ ವರ್ಷ ಉತ್ತರ ಪ್ರದೇಶ ಪೊಲೀಸರು ಬಿಡುಗಡೆ ಮಾಡಿದ 66 ದರೋಡೆಕೋರರ ಪಟ್ಟಿಯಲ್ಲಿ ಅನ್ಸಾರಿ ಹೆಸರು ಇತ್ತು. ಮುಖ್ತಾರ್ ಅನ್ಸಾರಿಯನ್ನು ನಕಲಿ ಎನ್ಕೌಂಟರ್ ಮೂಲಕ ಕೊಲ್ಲಬಹುದು ಎಂದು ಅವರ ಕುಟುಂಬ ಸದಸ್ಯರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು.
ಅನ್ಸಾರಿ ಅಜ್ಜ ಸ್ವಾತಂತ್ರ್ಯ ಹೋರಾಟಗಾರ
ಉತ್ತರ ಪ್ರದೇಶದ ಯೂಸುಫ್‌ಪುರದಲ್ಲಿ 1960ರಲ್ಲಿ ಜನಿಸಿದ ಮುಖ್ತಾರ್ ಅನ್ಸಾರಿಯ ಅಜ್ಜ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರ ಅಜ್ಜ ಮುಖ್ತಾರ್ ಅಹ್ಮದ್ ಅನ್ಸಾರಿ ಅವರು ದೇಶದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಾಯಕರಾಗಿದ್ದ ಇವರು 1927ರವರೆಗೆ ಅದರ ಅಧ್ಯಕ್ಷರೂ ಆಗಿದ್ದರು. ಮುಸ್ಲಿಂ ಲೀಗ್ ಜತೆ ಗುರುತಿಸಿಕೊಂಡಿದ್ದ ಮುಖ್ತಾರ್ ಅಹ್ಮದ್ ಅನ್ಸಾರಿ ಅವರು ಪ್ರತ್ಯೇಕವಾದದ ಅಜೆಂಡಾ ಅರಿತು ಅಂತರ ಕಾಯ್ದುಕೊಂಡಿದ್ದರು. ಅಲ್ಲದೆ, ಇವರು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಚಾನ್ಸಲರ್ ಕೂಡ ಆಗಿದ್ದರು.
ಮುಖ್ತಾರ್ ಅನ್ಸಾರಿಯ ತಾಯಿಯ ತಂದೆ (ಅಜ್ಜ) ಮೊಹಮ್ಮದ್ ಉಸ್ಮಾನ್ ಅವರು ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಆಗಿದ್ದರು. ಇವರು ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಇವರಿಗೆ ಮರಣೋತ್ತರವಾಗಿ ಪರಮವೀರ ಚಕ್ರ ಪ್ರಶಸ್ತಿ ಘೋಷಿಸಲಾಗಿದೆ.
ಇಂತಹ ಕುಟುಂಬದಲ್ಲಿ ಜನಿಸಿದ ಮುಖ್ತಾರ್ ಅನ್ಸಾರಿ, 1980ರ ದಶಕದಲ್ಲಿ ಗ್ಯಾಂಗ್‌ಸ್ಟರ್ ಆಗಿ ಬದಲಾದ. ಈತ ಸರ್ಕಾರದ ಗುತ್ತಿಗೆ ಪಡೆಯುವ ಭರದಲ್ಲಿ ಗೂಂಡಾಗಿರಿ ಆರಂಭಿಸಿದ. ಕೊಲೆ, ದರೋಡೆ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹದಿಂದ ಉತ್ತರ ಪ್ರದೇಶದಾದ್ಯಂತ ಸುದ್ದಿಯಾದ. ಹಣ, ದರ್ಪದ ಮದವೇರಿದ್ದ ಈತ ರಾಜಕೀಯವನ್ನೂ ಸೇರಿದ.