Site icon Vistara News

ವಿಸ್ತಾರ ಸಂಪಾದಕೀಯ | ಉಗ್ರ ಮುಕ್ತವಾಗುವತ್ತ ಜಮ್ಮು-ಕಾಶ್ಮೀರ!

indian army

Jammu Kashmir: 5 terrorists killed in Kulgam as anti-terror operation enters Day 2

ಭಾರತದ ಭದ್ರತೆಯ ವಿಷಯದಲ್ಲಿ 2022 ತುಂಬ ಯಶಸ್ಸು ತಂದು ಕೊಟ್ಟ ವರ್ಷವಾಗಿದೆ. ಬಾಹ್ಯ ಮತ್ತು ಆಂತರಿಕ ವಿಚ್ಛಿದ್ರಕಾರಿ ಶಕ್ತಿಗಳನ್ನು ಮಟ್ಟಹಾಕುವಲ್ಲಿ ಭಾರತ ಯಶಸ್ವಿಯಾಗಿದೆ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಳವಡಿಸಿಕೊಂಡಿರುವ ಉಗ್ರ ನಿರೋಧಿ ನೀತಿಗಳ ಫಲ ಈಗ ದೊರೆಯುತ್ತಿದೆ. ಭವ್ಯ ಭಾರತದ ಭವಿಷ್ಯದ ದೃಷ್ಟಿಯಿಂದ ಉಗ್ರ ವಿರೋಧಿ ನೀತಿ ಮಹತ್ವದ ಹೆಜ್ಜೆಯಾಗಿದೆ. ಪರಿಸ್ಥಿತಿಯು ಸುಧಾರಿಸಿದಂತೆ ವೈಭವದ ಕಾಶ್ಮೀರವನ್ನು ನೋಡುವ ದಿನಗಳು ದೂರ ಇಲ್ಲವೇನೊ.

ಜಮ್ಮು-ಕಾಶ್ಮೀರದಾದ್ಯಂತ 2022ರಲ್ಲಿ ಭದ್ರತಾ ಸಿಬ್ಬಂದಿಯು 93 ಯಶಸ್ವಿ ಕಾರ್ಯಾಚರಣೆಗಳನ್ನು ಕೈಗೊಂಡು 172 ಉಗ್ರರನ್ನು ಎನ್‌ಕೌಂಟರ್‌ ಮಾಡಿದೆ. ಇವರಲ್ಲಿ 42 ಉಗ್ರರು ವಿದೇಶದವರಾಗಿದ್ದಾರೆ. ಲಷ್ಕರೆ ತಯ್ಬಾ, ಇದರ ಅಂಗಸಂಸ್ಥೆ ದಿ ರೆಸಿಸ್ಟಂಟ್‌ ಫ್ರಂಟ್‌ನ 108, ಜೈಶೆ ಮೊಹಮ್ಮದ್‌ ನ 35, ಹಿಜ್ಬುಲ್‌ ಮುಜಾಹಿದ್ದೀನ್‌ ನ 22, ಅಲ್‌-ಬದ್ರ್‌ ಉಗ್ರ ಸಂಘಟನೆಯ ನಾಲ್ವರು ಉಗ್ರರು ಸೇರಿದಂತೆ 172 ಉಗ್ರರನ್ನು ಹತ್ಯೆಗೈಯಲಾಗಿದೆ. ಹೊಸದಾಗಿ ಉಗ್ರ ಸಂಘಟನೆಗಳಿಗೆ ಸೇರುವವರ ಜೀವಿತಾವಧಿಯನ್ನೇ ಭದ್ರತಾ ಸಿಬ್ಬಂದಿ ಇಳಿಕೆ ಮಾಡಿದ್ದಾರೆ! ಉಗ್ರ ಸಂಘಟನೆಗೆ ಸೇರಿದ ಒಂದೇ ತಿಂಗಳಲ್ಲಿ ಹತ್ಯೆಗೀಡಾದ ಉಗ್ರರ ಪ್ರಮಾಣ ಶೇ.89ರಷ್ಟಿದೆ. ಒಂದು ವರ್ಷದಲ್ಲಿ 100 ಯುವಕರು ಉಗ್ರ ಸಂಘಟನೆ ಸೇರಿದ್ದು, 2021ಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ.37ರಷ್ಟು ಕುಸಿತವಾಗಿದೆ ಎಂಬ ಮಾಹಿತಿಯನ್ನು ಅಲ್ಲಿಯ ಪೊಲೀಸರು ನೀಡಿದ್ದಾರೆ. ಉಗ್ರರರನ್ನು ಹುಡುಕಿ, ಹುಡುಕಿ ನಿರ್ಮೂಲನೆ ಮಾಡಲಾಗುತ್ತಿದೆ.

ಸದ್ಯ ಕಾಶ್ಮೀರ ಕಣಿವೆಯಲ್ಲಿ 81 ಉಗ್ರರು ಸಕ್ರಿಯರಾಗಿದ್ದಾರೆ. ಅದರಲ್ಲಿ ಸ್ಥಳೀಯ ಉಗ್ರರು 29 ಮಂದಿ ಮತ್ತು ವಿದೇಶಿ ಉಗ್ರರು 52 ಇದ್ದಾರೆ. ಹಾಗೆಯೇ ಕಣಿವೆ ರಾಜ್ಯದಲ್ಲೀಗ ಸ್ಥಳೀಯ ಉಗ್ರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಸ್ಥಳೀಯ ಭಯೋತ್ಪಾದಕರ ಸಂಖ್ಯೆ 2018ರಲ್ಲಿ 109 ಇತ್ತು. ಅದೀಗ 29ಕ್ಕೆ ಇಳಿದಿದೆ. 2018ರಿಂದ ಇಲ್ಲಿಯವರೆಗೆ ಸ್ಥಳೀಯ ಉಗ್ರರ ಸಂಖ್ಯೆಯಲ್ಲಿ ಶೇ.73ರಷ್ಟು ಕಡಿಮೆಯಾಗಿದೆ. ಇತ್ತೀಚೆಗೆಷ್ಟೇ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಶೇ.168ರಷ್ಟು ಇಳಿಕೆಯಾಗಿದೆ ಎಂದು ಹೇಳಿದೆ. ಈ ಭಯೋತ್ಪಾದನಾ ನಿಗ್ರಹ ಟ್ರೆಂಡ್ ಹೀಗೆಯೇ ಮುಂದುವರಿದರೆ ಇನ್ನೆರಡು ವರ್ಷದಲ್ಲಿ ಕಣಿವೆಯು ಸಂಪೂರ್ಣವಾಗಿ ಉಗ್ರ ಮುಕ್ತವಾಗುವುದರಲ್ಲಿ ಅನುಮಾನಗಳೇ ಇಲ್ಲ.

ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಸದಾ ಕಣ್ಗಾವಲು ಇರುತ್ತದೆ. ಮೊದಲಿನಂತೆ ಮನೆ ಮಾಲೀಕರು ಉಗ್ರರಿಗೆ ಮನೆ ನೀಡುತ್ತಿಲ್ಲ. ಹಾಗೊಮ್ಮೆ ಉಗ್ರರಿಗೆ, ಉಗ್ರ ಕೃತ್ಯಗಳಿಗೆ ನೆರವು ನೀಡಿದ್ದು ಗೊತ್ತಾದರೆ ಆ ಮನೆ ಮಾಲೀಕನ ಆಸ್ತಿ ಮುಟ್ಟುಗೋಲು ಹಾಕಲಾಗುತ್ತಿದೆ. ಅವರ ಮನೆಯನ್ನೇ ನೆಲಸಮ ಮಾಡಲಾಗುತ್ತದೆ. ಇದೇ ಭಯಕ್ಕೆ ಮನೆ ಮಾಲೀಕರು ಎಚ್ಚೆತ್ತುಕೊಂಡಿದ್ದಾರೆ. ಇದೂ ಕೂಡ ಸ್ಥಳೀಯ ಭಯೋತ್ಪಾದಕರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಇಷ್ಟಾಗಿಯೂ, ನೆರೆಯ ಪಾಕಿಸ್ತಾನ ನಮ್ಮ ನೆಲದಲ್ಲಿ ಉಗ್ರ ಚಟುವಟಿಕೆಯನ್ನು ಹೆಚ್ಚಿಸುವ ಪ್ರಯತ್ನವನ್ನು ಬಿಟ್ಟಿಲ್ಲ. ಆದರೆ, ಭದ್ರತಾ ಪಡೆಗಳು ಆ ಪ್ರಯತ್ನಗಳನ್ನು ವಿಫಲಗೊಳಿಸುತ್ತಿವೆ.

ರಾಜಕೀಯ ಇಚ್ಛಾಶಕ್ತಿಯೊಂದಿದ್ದರೆ ಬೆಟ್ಟದಂಥ ಸವಾಲನ್ನೂ ಗೆಲ್ಲಬಹುದು ಎಂಬುದಕ್ಕೆ ಕಣಿವೆಯು ಇಂದು ನಿಧಾನವಾಗಿ ಉಗ್ರ ಮುಕ್ತರಾಗುತ್ತಿರುವುದು ಕಣ್ಣ ಮುಂದಿನ ಉದಾಹರಣೆಯಾಗಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅಗತ್ಯವಿರುವ ಕಠಿಣ ಕಾನೂನುಗಳನ್ನು ಜಾರಿ ಮಾಡುವ ಮೂಲಕ ಯಾವುದೇ ವ್ಯವಸ್ಥೆಯನ್ನು ಸರಿದಾರಿಗೆ ತರಬಹುದು. ಈಗ ಕೇಂದ್ರ ಸರ್ಕಾರ ಕೂಡ ಅದೇ ಮಾರ್ಗದಲ್ಲಿ ಕೆಲಸವನ್ನು ಮಾಡುತ್ತಿದೆ. ಟೆರರಿಸಂನಿಂದ ತತ್ತರಿಸಿರುವ ಕಾಶ್ಮೀರದಲ್ಲಿ ಮತ್ತೆ ಟೂರಿಸಂ ವೈಭವ ಮರುಕಳಿಸುವಂತಾಗಲಿ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಪಾಕ್ ಸರ್ಕಾರ ಹಿಂದುಗಳಿಗೆ ರಕ್ಷಣೆ ಒದಗಿಸಬೇಕು

Exit mobile version