ನವದೆಹಲಿ: ದೇಶದ ಪ್ರಭಾವಿ ನಾಯಕರ (Most powerful Indians) ಪಟ್ಟಿಯೊಂದನ್ನು ಅಗ್ರಗಣ್ಯ ದೈನಿಕ ಇಂಡಿಯನ್ ಎಕ್ಸ್‌ಪ್ರೆಸ್ (Indian Express) ಬಿಡುಗಡೆ ಮಾಡಿದೆ. ವಿವಿಧ ಕೇತ್ರಗಳಲ್ಲಿ ಪ್ರಸಿದ್ಧಿ ಪಡೆದ ಸಾಧಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕ್ರೀಡಾ ಕ್ಷೇತ್ರದಿಂದ ಒಟ್ಟು 4 ಮಂದಿ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅಲಂಕರಿಸಿದ್ದಾರೆ.
ಅಚ್ಚರಿ ಎಂದರೆ ವಿರಾಟ್ ಕೊಹ್ಲಿಗಿಂತ(Virat Kohli) ಬಿಸಿಸಿಐ ಕಾರ್ಯದರ್ಶಿ ಜಯ್ ಶಾ(Jay Shah) ಈ ಪಟ್ಟಿಯಲ್ಲಿ ಮುಂದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಮೇಲೆ ಲೈಗಿಂಕ ಕಿರುಕುಳದ ಆರೋಪ ಮಾಡಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡಿದ ಕುಸ್ತಿಪಟು ವಿನೇಶ್ ಫೋಗಟ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಕೊನೆಯ 100ನೇ ಸ್ಥಾನ ಸಿಕ್ಕಿದೆ.
ಜಯ್ ಶಾ(35ನೇ ಸ್ಥಾನ)
ಬಿಸಿಸಿಐ ಕಾರ್ಯದರ್ಶಿ, ಜಾಗತಿಕ ಮಟ್ಟದಲ್ಲಿ ಭಾರತೀಯ ಕ್ರಿಕೆಟ್‌ಗೆ ಹಲವು ಮಾನ್ಯತೆ ತಂದುಕೊಟ್ಟ ಮತ್ತು ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಯ್ ಶಾ ಅವರು ಪ್ರಭಾವಿ ನಾಯಕರ ಪಟ್ಟಿಯಲ್ಲಿ 35ನೇ ಸ್ಥಾನ ಪಡೆದಿದ್ದಾರೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರಾದ ಅತ್ಯಂತ ಕಿರಿಯ ಎನ್ನುವ ಹೆಗ್ಗಳಿಕೆಯೂ ಜಯ್ ಶಾ ಅವರದ್ದಾಗಿದೆ. ಲಿಂಗ ಸಮಾನತೆಯನ್ನು ತರುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ನಲ್ಲಿ ಪುರುಷ ಮತ್ತು ಮಹಿಳಾ ಆಟಗಾರ್ತಿಯರಿಗೆ ಸಮಾನ ವೇತನ ಪದ್ಧತಿಯನ್ನು ಕೂಡ ಇವರ ಕಾರ್ಯವಧಿಯಲ್ಲಿ ಜಾರಿಗೆ ತರಲಾಗಿತ್ತು.
ವಿರಾಟ್ ಕೊಹ್ಲಿ( 38ನೇ ಸ್ಥಾನ)
ವಿಶ್ವ ಕ್ರಿಕೆಟ್ನ ಖ್ಯಾತ ಬ್ಯಾಟರ್ ಭಾರತ ತಂಡದ ವಿರಾಟ್ ಕೊಹ್ಲಿ ಅವರು ಈ ಪಟ್ಟಿಯಲ್ಲಿ 38ನೇ ಸ್ಥಾನ ಪಡೆದಿದ್ದಾರೆ. ಈಗಾಗಲೇ ಕ್ರಿಕೆಟ್ನಲ್ಲಿ ಹಲವು ವಿಶ್ವ ದಾಖಲೆ ಬರೆದ ಖ್ಯಾತಿ ಕೊಹ್ಲಿಯದ್ದಾಗಿದೆ. ಕಳೆದ ವರ್ಷ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್(49 ಶತಕ) ಅವರ ಸಾರ್ವಕಾಲಿಕ ಏಕದಿನ ಕ್ರಿಕೆಟ್ನ ಶತಕದ ದಾಖಲೆಯನ್ನು ಮುರಿದಿದ್ದರು. ಕೊಹ್ಲಿ 50 ಶತಕ ಬಾರಿಸಿದ್ದಾರೆ. ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ 266 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
ನೀರಜ್ ಚೋಪ್ರಾ(46ನೇ ಸ್ಥಾನ)
ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ, ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ(Neeraj Chopra) ಅವರಿಗೆ ಈ ಪಟ್ಟಿಯಲ್ಲಿ 4ನೇ ಸ್ಥಾನ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್ನಲ್ಲಿ ಬೆಳ್ಳಿ ಗೆದ್ದಿದ್ದರು. 26 ವರ್ಷದ ನೀರಜ್ ಒಲಿಂಪಿಕ್ಸ್‌ನ ಟ್ರ್ಯಾಕ್ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಇದೇ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಸಿದ್ಧತೆ ಆರಂಭಿಸಿರುವ ನೀರಜ್ ಇಲ್ಲಿಯೂ ಚಿನ್ನ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಗೆದ್ದರೆ ಸತತ 2ನೇ ಒಲಿಂಪಿಕ್ಸ್ ಚಿನ್ನ ಗೆದ್ದ ಸಾಧಕರಾಗಲಿದ್ದಾರೆ.
ಮಹೇಂದ್ರ ಸಿಂಗ್ ಧೋನಿ(58ನೇ ಸ್ಥಾನ)
ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ, ಏಕದಿನ ಮತ್ತು ಟಿ20 ವಿಶ್ವಕಪ್ ಗೆದ್ದ ನಾಯಕ, ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರೂ ಕೂಡ ಅವರಿಗಿರುವ ಅಭಿಮಾನಿಗಳ ಕ್ರೇಜ್ ಮಾತ್ರ ಇನ್ನೂ ಕಿಂಚಿತ್ತು ಕಡಿಮೆಯಾಗಿಲ್ಲ. ಈ ಬಾರಿಯ ಐಪಿಎಲ್ ಟೂರ್ನಿಯ ಬಳಿಕ ಧೋನಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ಗುಡ್ಬೈ ಹೇಳಲಿದ್ದಾರೆ.
ವಿನೇಶ್ ಫೋಗಟ್(100ನೇ ಸ್ಥಾನ)
ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಅವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಅವರಿಗೆ ಈ ಪಟ್ಟಿಯಲ್ಲಿ 100ನೇ ಸ್ಥಾನ ನೀಡಲಾಗಿದೆ. ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್ ಸಿಂಗ್ ಅವರನ್ನು ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದದ್ದನ್ನು ಖಂಡಿಸಿ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದ(Kartavya Path) ಪಾದಚಾರಿ ಮಾರ್ಗದಲ್ಲಿಟ್ಟು ತೊರೆದಿದ್ದರು.