Site icon Vistara News

Jayadeva Hospital: ಹೂ ಮಳೆ ಸುರಿಸಿ ಡಾ.ಸಿ.ಎನ್. ಮಂಜುನಾಥ್‌ರನ್ನು ಬೀಳ್ಕೊಟ್ಟ ಜಯದೇವ ಆಸ್ಪತ್ರೆ ಸಿಬ್ಬಂದಿ

Dr CN Manjunath

ಬೆಂಗಳೂರು: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರ ಸೇವಾವಧಿ ಜ.31ರಂದು ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಅವರನ್ನು ಜಯದೇವ ಆಸ್ಪತ್ರೆ (Jayadeva Hospital) ವೈದ್ಯರು, ಸಿಬ್ಬಂದಿ ಮಂಗಳವಾರ ಭಾವಪೂರ್ಣವಾಗಿ ಸನ್ಮಾನಿಸಿ ಬೀಳ್ಕೊಟ್ಟರು.

ಜಯದೇವ ಆಸ್ಪತ್ರೆಗೆ ಡಾ. ಸಿ.ಎನ್ ಮಂಜುನಾಥ್ ಅವರು ಆಗಮಿಸುತ್ತಿದ್ದಂತೆ ಅವರ ಮೇಲೆ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹೂ ಮಳೆ ಸುರಿಸಿದರು. ಈ ವೇಳೆ ಅಭಿಮಾನಿಗಳು ಜೈಕಾರ ಕೂಗಿದರು. ಬೀಳ್ಕೊಡುಗೆ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಪತ್ನಿ ಚನ್ನಮ್ಮ, ಎಚ್‌.ಡಿ. ದೇವೇಗೌಡರ ಪುತ್ರಿ, ಡಾ. ಸಿ.ಎನ್ ಮಂಜುನಾಥ್ ಅವರ ಪತ್ನಿ ಡಾ. ಅನುಸೂಯ ಮಂಜುನಾಥ್, ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್‌ ಸೇರಿ ನೂರಾರು ಮಂದಿ ಭಾಗವಹಿಸಿದ್ದರು.

ಮಂಜುನಾಥ್‌ರಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ: ಎಚ್‌.ಡಿ. ದೇವೇಗೌಡ

ಡಾ. ಸಿ.ಎನ್ ಮಂಜುನಾಥ್ ಅವರ ಸಾಧನೆ ಬಿಂಬಿಸುವ ವಿಶೇಷ ಕ್ಯಾಲೆಂಡರ್ ಅನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಬಿಡುಗಡೆ ಮಾಡಿ ಮಾತನಾಡಿ, ಈ ಸಂಸ್ಥೆಗೆ ಪ್ರಥಮ ಬುನಾದಿ ಹಾಕಿದವರು ಡಾಕ್ಟರ್ ಚೆನ್ನಯ್ಯ. ಅವರಿಗೆ ಮಂಜುನಾಥ್ ಕಂಡರೂ ತುಂಬಾ ಪ್ರೀತಿಯಿತ್ತು. ನೀವು ಹೊರದೇಶಕ್ಕೆ ಹೋಗಿ ಕೋಟ್ಯಂತರ ರೂಪಾಯಿ ದುಡಿಯಬಹುದು, ಆದರೆ ಇಲ್ಲಿಯ ಜನರ ಕಷ್ಟ ಕೇಳಿದಷ್ಟು ತೃಪ್ತಿ ಸಿಗುವುದಿಲ್ಲ. ನಾನು ಮತ್ತು ನನ್ನ ಶ್ರೀಮತಿ 15 ವರ್ಷಗಳು ಮಗಳು ಅನುಸೂಯ ಮನೆಯಲ್ಲಿಯೇ ಇದ್ದೆವು. ಅದು ನನ್ನ ಜೀವನದ ಸೌಭಾಗ್ಯ ಅಂತ ಹೇಳುತ್ತೇನೆ. ಇಡೀ ರಾಷ್ಟ್ರದಲ್ಲಿ ಎರಡು ಸಾವಿರ ಬೆಡ್ ಆಸ್ಪತ್ರೆ ಬಹುಶಃ ಇಲ್ಲ ಎನ್ನುವ ಹೆಮ್ಮೆ ಆಸ್ಪತ್ರೆ ಬಗ್ಗೆ ಇದೆ ಎಂದರು.

ಇದನ್ನೂ ಓದಿ | Chapped Lips: ಈ ಚಳಿಗಾಲದಲ್ಲಿ ತುಟಿ ಬಿರಿಯುತ್ತಿದೆಯೇ? ಇಲ್ಲಿದೆ ಮದ್ದು!

ಮಂಜುನಾಥ್ ಅಂತಹ ಒಬ್ಬ ಶ್ರೇಷ್ಠ ವ್ಯಕ್ತಿಯ ಕೈ ಹಿಡಿಯೋದು ನನ್ನ ಮಗಳ ಸೌಭಾಗ್ಯ ಅಂತ ಭಾವಿಸುತ್ತೇನೆ. ಅಂದು ನಾನು ಬಡವರಿಗೆ ಸಹಾಯ ಮಾಡಬೇಕು ಎಂದು ಕೇಳಿದ್ದಕ್ಕೆ ನನ್ನ ಮಾತು ಪುರಸ್ಕರಿಸಿ ನಾನು ಎಲ್ಲೂ ಹೋಗಲ್ಲ, ಇಲ್ಲೇ ಇರುತ್ತೇನೆ ಎಂದಿದ್ದರು. ಮಂಜುನಾಥ್ ಅಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ ಅವರಿಗೆ ಪದ್ಮಶ್ರೀ ಅಥವಾ ಯಾವ ಶ್ರೀಗಳು ಬೇಕಾಗಿಲ್ಲ. ಅಂತಹ ಬಿರುದುಗಳಿಗಿಂತಲೂ ಜನತೆ ಪ್ರೀತಿ ದೊಡ್ಡದು ಎಂದು ಹೇಳಿದರು.

ಇವತ್ತು ಈ ಸಂಸ್ಥೆಯಲ್ಲಿ ಎಲ್ಲ ಸಿಬ್ಬಂದಿ ಕುಟುಂಬ ಎನ್ನುವ ರೀತಿ ನಡೆಸಿಕೊಂಡು ಬಂದಿದ್ದಾರೆ. ನೀವು ಬಿಟ್ಟು ಹೋದ ಮೇಲೆ ಏನು ಎಂಬ ಬಗ್ಗೆಯೂ ಯೋಚನೆ ಮಾಡಿ ಅಂತ ಹೇಳಿದ್ದೆ. ಮುಂದೆ ಬರುವ ಹೊಸ ನಿರ್ದೇಶಕರಿಗೆ ಆ ಶಕ್ತಿ ಸಿಗಲಿ ಅಂತ ಪ್ರಾರ್ಥನೆ ಮಾಡುತ್ತೇನೆ. ದೇಶ ವಿದೇಶಗಳ ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದನ್ನು ಸ್ಮರಿಸಿಕೊಳ್ಳುತ್ತೇನೆ. ಮಂಜುನಾಥ್ ಅವರಿಗೆ ಶತಾಯುಷ್ಯ ಆರೋಗ್ಯ ಸಿಗಲಿ ಪ್ರಾರ್ಥನೆ ಮಾಡುತ್ತೇನೆ. ನನಗೆ ಈಗ 91 ವರ್ಷ, ಇಂತ ಸಂದರ್ಭಕ್ಕಿಂತ ಇನ್ನೇನು ಖುಷಿ ಬೇಕು ನನಗೆ ಎಂದು ದೇವೇಗೌಡರು ತಿಳಿಸಿದರು.

ಈ ಸಂಸ್ಥೆಯನ್ನು ಒಡೆಯಬೇಕು ಅಂತ ಮೆಟ್ರೋ ನಿರ್ಧಾರ ಮಾಡಿತ್ತು. ಅದನ್ನು ನಿಲ್ಲಿಸೋಕೆ ಮಂಜುನಾಥ್ ಎಷ್ಟು ಶ್ರಮ ಹಾಕಿದ್ದಾರೆ, ಅವರ ಬಗ್ಗೆ ಹೆಚ್ಚು ಮಾತನಾಡಿದರೆ ಅಳಿಯ ಅನ್ನೋ ಭಾವನೆ ಬರುತ್ತೆ. ಅವರು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿ ಅಂದರೆ ತಪ್ಪು. ಸಾಯುವ ವ್ಯಕ್ತಿಯ ಬಗ್ಗೆ ಗೊತ್ತಾದರೆ ರಿಕ್ಷಾ ತೆಗೆದುಕೊಂಡು ಹೋಗುತ್ತಿದ್ದರು. ಯಾವುದೇ ಸಂದರ್ಭ ಇದ್ದರೂ ಹೋಗೋರು. ನನಗೆ ಒಮ್ಮೊಮ್ಮೆ ಭಯ ಆಗೋದು, ಈ ಆಸ್ಪತ್ರೆ ಶಕ್ತಿ ಕಡಿಮೆ ಮಾಡಬೇಕು ಎನ್ನುವ ಹುನ್ನಾರ ಸಹ ನಡೆದಿದೆ ಎಂದರು.

ಒಬ್ಬ ರೋಗಿಯನ್ನು ಬದುಕಿಸಿದರೆ ಕುಟುಂಬವನ್ನೇ ಬದುಕಿಸಿದಂತೆ: ಡಾ.ಸಿ.ಎನ್.ಮಂಜುನಾಥ್

ದೇವೇಗೌಡರು ಮನದಾಳದಿಂದ ಕೊಂಡಾಡಿದ್ದನ್ನು ಕಂಡು ಭಾವುಕರಾದ ಡಾ.ಮಂಜುನಾಥ್ ಅವರು, ಜಯದೇವ ಸಾಧನೆಯ ಕೇವಲ ಒಬ್ಬನಿಂದಲ್ಲ, ಅದು ತಮ್ಮೆಲ್ಲರಿಗೂ ಸಲ್ಲಬೇಕು. 1989ರಲ್ಲಿ ಜಯದೇವ ಸೇರಿದಾಗ ನನಗೊಂದು ಕನಸಿತ್ತು. ಅಂದು ಸರಿಯಾದ ವ್ಯವಸ್ಥೆ, ಸೌಲಭ್ಯ ಆಸ್ಪತ್ರೆಯಲ್ಲಿರಲಿಲ್ಲ. ಆದರೆ ಇಂದು 2000 ಬೆಡ್ ಸಾಮರ್ಥ್ಯದ ವ್ಯವಸ್ಥೆ ಇದೆ. 2005ರಲ್ಲಿ ಆಸ್ಪತ್ರೆ ತ್ಯಜಿಸುವ ಮನಸ್ಸು ಮಾಡಿದೆ. ಈ ವೇಳೆ ದೇವೇಗೌಡರು ಇಲ್ಲೇ ಕೆಲಸ ಮಾಡುವಂತೆ ಸೂಚಿಸಿದರು. ದೊಡ್ಡವರ ಮಾತು ಕೇಳಿದ್ರೆ ಒಳ್ಳೆದಾಗುತ್ತೆ ಅನ್ನೊದಕ್ಕೆ ದೇವೇಗೌಡರ ಮಾತು ಸಾಕ್ಷಿ. ಅವತ್ತು ಅವರ ಮಾತು ಕೇಳದಿದ್ರೆ ಇಂದು ನಾನು ವಿದೇಶದಲ್ಲಿರುತ್ತಿದ್ದೆ. ದುಡ್ಡು ಮಾಡ್ತಿದ್ದೆ, ಆದರೆ ಇಷ್ಟು ಪ್ರೀತಿ ಸಿಗುತ್ತಿರಲಿಲ್ಲ. ಸಂಪತ್ತಿಗೆ ಬೆಲೆ ಕಟ್ಟಬಹುದು, ಆದರೆ ಸರಳತೆ ಸಾಧನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ನಮ್ಮ ನೋವು ನಮಗೆ ಗೊತ್ತಾದರೆ ಜೀವಂತವಾಗಿದ್ದೀವಿ ಎಂದರ್ಥ. ಬೇರೆಯವರ ನೋವು ಗೊತ್ತಾದರೆ ನಾವು ಮನುಷ್ಯರಾಗಿದ್ದೀವಿ ಎಂದರ್ಥ. 1994 ರಲ್ಲಿ ಅಮೆರಿಕದಲ್ಲಿ WHO ಫೆಲೋಶಿಪ್ ಹೋಗಿ ಬಂದಾಗ ನನಗೆ ಸಾಕಷ್ಟು ಖಿನ್ನತೆ ಆಗಿತ್ತು. ಆದರೆ ಇಂದು ಖುಷಿ ಇದೆ, ಆಸ್ಪತ್ರೆಯ ಕಂಡು ಹೆಮ್ಮೆ ಇದೆ. 18 ವರ್ಷದಲ್ಲಿ ಜಯದೇವ ಆಸ್ಪತ್ರೆ ಶೇ.500ರಷ್ಟು ಪ್ರಗತಿ ಕಂಡಿದೆ. ಕಡತಕ್ಕಿಂತ ಚಿಕಿತ್ಸೆ ಮುಖ್ಯ, ಜೀವ ಮುಖ್ಯ ಎಂದು ಕೆಲಸ ಮಾಡಿದ್ದೇವೆ. ಒಬ್ಬ ರೋಗಿಯನ್ನ ಬದುಕಿಸಿದರೆ ಇಡೀ ಕುಟುಂಬವನ್ನೇ ಬದುಕಿಸಿದಂತೆ ಎಂದು ತಿಳಿಸಿದರು.

ನಮ್ಮ ಆಸ್ಪತ್ರೆ ಎಂದು ಕೆಲಸಮಾಡಿದರು: ಡಾ. ಅನುಸೂಯ ಮಂಜುನಾಥ್

ಡಾ.ಸಿ.ಎನ್ ಮಂಜುನಾಥ್ ಪತ್ನಿ, ಎಚ್‌.ಡಿ. ದೇವೇಗೌಡರ ಪುತ್ರಿ ಡಾ. ಅನುಸೂಯ ಮಂಜುನಾಥ್ ಅವರು ಮಾತನಾಡಿ, ನಾನು ಅನ್ನೋ ಬದಲು ನಾವು ನಮ್ಮ ಆಸ್ಪತ್ರೆ ಎಂದು ಮಂಜುನಾಥ್ ಕೆಲಸ ಮಾಡಿದರು. ಮನೆಯಿಂದ ಹೊರಡುವಾಗ ಯಾವ ನಗುವಿನಿಂದ ಹೊರಡುತ್ತಿದ್ದರೋ, ಮತ್ತೆ ಅದೇ ನಗುವಿನೊಂದಿಗೆ ವಾಪಸ್ಸಾಗುತ್ತಿದ್ದರು. ಮಂಜುನಾಥ್ ಅವರ ಸಾಧನೆಯ ಹಿಂದೆ ಇಷ್ಟೊಂದು ಅಭಿಮಾನಿಗಳ ಆಶೀರ್ವಾದ ಇದೆ ಎನ್ನೋದು ಈಗ ಗೊತ್ತಾಯ್ತು ಎಂದು ತಿಳಿಸಿದರು.

ಮನೆ ಬಾಗಿಲಿಗೆ ಯಾರಾದ್ರೂ ಬಂದರೂ ಬರಿಗೈಯಲ್ಲಿ ಕಳಿಸಿದವರಲ್ಲ. ಅವರು‌ ಮಾಡಿರುವ ಕೆಲಸದ ಬಗ್ಗೆ ಹೆಮ್ಮೆ ಇದೆ, ಖುಷಿ ಇದೆ. ಜಯದೇವ ಈ ಸಾಧನೆಯನ್ನು ಸಿಬ್ಬಂದಿ ಇನ್ನಷ್ಟು ಎತ್ತರಕ್ಕೆ ಬೆಳೆಸುತ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಇದನ್ನೂ ಓದಿ | Winter transitions to summer: ಚಳಿಯಿಂದ ಬೇಸಿಗೆಯತ್ತ: ಆಹಾರ ಹೇಗಿರಬೇಕು?

ಅತ್ಯಂತ ನೋವಿನ ದಿನ ಎಂದ ಸಚಿವ ಎಂ.ಸಿ. ಸುಧಾಕರ್

ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಮಾತನಾಡಿ, ನಾನು‌ ಡಾ. ಮಂಜುನಾಥ್ ಅವರ ಸಾಧನೆ ಮೆಚ್ಚಿ, ಅವರ ಅಭಿಮಾನಿಯಾಗಿ ಇಲ್ಲಿಗೆ ಬಂದಿದ್ದೇನೆ. ಇದು ಸಂತೋಷದ ಕ್ಷಣಕ್ಕಿಂತ ಅತ್ಯಂತ ನೋವಿನ ದಿನ ಅಂತ ಹೇಳಲು ಇಚ್ಛಿಸುತ್ತೇನೆ. ನಾನು ಒಮ್ಮೆ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಜಯದೇವ ಇದ್ದಿದ್ದು ನೋಡಿದ್ದೆ. ಒಂದೊಮ್ಮೆ ಜಯದೇವ ಇದೆಯಾ ಇಲ್ಲವಾ ಎಂಬ ಭಾವನೆ ಸಹ ಇತ್ತು. ನಿಜಕ್ಕೂ ಜಯದೇವ ಕಟ್ಟಿ ಬೆಳೆಸುವುದರಲ್ಲಿ, ಅವರ ಸಾಧನೆ ಕಲ್ಪನೆಗೂ ಮೀರಿದ್ದು. ಅವರ ರೀತಿ ಬಡವರನ್ನು ತಲುಪಲು ನಮ್ಮಿಂದಲೂ ಸಾಧ್ಯವಿಲ್ಲ. ಬರೀ ಬೆಂಗಳೂರಿಗೆ ಸೀಮಿತ ಆಗಿದ್ದ ಸಂಸ್ಥೆ, ವ್ಯಾಪ್ತಿ ಮೀರಿ ಬೆಳೆದಿದೆ. ಮಂಜುನಾಥ್ ಅವರು ಇಲ್ಲದೆ ಇಂತಹ ಸಾಧನೆ ಆಗುತ್ತಿರಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Exit mobile version