ತುಮಕೂರು: ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಮುಂದುವರಿದಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಳಿಕ ಇಂದು ತುಮಕೂರು ಪ್ರವೇಶಿಸುತ್ತಿದೆ.
ಮೂರು ಜಿಲ್ಲೆಗಳಲ್ಲಿ ಶಕ್ತಿ ಪ್ರದರ್ಶನ ಮಾಡಿ ಜೆಡಿಎಸ್ ಬಲ ತೋರಿಸಿರುವ ಎಚ್‌ಡಿಕೆ, ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಬಲ ನೀಡಿದ್ದಾರೆ. ಪಂಚರತ್ನ ರಥಯಾತ್ರೆ ಮೂಲಕ ಪ್ರಭಾವ ಹೆಚ್ಚಿಸಿಕೊಂಡು, ಮತಗಳ ಕ್ರೋಡೀಕರಣವಾಗಿರುವುದು ಆಂತರಿಕ ಸರ್ವೆಯಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದೆ. ಅದೇ ಹುಮ್ಮಸ್ಸಿನಲ್ಲಿ ಇಂದು ತುಮಕೂರು ಪ್ರವೇಶಿಸುತ್ತಿದ್ದಾರೆ.
ಇದನ್ನೂ ಓದಿ | HD Kumaraswamy road show | ಕೋಲಾರದಲ್ಲಿ ಜೆಡಿಎಸ್‌ನ ಪಂಚರತ್ನ ಯಾತ್ರೆ ಇಂದು ಸಂಚಾರ
ತುಮಕೂರಿನಲ್ಲಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲು ಕಂಡಿತ್ತು. ಮಾಜಿ ಪ್ರಧಾನಿ ದೇವೇಗೌಡರು 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಸೋತ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರುವುದು ಹೇಗೆ ಎಂಬುದು ಜೆಡಿಎಸ್ ಲೆಕ್ಕಾಚಾರವಾಗಿದೆ. ಒಕ್ಕಲಿಗ, ಲಿಂಗಾಯತ ಸಮುದಾಯದ ಪ್ರಾಬಲ್ಯ ಹೊಂದಿರುವ ತುಮಕೂರಿನಲ್ಲಿ ಒಕ್ಕಲಿಗ ಮತಗಳನ್ನು ಕ್ರೋಡೀಕರಿಸಿ ಮುಂಬರುವ ಚುನಾವಣೆಯಲ್ಲಿ ತುಮಕೂರಿನಿಂದ ಅತಿ ಹೆಚ್ಚು ಕ್ಷೇತ್ರ ಗೆಲ್ಲುವ ಲೆಕ್ಕಾಚಾರ ಹಾಕಿದೆ.
ಇಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಚ್‌ಡಿಕೆ ಯಾತ್ರೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ತುಮಕೂರು ಟೋಲ್ ಬಳಿ ಜಿಲ್ಲೆ ಪ್ರವೇಶಿಸಲಿದ್ದು, 9.45ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಕ್ಯಾತಸಂದ್ರ, ಬಟವಾಡಿ ಸರ್ಕಲ್, ಉಪ್ಪಾರಹಳ್ಳಿ ಆಟೋ ಸ್ಟಾಂಡ್ ವೃತ್ತ ಸಾಗಿ ಕೆ.ಎನ್.ಎಸ್ ಮಿಲ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಬಿಜಿ ಪಾಳ್ಯ ಸರ್ಕಲ್, ಗುಂಚಿ ಸರ್ಕಲ್, ಶಿರಾ ಗೇಟ್ ಸರ್ಕಲ್, ದಿಬ್ಬೂರಿನಲ್ಲಿ ರಥಯಾತ್ರೆ ಮಾಡಿ ದಿಬ್ಬೂರಿನಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ.
ಇದನ್ನೂ ಓದಿ | JDS Pancharatna Yatre | ಪಂಚರತ್ನ ರಥಯಾತ್ರೆಯಲ್ಲಿ ಮಗುವಿಗೆ ನಾಮಕರಣ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ