Site icon Vistara News

Governor: ಸಿ.ಪಿ ರಾಧಾಕೃಷ್ಣನ್‌ಗೆ ತೆಲಂಗಾಣ ರಾಜ್ಯಪಾಲ ಹುದ್ದೆ ಉಸ್ತುವಾರಿ

cp radhakrishnan

ಹೊಸದಿಲ್ಲಿ: ಜಾರ್ಖಂಡ್ ರಾಜ್ಯಪಾಲ (Jharkhand Governor) ಸಿ.ಪಿ ರಾಧಾಕೃಷ್ಣನ್ (CP Radhakrishnan) ಅವರಿಗೆ ತೆಲಂಗಾಣ (Telangana) ಮತ್ತು ಪುದುಚೇರಿಯ (Puducherry) ಹೆಚ್ಚುವರಿ ಉಸ್ತುವಾರಿಯನ್ನು ನೀಡಲಾಗಿದೆ. ಈ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಮಂಗಳವಾರ ಆದೇಶ ಹೊರಡಿಸಿದ್ದಾರೆ.

“ನಿರ್ದಿಷ್ಟ ನೇಮಕಾತಿ ಮಾಡುವವರೆಗೆ ತೆಲಂಗಾಣದ ಗವರ್ನರ್ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಅವರ ಕಾರ್ಯಗಳನ್ನು ತಮ್ಮ ಸ್ವಂತ ಕರ್ತವ್ಯಗಳ ಜೊತೆಗೆ ನಿರ್ವಹಿಸಲು ಜಾರ್ಖಂಡ್ ಗವರ್ನರ್ ಸಿ.ಪಿ. ರಾಧಾಕೃಷ್ಣನ್ ಅವರನ್ನು ನೇಮಿಸಲು ಭಾರತದ ರಾಷ್ಟ್ರಪತಿಗಳು ಸಂತೋಷಪಡುತ್ತಾರೆ” ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

ಮಾರ್ಚ್ 18ರಂದು ತಮಿಳಿಸೈ ಸೌಂದರರಾಜನ್ (Tamilisai Soundararajan) ಅವರ ರಾಜೇನಾಮೆಯಿಂದ ತೆಲಂಗಾಣದ ರಾಜ್ಯಪಾಲ ಹುದ್ದೆ ತೆರವಾಗಿತ್ತು. ಅವರು ಬಿಜೆಪಿ ಟಿಕೆಟ್‌ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಊಹಿಸಲಾಗಿದೆ. ತಮಿಳಿಸೈ ಸೌಂದರರಾಜನ್ ಅವರು ಚೆನ್ನೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಯಾಗಲಿದ್ದಾರೆ ಎನ್ನಲಾಗಿದೆ.

“ಸಾರ್ವಜನಿಕರಿಗೆ ನೇರವಾಗಿ ಸೇವೆ ಸಲ್ಲಿಸುವುದು ನನ್ನ ಇಚ್ಛೆಯಾಗಿದ್ದು, ನಾನು ನನ್ನ ಸ್ವಂತ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ. ನಾನು ತೀವ್ರವಾದ ಸಾರ್ವಜನಿಕ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಬಯಸುತ್ತೇನೆ” ಎಂದು ಅವರು ರಾಜೀನಾಮೆ ಸಂದರ್ಭದಲ್ಲಿ ಹೇಳಿದ್ದರು.

ರಾಧಾಕೃಷ್ಣನ್ ಅವರು ತಮಗೆ ಹೆಚ್ಚುವರಿ ಜವಾಬ್ದಾರಿ ನೀಡಿದ್ದಕ್ಕಾಗಿ ರಾಷ್ಟ್ರಪತಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ. “ತೆಲಂಗಾಣದ ಗವರ್ನರ್ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸುವ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ನಾನು ವಿನಮ್ರ. ನಮ್ಮ ಮಾತೃಭೂಮಿಗೆ ಸೇವೆ ಸಲ್ಲಿಸಲು ಈ ಮಹತ್ತರವಾದ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ನಮ್ಮ ಪ್ರೀತಿಯ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರಿಗೆ ನಾನು ನನ್ನ ಹೃದಯದ ಆಳದಿಂದ ಧನ್ಯವಾದ ಅರ್ಪಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ತೆಲಂಗಾಣವು ತಮಿಳುನಾಡು ಮೂಲದ ರಾಜ್ಯಪಾಲರನ್ನು ಹೊಂದುತ್ತಿರುವ ಮೂರನೇ ನಿದರ್ಶನ ಇದಾಗಿದೆ. ಮೊದಲ ಗವರ್ನರ್ ನರಸಿಂಹನ್, ಎರಡನೇ ಗವರ್ನರ್ ತಮಿಳಿಸೈ ಸೌಂದರರಾಜನ್ ಕೂಡ ತಮಿಳುನಾಡಿನವರು. ಕೊಯಮತ್ತೂರಿನಿಂದ ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಆರಿಸಿ ಬಂದಿರುವ ರಾಧಾಕೃಷ್ಣನ್‌, 2023ರಲ್ಲಿ ಜಾರ್ಖಂಡ್‌ ರಾಜ್ಯಪಾಲರಾಗಿದ್ದರು.

ಇದನ್ನೂ ಓದಿ: ತಮಿಳುನಾಡಿನಲ್ಲೇ ರಜನಿಕಾಂತ್‌ Top Tax payer, ಹಾಗಿದ್ದರೆ ಅವರ ವಾರ್ಷಿಕ ಆದಾಯ ಎಷ್ಟು?

Exit mobile version